ಸೋಮವಾರ, ಜೂನ್ 21, 2021
20 °C

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ: 648 ಕೋಟಿ ಸಾಲ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ: 648 ಕೋಟಿ ಸಾಲ ಬಿಡುಗಡೆ

ಬೆಂಗಳೂರು:  ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿಯ 2012-13ನೇ ಸಾಲಿನ 648 ಕೋಟಿ ರೂಪಾಯಿಗಳ ಜಿಲ್ಲಾ ಸಾಲ ಯೋಜನೆಯನ್ನು ಬುಧವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎಸ್. ಶಂಕರನಾರಾಯಣ ಬಿಡುಗಡೆ ಮಾಡಿದರು.ಈ ವರ್ಷ ಆದ್ಯತಾ ವಲಯಕ್ಕೆ 600 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ಇದು ಶೇ 21.24 ರಷ್ಟು ಹೆಚ್ಚಳವಾಗಿದೆ.ಕೃಷಿ ಮತ್ತು ಅದಕ್ಕೆ ಸಂಬಂಧಿತ ಚಟುವಟಿಕೆಗಳಿಗೆ 341.57 ಕೋಟಿ ರೂಪಾಯಿ ನಿಗದಿಪಡಿಸುವ ಮೂಲಕ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸಣ್ಣ ಪ್ರಮಾಣದ ಕೈಗಾರಿಕೆಗಳು, ಕುಶಲಕರ್ಮಿಗಳು, ಗ್ರಾಮೀಣ ಕೈಗಾರಿಕೆಗಳು, ಕೈಮಗ್ಗ ಹಾಗೂ ವಿದ್ಯುತ್ ಮಗ್ಗಗಳನ್ನು ಒಳಗೊಂಡ ಕೃಷಿಯೇತರ ಕ್ಷೇತ್ರಕ್ಕೆ 50.99 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ.ಸಾರಿಗೆ ನಿರ್ವಾಹಕರು, ಚಿಲ್ಲರೆ ವ್ಯಾಪಾರ, ಸಣ್ಣ ವ್ಯಾಪಾರ, ಶಿಕ್ಷಣ ಸಾಲ, ವಸತಿ ಒಳಗೊಂಡ ಇತರೆ ಆದ್ಯತಾ ವಲಯಕ್ಕೆ 207.44 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿರುವ 120 ಬ್ಯಾಂಕ್‌ಗಳಲ್ಲಿ 89 ಶಾಖೆಗಳಿರುವ ವಾಣಿಜ್ಯ ಬ್ಯಾಂಕ್‌ಗಳ ಪಾಲು ಶೇ 75.25 ರಷ್ಟಿದೆ. ಅಲ್ಲದೆ, 12 ಶಾಖೆಗಳಿರುವ ಸಹಕಾರಿ ಬ್ಯಾಂಕ್‌ಗಳ ಪಾಲು ಶೇ 12.75 ಹಾಗೂ ಪ್ರಾಂತೀಯ ಗ್ರಾಮೀಣ ಬ್ಯಾಂಕ್‌ಗಳ ಪಾಲು ಶೇ 10.85ರಷ್ಟಿದೆ ಎಂದು ಕೆನರಾ ಬ್ಯಾಂಕ್ ಡಿಜಿಎಂ ರವೀಂದ್ರ ಭಂಡಾರಿ ವಿವರಿಸಿದರು.ಜಿಲ್ಲಾ ಸಾಲ ಯೋಜನೆಯ ದಾಸ್ತಾವೇಜು ಪುಸ್ತಕವನ್ನು ಬಿಡುಗಡೆ ಮಾಡಿದ ಗ್ರಾಮಾಂತರ ಜಿಲ್ಲಾಧಿಕಾರಿ ಶಂಕರನಾರಾಯಣ ಮಾತನಾಡಿ, ಅಭಿವೃದ್ಧಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದಲ್ಲಿ ಬ್ಯಾಂಕ್‌ಗಳ ಪಾತ್ರ ಎಷ್ಟು ಮುಖ್ಯವೋ ಅರ್ಹ ಫಲಾನುಭವಿಗಳ ಆಯ್ಕೆಯಲ್ಲಿ ಅಧಿಕಾರಿಗಳ ಪಾತ್ರವೂ ಅಷ್ಟೇ ಮುಖ್ಯ ಎಂದರು.ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳಂತೆ 2000 ಕ್ಕೂ ಹೆಚ್ಚು ಜನಸಂಖ್ಯೆಯುಳ್ಳ 37 ಗ್ರಾಮಗಳಲ್ಲಿ ಬ್ಯಾಂಕಿಂಗ್ ಸೌಲಭ್ಯ ಕಲ್ಪಿಸುವತ್ತ ಕ್ರಮ ಕೈಗೊಳ್ಳಲಾಗಿದೆ ಎಂದರು.ಬೆಂಗಳೂರು ಗ್ರಾಮಾಂತರ ಜಿ.ಪಂ. ಅಧ್ಯಕ್ಷೆ ಭಾಗ್ಯಮ್ಮ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ನ ಮ್ಯಾನೇಜರ್ ಕೆ.ಇ. ತಿಮ್ಮಪ್ಪ, ಜಿ.ಪಂ. ಡಿಆರ್‌ಡಿಎ ಯೋಜನಾ ನಿರ್ದೇಶಕ ಎಂ.ಜಿ. ಶಿವಲಿಂಗಯ್ಯ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.