ಬೆಂಗಳೂರು ಒನ್ ಕೇಂದ್ರಕ್ಕೆ ಬಿತ್ತುಬೀಗ

ಭಾನುವಾರ, ಜೂಲೈ 21, 2019
22 °C

ಬೆಂಗಳೂರು ಒನ್ ಕೇಂದ್ರಕ್ಕೆ ಬಿತ್ತುಬೀಗ

Published:
Updated:

ಕೃಷ್ಣರಾಜಪುರ: ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರ ಗದ್ದಲದ ಜತೆಗೆ, ಬಿಜೆಪಿ ಶಾಸಕರ ಬೆಂಬಲಿಗರು ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದರಿಂದ ಇಲ್ಲಿನ ಬಸವನಪುರ ವಾರ್ಡ್ ವ್ಯಾಪ್ತಿಯ ಚಿಕ್ಕದೇವಸಂದ್ರದಲ್ಲಿ ಶನಿವಾರ ಉದ್ಘಾಟನೆಯಾದ `ಬೆಂಗಳೂರು ಒನ್~ ಕೇಂದ್ರಕ್ಕೆ ಬೀಗ ಹಾಕಲಾಯಿತು.ಶಾಸಕರ ಅನುಪಸ್ಥಿತಿಯಲ್ಲಿ `ಬೆಂಗಳೂರು ಒನ್~ ಕೇಂದ್ರವನ್ನು ಕಾಂಗ್ರೆಸ್‌ನ ಬಿಬಿಎಂಪಿ ಸದಸ್ಯೆ ಕೆ.ಪೂರ್ಣಿಮಾ ಉದ್ಘಾಟಿಸಿದ್ದೇ ಇಷ್ಟೆಲ್ಲಾ ಗದ್ದಲಕ್ಕೆ ಕಾರಣವಾಯಿತು. ಇದು ಸ್ಥಳೀಯ ನಿವಾಸಿಗಳ ಅಸಮಾಧಾನಕ್ಕೂ ಕಾರಣವಾಗಿದೆ. ಬಿಬಿಎಂಪಿ ವ್ಯಾಪ್ತಿಯ ಪ್ರತಿ ವಾರ್ಡ್‌ನಲ್ಲಿ `ಬೆಂಗಳೂರು ಒನ್~ ಕೇಂದ್ರಗಳನ್ನು ತೆರೆಯಬೇಕೆಂಬ ಮಹದಾಸೆಯೊಂದಿಗೆ ಸರ್ಕಾರ   ವಾರ್ಡ್ ನಂ. 53ರ ಚಿಕ್ಕದೇವಸಂದ್ರದಲ್ಲಿಯೂ ಈ ಕೇಂದ್ರ ಸ್ಥಾಪಿಸಿ ಅದರ ಉದ್ಘಾಟನೆಗೆ ಕಾಯುತ್ತಿತ್ತು. ಕಳೆದ ಐದು ತಿಂಗಳ ಹಿಂದೆಯೇ ಈ ಕೇಂದ್ರ ಉದ್ಘಾಟನೆಗೆ ಸಜ್ಜಾಗಿದ್ದರೂ, ಶಾಸಕರು ಉದ್ಘಾಟನೆಗೆ ಸೂಕ್ತ ದಿನಾಂಕ ನೀಡಲು ಸಾಧ್ಯವಾಗಿರಲಿಲ್ಲ.ಅಲ್ಲದೆ, ಕಾರ್ಯಕ್ರಮಗಳ ಒತ್ತಡದ ನಿಮಿತ್ತ ಶಾಸಕರು ಹಲವಾರು ಬಾರಿ ಕೇಂದ್ರದ ಉದ್ಘಾಟನಾ  ಕಾರ್ಯಕ್ರಮ ಮುಂದೂಡುವಂತೆ ಕೋರಿದ್ದರು ಎನ್ನಲಾಗಿದೆ. ಈ ನಡುವೆ, ಕಳೆದ ವಾರವಷ್ಟೇ ಶಾಸಕರು ಕೇಂದ್ರದ ಉದ್ಘಾಟನೆಗೆ ಆಗಮಿಸಲು ಒಪ್ಪಿಗೆ ಸೂಚಿಸಿದ್ದರು. ಅಲ್ಲದೆ, ಕಾರ್ಯಕ್ರಮಕ್ಕೆ ಆಗಮಿಸುವುದನ್ನು ಖಚಿತಪಡಿಸಿದ್ದರು.ಆದರೆ, ಶನಿವಾರ ನಡೆದದ್ದೇ ಬೇರೆ. ಶಾಸಕರು ಸಮಾರಂಭಕ್ಕೆ ಆಗಮಿಸಲೇ ಇಲ್ಲ. ಬದಲಿಗೆ, ಕೇಂದ್ರದ ಉದ್ಘಾಟನೆಗೆ ಮುನ್ನ ಸಂಬಂಧಪಟ್ಟ ಎಲ್ಲರಿಗೂ ಆಹ್ವಾನಪತ್ರ ನೀಡುವಂತೆ ತಗಾದೆ ತೆಗೆದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರವನ್ನು ಉದ್ಘಾಟಿಸುವಂತೆ ಬಿಬಿಎಂಪಿ ಸದಸ್ಯೆ ಪೂರ್ಣಿಮಾ ಅವರನ್ನು ಒತ್ತಾಯಿಸಿದರು.ಕೇಂದ್ರವನ್ನು ಉದ್ಘಾಟಿಸಿದ ಕೆಲವೇ ಕ್ಷಣಗಳಲ್ಲಿ ಶಾಸಕರ ಸುಮಾರು 20 ಮಂದಿ ಬೆಂಬಲಿಗರು ಕೇಂದ್ರಕ್ಕೆ ಆಗಮಿಸಿ ಶಾಸಕರ ಅನುಪಸ್ಥಿತಿಯಲ್ಲಿ ಹೇಗೆ ಕೇಂದ್ರವನ್ನು ಉದ್ಘಾಟಿಸಲು ಅವಕಾಶ ನೀಡಲಾಯಿತು ಎಂದು ಸಿಟ್ಟಿಗೆದ್ದು ಕೇಂದ್ರದ ಸಂಯೋಜಕರ ಮೇಲೆ ಹಲ್ಲೆ ನಡೆಸಿದರು. ಆದರೆ, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.ಈ ಬಗ್ಗೆ ಶಾಸಕ ನಂದೀಶರೆಡ್ಡಿ ಅವರನ್ನು ಸಂಪರ್ಕಿಸಿದಾಗ, `ಕೇಂದ್ರದ ಉದ್ಘಾಟನೆ ಕುರಿತು ಯಾರಿಗೂ ಮಾಹಿತಿ ನೀಡದಿರುವುದರಿಂದ ಸ್ಥಳೀಯರು ಅಸಮಾಧಾನಗೊಂಡ ಹಿನ್ನೆಲೆಯಲ್ಲಿ ಈ ಗೊಂದಲಕ್ಕೆ ಕಾರಣವಾಯಿತು~ ಎಂದು ಸ್ಪಷ್ಟನೆ ನೀಡಿದರು.`ಕಾರ್ಯಕ್ರಮವನ್ನು ಉದ್ಘಾಟಿಸಲು ಶಾಸಕ ಎನ್.ಎಸ್.ನಂದೀಶರೆಡ್ಡಿ ಅವರನ್ನು ಆಹ್ವಾನಿಸಲಾಗಿತ್ತು. ಅವರೂ ಒಪ್ಪಿದ್ದರು. ಆದರೆ, ತುರ್ತು ಕೆಲಸದ ನಿಮಿತ್ತ ಕಾರ್ಯಕ್ರಮಕ್ಕೆ ಬರಲು ಸಾಧ್ಯವಿಲ್ಲ ಎಂದಿದ್ದರು.

ಇದರಿಂದ ಅನಿವಾರ್ಯವಾಗಿ ನಾನು ಕಾರ್ಯಕ್ರವನ್ನು ಉದ್ಘಾಟಿಸಿದೆ. ಉದ್ಘಾಟಿಸಿದ ಕೆಲವೇ ಕ್ಷಣಗಳಲ್ಲಿ ಬಿಜೆಪಿ ಮುಖಂಡ ಕೇಶವಮೂರ್ತಿ ಮತ್ತು ಕಾರ್ಯಕರ್ತರು ಕೇಂದ್ರಕ್ಕೆ ಬೀಗ ಹಾಕಿಸಿದ್ದಾರೆ~ ಎಂದು ಕೆ.ಪೂರ್ಣಿಮಾ ಆರೋಪಿಸಿದ್ದಾರೆ.ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಇ- ಆಡಳಿತದ ಪ್ರಧಾನ ಕಾರ್ಯದರ್ಶಿ ಎಂ.ಎನ್. ವಿದ್ಯಾಶಂಕರ್,  ಈ ಬಗ್ಗೆ ಸರ್ಕಾರದ ಗಮನಸೆಳೆಯಲಾಗುವುದು~ ಎಂದು ಹೇಳಿದರು.ಅಂತೂ ಇಂತೂ ಸ್ಥಳೀಯ ನಿವಾಸಿಗಳ ಬಹಳ ದಿನಗಳ ಬೇಡಿಕೆಯಂತೆ ಆರಂಭವಾದ `ಬೆಂಗಳೂರು ಒನ್~ ಕೇಂದ್ರಕ್ಕೆ ಉದ್ಘಾಟನೆಯಾದ ಕೆಲವೇ ಕ್ಷಣಗಳಲ್ಲಿ ಬೀಗ ಹಾಕಿರುವುದು ಸ್ಥಳೀಯ ನಿವಾಸಿಗಳಿಗೆ ಬೇಸರವನ್ನು ಉಂಟು ಮಾಡಿದೆ.

 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry