ಬೆಂಗಳೂರಿನಲ್ಲೇ ಐಐಟಿ: ಆಗ್ರಹ

5

ಬೆಂಗಳೂರಿನಲ್ಲೇ ಐಐಟಿ: ಆಗ್ರಹ

Published:
Updated:
ಬೆಂಗಳೂರಿನಲ್ಲೇ ಐಐಟಿ: ಆಗ್ರಹ

ಬೆಂಗಳೂರು:  ‘ರಾಜಧಾನಿ ಬೆಂಗಳೂರಿನಲ್ಲಿಯೇ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಸ್ಥಾಪಿಸುವಂತೆ ಒತ್ತಾಯಿಸಿ ಸದ್ಯದಲ್ಲೇ ಪ್ರಧಾನಿಗೆ ಬಳಿಗೆ ನಿಯೋಗ ಕರೆದೊಯ್ದು ಮನವಿ ಸಲ್ಲಿಸಲಾಗುವುದು’ ಎಂದು ಸಂಸದ ಅನಂತಕುಮಾರ್ ಹೇಳಿದರು.ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನಗರದ ಪಿಇಎಸ್ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.‘ಐಟಿ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರಿನಲ್ಲೇ ಐಐಟಿ ಸಂಸ್ಥೆ ಸ್ಥಾಪಿಸುವುದು ಸೂಕ್ತ. ಆ ಹಿನ್ನೆಲೆಯಲ್ಲಿ ರಾಜ್ಯದ ಸಂಸದರು ಹಾಗೂ ಶಾಸಕರ ನಿಯೋಗದೊಂದಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವರನ್ನು ಸಂಪರ್ಕಿಸಿ ಚರ್ಚಿಸಲಾಗುವುದು’ ಎಂದರು.‘ಪ್ರಾಮಾಣಿಕತೆ, ಪರಿಶ್ರಮ, ಪ್ರತಿಭೆಯಿಂದ ಸಾಧನೆ ಮಾಡಿದವರನ್ನು ಗೌರವಿಸಿ ಪ್ರೋತ್ಸಾಹಿಸದೇ ಹೋದರೆ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಸಮರ್ಥ ಆರ್ಥಿಕ ವ್ಯವಸ್ಥೆ ಮತ್ತು ಬೌದ್ಧಿಕ ಸಂಪತ್ತನ್ನು ಯಶಸ್ವಿಯಾಗಿ ನಿರ್ವಹಿಸುವ ಅಗ್ರ ಸಮಾಜ ನಮ್ಮದಾಗಬೇಕು’ ಎಂದು ಹೇಳಿದರು.ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ‘ರಾಜ್ಯ ಅದರಲ್ಲೂ ಬೆಂಗಳೂರಿನಲ್ಲಿ ಐಐಟಿ ಸ್ಥಾಪನೆಯಾದರೆ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲಿದೆ’ ಎಂದರು. ‘ಉನ್ನತ ಶಿಕ್ಷಣ ಪಡೆಯುತ್ತಿದ್ದಂತೆ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿವೆ. ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ಗಳನ್ನು ಅಭ್ಯಸಿಸಲು ವಿದೇಶಕ್ಕೆ ತೆರಳುವ ಮುನ್ನ ದೇಶದಲ್ಲಿರುವ ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಪರಿಶೀಲಿಸಿ’ ಎಂದು ಕಿವಿಮಾತು ಹೇಳಿದರು.ಶಾಸಕ ದಿನೇಶ್ ಗುಂಡೂರಾವ್ ಮಾತನಾಡಿ, ‘ಭ್ರಷ್ಟಾಚಾರ, ಭೂಹಗರಣದಂತಹ ವಿಷಯಗಳೇ ಮಾಧ್ಯಮಗಳಲ್ಲಿ ಹೆಚ್ಚಾಗಿ ಪ್ರಸಾರವಾಗುತ್ತಿವೆ. ಜನತೆ ಎಚ್ಚರಿಕೆ ವಹಿಸಿದರೆ ಅನ್ಯಾಯವನ್ನು ತಡೆಗಟ್ಟಬಹುದಾಗಿದೆ’ ಎಂದು ಅಭಿಪ್ರಾಯಪಟ್ಟರು.ಎಲ್ಲ ಜನಾಂಗದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಬ್ರಾಹ್ಮಣ ಮಹಾಸಭಾ ಸ್ಥಾಪಿಸಲಿರುವ ಹೆಸರಿಡದ    ‘ಟ್ರಸ್ಟ್’ಗೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ದಿನೇಶ್ ಗುಂಡೂರಾವ್ ತಿಳಿಸಿದರು.ಕಳೆದ 2009-10ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿವಿಧ ಜನಾಂಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.ಶಾಸಕರಾದ ಎಲ್.ಎ.ರವಿಸುಬ್ರಹ್ಮಣ್ಯ, ಬಿ.ಎನ್.ವಿಜಯಕುಮಾರ್, ವಿಜಯನಗರ ಶಾಸಕ ಎಂ.ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯರೂ ಆದ ಪಿಇಎಸ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಪ್ರೊ.ಎಂ.ಆರ್. ದೊರೆಸ್ವಾಮಿ, ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧಿಕಾರಿ ಎನ್. ಮಂಜುಳಾ, ಸಭಾದ ಅಧ್ಯಕ್ಷ ಸಿ.ವಿ.ಎಲ್.ಶಾಸ್ತ್ರಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry