ಶನಿವಾರ, ಜನವರಿ 25, 2020
15 °C

ಬೆಂಗಳೂರು ಚಿತ್ರೋತ್ಸವಕ್ಕೆ ವಿದೇಶಿಗರ ದಂಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ಚಿತ್ರೋತ್ಸವಕ್ಕೆ ವಿದೇಶಿಗರ ದಂಡು

ಬೆಂಗಳೂರು: ಇರಾನ್‌ ದೇಶದ ನಿರ್ದೇಶಕಿ ಪೌರನ್‌ ದೇರಾಕ್ಷಾಂದ್ಹೇ, ಜರ್ಮನಿಯ ಹಾಫ್‌ ಚಿತ್ರೋತ್ಸವದ ನಿರ್ದೇಶಕ ಹೈನ್ಸ್‌ ಜಾರ್ಜ್‌ ಭಡೇ­ವಿಟ್ಸ್‌ ಸೇರಿದಂತೆ 20 ಮಂದಿ ವಿದೇಶಿ ಪ್ರತಿನಿಧಿಗಳು ಹಾಗೂ 57 ಮಂದಿ ಗಣ್ಯರು 6ನೇ ಬೆಂಗಳೂರು ಅಂತರ­ರಾಷ್ಟ್ರೀಯ ಸಿನಿ­ಮೋತ್ಸವದಲ್ಲಿ ಭಾಗ­ವಹಿಸಲಿದ್ದಾರೆ ಎಂದು ವಾರ್ತಾ ಇಲಾಖೆ ನಿರ್ದೇಶಕ ಎನ್‌.ಆರ್‌. ವಿಶು­ಕುಮಾರ್ ತಿಳಿಸಿದರು.ಸಿನಿಮೋತ್ಸವದಲ್ಲಿ ಚಿತ್ರ ವೀಕ್ಷಣೆ­ಗಾಗಿ ಈಗಾಗಲೇ 1,500 ಪ್ರತಿನಿಧಿ­ಗಳು ನೋಂದಣಿ ಮಾಡಿಕೊಂಡಿದ್ದು, ಬುಧವಾರದ ವೇಳೆಗೆ ಮೂರು ಸಾವಿರ ಮಂದಿ ನೋಂದಣಿ ಮಾಡಿಕೊಳ್ಳುವ ನಿರೀಕ್ಷೆ ಇದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಳೆದ ಬಾರಿ ಸಿನಿಮೋತ್ಸವದಲ್ಲಿ ಹೆಚ್ಚಿನ ಸಂಖ್ಯೆ­ಯಲ್ಲಿ ಪ್ರೇಕ್ಷಕರು ಭಾಗ­ವಹಿಸಿದ್ದು, ಕೆಲವು ಸಮಸ್ಯೆ­ಗಳು ಉಂಟಾಗಿದ್ದವು.

ಆದರೆ ಈ ಬಾರಿ ಯಾವುದೇ ತೊಂದರೆಯಾಗದಂತೆ ನಿಗಾವಹಿಸಲು ಅಧಿಕಾರಿ­ಗಳನ್ನು ನೇಮಿ­ಸಲಾಗಿದೆ. ಪ್ರೇಕ್ಷಕರ ನೋಂದಣಿ ಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಸ್ಥಳಾ­ವಕಾಶ ಇರುವ ಚಿತ್ರ ಮಂದಿರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು. ವಿಚಾರ ಸಂಕಿರಣ: ಅಂತರರಾಷ್ಟ್ರೀಯ ಚಲನ­ಚಿತ್ರೋತ್ಸವದ ಅಂಗವಾಗಿ ಇದೇ 27ರಂದು ‘ಪ್ರಾದೇಶಿಕ ಚಿತ್ರಗಳಿಗೆ ಅಂತರರಾಷ್ಟ್ರೀಯ ಮಾರು­ಕಟ್ಟೆ’, 29ಕ್ಕೆ ‘ಡಿಜಿಟಲ್ ಕ್ಯಾಮರಾ’ ಹಾಗೂ 30ಕ್ಕೆ ‘ಡಿಜಿಟಲ್‌ ಶಬ್ದ ಗ್ರಹಣ’ ವಿಷಯ ಕುರಿ­ತಂತೆ ವಿಚಾರ ಸಂಕಿರಣವನ್ನು ಏರ್ಪ­ಡಿಸಲಾಗಿದೆ ಎಂದು ವಿವರಿಸಿದರು.ವಿಚಾರಸಂಕಿರಣದಲ್ಲಿ ಭಾಗವಹಿ­ಸಲು ಇಚ್ಛಿಸುವವರು seminor@­biffes.in ಹಾಗೂ ದೂರವಾಣಿ 9845101811 ಮೂಲಕ ಸಂಪರ್ಕಿಸ­ಬಹುದು.

ಕಲಾತ್ಮಕ ನಿರ್ದೇಶಕ ಎಚ್‌.ಎನ್‌.­ನರಹರಿ ರಾವ್‌ ಮಾತನಾಡಿ, ಎರಡು ಕೋಟಿ ವೆಚ್ಚದಲ್ಲಿ ನಡೆಸು­ತ್ತಿರುವ ಸಿನಿಮೋತ್ಸವದಲ್ಲಿ ಜಾಗತಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಚಲನಚಿತ್ರಗಳನ್ನು ಪ್ರದರ್ಶಿಸಲಾಗು­ವುದು.

ಅದರಲ್ಲಿ  ಉದ್ಘಾಟನಾ ಚಿತ್ರವಾಗಿ ಇರಾಕ್‌ನ ಕರ್ಜಾನ್‌ ಖಾದರ್‌ ನಿರ್ದೇಶನದ ‘ಬೇಕಾಸ್‌’ (2012/ 97 ನಿಮಿಷ) ಕಲರ್‌ ಚಲನಚಿತ್ರ ಹಾಗೂ ಸಮಾ­ರೋಪ ಸಮಾರಂಭದಲ್ಲಿ ಆಸ್ಟ್ರೇಲಿಯಾದ ಕಿಮ್‌ ಮೋರ್ಡೋಂ ನಿರ್ದೇಶನದ ‘ದ ರಾಕೆಟ್‌’ (2013/ 96 ನಿಮಿಷ)ನ್ನು ಕೊನೆಯ ಚಿತ್ರವಾಗಿ ಪ್ರದರ್ಶಿಸಲಾಗುವುದು ಎಂದು ವಿವರಿಸಿದರು.ನುರಿತ ಮಾನವ ಸಂಪನ್ಮೂಲದ ಕೊರತೆಯ ಜತೆಗೆ ಅತಿ ಕಡಿಮೆ ವೆಚ್ಚದಲ್ಲಿ ಸಿನಿಮೋತ್ಸವವನ್ನು ಬಹಳ ಚೆನ್ನಾಗಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಪ್ರತಿನಿಧಿಗಳು ನೋಂದಾಯಿತ ಪಾಸ್‌­ಗಳನ್ನು ಬಳಸಿಕೊಂಡು ಸಿನಿ­ಮೋತ್ಸವದ ಉದ್ಘಾಟನಾ ಸಮಾ­ರಂಭ­ದಲ್ಲಿ ಭಾಗವಹಿಸಬಹುದು. ಆದರೆ ಪ್ರೇಕ್ಷಕರು ಹೆಸರುಗಳನ್ನು ನೋಂದಾ­ಯಿಸಿಕೊಳ್ಳದೆ ಚಿತ್ರಗಳನ್ನು ವೀಕ್ಷಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಚಲನ­ಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್‌.ಡಿ.ಗಂಗರಾಜು ಸ್ಪಷ್ಟಪಡಿಸಿದರು.ಗುರುವಾರ (ಡಿ.26) ನಡೆಯಲಿ­ರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ನಟಿಯರಾದ ರಮ್ಯಾ, ರಾಧಿಕಾ ಪಂಡಿತ್‌, ನಟ ಸುದೀಪ್‌ ಸೇರಿದಂತೆ ಇತರೆ ಗಣ್ಯರು ಭಾಗವಹಿಸಲಿದ್ದಾರೆ. ಜನವರಿ 2ರಂದು ಫನ್‌ ಸಿನಿಮಾಸ್‌ ನಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ರಾಜ್ಯಪಾಲ ಎಚ್‌.­ಆರ್‌. ಭಾರದ್ವಾಜ್‌ ಹಾಗೂ ನಟ ದರ್ಶನ್‌ ತೂಗುದೀಪ ಅವರು ಭಾಗ­ವಹಿಸಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಕೆ.ಆರ್‌. ನಿರಂಜನ್‌ ತಿಳಿಸಿದರು.

ಪ್ರತಿಕ್ರಿಯಿಸಿ (+)