ಶನಿವಾರ, ಏಪ್ರಿಲ್ 17, 2021
27 °C

ಬೆಂಗಳೂರು ಚರಿತ್ರೆಗೆ ಹೊಸ ಸಾಧ್ಯತೆಯ ಹೊಳಹು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಅಪಾರ ಪ್ರಮಾಣದಲ್ಲಿ ದೊರೆಯುತ್ತಿದ್ದ ಬಿಳಿಯ ಕಲ್ಲಿನಿಂದಾಗಿ ನಗರಕ್ಕೆ ಬೆಂಗಳೂರು ಎಂಬ ಹೆಸರು ಬಂದಿರುವ ಸಾಧ್ಯತೆ ಇದೆ’ ಎಂದು ಸಂಶೋಧಕ ಡಾ. ಎಂ.ಚಿದಾನಂದಮೂರ್ತಿ ಅಭಿಪ್ರಾಯಪಟ್ಟರು.ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ ಹಾಗೂ ಮಿಥಿಕ್ ಸೊಸೈಟಿ ಮಂಗಳವಾರ ನಗರದಲ್ಲಿ ಸಂಯುಕ್ತವಾಗಿ  ಹಮ್ಮಿಕೊಂಡಿದ್ದ ‘ಬೆಂಗಳೂರು ನಗರ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ವ’ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.‘ಹಳೆ ಬೆಂಗಳೂರು ಎಂದು ಕರೆಯಲಾಗುತ್ತಿದ್ದ ಅರಳೆ ಪೇಟೆ, ನಗರ್ತಪೇಟೆ, ದೊಡ್ಡಪೇಟೆ, ಚಿಕ್ಕಪೇಟೆ, ಬಳೆಪೇಟೆ ಮುಂತಾದ ಪ್ರದೇಶಗಳಲ್ಲಿ ಬೆಣಚುಕಲ್ಲುಗಳು ದೊರೆಯುತ್ತಿದ್ದವು ಎಂಬುದಕ್ಕೆ ದಾಖಲೆಗಳಿವೆ. ಕೆಂಪುಕಲ್ಲಿನಿಂದಾಗಿ ಕೆಂಗಲ್ ಎಂಬ ಹೆಸರು ಬಂದಿರುವಂತೆ ಕೆಂಪು ನೀರಿನ ಕೆರೆಯಿಂದಾಗಿ ಕೆಂಗೇರಿ ಎಂದು ನಾಮಕರಣವಾಗಿರುವಂತೆ ಬಿಳಿಯ ಕಲ್ಲುಗಳಿಂದಾಗಿ ನಗರಕ್ಕೆ ಬೆಂಗಳೂರು ಎಂಬ ಹೆಸರು ಬಂದಿರಬಹುದು’ ಎಂದು ಅವರು ತಿಳಿಸಿದರು.

 

‘ನನ್ನ ಸಂಶೋಧನೆಯಿಂದಾಗಿ ಪಾಲ್ಕುರಿಕೆ ಸೋಮನಾಥನ ಸಮಾಧಿ ಮಾಗಡಿಯ ಕಲ್ಲೇಶ್ವರ ದೇವಾಲಯ ಗುಹೆಯ ಮುಂಭಾಗದಲ್ಲಿರುವುದು ಪತ್ತೆಯಾಗಿದೆ. ಸೋಮನಾಥನ ವಂಶಸ್ಥರು ಈಗಲೂ ಕಲ್ಯದಲ್ಲಿ ವಾಸಿಸುತ್ತಿದ್ದಾರೆ. ಇದು ಅತ್ಯಂತ ಸಂತಸ ತಂದ ಶೋಧವಾಗಿದೆ’ ಎಂದು ಅವರು ಹೇಳಿದರು. ‘ನಗರದ ದೀಪಾಂಜಲಿ ನಗರದ ಮೂಲ ಹೆಸರು ದೀವಟಿಗೆ ರಾಮನಹಳ್ಳಿ ಎಂಬುದಾಗಿದೆ. ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ದೀವಟಿಗೆ ಸಲಾಂ ಸಲ್ಲಿಸುತ್ತಿದ್ದ ರಾಮ ಎಂಬ ವ್ಯಕ್ತಿಯ ಹೆಸರೇ ಈ ಹಳ್ಳಿಗೆ ನಾಮಕರಣವಾಯಿತು. ಜನರ ಬಾಯಲ್ಲಿ ದೀಪಟ್ರಾಮನಹಳ್ಳಿ ಎಂದಾಯಿತು. ಸಂಸ್ಕೃತದ ಗೀತಾಂಜಲಿ ಪದವನ್ನು ಸಮೀಕರಿಸಿ ಈಗ ದೀಪಾಂಜಲಿ ನಗರ ಎಂದು ನಾಮಕರಣ ಮಾಡಲಾಗಿದೆ’ ಎಂದರು.

 

‘ಬಸವನಗುಡಿ ಪ್ರದೇಶದಲ್ಲಿರುವ ಹಾದಿ ಬಸವಣ್ಣ ಮೂಲ ಅಥವಾ ಆದಿ ಬಸವಣ್ಣನೇ ಎಂಬ ವಿವಾದವಿತ್ತು. ಅಲ್ಲಿನ ಜನರನ್ನು ವಿಚಾರಿಸಿದಾಗ ಅದು ದೊಡ್ಡ ಬಸವನಗುಡಿಯಿಂದ ಬೆಂಗಳೂರು ನಗರಕ್ಕೆ ತೆರಳುವ ಹಾದಿಯಲ್ಲಿದ್ದುದರಿಂದ ಹಾದಿ ಬಸವಣ್ಣ ಎಂಬ ಹೆಸರಿರುವುದು ತಿಳಿದು ಬಂತು. ಇದು ಪುಟ್ಟ ಸಂಶೋಧನೆಯಾದರೂ ಮಹತ್ವದ ಸಂಶೋಧನೆಯಾಗಿದೆ’ ಎಂದರು.

 

‘ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ ಮಾರ್ಬಳೇಶ್ವರ ತೀರ್ಥ ಎಂಬ ಕೊಳವಿದೆ. ಅಲ್ಲಿನ ಮೂಲ ನಿವಾಸಿಗಳಾದ ‘ಮಲೆಬರು’ ಜನಾಂಗದಿಂದಾಗಿ ಈ ಹೆಸರು ಬಂದಿರುವ ಸಾಧ್ಯತೆ ಇದೆ. ಈ ಜನಾಂಗ ಅಲ್ಲಿ ವಾಸಿಸುತ್ತಿದ್ದು ತಮ್ಮನ್ನು ನಾಯಕರು, ಪರಿವಾರದವರು ಎಂಬುದಾಗಿ ಕರೆದುಕೊಳ್ಳುತ್ತಾರೆ’ ಎಂದು ತಿಳಿಸಿದರು. ‘ತಮ್ಮ ಜನಾಂಗದವರು ಹೊರತುಪಡಿಸಿ ಬೇರೆಯವರು ಬೆಟ್ಟಕ್ಕೆ ಬಂದರೆ ಮಲೆಬರು ಮೂಗು ಕತ್ತರಿಸಿ ದೇವಿಗೆ ಬಲಿ ಕೊಡುತ್ತಿದ್ದರು ಎಂಬ ವದಂತಿಗಳಿವೆ. ಇದಕ್ಕೆ ಪುಷ್ಠಿ ನೀಡುವಂತೆ ಮೈಸೂರು ಅರಸರು ತಮ್ಮ ವೈರಿಗಳ ಮೂಗು ಕತ್ತರಿಸುತ್ತಿದ್ದ ದಾಖಲೆಗಳು ಗ್ರಂಥವೊಂದರಲ್ಲಿ ಉಲ್ಲೇಖವಾಗಿವೆ. ಇದು ಇನ್ನೂ ಊಹೆಯಾಗಿದ್ದು ಜನರು ತಮ್ಮ ಬಳಿ ದಾಖಲೆ ಇದ್ದರೆ ಸ್ಪಷ್ಟನೆ ನೀಡಬಹುದಾಗಿದೆ’ ಎಂದರು.

 

ಇತಿಹಾಸ ತಜ್ಞ ಡಾ. ಸೂರ್ಯನಾಥ ಕಾಮತ್ ಮಾತನಾಡಿ ‘ಗೆಜೆಟಿಯರ್‌ಗಳಲ್ಲಿ ಹಾಗೂ ಉದಯಭಾನು ಕಲಾಸಂಘ ಹೊರತಂದಿರುವ ‘ಬೆಂಗಳೂರು ದರ್ಶನ’ ಎಂಬ ಬೃಹತ್ ಸಂಪುಟಗಳಲ್ಲಿ ಬೆಂಗಳೂರಿಗೆ ಸಂಬಂಧಿಸಿದಂತೆ ಬೃಹತ್ ದಾಖಲೆಗಳಿವೆ’ ಎಂದು ಹೇಳಿದರು.‘ನಿರ್ದೇಶನಾಲಯ ಇಂತಹ ವಿಚಾರ ಸಂಕಿರಣಗಳ ಮೂಲಕ ಪ್ರಸಿದ್ಧ ವಿದ್ವಾಂಸರ ವಿಚಾರ ಮಂಡನೆ ಜತೆಗೆ ಸ್ಥಳೀಯ ಸಂಶೋಧಕರನ್ನು ಬೆಳಕಿಗೆ ತರಲು ಶ್ರಮಿಸುತ್ತಿದೆ. ಪ್ರತಿ ಜಿಲ್ಲೆಯಲ್ಲಿ ವಿಚಾರ ಸಂಕಿರಣಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ’ ಎಂದರು.

ವಿದ್ವಾಂಸ ಅ. ಸುಂದರ ಮಾತನಾಡಿ ‘ಅಂತರ್ಜಾಲದ ಮೂಲಕ ಪ್ರಾಚ್ಯವಸ್ತು ಸಂಶೋಧನೆಗಳ ಕುರಿತು ಮಾಹಿತಿ ಒದಗಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

ಜನಸಾಮಾನ್ಯರಿಗೂ ಸಂಶೋಧನೆಯ ತಿರುಳು ತಲುಪಬೇಕು ಎಂಬ ಉದ್ದೇಶದಿಂದ ಅಂತರ್ಜಾಲ ರೂಪಿಸಲಾಗಿದೆ’ ಎಂದು ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ಕಾರ್ಯದರ್ಶಿ ಸುಧಾಕರ ಶೆಟ್ಟಿ, ವಿದ್ವಾಂಸ ಡಾ. ಗುಂಡಾ ಜೋಯಿಸ, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯದ ನಿರ್ದೇಶಕ ಡಾ.ಆರ್.ಗೋಪಾಲ್, ಮಿಥಿಕ್ ಸೊಸೈಟಿ ಅಧ್ಯಕ್ಷ ಡಾ. ಎಂ.ಕೆ.ಎಲ್.ಎನ್. ಶಾಸ್ತ್ರಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.