ಭಾನುವಾರ, ನವೆಂಬರ್ 17, 2019
29 °C

ಬೆಂಗಳೂರು ಕಾರ್ಯಪಡೆ ವೆಬ್‌ಸೈಟ್‌ಗೆ ಚಾಲನೆ

Published:
Updated:

ಬೆಂಗಳೂರು: `ಜನರು ತಮ್ಮ ಸಮಸ್ಯೆಗಳ ಬಗ್ಗೆ ತಾವು ಇದ್ದಲ್ಲಿಂದಲೇ ದೂರು ನೀಡಲು ಅನುಕೂಲವಾಗುವ ಉದ್ದೇಶದಿಂದ ಬೆಂಗಳೂರು ಮಹಾನಗರ ಕಾರ್ಯಪಡೆಯ ವೆಬ್‌ಸೈಟ್ ಆರಂಭಿಸಲಾಗಿದೆ~ ಎಂದು ಬೆಂಗಳೂರು ಮಹಾನಗರ ಕಾರ್ಯಪಡೆಯ (ಬಿಎಂಟಿಎಫ್) ಮುಖ್ಯಸ್ಥ ಡಾ.ಆರ್.ಪಿ. ಶರ್ಮ ಹೇಳಿದರು.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಗುರುವಾರ ಕಾರ್ಯಪಡೆಯ ವೆಬ್‌ಸೈಟ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.`ನಗರ ಬೆಳೆಯುತ್ತಿರುವಂತೆ ಸಮಸ್ಯೆಗಳೂ ಹೆಚ್ಚಾಗುತ್ತಿವೆ. ಅಲ್ಲದೇ ಸ್ಥಳೀಯ ಸಂಸ್ಥೆಗಳ ಬಗ್ಗೆ ದೂರುಗಳು ಹೆಚ್ಚುತ್ತಿವೆ. ಜನರು ತಮ್ಮ ಸಮಸ್ಯೆಗಳ ಅರ್ಜಿ ಹಿಡಿದು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ವೆಬ್‌ಸೈಟ್‌ಗೆ ಚಾಲನೆ ನೀಡಲಾಗಿದ್ದು, ನಗರ ವ್ಯಾಪ್ತಿಯ ಯಾವುದೇ ಸಮಸ್ಯೆಗಳ ಬಗ್ಗೆ ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಬಹುದು~ ಎಂದು ಅವರು ತಿಳಿಸಿದರು.`ಬಿಬಿಎಂಪಿ, ಜಲಮಂಡಳಿ, ಬಿಡಿಎ, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಗಳಿಗೆ ಸಂಬಂಧಿಸಿದ ಸಮಸ್ಯೆಗಳು ಸೇರಿದಂತೆ ನಗರ ವ್ಯಾಪ್ತಿಯ ಎಲ್ಲಾ ನಾಗರಿಕ ಸಮಸ್ಯೆಗಳ ಬಗ್ಗೆ ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಬಹುದು.ವೆಬ್‌ಸೈಟ್ ಆರಂಭಿಸಲಾಗಿರುವುದರಿಂದ ನೇರವಾಗಿ ಕಾರ್ಯಪಡೆಯ ಕಚೇರಿಗೆ ಬಂದು ದೂರು ಸಲ್ಲಿಸುವ ತೊಂದರೆ ತಪ್ಪಲಿದೆ. ನಾಗರಿಕರು ತಮ್ಮ ಸಮಸ್ಯೆಗಳನ್ನು ವೆಬ್‌ಸೈಟ್‌ನಲ್ಲಿ ದಾಖಲಿಸಿದ ನಂತರ ಅದನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು. ದೂರಿನ ಬಗ್ಗೆ ಅಧಿಕಾರಿಗಳು ಯಾವ ಕ್ರಮ ಕೈಗೊಂಡಿದ್ದಾರೆ ಎಂಬ ಬಗ್ಗೆಯೂ ವೆಬ್‌ಸೈಟ್‌ನಲ್ಲಿ ಮಾಹಿತಿ ದೊರೆಯಲಿದೆ~ ಎಂದು ಅವರು ಹೇಳಿದರು.ವೆಬ್‌ಸೈಟ್‌ನಲ್ಲಿ ಏನೇನಿದೆ : ಬಿಎಂಟಿಎಫ್ ವೆಬ್‌ಸೈಟ್‌ನಲ್ಲಿ ಕಾರ್ಯಪಡೆಯ ಆರಂಭ, ಕಾರ್ಯನಿರ್ವಹಣೆ, ಕಾರ್ಯವ್ಯಾಪ್ತಿ, ಅಧಿಕಾರಿಗಳ ಮಾಹಿತಿ, ಕಾರ್ಯಪಡೆಯ ಈ ವರೆಗಿನ ತನಿಖೆಗಳ ಮಾಹಿತಿ, ಮುಂದಿನ ಯೋಜನೆಗಳು, ವಾರ್ಷಿಕ ವರದಿಗಳು, ಕಾರ್ಯಪಡೆಯ ದೂರವಾಣಿ ಸಂಖ್ಯೆಗಳ ಮಾಹಿತಿ ಪಡೆಯಬಹುದು. ಅಲ್ಲದೇ ಕಾರ್ಯಪಡೆಯ ವೆಬ್‌ಸೈಟ್‌ನಲ್ಲಿ ಬಿಬಿಎಂಪಿ, ಜಲಮಂಡಳಿ, ಬಿಡಿಎ, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಗಳ ವೆಬ್‌ಸೈಟ್ ಲಿಂಕ್‌ಗಳು ಸಿಗಲಿವೆ.ಕಾರ್ಯಪಡೆಯ ಎಸ್‌ಪಿ ಎಂ.ಬಿ. ಮಲ್ಲಿಕಾರ್ಜುನಸ್ವಾಮಿ, ಬಿಬಿಎಂಪಿ ದಕ್ಷಿಣ ವಲಯದ ಹೆಚ್ಚುವರಿ ಆಯುಕ್ತ ತ್ರಿಲೋಕ್ ಚಂದ್ರ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ದೂರು ಸಲ್ಲಿಸುವುದು ಹೇಗೆ?

ಕಾರ್ಯಪಡೆಯ ವೆಬ್‌ಸೈಟ್ www.bmtf.gov.in  ಗೆ ಪ್ರವೇಶಿಸಿದ ನಂತರ ವೆಬ್‌ಸೈಟ್‌ನ ಮುಖಪುಟದಲ್ಲಿ  Click here to Register your Complaint ಅಥವಾ Feed Back Form ಅನ್ನು ಕ್ಲಿಕ್ ಮಾಡಬೇಕು. ನಂತರ ದೂರುದಾರರು ತಮ್ಮ ಸಂಪರ್ಕ ವಿಳಾಸ, ಇಮೇಲ್ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ನಮೂದಿಸಿ send ಅಥವಾ  submit  ಅನ್ನು ಕ್ಲಿಕ್ ಮಾಡಿದರೆ ದೂರು ದಾಖಲಾಗುತ್ತದೆ.ವಾರದೊಳಗೆ ಮಾಹಿತಿ

ದೂರು ಸಲ್ಲಿಸಿದ ನಂತರ ದೂರಿನ ಸ್ಥಿತಿಯ ಬಗ್ಗೆ ಒಂದು ವಾರದೊಳಗೆ ದೂರುದಾರರಿಗೆ ಇಮೇಲ್ ಮೂಲಕ ಮಾಹಿತಿ ಸಿಗಲಿದೆ. ದೂರು ದಾಖಲಿಸಿದ ನಂತರ ಆಯಾ ವಿಭಾಗಗಳ ಅಧಿಕಾರಿಗಳಿಗೆ ದೂರನ್ನು ವರ್ಗಾಯಿಸಲಾಗುತ್ತದೆ. ಅಲ್ಲದೇ ತಮ್ಮ ದೂರಿನ ಸ್ಥಿತಿಯ ಬಗ್ಗೆ ದೂರುದಾರರು ವೆಬ್‌ಸೈಟ್‌ನಿಂದಲೇ ಮಾಹಿತಿ ಪಡೆಯಬಹುದು.

`ಸದ್ಯಕ್ಕೆ ತಾಂತ್ರಿಕ ದೋಷ~

`ವೆಬ್‌ಸೈಟ್‌ನಲ್ಲಿ ಸದ್ಯಕ್ಕೆ ಕೆಲವು ತಾಂತ್ರಿಕ ದೋಷಗಳಿವೆ. ವೆಬ್‌ಸೈಟ್‌ಗೆ ಇನ್ನೂ ಕೆಲವು ಸುಧಾರಣೆಗಳನ್ನು ತರಬೇಕಿದೆ. ನ್ಯಾಷನಲ್ ಇನ್‌ಫಾರ್ಮೆಟಿಕ್ಸ್ ಸೆಂಟರ್‌ನಿಂದ ವೆಬ್‌ಸೈಟ್‌ನ ಪರಿಶೀಲನೆ ನಡೆಯಬೇಕಿದೆ. ಒಂದು ವಾರದೊಳಗೆ ವೆಬ್‌ಸೈಟ್‌ನಲ್ಲಿರುವ ತಾಂತ್ರಿಕ ದೋಷಗಳು ನಿವಾರಣೆಯಾಗಲಿವೆ~ ಎಂದು ಬೆಂಗಳೂರು ಮಹಾನಗರ ಕಾರ್ಯಪಡೆಯ (ಬಿಎಂಟಿಎಫ್) ಎಸ್‌ಪಿ ಎಂ.ಬಿ. ಮಲ್ಲಿಕಾರ್ಜುನಸ್ವಾಮಿ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)