ಸೋಮವಾರ, ಏಪ್ರಿಲ್ 12, 2021
24 °C

ಬೆಂಗಳೂರು-ಕನಕಪುರ-ಚಾಮರಾಜನಗರ ರೈಲು ಮಾರ್ಗ: ಹಣ ಬಿಡುಗಡೆಗೆ ಧ್ರುವ ಕೋರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಂಜನಗೂಡು: ಬೆಂಗಳೂರಿನಿಂದ ಕನಕಪುರ-ಮಳವಳ್ಳಿ-ಕೊಳ್ಳೇಗಾಲ ಮಾರ್ಗವಾಗಿ ಚಾಮರಾಜನಗರಕ್ಕೆ ನೂತನ ರೈಲು ಮಾರ್ಗ ನಿರ್ಮಿಸಲು ರೈಲ್ವೆ ಬಜೆಟ್‌ನಲ್ಲಿ ಹಣ ನೀಡುವಂತೆ ಸಂಸದ ಆರ್.ಧ್ರುವನಾರಾಯಣ ಲೋಕಸಭೆಯಲ್ಲಿ ಸೋಮವಾರ ರೈಲ್ವೆ ಸಚಿವರ ಮುಂದೆ ಬೇಡಿಕೆ ಮಂಡಿಸಿದ್ದಾರೆ.ತಾವು ಪ್ರತಿನಿಧಿಸುವ ಚಾಮರಾಜನಗರ ಕ್ಷೇತ್ರವು ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಪ್ರದೇಶವನ್ನು ಹೊಂದಿದೆ. ರೈಲ್ವೆ ಸೌಲಭ್ಯ ಕನಿಷ್ಠ ಮಟ್ಟದಲ್ಲಿ ಇದೆ. ಗಡಿನಾಡದ ಇಲ್ಲಿಗೆ ಹೆಚ್ಚಿನ ರೈಲ್ವೆ ಯೋಜನೆಗಳನ್ನು ನೀಡಿದರೆ ಈ ಭಾಗದ ಜನರಿಗೆ ಉತ್ತಮ ಶಿಕ್ಷಣ, ಉದ್ಯೋಗ ಅವಕಾಶಗಳು ಹೆಚ್ಚಾಗಲಿವೆ. ಬೆಂಗಳೂರು-ಮೈಸೂರು ಇಂಟರ್‌ಸಿಟಿ ರೈಲು, ಶಿವಮೊಗ್ಗ-ಮೈಸೂರು ಹಾಗೂ ಧಾರವಾಡ-ಮೈಸೂರು ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಚಾಮರಾಜನಗರದ ತನಕ ವಿಸ್ತರಿಸಬೇಕು. ಇದರಿಂದ ರೈತರಿಗೆ, ವರ್ತಕರಿಗೆ ಅನುಕೂಲವಾಗಲಿದೆ ಎಂದು ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.ತುಮಕೂರು-ಮದ್ದೂರು-ಚಾಮರಾಜನಗರ ನಡುವೆ ನೂತನ ರೈಲು ಮಾರ್ಗದ ಸರ್ವೆ ಮಾಡಲು, ಕರ್ನಾಟಕಕ್ಕೆ 4 ಆದರ್ಶ ನಿಲ್ದಾಣ ಯೋಜನೆ, ಕೋಲಾರದಲ್ಲಿ ರೈಲ್ವೆ ಕೋಚ್ ಕಾರ್ಖಾನೆ, ಬೆಂಗಳೂರಿಗೆ ಸಬ್‌ಅರ್ಬನ್ ರೈಲು ಸೇವೆ ನೀಡಲು ಈ ಸಾಲಿನ ಬಜೆಟ್‌ನಲ್ಲಿ ಸಮ್ಮತಿಸಿರುವ ಬಗ್ಗೆ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅವರಿಗೆ ಧನ್ಯವಾದ ಅರ್ಪಿಸಿದರು. ದೇಶದಾದ್ಯಂತ ರೂ.9,583 ಕೋಟಿ ವೆಚ್ಚದಲ್ಲಿ ನೂತನ ರೈಲು ಮಾರ್ಗಕ್ಕೆ ಹಣ ನೀಡಿರುವುದು. 1300 ಕಿ.ಮೀ. ಹೊಸ ಮಾರ್ಗ ನಿರ್ಮಣ, 867 ಕಿ.ಮೀ. ರೈಲು ಮಾರ್ಗ ಡಬ್ಲಿಂಗ್, 1017 ಕಿ.ಮೀ. ಗೇಜ್ ಪರಿವರ್ತನೆ, 58 ಹೊಸ ಎಕ್ಸ್‌ಪ್ರೆಸ್ ರೈಲು, 3 ಶತಾಬ್ಧಿ ಮತ್ತು 9 ತುರಂತೊ ರೈಲುಗಳ ಸಂ ಚಾರಕ್ಕೆ ನೂತನ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಿರುವುದು ಸಂತಸ ತಂದಿದೆ ಎಂದು ಅವರ ತಮ್ಮ ಭಾಷಣದಲ್ಲಿ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.