ಬೆಂಗಳೂರಿನಲ್ಲಿ 22ನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ

ಶುಕ್ರವಾರ, ಜೂಲೈ 19, 2019
26 °C

ಬೆಂಗಳೂರಿನಲ್ಲಿ 22ನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ

Published:
Updated:

ಬೆಂಗಳೂರು:  ವ್ಯಕ್ತಿಯೊಬ್ಬ ನಗರದ ಅಂಬೇಡ್ಕರ್ ವೀದಿಯಲ್ಲಿರುವ ವಿಶ್ವೇಶ್ವರಯ್ಯ ಗೋಪುರ ಕಟ್ಟಡದ 22ನೇ ಅಂತಸ್ತಿನಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಗುರುವಾರ ನಡೆದಿದೆ.ಮೂಲತಃ ನೆಲಮಂಗಲದ ನರಸಿಂಹಮೂರ್ತಿ ಮತ್ತು ರಾಮಕ್ಕ ಎಂಬ ದಂಪತಿಯ ಪುತ್ರನಾದ ನರಸಿಂಹ (28) ಆತ್ಮಹತ್ಯೆ ಮಾಡಿಕೊಂಡವರು. ಅವರು, ಪತ್ನಿ ಶ್ವೇತಾ ಮತ್ತು ಪೋಷಕರ ಜತೆ ಶ್ರೀನಗರ ಬಳಿಯ ಕಾಳಿದಾಸ ಲೇಔಟ್‌ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಚಾಮರಾಜಪೇಟೆಯ ಔಷಧ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ನರಸಿಂಹ, ಬೆಳಿಗ್ಗೆ 11.45ರ ಸುಮಾರಿಗೆ ಕಟ್ಟಡದಿಂದ ಜಿಗಿದಿದ್ದಾರೆ. ಕೆಳಗೆ ನಿಂತಿದ್ದ ಕಾರಿನ ಮೇಲೆ ಬಿದ್ದ ಅವರು ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಅವರು ಕೆಳಗೆ ಬೀಳುವ ವೇಳೆ ಕಟ್ಟಡದ ಸಜ್ಜಾಕ್ಕೆ ಬಡಿದ ಅವರ ಬಲಗಾಲು ತುಂಡಾಗಿ ರಸ್ತೆ ಬದಿಗೆ ಬಿದ್ದಿದೆ ಎಂದು ಪೊಲೀಸರು ಹೇಳಿದ್ದಾರೆ.`ಎರಡು ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ನರಸಿಂಹನ ಕಾಲಿಗೆ ಪೆಟ್ಟಾಗಿತ್ತು. ಆ ನಂತರ ಗುಣಮುಖನಾಗಿದ್ದರೂ ಆತ ಕೆಲಸಕ್ಕೆ ಹೋಗುತ್ತಿರಲಿಲ್ಲ ಎಂದು ಅವರ ಸಂಬಂಧಿ ರಾಜು ಹೇಳಿದ್ದಾರೆ.

 ಏಕೆ ಕೆಲಸಕ್ಕೆ ಹೋಗುತ್ತಿಲ್ಲ ಎಂದು ವಿಚಾರಿಸಿದರೆ, ಇಎಸ್‌ಐ ರಜೆಗಳು ಬಾಕಿ ಉಳಿದಿವೆ. ಆ ರಜೆಗಳು ಮುಗಿದ ನಂತರ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳುತ್ತಿದ್ದ. ಆದರೆ, ಆತ ವಿಶ್ವೇಶ್ವರಯ್ಯ ಗೋಪುರ ಕಟ್ಟಡಕ್ಕೆ ಏಕೆ ಹೋಗಿದ್ದ ಮತ್ತು ಆತ್ಮಹತ್ಯೆಗೆ ಕಾರಣವೇನು ಎಂಬುದು ಗೊತ್ತಿಲ್ಲ. ಬಹುಶಃ ಆತ ಕೆಲಸ ಮಾಡುತ್ತಿದ್ದ ಜಾಗದಲ್ಲೇ ಏನೋ ಸಮಸ್ಯೆಯಾಗಿದೆ~ ಎಂದು ಮೃತರ ಸಂಬಂಧಿಕ ರಾಜು ಅವರು `ಪ್ರಜಾವಾಣಿ~ಗೆ ತಿಳಿಸಿದರು.`ಗಿರಿನಗರದಲ್ಲಿನ ರಾಘವೇಂದ್ರಸ್ವಾಮಿ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ಬೆಳಿಗ್ಗೆ ಮನೆಯಿಂದ ಹೊರ ಹೋಗಿದ್ದ ಮಗ ವಾಪಸ್ ಬಂದಿರಲಿಲ್ಲ. ನಂತರ, ಆತ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಸುದ್ದಿವಾಹಿನಿ ಮೂಲಕ ಗೊತ್ತಾಯಿತು. ಸೊಸೆ ಎಂಟು ತಿಂಗಳ ಗರ್ಭಿಣಿಯಾಗಿದ್ದು, ಘಟನೆಯಿಂದ ಆಘಾತಗೊಂಡಿದ್ದಾಳೆ. ದಯವಿಟ್ಟು ನನ್ನ ಮಗನನ್ನು ಕೊಡಿ~ ಎಂದು ರಾಮಕ್ಕ ಅವರು ಬೌರಿಂಗ್ ಆಸ್ಪತ್ರೆ ಬಳಿ ರೋದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.ಪೊಲೀಸರು ಬೌರಿಂಗ್ ಆಸ್ಪತ್ರೆಯಲ್ಲಿ ಸಂಜೆ ನರಸಿಂಹ ಅವರ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಿದರು. ಕಬ್ಬನ್‌ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರವೇಶ ನಿರ್ಬಂಧ: `ವಿಶ್ವೇಶ್ವರಯ್ಯ ಗೋಪುರ ಕಟ್ಟಡದ 22ನೇ ಅಂತಸ್ತಿನಲ್ಲಿ ಅಗ್ನಿಶಾಮಕ ಠಾಣೆಯಿದೆ. ಆ ಠಾಣೆಯ ಪಕ್ಕದಲ್ಲೇ ಲಿಫ್ಟ್ ನಿಯಂತ್ರಣ ಕೊಠಡಿ ಇದೆ. ಆ ಅಂತಸ್ತಿಗೆ ಮೂರು ಕಡೆ ಪ್ರವೇಶದ್ವಾರಗಳಿವೆ. ಸುರಕ್ಷತೆ ದೃಷ್ಟಿಯಿಂದ ಆ ಅಂತಸ್ತಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ, ಗುರುವಾರ ಬೆಳಿಗ್ಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಐಜಿಪಿ ಶಿವಕುಮಾರ್, ನಿರ್ದೇಶಕ ಬಿ.ಜಿ.ಚೆಂಗಪ್ಪ ಸೇರಿದಂತೆ ಹಿರಿಯ ಅಧಿಕಾರಿಗಳು ಕಟ್ಟಡದ ತಪಾಸಣೆಗೆ ಬಂದಿದ್ದರು. ಈ ಕಾರಣಕ್ಕಾಗಿ 22ನೇ ಅಂತಸ್ತಿನ ಮೂರೂ ಪ್ರವೇಶದ್ವಾರಗಳನ್ನು ತೆರೆಯಲಾಗಿತ್ತು. ಈ ವೇಳೆ ನರಸಿಂಹ ಅವರು 22ನೇ ಅಂತಸ್ತಿಗೆ ಹೋಗಿ ಕೆಳಗೆ ಜಿಗಿದಿದ್ದಾರೆ~ ಎಂದು ಕಟ್ಟಡದ ಉಸ್ತುವಾರಿ ಹೊಣೆ ಹೊತ್ತಿರುವ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಎಂ.ಎಸ್.ಬಿರಾದಾರ್ ಹೇಳಿದರು.

ಸಭೆಯಲ್ಲಿದ್ದ ಸಿಬ್ಬಂದಿ: `ಬೆಳಿಗ್ಗೆ ಹತ್ತು ಗಂಟೆ ಸುಮಾರಿಗೆ ಕಟ್ಟಡಕ್ಕೆ ಬಂದ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತಪಾಸಣೆ ಕಾರ್ಯ ಮುಗಿಸಿ ಎರಡನೇ ಮಹಡಿಯಲ್ಲಿನ ಸಭಾಂಗಣದಲ್ಲಿ ಸಭೆ ನಡೆಸುತ್ತಿದ್ದರು. ಎಲ್ಲಾ ಸಿಬ್ಬಂದಿ ಸಭೆಯಲ್ಲಿ ಪಾಲ್ಗೊಂಡಿದ್ದರಿಂದ ಠಾಣೆಯಲ್ಲಿ ಯಾರೂ ಇರಲಿಲ್ಲ. ಈ ಸಂದರ್ಭದಲ್ಲಿ ನರಸಿಂಹ ಅವರು 22ನೇ ಅಂತಸ್ತಿಗೆ ಹೋಗಿ ಕಟ್ಟಡದಿಂದ ಕೆಳಗೆ ಹಾರಿದ್ದಾರೆ. ಸಭೆ ನಡೆಯುತ್ತಿದ್ದ ವೇಳೆ ಈ ಸುದ್ದಿ ತಿಳಿಯಿತು~ ಎಂದು ವಿಶ್ವೇಶ್ವರಯ್ಯ ಗೋಪುರ ಕಟ್ಟಡದ ಅಗ್ನಿಶಾಮಕ ಠಾಣಾಧಿಕಾರಿ ಮಾಹಿತಿ ನೀಡಿದರು.

ಆಘಾತವಾಯಿತು: `ವೈಯಕ್ತಿಕ ಕೆಲಸದ ನಿಮಿತ್ತ ಇಲ್ಲಿಗೆ ಬಂದಿದ್ದೆ. ಕಟ್ಟಡದಿಂದ ಹೊರ ಬರುತ್ತಿದ್ದಂತೆ ಕಾರಿನ ಗಾಜುಗಳು ಪುಡಿಯಾಗಿ ಜೋರು ಶಬ್ದ ಕೇಳಿಸಿತು. ವ್ಯಕ್ತಿಯೊಬ್ಬರು ಕಾರಿನ ಮೇಲೆ ಬಿದ್ದಿದ್ದನ್ನು ನೋಡಿ ಆಘಾತವಾಯಿತು. ಅವರ ಕಾಲು ತುಂಡಾಗಿ ರಸ್ತೆ ಬದಿ ಬಿದ್ದಿತು. ಇಂತಹ ಭಯಾನಕ ದೃಶ್ಯವನ್ನು ಎಂದೂ ಕಂಡಿರಲಿಲ್ಲ~ ಎಂದು ಘಟನೆಯ ಪ್ರತ್ಯಕ್ಷದರ್ಶಿ ಭಾಗ್ಯಮ್ಮ ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry