ಬುಧವಾರ, ಆಗಸ್ಟ್ 21, 2019
28 °C
ಎನ್‌ಡಿಎಂಎ ಉಪಾಧ್ಯಕ್ಷ ಶಶಿಧರ ರೆಡ್ಡಿ ಘೋಷಣೆ

ಬೆಂಗಳೂರಿನಲ್ಲಿ ವಿಪತ್ತು ನಿರ್ವಹಣಾ ಘಟಕ

Published:
Updated:
ಬೆಂಗಳೂರಿನಲ್ಲಿ ವಿಪತ್ತು ನಿರ್ವಹಣಾ ಘಟಕ

ಬೆಂಗಳೂರು: `ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ (ಎನ್‌ಡಿಎಂಎ) ಬೆಂಗಳೂರಿನಲ್ಲೂ ವಿಪತ್ತು ನಿರ್ವಹಣಾ ಘಟಕ ತೆರೆಯಲು ನಿರ್ಧರಿಸಲಾಗಿದ್ದು, ರಕ್ಷಣಾ ಕಾರ್ಯದಲ್ಲಿ ಸಂಪೂರ್ಣವಾಗಿ ತರಬೇತಿ ಹೊಂದಿದ 250 ಸಿಬ್ಬಂದಿವುಳ್ಳ ಒಂದು ಪಡೆಯನ್ನು ಈ ಘಟಕಕ್ಕೆ ಒದಗಿಸಲಾಗುವುದು' ಎಂದು ಎನ್‌ಡಿಎಂಎ ಉಪಾಧ್ಯಕ್ಷ ಶಶಿಧರ ರೆಡ್ಡಿ ಪ್ರಕಟಿಸಿದರು.ರಾಜ್ಯ ಸರ್ಕಾರ ಹಾಗೂ ಎನ್‌ಡಿಎಂಎ ಜತೆಯಾಗಿ ಏರ್ಪಡಿಸಿರುವ `ನಗರದಲ್ಲಿ ವಿಪತ್ತು ಸ್ಥಿತಿ ನಿರ್ವಹಣೆ: ಅತ್ಯುತ್ತಮ ಅಂತರರಾಷ್ಟ್ರೀಯ ಪದ್ಧತಿಗಳು' ಕಾರ್ಯಾಗಾರದಲ್ಲಿ ಸೋಮವಾರ ಅವರು ಮಾತನಾಡಿದರು.`ಎನ್‌ಡಿಎಂಎ ರಚಿಸಿರುವ ವಿಪತ್ತು ನಿರ್ವಹಣಾ ಘಟಕವು ರಾಸಾಯನಿಕ, ಭೌತಿಕ, ಜೈವಿಕ ವಿಪತ್ತಲ್ಲದೆ ಅಣ್ವಸ್ತ್ರದಿಂದ ಎದುರಾಗುವ ಅಪಾಯದ ಸ್ಥಿತಿಯನ್ನು ನಿರ್ವಹಣೆ ಮಾಡುವ ಸಾಮರ್ಥ್ಯ ಹೊಂದಿದೆ. ಅಗತ್ಯ ವೈದ್ಯಕೀಯ ನೆರವನ್ನೂ ಈ ಘಟಕ ನೀಡಲಿದೆ' ಎಂದು ತಿಳಿಸಿದರು.  `ರಾಜ್ಯ ಸರ್ಕಾರ ಸಹಕರಿಸಿದರೆ ತುರ್ತು ಪರಿಸ್ಥಿತಿ ನಿಭಾಯಿಸುವ ಕವಾಯತನ್ನು ಎನ್‌ಡಿಎಂಎ ಬೆಂಗಳೂರಿನಲ್ಲಿ ನಡೆಸಲು ಸಿದ್ಧವಿದೆ' ಎಂದು ಘೋಷಿಸಿದರು.`ನಗರಗಳಲ್ಲಿ ಉಂಟಾಗುವ ವಿಪತ್ತು ಪರಿಸ್ಥಿತಿಗೆ ಬಹುತೇಕ ಮಳೆ ಪ್ರವಾಹವೇ ಕಾರಣ. ಮಳೆಗಾಲ ಶುರುವಾದರೂ ಹೂಳು ತೆಗೆಯದ ಕಾರಣ ಮಳೆ ನೀರು ಚರಂಡಿಗಳ ಬದಲು ರಸ್ತೆ ಮೇಲೆ ಹರಿಯುತ್ತದೆ. ಇದನ್ನು ತಪ್ಪಿಸಲು ಪ್ರತಿವರ್ಷ ಮಾರ್ಚ್ 31ರೊಳಗೆ ಚರಂಡಿಗಳ ಹೂಳು ತೆಗೆಸಲು ಎನ್‌ಡಿಎಂಎ ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ' ಎಂದು ಹೇಳಿದರು.`ಅಂಕೆಯಿಲ್ಲದೆ ನಡೆದಿರುವ ನಗರೀಕರಣವೇ ಎಲ್ಲ ಸಮಸ್ಯೆಗಳಿಗೆ ಮೂಲವಾಗಿದೆ. ಗ್ರಾಮಾಂತರ ಭಾಗದಲ್ಲಿ ಸಿಗದ ಉದ್ಯೋಗಾವಕಾಶ ಮತ್ತು ನಗರ ಪ್ರದೇಶದಲ್ಲಿ ದೊರೆಯುವ ಸೌಲಭ್ಯಗಳ ಆಸೆ ದೇಶದಲ್ಲಿ ವಲಸೆ ಪ್ರಮಾಣ ಹೆಚ್ಚಾಗುವಂತೆ ಮಾಡಿದೆ. ಗ್ರಾಮೀಣ ಭಾಗಗಳನ್ನು ಅಭಿವೃದ್ಧಿಪಡಿಸುವ ಜತೆಗೆ ಸ್ಥಳೀಯವಾಗಿ ಉದ್ಯೋಗ ಸಿಗುವಂತೆ ನೋಡಿಕೊಂಡರೆ ವಲಸೆ ತಪ್ಪಲಿದೆ' ಎಂದು ಪ್ರತಿಪಾದಿಸಿದರು.`ನಗರ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಎನ್‌ಡಿಎಂಎ ಮಾರ್ಗಸೂಚಿಯೊಂದನ್ನು ಸಿದ್ಧಪಡಿಸಿದೆ. ರಾಜ್ಯ ಸರ್ಕಾರಗಳು ಅದಕ್ಕೆ ತಕ್ಕಂತೆ ಕ್ರಮಗಳನ್ನು ಕೈಗೊಂಡರೆ ವಿಪತ್ತು ಸ್ಥಿತಿಯಲ್ಲಿ ಅಸಹಾಯಕರಾಗಿ ಕೈಚೆಲ್ಲಿ ನಿಲ್ಲುವ ಪರಿಸ್ಥಿತಿ ಉದ್ಭವಿಸುವುದಿಲ್ಲ' ಎಂದು ಹೇಳಿದರು.ಕಾರ್ಯಾಗಾರ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, `ಪ್ರಕೃತಿ ವಿಕೋಪದಂತಹ ಸನ್ನಿವೇಶ ಎದುರಿಸಲು ರಾಜ್ಯ ಸರ್ಕಾರ ಈಗಾಗಲೇ ರಾಜ್ಯ ವಿಪತ್ತು ನಿರ್ವಹಣಾ ನಿಧಿ ಸ್ಥಾಪಿಸಿದೆ. ಅದಕ್ಕಾಗಿ ಎಲ್ಲ ಇಲಾಖೆಗಳಿಗೆ ಮೀಸಲಿಟ್ಟ ಶೇ 0.5 ಮೊತ್ತವನ್ನು (ರೂ 125 ಕೋಟಿ) ಬಜೆಟ್‌ನಲ್ಲಿ ಒದಗಿಸಲಾಗಿದೆ' ಎಂದು ತಿಳಿಸಿದರು.`ವಿಪತ್ತಿನ ಸನ್ನಿವೇಶ ಎದುರಾಗದಂತೆ ತಡೆಯಲು ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ನಗರಗಳಲ್ಲಿ ರೂ 150 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ಒದಗಿಸಲಾಗುತ್ತಿದೆ' ಎಂದು ಹೇಳಿದರು. `ನಗರಗಳಷ್ಟೇ ಗ್ರಾಮೀಣ ಪ್ರದೇಶಗಳ ವಿಪತ್ತು ಪರಿಸ್ಥಿತಿ ನಿರ್ವಹಣೆ ಕಡೆಗೂ ಗಮನಹರಿಸಬೇಕಿದೆ. ಹಾಗೆಯೇ ನೈಸರ್ಗಿಕ ವಿಕೋಪಗಳಲ್ಲದೆ ಮಾನವ ನಿರ್ಮಿತ ವಿಪತ್ತು ಪರಿಸ್ಥಿತಿಯಿಂದ ರಕ್ಷಣೆಗೂ ಪರಿಹಾರ ಕಂಡುಕೊಳ್ಳಬೇಕಿದೆ' ಎಂದು ಅಭಿಪ್ರಾಯಪಟ್ಟರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಆರ್. ರೋಷನ್ ಬೇಗ್, `ತ್ಯಾಜ್ಯದ ಮಾಫಿಯಾ ದೊಡ್ಡ ಪ್ರಮಾಣದಲ್ಲಿ ಬೆಳೆದಿದ್ದು, ವಿಪತ್ತುರಹಿತ ಸ್ಥಿತಿ ನಿರ್ಮಾಣ ಮಾಡಲು ಅದು ಬಿಡುವುದಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಚಿವರಾದ ವಿ.ಶ್ರೀನಿವಾಸಪ್ರಸಾದ್, ಕೆ.ಜೆ. ಜಾರ್ಜ್, ಆರ್.ರಾಮಲಿಂಗಾರೆಡ್ಡಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಲತಾ ಕೃಷ್ಣಮೂರ್ತಿ, ವಿಪತ್ತು ನಿರ್ವಹಣಾ ವಿಭಾಗದ ಕಾರ್ಯದರ್ಶಿ ತುಷಾರ್ ಗಿರಿನಾಥ್ ಮತ್ತಿತರರು ಹಾಜರಿದ್ದರು.

Post Comments (+)