ಮಂಗಳವಾರ, ಏಪ್ರಿಲ್ 20, 2021
26 °C

ಬೆಂಗಳೂರು ಅಂಗಿಗೆ ತೈವಾನ್ ಗುಂಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ಅಂಗಿಗೆ ತೈವಾನ್ ಗುಂಡಿ

ಹೋಟೆಲ್ ಓಬೆರಾಯ್‌ನ ಆ ಸಣ್ಣ ಸಭಾಂಗಣದಲ್ಲಿ ರೇಷ್ಮೆ ನುಣುಪಿನ ಕೂದಲಿರುವ ಸುಂದರಿ ನಸುನಕ್ಕು ತಮ್ಮ ಉತ್ಪನ್ನವನ್ನು ತೋರಿಸಲು ಮುಂದಾದರು. ಯು ಶಿನ್ ಡೆವಲಪ್‌ಮೆಂಟ್ ಕಂಪೆನಿಯದು.ಬೆಂಗಳೂರಿನಲ್ಲಿ ತಯಾರಾಗುವ ಸಿದ್ಧ ಉಡುಪುಗಳಿಗೆ, ಲೇಬಲ್‌ಗಳನ್ನು ಸಿದ್ಧಪಡಿಸಿ ಕೊಡುತ್ತದೆ ಈ ಕಂಪೆನಿ. ವಿವಿಧ ಬಗೆಯ ಲೇಸುಗಳ ಮಾದರಿ, ಬೆಲ್ಟುಗಳು, ಅವರ ಟೇಬಲ್ ಮೇಲೆ ಹರಡಿ ಇಟ್ಟುಕೊಂಡಿದ್ದರು. ಒಂದೊಂದು ಪುಟದಲ್ಲೂ ಹಲವಾರು ಬಣ್ಣಗಳ ಲೇಸುಗಳೇ ಅಲ್ಲಿದ್ದವು. ಅಷ್ಟೇ ಅಲ್ಲ, ಜಿಪ್ಪರ್‌ಗಳಿಗೆ ಹಾಕುವ ಪುಟ್ಟ ಪುಟ್ಟ ಲೇಬಲ್‌ಗಳೂ ಇಲ್ಲಿದ್ದವು. ಒಮ್ಮೆ ಇಲ್ಲಿಯ ಅಪಾರಲ್ಸ್‌ನವರು, ಗಾರ್ಮೆಂಟ್ಸ್‌ನವರ ಈ ಉತ್ಪನ್ನಗಳಿಗೆ ಬೇಡಿಕೆ ಇರಿಸುತ್ತಾರಂತೆ.ಇವರ ಬದಿಯಲ್ಲಿದ್ದುದು ಕರೊಮ್ಯಾಕ್ಸ್ ಎಂಟರ್‌ಪ್ರೈಸಸ್ ಸಂಸ್ಥೆ. ಒಂದೆರಡು ಮೇಜುಗಳ ಮೇಲೆ ವಿವಿಧ ಬಗೆಯ ಗುಂಡಿಗಳನ್ನು ಹರಡಿಕೊಂಡು ಕುಳಿತಿದ್ದರು. ಕಫ್ಲಿಂಕ್ಸ್, ಕೋಟುಗಳಿಗೆ ಬಳಸುವ ವಿವಿಧ ಬಗೆಯ ಗುಂಡಿಪ್ರಪಂಚವೇ ಅಲ್ಲಿತ್ತು. ಮಕ್ಕಳ ಉಡುಗೆಗೆ ಬೇಕಿರುವ ಬೊಂಬೆಗಳು, ಹಣ್ಣು, ಕಾರ್ಟೂನುಗಳೂ ಇಲ್ಲಿದ್ದವು. ಕಳೆದ ವರ್ಷವೂ ಇವರು ಈ ಮೇಳದಲ್ಲಿ ಭಾಗವಹಿಸಿದ್ದರಂತೆ.ತೈವಾನ್‌ನ ಈ ಉದ್ಯಮಿಗಳನ್ನು ಅಲ್ಲಿಯ ಜವಳಿ ಇಲಾಖೆಯು ಬೆಂಗಳೂರು, ಕೊಲೊಂಬೊ ಹಾಗೂ ಗುಡಗಾಂವ್‌ನಲ್ಲಿ ಮೇಳವನ್ನು ಏರ್ಪಡಿಸಿ, ಗ್ರಾಹಕರನ್ನು ಸೆಳೆಯಲು ಪ್ರೋತ್ಸಾಹಿಸುತ್ತಿದ್ದಾರೆ.ಬೆಂಗಳೂರಿಗೆ ಇದು ನಾಲ್ಕನೆಯ ಭೇಟಿಯಂತೆ. ಈ ಪ್ರದರ್ಶನವನ್ನು ಏರ್ಪಡಿಸಿರುವ ವರ್ಲ್ಡೆಕ್ಸ್ ಎಕ್ಸಿಬಿಷನ್ ಮತ್ತು ಪ್ರಮೋಶನ್ ಪ್ರೈ.ಲಿ.ನ ನಿರ್ದೇಶಕಿ ಆರತಿ ಭಗತ್ ಈ ಬಗ್ಗೆ ವಿವರಣೆ ನೀಡಿದರು.ಫಂಕ್ಷನಲ್ ಫ್ಯಾಬ್ರಿಕ್, ಕಸೂತಿ ಇರುವ ವಸ್ತ್ರ, ಉಣ್ಣೆ ವಸ್ತ್ರ, ಒಳ ಉಡುಪುಗಳ ತಯಾರಿಗೆ ಬೇಕಿರುವ ವಿಶೇಷ ವಸ್ತ್ರ, ರಿಬ್ಬನ್, ಲೇಸು, ಜಿಪ್ಪರ್, ಬ್ಯಾಚುಗಳು ಮುಂತಾದವುಗಳ ತಯಾರಕರನ್ನು ತೈವಾನ್ ಜವಳಿ ಇಲಾಖೆಯು ಆಯ್ಕೆ ಮಾಡಿ ಕಳುಹಿಸುತ್ತದೆ.ಫಾರಿನ್‌ಟ್ರೇಡ್, ತೈವಾನ್ ಟೆಕ್ಸ್‌ಟೈಲ್ ಫೆಡರೇಶನ್ ಈ ವಸ್ತು ಪ್ರದರ್ಶನವನ್ನು ಏರ್ಪಡಿಸಿದ್ದು, ಭಾರತೀಯ ಜವಳಿ ಉದ್ಯಮ ಸಂಸ್ಥೆ, ತಿರಪುರ್ ರಫ್ತುದಾರರ ಸಂಸ್ಥೆ, ಸಿಲೊನ್ ಚೇಂಬರ್ ಆಫ್ ಕಾಮರ್ಸ್, ಅಪ್ಪಾರಲ್‌ಎಕ್ಸ್‌ಪೋರ್ಟ್ ಪ್ರಮೋಶನ್ ಕೌನ್ಸಿಲ್ ಮೂಲಕ ಉದ್ಯಮಿಗಳಿಗೆ ಆಹ್ವಾನವನ್ನು ನೀಡಲಾಗುತ್ತದೆ.ಆಹ್ವಾನಿತ ಉದ್ಯಮಿಗಳು ಈ ಪ್ರದರ್ಶನದಲ್ಲಿ ಭಾಗವಹಿಸಿರುವ ಪೂರೈಕೆದಾರರೊಂದಿಗೆ ನೇರವಾಗಿ ಭೇಟಿ ಮಾಡಿ ಒಪ್ಪಂದವನ್ನು ಮಾಡಿಕೊಳ್ಳಬಹುದಾಗಿದೆ.ಚೀನಾದ ಉತ್ಪನ್ನಗಳೇ ಮಾರುಕಟ್ಟೆಯನ್ನು ಆವರಿಸಿಕೊಂಡಿರುವ ಈ ದಿನಗಳಲ್ಲಿ ತೈವಾನ್ ತನ್ನ ಉದ್ಯಮಿಗಳಿಗೆ ಪ್ರೋತ್ಸಾಹಿಸಲು ಈ ಹೆಜ್ಜೆಯನ್ನಿರಿಸಿದೆ. ಆದರೆ ತೈವಾನಿನ ಉದ್ಯಮಿಗಳ ಪ್ರಕಾರ ಭಾರತದಲ್ಲಿ ಯಾವುದೇ ವ್ಯಾಪಾರಿ ಪ್ರಸ್ತಾವಗಳನ್ನು ಕುದುರಿಸುವುದು ಕಷ್ಟ ಸಾಧ್ಯವಾಗಿದೆ. ಅದಕ್ಕೆ ಮೊದಲ ಕಾರಣ, ಚೀನಾದ ಸೋವಿ ಉತ್ಪನ್ನಗಳು. ಎರಡನೆಯದು, ಭಾರತವೂ ಜವಳಿ ಉದ್ಯಮದಲ್ಲಿ ಸಾಕಷ್ಟು ಮುಂದಿದೆ.

 

ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯರ ನೇಕಾರರ ಉತ್ಪನ್ನಗಳಿಗೆ ಹೆಚ್ಚು ಬೇಡಿಕೆ ಇದೆ. ಕಾಟನ್ ಹಾಗೂ ರೇಷ್ಮೆ ವಸ್ತ್ರಗಳಿಗೆ ಭಾರತದೊಂದಿಗೆ ಸ್ಪರ್ಧಿಸುವುದು ಕಷ್ಟ. ಹಾಗಾಗಿ ವಸ್ತ್ರೋದ್ಯಮಕ್ಕೆ ಅಗತ್ಯವಿರುವ ವಿವಿಧ ಆ್ಯಕ್ಸಸರಿಗಳತ್ತ ಹೆಚ್ಚು ಗಮನವಹಿಸಲಾಗುತ್ತಿದೆ ಎಂದು ಆರತಿ ಅವರು ವಿವರಿಸಿದರು.ಬೆಂಗಳೂರಿನ ವಸ್ತ್ರೋದ್ಯಮದಲ್ಲಿ ಪ್ರಯೋಗಕ್ಕೆ ತೆರೆದುಕೊಳ್ಳುವ ಹಲವಾರು ಉದ್ಯಮಿಗಳಿದ್ದಾರೆ. ಇಲ್ಲಿಯ ಪರಂಪರೆಗೆ ತೈವಾನಿನ ಹೊಸತನದ ಸ್ಪರ್ಶ ನೀಡಲು, ಆಧುನಿಕ ತಂತ್ರಜ್ಞಾನ, ವಿನ್ಯಾಸಗಳನ್ನು ಅಳವಡಿಸಲು, ಈ ಪ್ರದರ್ಶನವು ವೇದಿಕೆಯಾಗಿದೆ. ಮಾರಾಟಗಾರರಿನ್ನು, ಪೂರೈಕೆದಾರರನ್ನು ಹಾಗೂ ಉದ್ಯಮಿಗಳನ್ನು ಒಂದೆಡೆ ಸೇರಿಸುವುದೇ ಈ ಪ್ರದರ್ಶನದ ವಿಶೇಷವಾಗಿದೆ ಎಂಬುದು ತೈವಾನ್ ಟೆಕ್ಸ್‌ಟೈಲ್ ಒಕ್ಕೂಟದ ಪ್ರಾಜೆಕ್ಟ್ ಮ್ಯಾನೇಜರ್ ಜೆನ್ನಿಫರ್ ಲೂ ಅಭಿಪ್ರಾಯವಾಗಿದೆ.

ಹೆಚ್ಚಿನ ಮಾಹಿತಿಗೆ www.ttf.worldexindia.comಗೆ ಲಾಗಿನ್ ಆಗಬಹುದಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.