ಬೆಂಗಳೂರು ಖುಷಿ ನೀಡಿದೆ : ಕ್ರೀಸ್ ಗೇಲ್

7

ಬೆಂಗಳೂರು ಖುಷಿ ನೀಡಿದೆ : ಕ್ರೀಸ್ ಗೇಲ್

Published:
Updated:
ಬೆಂಗಳೂರು ಖುಷಿ ನೀಡಿದೆ : ಕ್ರೀಸ್ ಗೇಲ್

ಬೆಂಗಳೂರು: `ಉದ್ಯಾನ ನಗರಿ ಈಗ ನನಗೆ ಎರಡನೇ ಮನೆ ಇದ್ದಂತೆ. ವೆಸ್ಟ್‌ಇಂಡೀಸ್‌ಗಿಂತ ಇಲ್ಲಿಯೇ ನನಗೆ ಹೆಚ್ಚು ಅಭಿಮಾನಿಗಳಿದ್ದಾರೆ ಎನಿಸುತ್ತಿದೆ. ಇಲ್ಲಿನ ಆತಿಥ್ಯ ಕೂಡ ಚೆನ್ನಾಗಿದೆ. ಹಾಗಾಗಿ ಈ ನಗರಿಯನ್ನು ನಾನು ತುಂಬಾ ಇಷ್ಟಪಡುತ್ತೇನೆ~-ಹೀಗೆ ಖುಷಿಯಿಂದ ಮಾತನಾಡಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿರುವ ವಿಂಡೀಸ್‌ನ ಕ್ರಿಕೆಟಿಗ ಕ್ರಿಸ್ ಗೇಲ್.

ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಉದ್ಯಾನ ನಗರಿಯಲ್ಲಿರುವ ಗೇಲ್ ಸೋಮವಾರ `ಪ್ರಜಾವಾಣಿ~ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ತಿಳಿಸಿದರು.`ಕ್ರೀಡಾಂಗಣದಿಂದ ಹೊರಬರಲು ಕೂಡ ಇಲ್ಲಿ ಕಷ್ಟ. ಆಟೋಗ್ರಾಫ್‌ಗಾಗಿ ಮುತ್ತಿಕೊಳ್ಳುತ್ತಾರೆ. ಅಭಿಮಾನಿಗಳಿಂದ ತಪ್ಪಿಸಿಕೊಂಡು ಬರಲು ಹರಸಾಹಸ ಪಡಬೇಕಾಗುತ್ತದೆ. ಕ್ರಿಕೆಟ್ ಆಟಗಾರರಿಗೆ ಇಲ್ಲಿ ಎಷ್ಟೊಂದು ಬೇಡಿಕೆ ಎಂಬುದು ಇದರಿಂದ ಗೊತ್ತಾಗುತ್ತದೆ. ಆದರೆ ವಿಂಡೀಸ್‌ನಲ್ಲಿ ಈ ರೀತಿ ಅಲ್ಲ~ ಎಂದು ಅವರು ವಿವರಿಸಿದರು.`ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯುವಾಗ ಪ್ರೇಕ್ಷಕರು ಪ್ರತಿಕ್ರಿಯಿಸುವ ರೀತಿ ನನ್ನಲ್ಲಿ ಸ್ಫೂರ್ತಿ ತುಂಬುತ್ತದೆ. ಐಪಿಎಲ್ ಪಂದ್ಯಗಳಲ್ಲಿ ನನ್ನಿಂದ ಉತ್ತಮ ಆಟ ಮೂಡಿಬರಲು ಇದೂ ಒಂದು ಕಾರಣ. ಅಷ್ಟೇ ಅಲ್ಲ, ಇಲ್ಲಿನ ವಾತಾವರಣ ಕೂಡ ನನಗಿಷ್ಟ.

 

ಹಾಗೇ, ಆಟಗಾರರು ಹಾಗೂ ತಂಡದ ಆಡಳಿತ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಉತ್ತಮ ಬ್ಯಾಟಿಂಗ್ ಮೂಲಕ ಅವರನ್ನೆಲ್ಲಾ ಸಂತೋಷದಿಂದ ಇಡುವುದು ನನ್ನ ಕೆಲಸ~ ಎಂದು ಗೇಲ್ ತಿಳಿಸಿದರು.ಆದರೆ ವೆಸ್ಟ್‌ಇಂಡೀಸ್ ಕ್ರಿಕೆಟ್ ಮಂಡಳಿ ತಮ್ಮನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ ಗೇಲ್‌ಗೆ ಅಸಮಾಧಾನವಿದೆ. `ಬೇರೆ ತಂಡಗಳಿಂದ ನನಗೆ ಹೆಚ್ಚು ಬೇಡಿಕೆ ಬರುತ್ತಿದೆ. ಆದರೆ ನಮ್ಮ ದೇಶದಲ್ಲಿ ನನ್ನನು ನಿರ್ಲಕ್ಷಿಸುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ನನ್ನನ್ನು ತಂಡದಿಂದ ಹೊರಗಿಟ್ಟಿದ್ದಾರೆ. ಹಾಗಾಗಿ ಕ್ಲಬ್‌ಗಳ ಪರ ಆಡುತ್ತಿದ್ದೇನೆ. ವಿಂಡೀಸ್ ತಂಡಕ್ಕೆ ಆಡಲು ಸಾಧ್ಯವಾಗುತ್ತಿವಲ್ಲ ಎಂಬುದು ನನಗೆ ನೋವುಂಟು ಮಾಡಿದೆ~ ಎಂದರು.ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಟೂರ್ನಿಯ ಬಗ್ಗೆ ಮಾತನಾಡಿದ ಅವರು, `ನಾವು ಐಪಿಎಲ್‌ನಲ್ಲಿ ಫೈನಲ್‌ಗೆ ಬಂದು ಎಡವಿದೆವು. ಫೈನಲ್‌ನಲ್ಲಿ ನಾನು ಬ್ಯಾಟಿಂಗ್‌ನಲ್ಲೂ ವಿಫಲನಾಗಿದ್ದೆ. ಆದರೆ ಈ ಬಾರಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ. ತಂಡ ಅನುಭವಿ ಹಾಗೂ ಯುವ ಆಟಗಾರರನ್ನು ಒಳಗೊಂಡಿದೆ~ ಎಂದರು.`ಈ ಟೂರ್ನಿಗೆ ನಾನು ಕೂಡ ಪೂರ್ಣ ಸಿದ್ಧನಾಗಿ ಬಂದಿದ್ದೇನೆ. ವಿಂಡೀಸ್ ತಂಡದಿಂದ ಹೊರಗಿದ್ದಾಗ ಅಭ್ಯಾಸ ನಡೆಸುತ್ತಿದ್ದೆ. ಟ್ರಿನಿಡಾಡ್‌ನ ಸ್ಥಳೀಯ ಪಂದ್ಯಗಳಲ್ಲಿ ಆಡಿದ್ದೇನೆ. ಐಪಿಎಲ್‌ನಲ್ಲಿ ತೋರಿದ ಪ್ರದರ್ಶನವನ್ನು ಇಲ್ಲೂ ಮುಂದುವರಿಸುವ ವಿಶ್ವಾಸ ನನಗಿದೆ. ನನ್ನ ಮೇಲೆ ಇಟ್ಟಿರುವ ನಿರೀಕ್ಷೆಗೆ ಮೋಸ ಮಾಡುವುದಿಲ್ಲ~ ಎಂದು ವಿಂಡೀಸ್‌ನ ಆರಂಭಿಕ ಬ್ಯಾಟ್ಸ್‌ಮನ್ ಹೇಳಿದರು.ಚಾಂಪಿಯನ್ಸ್ ಲೀಗ್‌ನ ಪ್ರಧಾನ ಹಂತದ ಪಂದ್ಯಗಳು ಶುಕ್ರವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿವೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಹಾಗೂ ದಕ್ಷಿಣ ಆಫ್ರಿಕಾದ ವಾರಿಯರ್ಸ್ ತಂಡಗಳು ಪೈಪೋಟಿ ನಡೆಸಲಿವೆ.ಐಪಿಎಲ್ ನಾಲ್ಕನೇ ಅವತರಣಿಕೆಯಲ್ಲಿ ಗೇಲ್ ಕೇವಲ 12 ಪಂದ್ಯಗಳಿಂದ 608 ರನ್ ಗಳಿಸಿ ಆರೇಂಜ್ ಕ್ಯಾಪ್ ಪಡೆದಿದ್ದರು. ಅದರಲ್ಲಿ ಎರಡು ಶತಕಗಳಿದ್ದವು. ಜೊತೆಗೆ 44 ಸಿಕ್ಸರ್ ಸಿಡಿಸಿದ್ದರು. ಹಾಗಾಗಿ ಅವರ ಮೇಲೆ ಈ ಬಾರಿ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry