ಬೆಂಗಳೂರಿನ ಕಾವೇರಿ ಕನೆಕ್ಷನ್

7

ಬೆಂಗಳೂರಿನ ಕಾವೇರಿ ಕನೆಕ್ಷನ್

Published:
Updated:
ಬೆಂಗಳೂರಿನ ಕಾವೇರಿ ಕನೆಕ್ಷನ್

ಮಂಡ್ಯ, ಮೈಸೂರಿನಲ್ಲಿ ಪ್ರತಿಭಟನೆ ಎಷ್ಟೇ ಜೋರಾಗಿ ನಡೆಯುತ್ತಿದ್ದರೂ ಬೆಂಗಳೂರಿನ ಜನ ಕಾವೇರಿ ನದಿಗೂ ತಮಗೂ ಸಂಬಂಧವೇ ಇಲ್ಲದವರಂತೆ ಕೂತಿರುತ್ತಾರೆ ಎಂಬ ದೂರನ್ನು ಕೇಳಿರುತ್ತೀರಿ. ಯಾವುದೇ ರೀತಿಯ ಸಾರ್ವಜನಿಕ ಜೀವನದಲ್ಲಿ ಭಾಗವಹಿಸದ, ಕೊಂಕು ಮಾತಾಡಿಕೊಂಡು ಸಾಗುವ ಒಣ ಪ್ರತಿಷ್ಠೆಯ ಜನರು ಬೆಂಗಳೂರಿನಲ್ಲಿ ಕಡಿಮೆಯೇನಿಲ್ಲ! ಅದಿರಲಿ. ರಾಜಕೀಯವಾಗಿ ಎರಡು ರಾಜ್ಯಗಳ ನಡುವೆ ಸಿಟ್ಟು ಸೆಡವು ಹೆಚ್ಚಾಗಿರುವ ಗಳಿಗೆ ಇದು. ಕಾವೇರಿಗೂ ಬೆಂಗಳೂರಿಗೂ ಇರುವ ಕೆಲವು ಕೊಂಡಿಗಳನ್ನು ಇಂಥ ಸಂದರ್ಭಗಳಲ್ಲಿ ನೆನೆಸಿಕೊಳ್ಳುವುದು ಒಳ್ಳೆಯದೇನೋ.ಕಾವೇರಿ ನದಿ 758 ಕಿ.ಮೀ. ಹರಿಯುತ್ತದೆ. ಪ್ರಪಂಚದ ಅತಿ ದೊಡ್ಡ ನದಿಗಳಾದ ನೈಲ್ (4132 ಕಿ.ಮೀ.) ಮತ್ತು ಅಮೆಜಾನ್ (3,976 ಕಿ.ಮೀ.)ಗೆ ಹೋಲಿಸಿದರೆ ಇದು ಅಷ್ಟೇನೂ ದೊಡ್ಡದಲ್ಲ ಅನಿಸಬಹುದು. ಕಾವೇರಿಗಿಂತ ರಭಸವಾಗಿ ಭೋರ್ಗರೆವ ಆ ನದಿಗಳು ದೊಡ್ಡ ನಾಗರಿಕತೆಗಳನ್ನು ಸೃಷ್ಟಿಸಿವೆ. ಆ ನದಿಗಳಂತೆಯೇ ಕಾವೇರಿ ಕೂಡ ಒಂದು ವಿಶಿಷ್ಟ ನಾಗರಿಕತೆಗೆ ಜೀವ ಕೊಟ್ಟಿದೆ.ಕಾವೇರಿ ತೀರದ ನಾಗರಿಕತೆ ಸೌಮ್ಯ ಸ್ವಭಾವದ, ದಕ್ಷಿಣ ಭಾರತವನ್ನೇ ಪ್ರತಿನಿಧಿಸುವ ನಾಗರಿಕತೆ. ಬೆಂಗಳೂರಿನ ನಂದಿ ಬೆಟ್ಟದ ಹತ್ತಿರ ಜನಿಸಿದ ಎಂ. ವಿಶ್ವೇಶ್ವರಯ್ಯನವರು ತಮ್ಮ ಆತ್ಮ ಚರಿತ್ರೆಯಲ್ಲಿ ಕೆಲವು ಸ್ವಾರಸ್ಯದ ವಿಷಯಗಳನ್ನು ದಾಖಲಿಸಿದ್ದಾರೆ. ಅವರು ಮೈಸೂರಿನಲ್ಲಿ ದೊಡ್ಡ ಹುದ್ದೆಯಲ್ಲಿದ್ದಾಗ ಮಹಾರಾಜರಿಗೆ ಕನ್ನಂಬಾಡಿಯಲ್ಲಿ ದೊಡ್ಡ ಆಣೆಕಟ್ಟು ಕಟ್ಟಲು ಸಲಹೆ ಮಾಡುತ್ತಾರೆ.ಆಗ ಅದಕ್ಕೆ ಅಂದಾಜು ವೆಚ್ಚ ಸುಮಾರು 2.52 ಕೋಟಿ. ಮಹಾರಾಜರು ಹಿಂದೆ ಮುಂದೆ ನೋಡುತ್ತಿರುವುದನ್ನು ಗಮನಿಸಿ ವಿಶ್ವೇಶ್ವರಯ್ಯನವರು ಬೇಸರಗೊಂಡು ತಮಗೆ ಒಪ್ಪಿಸಿದ ಕೆಲಸ ಎಷ್ಟೋ ಅಷ್ಟು ಮುಗಿಸಿ ತಮ್ಮ ಪಾಡಿಗೆ ತಾವಿದ್ದು ಬಿಡುತ್ತಾರೆ.ವಿಶ್ವೇಶ್ವರಯ್ಯನವರ ವರ್ಚಸ್ಸು ಮತ್ತು ಇಂಜಿನಿಯರಿಂಗ್ ಖ್ಯಾತಿ ಹೇಗಿತ್ತೆಂದರೆ ಮಹಾರಾಜರು ಅವರನ್ನು ಓಲೈಸಲೆಂದೇ ಆಣೆಕಟ್ಟು ಕಟ್ಟಲು ಒಪ್ಪಿಕೊಳ್ಳುತ್ತಾರೆ. ಹಾಗಾಗಿ ಆಗ ಆಣೆಕಟ್ಟು ಕಟ್ಟಲು ಪ್ರಾರಂಭಿಸುತ್ತಾರೆ.ಮದ್ರಾಸ್ ಸರ್ಕಾರದ ಅಡ್ಡಗಾಲಿನಿಂದ ಕಾಮಗಾರಿ ನಿಧಾನವಾಗಿ ಸಾಗುತ್ತದೆ. ಆಗಿಂದ ಪ್ರಾರಂಭವಾದ ವಿವಾದ ಇನ್ನೂ ಮುಂದುವರೆದಿದೆ. ಕಾವೇರಿ ವಿವಾದಕ್ಕೆ ಈಗ 120 ವರ್ಷದ ಇತಿಹಾಸವಿದೆ.ಪುರಂದರದಾಸರು 16ನೆಯ ಶತಮಾನದಲ್ಲಿ ರಚಿಸಿದ ಒಂದು ದೇವರನಾಮವನ್ನು ನೀವು ಕೇಳಿರಬಹುದು: `ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ~ ಎಂದು ಪ್ರಾರಂಭವಾಗುವ ಈ ರಚನೆ ರಂಗನಾಥಸ್ವಾಮಿಯ ಸೌಂದರ್ಯವನ್ನು ಬಣ್ಣಿಸುತ್ತದೆ.ಕಾವೇರಿಯಲ್ಲಿ ಎರಡು ದೊಡ್ಡ ರಂಗನಾಥ ದೇವಸ್ಥಾನಗಳಿವೆ: ಶ್ರೀರಂಗಪಟ್ಟಣದಲ್ಲಿ ಒಂದು, ಮತ್ತು ತಮಿಳುನಾಡಿನ ಶ್ರೀರಂಗಂನಲ್ಲೊಂದು. ಪುರಂದರದಾಸರು ಪ್ರಾರಂಭಿಸಿದ ಕರ್ನಾಟಕ ಸಂಗೀತದ ಜೀರ್ಣೋದ್ಧಾರವನ್ನು ತ್ಯಾಗರಾಜರು ಎರಡು ಶತಮಾನಗಳ ನಂತರ, ತಂಜಾವೂರ್‌ನ ಬಳಿ, ಮುಂದುವರೆಸಿದರು. ಕಾವೇರಿಯೆಂದರೆ ದಕ್ಷಿಣ ಭಾರತದ ಸಂಸ್ಕತಿಯ ಅತ್ಯುತ್ಕೃಷ್ಟ ಅಭಿವ್ಯಕ್ತಿಯನ್ನು ರೂಪಿಸಿದ ನದಿ.ಬೆಂಗಳೂರು ನಾಗರತ್ನಮ್ಮ ಎಂಬ ಹಾಡುಗಾರ್ತಿ ತ್ಯಾಗರಾಜರ ಸ್ಮರಣೆ ಹಸಿರಾಗಿ ಉಳಿಯುವಂತೆ ಮಾಡಿದ ಕೆಲಸ ಭಾರತೀಯರಾರೂ ಮರೆಯುವ ಹಾಗೇ ಇಲ್ಲ. ನಾಗರತ್ನಮ್ಮನವರು ತಮ್ಮ ತಾಯ್ನುಡಿಯಾದ ಕನ್ನಡದಲ್ಲಲ್ಲದೆ ತೆಲುಗು, ತಮಿಳು ಮತ್ತು ಸಂಸ್ಕೃತದಲ್ಲಿ ಕಲೆಯ ಬಗ್ಗೆ ಉಪನ್ಯಾಸಗಳನ್ನು ಕೊಡುತ್ತಿದ್ದರು. 1926ರಲ್ಲಿ ಅವರು ತಿರುವೈಯಾರಿನಲ್ಲಿ ಶುರು ಮಾಡಿದ ತ್ಯಾಗರಾಜ ಆರಾಧನೆಯ ಪರಂಪರೆ ಇಂದಿಗೂ ನಡೆದು ಬಂದಿದೆ.

 

ತಮ್ಮ ಖರ್ಚಿನಲ್ಲೇ ಭೂಮಿ ಕೊಂಡು ಅಲ್ಲಿ ತ್ಯಾಗರಾಜರಿಗೆ ಒಂದು ಸ್ಮಾರಕವನ್ನು ನಿರ್ಮಿಸಿ, ಪ್ರತಿ ವರ್ಷ ಕಾವೇರಿಯ ತೀರದಲ್ಲಿ ದಕ್ಷಿಣ ಭಾರತದ ಮಹಾನ್ ಕಲಾವಿದರೆಲ್ಲ ಸೇರಿ ಹಾಡುವಂತೆ ಮಾಡಿದರು. ತಮಿಳುನಾಡಿನಲ್ಲಿ ಹೆಸರಾದ ತೆಲುಗು ವಾಗ್ಗೇಯಕಾರರಿಗೆ ಕನ್ನಡತಿ ಮನ್ನಣೆ ಬರುವಂತೆ ಮಾಡಿದರು. ಇದು ಕಾವೇರಿ ತಡಿಯ ಸೌಜನ್ಯದ ಸಂಸ್ಕೃತಿ.ಎಂ ಜಿ ರಸ್ತೆಯಲ್ಲಿರುವ ಕಾವೇರಿ ಎಂಪೋರಿಯಂ ಕರ್ನಾಟಕದ ಕುಶಲ ಕಲೆಗಳನ್ನು ಪರಿಚಯಿಸುವ ದೊಡ್ಡ ಮಳಿಗೆ. ಕಾವೇರಿ ಎಂಬ ಹೆಸರಿನ ಸಿನಿಮಾ ಮಂದಿರವೂ ಇಲ್ಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಮಗೆ ನೀರು ಬರುವುದು ಕಾವೇರಿಯಿಂದಲೇ. ರಷ್ಯದ ಚಿತ್ರ ಕಲಾವಿದ ಪೈಂಟರ್ ರೋರಿಕ್ ಹಲವು ವರ್ಷ ವಾಸವಾಗಿದ್ದ ತಾತಗುಣಿ ಎಂಬ ಸ್ಥಳದಿಂದ ಬೆಂಗಳೂರಿಗೆ ನೀರು ಪಂಪ್ ಆಗುತ್ತದೆ. ಕಾವೇರಿ ಭವನ ಬೆಂಗಳೂರಿನ ಒಂದು ಲ್ಯಾಂಡ್‌ಮಾರ್ಕ್ ಆಗಿದೆ.ಹೀಗೆ ಬೆಂಗಳೂರಿನ ಕಾವೇರಿ ಕೊಂಡಿಗಳ ಬಗ್ಗೆ ಹೇಳುತ್ತಲೇ ಹೋಗಬಹುದು. ಈ ಕಾವೇರಿ ವಿವಾದ ಪರಿಹಾರವಾಗುವುದರ ಬಗ್ಗೆ ರೈತರಿಗೆ ಎಷ್ಟು ಕಾಳಜಿ ಇದೆಯೋ ಬೆಂಗಳೂರಿನವರಿಗೂ ಅಷ್ಟೇ ಇರಬೇಕು.ಐಫೋನ್ 5 ಮತ್ತು ಭಾರತದ ಕೊಳ್ಳುಗರು

ಸ್ಟೀವ್ ಜಾಬ್ಸ್ ತೀರಿಕೊಂಡು ಒಂದು ವರ್ಷ ತುಂಬಿದೆ. ಅವನ ಕಂಪೆನಿ ಬಿಡುಗಡೆ ಮಾಡಿರುವ ಐ ಫೋನ್ 5 ರ ಬಗ್ಗೆ ಟೆಕ್ ಪ್ರಪಂಚದಲ್ಲಿ ತುಂಬ ಕೇಳಿಬರುತ್ತಿದೆ. ಇದು ಭಾರತಕ್ಕೆ ಇನ್ನೂ ಅಧಿಕೃತವಾಗಿ ಬಂದಿಲ್ಲ. ಆದರೆ ಆಗಲೇ ಹಲವು ಅಂಗಡಿಗಳಲ್ಲಿ ದೊರೆಯುತ್ತಿದೆ. ಈ ಸರಣಿಯಲ್ಲಿ ಬರುತ್ತಿರುವ 64 ಜಿ ಬಿ ಫೋನಿಗೆ ರೂ. 1 ಲಕ್ಷಕ್ಕೆ ಮಾರುತ್ತಿದ್ದರು.   ಶೋಕಿಗೆ ಕೊಳ್ಳುವವರು ಇನ್ನೂ ರೂ. 20,000 ಹೆಚ್ಚು ಕೇಳಿದರೂ ಕೊಡಲು ಸಿದ್ಧರಿದ್ದರಂತೆ. ಒಂದೇ ವಾರದಲ್ಲಿ ಆ ಫೋನಿನ ಅನಧಿಕೃತ ಮಾರಾಟಗಾರರ ಅಂಗಡಿಗಳಲ್ಲಿ ಹತ್ತು-ಹದಿನೈದು ಸಾವಿರ ಕಡಿಮೆಯಾಗಿದೆ. ಆದರೂ ಫೋನಿಗೆ ಒಂದು ಲಕ್ಷ ಕೊಡುವುದು ಎಲ್ಲರಿಗೂ ಒಪ್ಪಿಗೆಯಾಗುವ ವಿಷಯವಲ್ಲ. ಸ್ಯಾಮ್ಸಂಗ್ ಕಂಪೆನಿಯ ಏಸ್ 3 ಫೋನ್ ಐ ಫೋನಿಗೆ ಪೈಪೋಟಿ ಕೊಡುವ ಸಾಧ್ಯತೆಯಿದೆ ಎಂದು ಟೆಕ್ ತಜ್ಞರು ಹೇಳುತ್ತಿದ್ದಾರೆ.ಇತ್ತೀಚಿಗೆ ಹೊರಬಂದ ಈ ಸ್ಯಾಮ್ಸಂಗ್ ಫೋನಿನ ಬೆಲೆ ರೂ. 35,000. ಹಾಗಾಗಿ ಬೆಲೆಯ ವಿಷಯದಲ್ಲಿ ಹೋಲಿಸಿದರೆ ಅದು ಆಗಲೇ ಐ ಫೋನ್‌ಗಿಂತ ಮುಂದಿದೆ. ಎಲ್ಲ ಪಂದ್ಯಗಳನ್ನೂ ಗೆದ್ದುಕೊಂಡೆ ಬಂದಿದ್ದ ಐ ಫೋನ್ ಈ ಬಾರಿ ಸ್ಯಾಮ್ಸಂಗ್‌ಗಿಂತ ಸ್ವಲ್ಪ ಹಿಂದೆ ಬೀಳುವ ಸಾಧ್ಯತೆ ಇದೆಯೇ ಎಂಬುದು ಸ್ಮಾರ್ಟ್ ಫೋನ್ ಬಳಕೆದಾರರ ಪ್ರಶ್ನೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry