ಬೆಂಗಳೂರಿನ ತಿಮ್ಮಪ್ಪ

7

ಬೆಂಗಳೂರಿನ ತಿಮ್ಮಪ್ಪ

Published:
Updated:
ಬೆಂಗಳೂರಿನ ತಿಮ್ಮಪ್ಪ

ಬೆಂಗಳೂರಿನ ವೈಯಾಲಿಕಾವಲ್ ಬಡಾವಣೆಯಲ್ಲಿರುವ ತಿಮ್ಮಪ್ಪನ ದೇವಸ್ಥಾನ ಆಂಧ್ರಪ್ರದೇಶದ ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಷ್ಟೇ ಮಹತ್ವ ಪಡೆದಿದೆ. ತಿರುಪತಿ ದೇವಸ್ಥಾನದಲ್ಲಿ ನಿತ್ಯ ನಡೆಯುವ ಸಾಂಪ್ರದಾಯಿಕ ಪೂಜೆ ಹಾಗೂ ಸೇವೆಗಳು ಇಲ್ಲಿಯೂ ನಡೆಯುತ್ತವೆ. ಅದೇ ಬೆಂಗಳೂರು ವೆಂಕಟೇಶ್ವರ ದೇವಸ್ಥಾನದ ವಿಶೇಷ.ತಿರುಪತಿಗೆ ಹೋಗಲು ಸಾಧ್ಯವಾಗದ ಭಕ್ತರು ಬೆಂಗಳೂರಿನಲ್ಲಿಯೇ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಿ ಸೇವೆ ಸಲ್ಲಿಸುವ ಅವಕಾಶವಿದೆ. ಈ ದೇವಸ್ಥಾನಕ್ಕೆ ನಲವತ್ತು ವರ್ಷಗಳ ಇತಿಹಾಸವಿದೆ. ಕಳೆದ ವರ್ಷ (2010ರಲ್ಲಿ) ದೇವಸ್ಥಾನವನ್ನು ನವೀಕರಣಗೊಳಿಸಲಾಯಿತು. ಸುಮಾರು ಎರಡು ಎಕರೆ ವಿಸ್ತಾರದಲ್ಲಿರುವ ನವೀಕೃತ ವೆಂಕಟೇಶ್ವರ ದೇವಾಲಯ ಅತ್ಯಂತ ಆಕರ್ಷಣೀಯ.ವೈಯಾಲಿಕಾವಲ್‌ನ ತಿಮ್ಮಪ್ಪನ ದೇವಸ್ಥಾನದ ಒಳಕ್ಕೆ ಪ್ರವೇಶಿಸುತ್ತಿದ್ದಂತೆ ಗಣಪತಿ ದರ್ಶನ ಮಾಡಬಹುದು. ನಂತರ ಆಂಜನೇಯ, ಸೀತಾರಾಮ, ರಾಧಾಕೃಷ್ಣ ಸ್ವಾಮಿ ದರ್ಶನ ಪಡೆಯಬಹುದು. ದೇವಸ್ಥಾನದ ಮುಖ್ಯದ್ವಾರ ಪ್ರವೇಶಿದ ನಂತರ ಶ್ರೀ ವೆಂಕಟೇಶ್ವರ ಸ್ವಾಮಿ ಗರ್ಭಗುಡಿ ಎದುರಾಗುತ್ತದೆ. ಸ್ವಾಮಿಯ ಎಡ ಹಾಗೂ ಬಲ ಭಾಗದಲ್ಲಿ ಶಾಂತ ಚಿತ್ತರಾಗಿ ಕುಳಿತಿರುವ ಪದ್ಮಾವತಿ ದೇವಿ ಹಾಗೂ ಗೋದಾದೇವಿಯರಿದ್ದಾರೆ. ಪ್ರತಿ ಶುಕ್ರವಾರ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಅಭಿಷೇಕ ಹಾಗೂ ಪ್ರತಿ ಭಾನುವಾರ ‘ಕಲ್ಯಾಣೋತ್ಸವ’   ನಡೆಯುತ್ತದೆ. ಶನಿವಾರದ ವಿಶೇಷ ಪೂಜೆಗೆ ಬರುವ ಭಕ್ತರೆಲ್ಲರಿಗೂ 175 ಗ್ರಾಂ ತೂಕದ ಲಡ್ಡು ಪ್ರಸಾದ ನೀಡಲಾಗುತ್ತದೆ. ಲಡ್ಡನ್ನು ನೇರವಾಗಿ ತಿರುಪತಿಯಿಂದ ತರಿಸಿ ಇಲ್ಲಿ ಭಕ್ತರಿಗೆ ವಿತರಿಸಲಾಗುತ್ತದೆ.ಶನಿವಾರ ಮತ್ತು ಭಾನುವಾರ ಸ್ವಾಮಿಯ ದರ್ಶನಕ್ಕಾಗಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಭಕ್ತರು ಆಗಮಿಸುತ್ತಾರೆ. ತಿರುಪತಿಯಿಂದ ತಂದ ಲಡ್ಡುಗಳನ್ನು ಮೂಲ ಬೆಲೆಯಲ್ಲಿಯೇ ಭಕ್ತರಿಗೆ ವಿತರಿಸಲಾಗುತ್ತದೆ. ಉಳಿದ ದಿನಗಳಲ್ಲಿ  ಮೂರು ಸಾವಿರಕ್ಕೂ ಹೆಚ್ಚು ಭಕ್ತರು ದರ್ಶನ ಪಡೆಯುತ್ತಾರೆ. ದೇವಸ್ಥಾನದ ಬಳಿ ವಿಶಾಲವಾದ ಸಭಾಂಗಣ ಕಟ್ಟಡದ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಯೋಜನೆ ಇದೆ ಎನ್ನುತ್ತಾರೆ ದೇವಸ್ಥಾನದ ಆಡಳಿತಾಧಿಕಾರಿ ವಾಸುದೇವ್.ತಿರುಪತಿಯ ದೇವಸ್ಥಾನದಲ್ಲಿ ನಡೆಯುವಂತೆಯೇ ಇಲ್ಲಿಯೂ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಸೇವೆಗಳು ನಡೆಯುತ್ತವೆ. ಅಷ್ಟೋತ್ತರ ಪೂಜೆ’, ‘ಕಳಸಾಭಿಷೇಕ’, ‘ಅಭಿಷೇಕ’ ಹಾಗೂ ‘ಕಲ್ಯಾಣೋತ್ಸವ’ ಪೂಜೆ ನಡೆಯುತ್ತವೆ. ದೇವಸ್ಥಾನ ಮುಂಜಾನೆ 5.30ಕ್ಕೆ ತೆರೆಯುತ್ತದೆ. ರಾತ್ರಿ 8ರವರೆಗೆ ಸ್ವಾಮಿಗೆ ಅರ್ಚನೆ, ಪೂಜೆ, ಮಂಗಳಾರತಿ ಇತ್ಯಾದಿಗಳು ನಡೆಯುತ್ತವೆ.ತಿರುಪತಿಗೆ ಸ್ವಾಮಿಯ ದರ್ಶನಕ್ಕೆ ಹೋಗುವ ಭಕ್ತರು ಅಲ್ಲಿ ಸಲ್ಲಿಸುವ ‘ಸುಪ್ರಭಾತ ಸೇವೆ’, ‘ಕಲ್ಯಾಣೋತ್ಸವ’, ‘ಡೋಲೋತ್ಸವ ಪೂಜೆ’, ‘ನಿಜಪಾದ ದರ್ಶನ’ ಮತ್ತಿತರ ಸೇವೆ ಹಾಗೂ ವಿಶೇಷ ಪೂಜೆಗಳಿಗೆ ಇಲ್ಲಿನ ದೇವಸ್ಥಾನದ ಆಡಳಿತ ಕಚೇರಿಯ ಇ-ದರ್ಶನ ಕೌಂಟರ್‌ಗಳಲ್ಲಿ 60 ದಿನಗಳ ಮುಂಗಡವಾಗಿ ಕಾಯ್ದಿರಿಸಿ  ಟಿಕೆಟ್ ಪಡೆಯಬಹುದು. ತಿರುಮಲದ ವಸತಿ ಗೃಹಗಳಲ್ಲಿ ಉಳಿದುಕೊಳ್ಳಲು ಇಲ್ಲಿಂದಲೇ ಮುಂಗಡವಾಗಿ ಕೊಠಡಿ ಕಾಯ್ದಿರಿಸುವ ವ್ಯವಸ್ಥೆಯನ್ನು ಇಲ್ಲಿನ ಟಿಟಿಡಿ ಕೇಂದ್ರ ಕಲ್ಪಿಸಿದೆ.ತಿರುಪತಿ ದೇವಸ್ಥಾನದ ವಿಶೇಷ ಪೂಜೆ ಮಾಹಿತಿ ಹಾಗೂ ಟಿಕೆಟ್‌ಗಳಿಗೆ ಸಂಪರ್ಕಿಸಬೇಕಾದ ದೂರವಾಣಿ ನಂಬರ್‌ಗಳು: 080 2331 5361/ 2344 5432/2334 5555.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry