ಗುರುವಾರ , ಫೆಬ್ರವರಿ 25, 2021
24 °C
ಸ್ನಾತಕೋತ್ತರ ಕೇಂದ್ರಕ್ಕೆ ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್ ಭೇಟಿ

ಬೆಂಗಳೂರು ಉತ್ತರ ವಿ.ವಿ ಸ್ಥಾಪನೆ ಶೀಘ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ಉತ್ತರ ವಿ.ವಿ ಸ್ಥಾಪನೆ ಶೀಘ್ರ

ಕೋಲಾರ: ‘ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತ ಸುಧಾರಣೆ ಮಾಡಲು ಮತ್ತು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಬೆಂಗಳೂರು ವಿಶ್ವವಿದ್ಯಾಲಯ ವಿಭಜಿಸಲಾಗಿದೆ’ ಎಂದು ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್ ತಿಳಿಸಿದರು.ತಾಲ್ಲೂಕಿನ ಮಂಗಸಂದ್ರ ಬಳಿ ಇರುವ ಬೆಂಗಳೂರು ಸ್ನಾತಕೋತ್ತರ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ವಿಶ್ವವಿದ್ಯಾಲಯವನ್ನು ಮೂರು ಭಾಗಗಳಾಗಿ ವಿಭಜನೆ ಮಾಡಲಾಗಿದೆ. ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ವಿಭಾಗದ ಕೆಲ ಭಾಗಗಳಿಗೆ ಅನುಕೂಲವಾಗುವಂತೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.ವಿ.ವಿ ಸ್ಥಾಪನೆ ಕುರಿತು ಆ.8 ರಂದು ಚಿಕ್ಕಬಳ್ಳಾಪುರದಲ್ಲಿ ಸಭೆ ಕರೆಯಲಾಗಿದೆ. ತಾತ್ಕಾಲಿಕವಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಯನ್ನು ಕೋಲಾರ ಸ್ನಾತಕೋತ್ತರ ಕೇಂದ್ರದ ಹೊಸ ಕಟ್ಟಡ ಪೂರ್ಣಗೊಂಡ ಕೂಡಲೇ ಕಚೇರಿ ಸ್ಥಳಾಂತರಿಸಲಾಗುವುದು ಎಂದರು.ಸಮಾಜದ ವ್ಯವಸ್ಥೆಯಲ್ಲಿ ಅನಗತ್ಯವಾಗಿ ರಾದ್ಧಾಂತ ಸೃಷ್ಟಿಸುವ ಕಾರ್ಯ, ಎಲ್ಲಾ ಕ್ಷೇತ್ರಗಳಲ್ಲಿ ನಡೆಯುತ್ತಿದೆ. ಆದರೆ ವಿಶ್ವವಿದ್ಯಾಲಯದ ಮೇಲುಸ್ತುವಾರಿ ನೋಡಿಕೊಳ್ಳುವ ಜವಾಬ್ದಾರಿ ವಿಶೇಷ ಅಧಿಕಾರಿ ಕೆಂಪರಾಜ್ ಅವರಿಗೆ ವಹಿಸಲಾಗಿದೆ.

ಉತ್ತಮ ಅಧಿಕಾರಿ ಎಂದು ಹೆಸರು ಪಡೆದಿರುವ ಅವರ ಮೇಲೆ ನಂಬಿಕೆ ಇದೆ. ಕಟ್ಟಡದ ಗುತ್ತಿಗೆ ಮತ್ತು ಅಧಿಕಾರಿ ಸಿಬ್ಬಂದಿ ನೇಮಕಾತಿ ವಿಚಾರದಲ್ಲಿ ಸ್ಥಳೀಯರು ಕೈ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದರು.ವಿಧಾನ ಪರಿಷತ್ ಉಪ ಸಭಾಪತಿ ಎನ್.ಎಚ್.ಶಿವಶಂಕರರೆಡ್ಡಿ, ವಿ.ವಿ.ಯ ವಿಶೇಷ ಅಧಿಕಾರಿ ಕೆಂಪರಾಜ್, ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ, ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ನಾಗಭೂಷಣ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ, ಶ್ರೀನಿವಾಸಪುರ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಅಶೋಕ್, ಮಾಜಿ ಅಧ್ಯಕ್ಷ ಗೋಪಾಲ ಕೃಷ್ಣಪ್ಪ ಹಾಜರಿದ್ದರು.

ಎತ್ತಿನಹೊಳೆ; ತ್ವರಿತ ಕಾಮಗಾರಿ

ಕೋಲಾರ:
ಪಶ್ಚಿಮಘಟ್ಟದಲ್ಲಿ ವ್ಯರ್ಥವಾಗಿ ಸಮುದ್ರಕ್ಕೆ ಹರಿದು ಹೋಗುತ್ತಿರುವ 24 ಟಿಎಂಸಿ ನೀರನ್ನು ಬಯಲು ಸೀಮೆ ಜಿಲ್ಲೆಗಳಿಗೆ ಹರಿಸಲು ಸರ್ಕಾರ ಎತ್ತಿನ ಹೊಳೆ ಯೋಜನೆ ಕೈಗೆತ್ತಿಗೊಂಡಿದ್ದು, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ವಿಶೇಷ ಕಾಳಜಿ ವಹಿಸಲಾಗಿದೆ ಎಂದು ಆರೋಗ್ಯ ಸಚಿವ ಕೆ.ಆರ್. ರಮೇಶ್‌ಕುಮಾರ್ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಶ್ಚಿಮಾಭಿಮುಖವಾಗಿ ಹರಿಯುವ ಎತ್ತಿನ ಹೊಳೆ ಹಾಗೂ ಉಪ ನದಿಗಳ 24 ಟಿಎಂಸಿ ನೀರನ್ನು ಬಯಲುಸೀಮೆ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಹರಿಸುವ ಕಾಮಗಾರಿಗಳಿಗೆ ₹ 37,16,50 ಕೋಟಿ ಟೆಂಡರ್ ಕರೆದಿದ್ದು 5 ಪ್ಯಾಕೇಜ್‌ಗಳಾಗಿ ವಿಂಗಡಿಸಿ ಗುತ್ತಿಗೆ ನೀಡಲಾಗಿದೆ. ಕಾಮಗಾರಿಗೆ ಇವರೆಗೂ 1,78,859 ಕೋಟಿ ವೆಚ್ಚ ಮಾಡಲಾಗಿದೆ ಎಂದರು.ಹರವನಹಳ್ಳಿ ವಿತರಣಾ ತೊಟ್ಟಿಯಿಂದ 274 ಕಿಮೀ ಉದ್ದದ ಗುರುತ್ವ ಕಾಲುವೆ ನಿರ್ಮಾಣ ಮಾಡುವುದು, ಕಾಲುವೆಯ ಪಥದಲ್ಲಿ ಬರುವ ಚಿಕ್ಕಮಗಳೂರು, ಹಾಸನ, ತುಮಕೂರು ಜಿಲ್ಲೆಗಳಲ್ಲಿ ಈಗಾಗಲೇ ಗುರುತಿಸಿರುವ ತಾಲ್ಲೂಕುಗಳಿಗೆ ನೀರು ಹರಿಸ ಲಾಗುತ್ತಿದೆ. ಕೊರಟಗೆರೆ ತಾಲ್ಲೂಕಿನ ಬೈರಗೊಂಡಲು ಗ್ರಾಮದ ಬಳಿ 5.78 ಟಿಎಂಸಿ ಸಾಮರ್ಥ್ಯದ ಜಲಾಶಯ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.ಎತ್ತಿನಹೊಳೆ ಯೋಜನೆಗೆ ಬೇಕಾಗಿರುವ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳಲು ಸಾಮಾಜಿಕ ಪರಿಣಾಮ ಮೌಲ್ಯಮಾಪನದ (ಎಸ್‌ಐಎ)ಹಂತದಲ್ಲಿರುತ್ತದೆ, ಉಳಿದಂತೆ 70 ಕಿ.ಮೀ ಉದ್ದದಷ್ಟು ಖಾಸಗಿ ಜಮೀನನ್ನು ರೈತರಿಂದ ವಶಪಡಿಸಿಕೊಂಡಿದ್ದು,12.5 ಕಿ.ಮೀ.ನಷ್ಟು ಪೈಪ್‌ಲೈನ್ ನಿರ್ಮಿಸಲಾಗಿದೆ ಎಂದು ವಿವರಿಸಿದರು.ಯೋಜನೆಗೆ ಬೇಕಾಗುವ ವಿದ್ಯುತ್‌ನ್ನು ಕೆಪಿಟಿಸಿಎಲ್ ನಿಂದ ಪಡೆಯಲು ಅರ್ಜಿ ಸಲ್ಲಿಸಲಾಗಿದೆ. ವಿದ್ಯುತ್ ವಿತರಣಾ ಮಾರ್ಗ ಹಾಗೂ ಸ್ಥಾವರಗಳನ್ನು ಸ್ಥಾಪಿಸಲು ಪಂಕ್ತೀಕರಣ ಸರ್ವೆ ಕಾರ್ಯ ಕೈಗೊಂಡಿದ್ದು ಟೆಂಡರ್ ಕರೆಯುವ ಹಂತದಲ್ಲಿದೆ ಎಂದು ತಿಳಿಸಿದರು.

ಜಂಗಮಕೋಟೆ ಬಳಿ ವಿಶ್ವವಿದ್ಯಾಲಯ

ಬೆಂಗಳೂರು ಉತ್ತರ ವಿಶ್ವವಿದ್ಯಾಲಯವನ್ನು ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಬಳಿ ಪ್ರಾರಂಭಿಸಲಾಗುವುದು ಎಂದು ಆರೋಗ್ಯ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ತಿಳಿಸಿದರು. ನೂತನ ವಿಶ್ವವಿದ್ಯಾಲಯಕ್ಕೆ ಜಂಗಮಕೋಟೆ ಬಳಿ 200 ಎಕರೆ ಸರ್ಕಾರಿ ಜಮೀನು ಗುರುತಿಸಿದ್ದು,

ಮಂಜೂರಾತಿಗೆ ಪ್ರಸ್ತಾವ ಕಳುಹಿಸಲಾಗಿದೆ. ಈ ಸಂಬಂಧ 102 ಎಕರೆ ಪ್ರದೇಶ ಲಭ್ಯವಿರುವುದಾಗಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಜಾಗ ಮಂಜೂರು ಮಾಡಲು ಸರ್ಕಾರ ಒಪ್ಪಿಗೆ ನೀಡಿದೆ ಎಂದು ವಿವರಿಸಿದರು.

ಹೊಸ ವಿಶ್ವವಿದ್ಯಾಲಯ 2017-18 ನೇ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭಿಸಲು ಉನ್ನತ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.ಕೋಲಾರದ ಸರ್ಕಾರಿ ಕಾಲೇಜು ಹಾಗೂ ದೇವನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ ನಲ್ಲಿ ನೂತನ ಸ್ನಾತಕೋತ್ತರ ಕೋರ್ಸ್‌ ಪ್ರಾರಂಭಿಸಲು ಅಗತ್ಯ ಸ್ಥಳಾವಕಾಶ ಹಾಗೂ ಇತರೆ ಸೌಕರ್ಯವನ್ನು ಸರ್ಕಾರದಿಂದ ಕಲ್ಪಿಸಲಾಗುವುದು ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.