ಶುಕ್ರವಾರ, ಮೇ 7, 2021
27 °C

ಬೆಂಗಳೂರು - ಚೆನ್ನೈ, ಬೀದರ್ - ಬೆಳಗಾವಿಗೆ ಸಂಪರ್ಕ:ಬುಲೆಟ್ ರೈಲು ಮಾರ್ಗ ಅಧ್ಯಯನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ ಚೆನ್ನೈ, ಬೆಳಗಾವಿ ಮತ್ತು ಬೀದರಕ್ಕೆ ಸಂಪರ್ಕ ಕಲ್ಪಿಸುವ ಬುಲೆಟ್ ರೈಲು ಮಾರ್ಗ ನಿರ್ಮಾಣದ ಸಾಧ್ಯತೆಗಳ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ರಾಜ್ಯ ಸರ್ಕಾರ ಮತ್ತು `ಜಪಾನ್ ಅಂತರರಾಷ್ಟ್ರೀಯ ನಿರ್ಮಾಣ ಕಂಪನಿ~ ನಡುವೆ ಮಾತುಕತೆ ನಡೆದಿದೆ.ಬೆಂಗಳೂರು-ಮೈಸೂರು-ಚೆನ್ನೈ, ಬೆಂಗಳೂರು-ತುಮಕೂರು-ಚಿತ್ರದುರ್ಗ-ಬೆಳಗಾವಿ (ರಾಷ್ಟ್ರೀಯ ಹೆದ್ದಾರಿ 4 ಸಾಗುವ ಮಾರ್ಗದಲ್ಲಿ) ಮತ್ತು ಬೆಂಗಳೂರು-ಗುಲ್ಬರ್ಗ-ಬೆಳಗಾವಿ ನಡುವೆ ಅತಿವೇಗದ ಬುಲೆಟ್ ರೈಲು ಮಾರ್ಗ ನಿರ್ಮಾಣದ ಸಾಧ್ಯತೆಗಳ ಕುರಿತು ಅಧ್ಯಯನ ನಡೆಸಲು ಜಪಾನ್ ಮೂಲದ ಕಂಪನಿಯ ಪ್ರತಿನಿಧಿಗಳ ಜತೆ ಪ್ರಾಥಮಿಕ ಹಂತದ ಮಾತುಕತೆ ಆಗಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ವಿಶ್ವ ಬಂಡವಾಳ ಹೂಡಿಕೆದಾರರ ಎರಡನೆಯ ಸಮಾವೇಶಕ್ಕೆ ಪೂರ್ವಭಾವಿಯಾಗಿ ನಿರಾಣಿ ನೇತೃತ್ವದಲ್ಲಿ ಜಪಾನ್, ಸಿಂಗಪುರಗಳಿಗೆ ರಾಜ್ಯದ ನಿಯೋಗ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಪ್ರಕ್ರಿಯೆ ನಡೆದಿದೆ.

`ಜಪಾನ್ ರಾಜಧಾನಿ ಟೋಕಿಯೊದಿಂದ ಒಸಾಕಾ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಬುಲೆಟ್ ರೈಲು ಮಾರ್ಗವನ್ನು 1964ರಲ್ಲೇ ನಿರ್ಮಿಸಲಾಗಿದೆ.ಇಂಥ ಮಾರ್ಗ ನಿರ್ಮಾಣಕ್ಕೆ ಪ್ರತಿ ಕಿಲೋ ಮೀಟರ್‌ಗೆ 200 ಕೋಟಿ ರೂಪಾಯಿ ವೆಚ್ಚವಾಗಲಿದೆ. ರೈಲು ಯೋಜನೆ ಸಾಕಾರಗೊಂಡಲ್ಲಿ, ಜಪಾನಿನ ಕಂಪನಿಯೇ ಇಲ್ಲಿ ಬಂಡವಾಳ ಹೂಡುತ್ತದೆ. ಪ್ರಯಾಣ ವೆಚ್ಚವನ್ನು ಸಾರ್ವಜನಿಕರಿಂದ ಕಂಪನಿಯೇ ವಸೂಲು ಮಾಡುತ್ತದೆ~ ಎಂದು ಸಚಿವರು ತಿಳಿಸಿದರು.ಸುರಂಗ ಮಾರ್ಗ: ಬೆಂಗಳೂರಿನಿಂದ ಮಂಗಳೂರು ಬಂದರಿಗೆ ಈಗಿರುವ ರಸ್ತೆ ಸಂಪರ್ಕವನ್ನು ಇನ್ನಷ್ಟು ಉತ್ತಮಪಡಿಸುವ ನಿಟ್ಟಿನಲ್ಲಿ, ಸಕಲೇಶಪುರದ ಸಮೀಪ ಸುರಂಗ ಮಾರ್ಗ ನಿರ್ಮಿಸಬೇಕು. ಇದು ನಿರ್ಮಾಣವಾದರೆ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಸುವವರಿಗೆ 30 ಕಿ.ಮೀ. ಉಳಿತಾಯ ಆಗಲಿದೆ. ಬೆಂಗಳೂರಿನ ಸುತ್ತ ಇನ್ನೊಂದು ವರ್ತುಲ ರಸ್ತೆ ನಿರ್ಮಿಸುವ ಚಿಂತನೆ ಇದೆ. ಈ ಯೋಜನೆಗಳ ಸಾಧ್ಯತೆ ಕುರಿತೂ ಇದೇ ಕಂಪನಿ ಅಧ್ಯಯನ ನಡೆಸಿ ವರದಿ ನೀಡಲಿದೆ ಎಂದು ಹೇಳಿದರು.ಜಪಾನಿ ನಗರ: ಜಪಾನ್ ಮೂಲದ ಒಟ್ಟು 182 ಕಂಪನಿಗಳು ರಾಜ್ಯದಲ್ಲಿ ಬಂಡವಾಳ ಹೂಡಿವೆ. ಆ ದೇಶದ ಇನ್ನೂ ಹಲವು ಕಂಪನಿಗಳು ರಾಜ್ಯದಲ್ಲಿ ಬಂಡವಾಳ ಹೂಡಲು ಉತ್ಸುಕತೆ ತೋರಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸಮೀಪ `ಜಪಾನಿ ನಗರ~ ನಿರ್ಮಿಸಲು ಅಲ್ಲಿನ ಉದ್ಯಮಿಗಳು ಆಸಕ್ತಿ ತೋರಿಸಿದ್ದಾರೆ.ಕೋಲಾರದ ನರಸಾಪುರ, ವೇಮಗಲ್ ಅಥವಾ ತುಮಕೂರು ಸಮೀಪ 1,000 ಎಕರೆ ಭೂಮಿ ನೀಡಲು ಕೋರಿದ್ದಾರೆ. ಅಲ್ಲಿ ನಿರ್ಮಿಸಲು ಉದ್ದೇಶಿಸಿರುವ `ನಗರ~ದಲ್ಲಿ ಜಪಾನಿಯರಿಗೆ ಪ್ರತ್ಯೇಕ ಬಡಾವಣೆ, ಶಾಲೆಗಳು, ಹೋಟೆಲ್ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.ಜಪಾನಿಯರು ಸ್ಥಾಪಿಸಲಿರುವ ಉದ್ದಿಮೆಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಬೇಕು ಎಂಬ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಬೆಂಗಳೂರಿನ ಸುತ್ತ, ಮತ್ತೊಂದು ವರ್ತುಲ ರಸ್ತೆ ನಿರ್ಮಿಸುವ ಸಂಬಂಧ ಆ ದೇಶದ ಮೂಲಸೌಕರ್ಯ ನಿರ್ಮಾಣ ಕಂಪನಿಗಳ ಜೊತೆ ಪ್ರಾಥಮಿಕ ಸುತ್ತಿನ ಮಾತುಕತೆ ನಡೆದಿದೆ ಎಂದರು.ಥೀಮ್ ಪಾರ್ಕ್: ಸಿಂಗಪುರದ `ಸೆಂಟೋಸಾ ಡೆವಲಪ್ಮೆಂಟ್ ಕಾರ್ಪೊರೇಷನ್~ ಕಂಪನಿ ಮಂಗಳೂರು ಸಮೀಪ ದ್ವೀಪವೊಂದರಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ `ಥೀಮ್ ಪಾರ್ಕ್~ ಆರಂಭಿಸಲು ಆಸಕ್ತಿ ತೋರಿದೆ. ಕಂಪನಿಯ ಅಧಿಕಾರಿಗಳು ಶೀಘ್ರದಲ್ಲೇ ರಾಜ್ಯಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂದರು.ಆದರೆ, ಮಂಗಳೂರು ಸಮೀಪ ಯಾವ ಸ್ಥಳದಲ್ಲಿ ಈ ಯೋಜನೆ ಬರಲಿದೆ ಎಂದು ಸಚಿವರು ತಿಳಿಸಲಿಲ್ಲ. ಕರ್ನಾಟಕ ಮತ್ತು ಸಿಂಗಪುರ ನಡುವೆ ವಾಣಿಜ್ಯ ವಹಿವಾಟು ಹೆಚ್ಚಿಸುವ ಸಂಬಂಧ ಒಪ್ಪಂದಕ್ಕೆ ಶೀಘ್ರವೇ ಸಹಿ ಮಾಡಲಾಗುವುದು ಎಂದರು.ಸಿಂಗಪುರದ ಅಸೆಂಡಾಸ್ ಕಂಪೆನಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ 250 ಎಕರೆ ಪ್ರದೇಶದಲ್ಲಿ ಮಾಹಿತಿ ತಂತ್ರಜ್ಞಾನ ಪಾರ್ಕ್ ನಿರ್ಮಿಸಲಿದೆ ಎಂದು ತಿಳಿಸಿದರು.ಜೂನ್ 7 ಮತ್ತು 8ರಂದು ನಡೆಯಲಿರುವ ವಿಶ್ವ ಬಂಡವಾಳ ಹೂಡಿಕೆದಾರರ ಎರಡನೆಯ ಸಮಾವೇಶಕ್ಕೆ ಸರ್ಕಾರ ಒಟ್ಟು 50 ಕೋಟಿ ರೂಪಾಯಿ ವೆಚ್ಚ ಮಾಡಲಿದೆ ಎಂದರು.ಹಳ್ಳಿಗುಡಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪೋಸ್ಕೊ ಉಕ್ಕು ಕಾರ್ಖಾನೆ ಯೋಜನೆಯನ್ನು ಸರ್ಕಾರ ಕೈಬಿಟ್ಟಿಲ್ಲ. ಈ ಕುರಿತು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಅವರುಉತ್ತರಿಸಿದರು.ಮುಖ್ಯಾಂಶಗಳು

*  ಬೆಂಗಳೂರು-ಚೆನ್ನೈ, ಬೆಂಗಳೂರು-ಬೆಳಗಾವಿ-ಗುಲ್ಬರ್ಗ ನಡುವೆ ಸಂಚಾರ

*  ಬೆಂಗಳೂರು-ಮಂಗಳೂರು ನಡುವೆ ಸುರಂಗ ಮಾರ್ಗ

*  ಜಪಾನ್ ಕಂಪೆನಿಯೊಂದಿಗೆ ಮಾತುಕತೆ

*  ಬೆಂಗಳೂರು ಸಮೀಪ 250 ಎಕರೆ ಪ್ರದೇಶದಲ್ಲಿ ಮಾಹಿತಿ ತಂತ್ರಜ್ಞಾನ ಪಾರ್ಕ್

*  ಜಪಾನ್‌ನ 180 ಕಂಪೆನಿಗಳು ರಾಜ್ಯದಲ್ಲಿ ಬಂಡವಾಳ`ಉಕ್ಕು ಕಂಪನಿಗಳಿಗೆ ಅವಕಾಶ ಇಲ್ಲ~


ಬೆಂಗಳೂರು: ವಿಶ್ವ ಬಂಡವಾಳ ಹೂಡಿಕೆದಾರರ ಎರಡನೆಯ ಸಮಾವೇಶದಲ್ಲಿ ಕಬ್ಬಿಣ ಮತ್ತು ಉಕ್ಕು ತಯಾರಿಕಾ ಕಂಪೆನಿಗಳು ಪಾಲ್ಗೊಳ್ಳುತ್ತಿಲ್ಲ ಎಂದು ಮುರುಗೇಶ ನಿರಾಣಿ ತಿಳಿಸಿದರು.ರಾಜ್ಯದಲ್ಲಿ ಇರುವ ಕಬ್ಬಿಣದ ಅದಿರು ಸಂಪನ್ಮೂಲ ಈಗಾಗಲೇ ಬಂಡವಾಳ ಹೂಡಲು ಮುಂದೆ ಬಂದಿರುವ ಕಬ್ಬಿಣ ಮತ್ತು ಉಕ್ಕು ತಯಾರಿಕಾ ಕಂಪನಿಗಳಿಗೆ ಪೂರೈಸುವಷ್ಟಿಲ್ಲ. ಇಂಥ ಸಂದರ್ಭದಲ್ಲಿ ಹೊಸ ಕಂಪನಿಗಳಿಗೆ ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡಲು ಅವಕಾಶ ಇಲ್ಲ ಎಂದು ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.