`ಬೆಂಗಳೂರು ಧ್ವನಿ' ಕಿರೀಟ ತೊಟ್ಟವರು

7

`ಬೆಂಗಳೂರು ಧ್ವನಿ' ಕಿರೀಟ ತೊಟ್ಟವರು

Published:
Updated:
`ಬೆಂಗಳೂರು ಧ್ವನಿ' ಕಿರೀಟ ತೊಟ್ಟವರು

ನಾಲ್ಕನೇ ತರಗತಿಗೇ ಕರ್ನಾಟಕಿ ಸಂಗೀತದಲ್ಲಿ ಜೂನಿಯರ್ ಮುಗಿಸಿದ್ದ ವಿಜೇತ್ ಅರಸ್ ಮೈಸೂರಿನವರು. ಕೆ.ಆರ್. ನಾಗಮಣಿ ಸಂಗೀತ ಗುರು. ನಿತಿನ್ ರಾಜಾರಾಂ ಶಾಸ್ತ್ರಿ ಹಾಗೂ ವೀರಭದ್ರಯ್ಯ ಹೀರೆಮಠ ಅವರ ಬಳಿ ಹಿಂದೂಸ್ತಾನಿ ಸಂಗೀತಾಭ್ಯಾಸವನ್ನು ಇತ್ತೀಚೆಗಷ್ಟೇ ಪ್ರಾರಂಭಿಸಿದ್ದಾರೆ. ಸದ್ಯ `ವಾಯ್ಸ ಆಫ್ ಬೆಂಗಳೂರು' ಸೀಸನ್ 6ರಲ್ಲಿ ಗೆಲುವಿನ ಗರಿ ವಿಜೇತ್ ಅರಸ್ ಅವರ ಮುಡಿಗೇರಿದೆ.ನಾಲ್ಕನೇ ತರಗತಿಯವರೆಗೆ ಸಂಗೀತ ಕಲಿತ ಇವರು ಆಮೇಲೆ ಅಭ್ಯಾಸ ನಿಲ್ಲಿಸಿಬಿಟ್ಟರು. ಎಸ್‌ಎಸ್‌ಎಲ್‌ಸಿ ನಂತರವಂತೂ ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸಿರಲಿಲ್ಲ. ಎರಡು ವರ್ಷದ ಹಿಂದೆ `ಎದೆ ತುಂಬಿ ಹಾಡುವೆನು' ಕಾರ್ಯಕ್ರಮದಲ್ಲಿ ಭಾಗವಹಿಸಲು ಮತ್ತೆ ವೇದಿಕೆ ಹತ್ತಿದ್ದು.

ಸದ್ಯ ಮೈಸೂರಿನ ಕೌಟಿಲ್ಯ ವಿದ್ಯಾಲಯದಲ್ಲಿ ಬಿಬಿಎಂ ದ್ವಿತೀಯ ವರ್ಷದಲ್ಲಿ ಓದುತ್ತಿರುವ ವಿಜೇತ್ ಅವರನ್ನು ಗರುಡಾ ಮಾಲ್ ಆಯೋಜಿಸಿದ್ದ `ವಾಯ್ಸ ಆಫ್ ಬೆಂಗಳೂರು' ಸ್ಪರ್ಧೆ ಗುರುತಿಸಿತು.`ಚಿಕ್ಕಂದಿನಿಂದ ಹಾಡಿನ ಬಗ್ಗೆ ಆಸಕ್ತಿ ಇತ್ತು. ತಂಗಿಯೂ ಹಾಡುತ್ತಾಳೆ. ಆಡಿಶನ್‌ನಲ್ಲಿ ಆಯ್ಕೆಯಾದ ನಂತರ ಆತ್ಮವಿಶ್ವಾಸ ಹೆಚ್ಚಿತು.

ಸ್ಪರ್ಧೆ ಹಾಗೂ ಅಭ್ಯಾಸಕ್ಕಾಗಿ ಬೆಂಗಳೂರಿನಲ್ಲಿ ಸಾಕಷ್ಟು ಬಾರಿ ಓಡಾಡಿದೆ. ಹೊಸತನ್ನು ಕಲಿಯುವ ಹುಮ್ಮಸ್ಸಿತ್ತು. ಬಿಬಿಎಂ ಪರೀಕ್ಷೆಗೆ ತಯಾರಾಗಲು ನೀಡಿದ್ದ ರಜಾ ದಿನಗಳಲ್ಲೇ ಸಂಗೀತದ ಅಭ್ಯಾಸ ನಡೆಸುತ್ತಿದ್ದೆ' ಎಂದು ತಮ್ಮ ಸಂಗೀತಾಸಕ್ತಿಯ ಉತ್ಕಟತೆಯನ್ನು ಬಿಚ್ಚಿಡುತ್ತಾರೆ ವಿಜೇತ್.`ಹಾಡಿನ ಆಯ್ಕೆಗೆ ಸಂಪೂರ್ಣ ಸಹಕಾರ ನೀಡಿದ್ದು ಸ್ನೇಹಿತ ಪ್ರಜ್ವಲ್. ಆತನೂ ಹಾಡುತ್ತಾನೆ. ಮನೆಯಲ್ಲಿ ಕುಳಿತು ಅಭ್ಯಾಸ ಮಾಡಿಕೊಳ್ಳುತ್ತಿದ್ದೆ. ವಾಯ್ಸ ಆಫ್ ಬೆಂಗಳೂರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ಉತ್ತಮ ಸ್ನೇಹಿತರು ಸಿಕ್ಕರು. ಅಷ್ಟೇ ಅಲ್ಲ, ಜನರು ಒಬ್ಬ ಗಾಯಕನಿಂದ ಏನನ್ನು ಅಪೇಕ್ಷಿಸುತ್ತಾರೆ ಎಂಬುದನ್ನು ಇಲ್ಲಿ ತಿಳಿದುಕೊಂಡೆ. ಹಾಡುವಾಗ ಸಂಗತಿಗಳನ್ನು ಸರಿಯಾಗಿ ಹಾಡುತ್ತೇನೆ ಎಂದು ಶ್ಲಾಘಿಸಿದರು. ಧ್ವನಿಸೂಕ್ಷ್ಮಗಳ ಬಗ್ಗೆ ಹೆಚ್ಚು ಗಮನ ಹರಿಸು ಎಂದು ಮಾರ್ಗದರ್ಶನ ನೀಡಿದ್ದು ಖುಷಿ ಎನಿಸಿತು' ಎನ್ನುತ್ತಾರೆ ವಿಜೇತ್.ಇವರಿಗೆ ಸಂಗೀತದಷ್ಟೇ ನಟನೆಯ ಬಗ್ಗೆಯೂ ಒಲವು. ಆಗಾಗ ಮೈಸೂರಿನ ರಂಗಾಯಣಕ್ಕೆ ಹೋಗಿ ನಾಟಕಗಳಲ್ಲಿ ಅಭಿನಯಿಸುತ್ತಾರಂತೆ. ಗಿಟಾರ್ ಹಾಗೂ ಕೀಬೋರ್ಡ್ ನುಡಿಸುವುದೂ ಗೊತ್ತು. ಉತ್ತಮ ಹಿನ್ನೆಲೆ ಗಾಯಕನಾಗುವುದು, ಎಂಬಿಎ ಮಾಡುವುದು ಎದುರಿರುವ ಕನಸುಗಳು.ಮಗನ ಆಸೆಯೇ ನನ್ನ ಆಸೆ

`ಸ್ಪರ್ಧೆಯಲ್ಲಿ ಶಾಸ್ತ್ರೀಯ ಸಂಗೀತವನ್ನೂ ಹಾಡಬೇಕಿದ್ದರಿಂದ ಭಯ ಇತ್ತು. ಅಭ್ಯಾಸ ಮಾಡಿ ಗೆದ್ದಿದ್ದು ಖುಷಿ ನೀಡಿದೆ. ಅವನ ಬದುಕಿಗೆ ಇದು ದೊಡ್ಡ ಟರ್ನಿಂಗ್ ಪಾಯಿಂಟ್ ಆಗಲಿ ಎಂಬುದು ನನ್ನಾಸೆ' ಎಂದು ವಿಜೇತ್ ಅರಸ್ ಅವರ ಅಮ್ಮ ಶೋಭಾ ಅರಸ್ ಮಗನ ಸಾಧನೆಗೆ ಹೆಮ್ಮೆಯ ಸಹಿ ಹಾಕಿದರು.ಮಲಯಾಳಿ ಕುಟ್ಟಿಗೆ ಪ್ರಶಸ್ತಿ

ಯುವಕರ ವಿಭಾಗದಲ್ಲಿ ವಿಜೇತ್ ಮಿಂಚಿದರೆ, ಯುವತಿಯರ ವಿಭಾಗದಲ್ಲಿ ಕೇರಳದ ಜಿನ್ಶಾ ಕೆ.ನನು ವಿಜೇತರಾದರು.

ಮುಂಬೈನಲ್ಲೇ ಹುಟ್ಟಿ ಬೆಳೆದು ಅಲ್ಲೇ ವಿದ್ಯಾಭ್ಯಾಸ ಮುಗಿಸಿರುವ ಇವರು ಬೆಂಗಳೂರಿಗೆ ಕಾರ್ಯಾರ್ಥ ಬಂದವರು. ಎಲ್‌ಎನ್‌ಟಿ ಇನ್‌ಫೋಟೆಕ್ ಕಂಪೆನಿಯಲ್ಲಿ ಎಂಜಿನಿಯರ್ ಆಗಿರುವ ಇವರ ಸಹೋದರಿಯೂ ಹಾಡುಗಾರ್ತಿ.ನಾಲ್ಕನೇ ವರ್ಷದಿಂದಲೇ ಸಂಗೀತ ಪಯಣದಲ್ಲಿ ಹೆಜ್ಜೆ ಇರಿಸಿದ ಇವರ ಸಂಗೀತಾಭ್ಯಾಸಕ್ಕೆ 17 ವರ್ಷ ತುಂಬಿದೆ. ಸುರಮಣಿ ಮೀರಾನಾಥನ್ ಹಾಗೂ ಚಂದ್ರಶೇಖರ್ ಭಾಗವತರ್ ಅವರ ಬಳಿ ಸಂಗೀತಾಭ್ಯಾಸ ಮಾಡಿದ್ದಾರೆ. ಸುಮಾರು 10 ವರ್ಷ ಭರತನಾಟ್ಯವನ್ನೂ ಕಲಿತಿರುವ ಇವರು ವಯೊಲಿನ್ ವಾದಕರೂ ಹೌದು!`ವಾಯ್ಸ ಆಫ್ ಬೆಂಗಳೂರು ಬಗ್ಗೆ ತಿಳಿಯುವಾಗ ಆಡಿಶನ್ ಮುಗಿದಿತ್ತು. ಅವಕಾಶ ತಪ್ಪಿತು ಎಂದು ಬೇಸರ ಪಟ್ಟುಕೊಳ್ಳುವಷ್ಟರಲ್ಲಿ ಇನ್ನೊಂದು ಆಡಿಶನ್ ಇರುವ ಬಗ್ಗೆ ಮೇಲ್ ಬಂತು. ಭಯದಿಂದಲೇ ಹಾಡಿದ್ದೆ. ಆಯ್ಕೆಯಾದೆ. ರಾಜೇಶ್ ಕೃಷ್ಣನ್ ಸರ್, ಮೇದಿನಿ ಮೇಡಂ ಹಾಗೂ ಅಗ್ಬರ್ ಸರ್ ತುಂಬಾ ಧೈರ್ಯ ಹೇಳುತ್ತಿದ್ದರು.

ಶ್ರುತಿ ಹಾಗೂ ತಾಳಕ್ಕೆ ಸಂಬಂಧಿಸಿದಂತೆ ಒಂದು ಸುತ್ತು ಇತ್ತು. ಆಗ ತುಂಬಾ ಕಲಿತೆ' ಎನ್ನುತ್ತಿದ್ದ ಜಿನ್ಶಾ ಅವರ ಧ್ವನಿಯಲ್ಲಿ ಅಭಿಮಾನವಿತ್ತು.“ಐದು ಹಿಂದಿ ಹಾಗೂ ಐದು ಕನ್ನಡದ ಕಷ್ಟದ ಹಾಡುಗಳನ್ನು ನೀಡಿ ಒಂದು ಕನ್ನಡ ಹಾಗೂ ಇನ್ನೊಂದು ಹಿಂದಿ ಹಾಡನ್ನು ಆಯ್ಕೆ ಮಾಡಿ ಹಾಡಲು ಹೇಳಿದ್ದರು.

ನಾನು `ನಂಬಿದೆ ನಿನ್ನ ನಾಗಾಭರಣ' ಹಾಗೂ `ದಿಲ್ ಚೀಸ್ ಕ್ಯಾ ಹೈ' ಹಾಡುಗಳನ್ನು ಆಯ್ದುಕೊಂಡಿದ್ದೆ. ಅಂತಿಮ ಸುತ್ತಿನಲ್ಲಿ `ಘಿಲ್‌ಘಿಲಿ ಘಿಲ್‌ಘಿಲಿ ಘಿಲಕ್ಕ್ ಕಾಲ್‌ಗೆಜ್ಜೆ ಘಲಕ್ಕ್' ಹಾಡು ಆಯ್ದುಕೊಂಡಿದ್ದೆ. ಈ ಹಾಡು ಟಂಗ್ ಟ್ವಿಸ್ಟರ್ ಅನಿಸಿತು ನನಗೆ. ನಾಲ್ಕೈದು ತಿಂಗಳಿಂದ ಕನ್ನಡಿಗರ ಜೊತೆಯೇ ಇದ್ದೇನೆ. ಅವರು ನನಗೆ ಹಾಡು ಕಲಿಯೋಕೆ ತುಂಬಾ ಸಹಾಯ ಮಾಡಿದ್ರು' ಎಂದು ನೆನೆಸಿಕೊಂಡರು ಜಿನ್ಶಾ.ಜಿನ್ಶಾ ಈಗಾಗಲೇ ಕೇರಳ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದರು. ಅವರ ಧ್ವನಿ ಕೇಳಿ ಮಲಾಯಾಳಂನ `ಟಿ.ಡಿ.ದಾಸನ್ ಸ್ಟ್ಯಾಂಡರ್ಡ್ ಸಿಕ್ಸ್ತ್ ಬಿ' ಸಿನಿಮಾದ `ವೆಂಜಮರ್ ಕಾತ್ತೆ' ಹಾಡಿನಲ್ಲಿ ಅವಕಾಶ ದಕ್ಕಿದೆ. ಶರತ್ ಅವರ ಸಂಗೀತ ನಿರ್ದೇಶನದಲ್ಲಿ `ತಲ್ ಸಮಯಂ ಒರು ಪೆಣ್ ಕುಟ್ಟಿ' ಎಂಬ ಮಧುರ ಗೀತೆಗೆ ದನಿಯಾಗಿದ್ದಾರೆ.`ಅಪ್ಪ ಅಮ್ಮನೇ ನನ್ನೊಳಗಿನ ಗಾಯಕಿಯನ್ನು ಗುರುತಿಸಿದವರು. ಎಲ್ಲೇ ನನ್ನ ಕಾರ್ಯಕ್ರಮವಿರಲಿ, ಅವರು ತಪ್ಪದೆ ಹಾಜರಾಗುತ್ತಾರೆ. ನನ್ನ ನಿರೀಕ್ಷೆಗೂ ಮೀರಿದ ಬೆಂಬಲ ಕುಟುಂಬದ್ದು. ಕಚೇರಿಯಲ್ಲೂ ಅಷ್ಟೇ, ನನ್ನ ಕೆಲಸವನ್ನು ಮಾಡಿಕೊಡುತ್ತಿದ್ದರು. ಕೇಳಿದಾಗ ರಜೆಗಳನ್ನೂ ನೀಡಿದರು' ಎಂದು ಎಲ್ಲರ ಸಹಾಯ ನೆನೆಸಿಕೊಳ್ಳುವಾಗ ಅವರ ಕಣ್ಣಲ್ಲಿ ಕಂಬನಿ ಮಿಂಚಿ ಮರೆಯಾಯಿತು. ಬೆಳಗಿನ ಜಾವ ಇವರ ಸಂಗೀತಾಭ್ಯಾಸದ ಸಮಯ. ಸ್ಪರ್ಧೆಗಾಗಿ ಅಭ್ಯಾಸ ನಡೆಸಲು ಸಮಯ ಹೊಂದಿಸಿಕೊಳ್ಳುವುದು ತುಂಬಾ ಕಷ್ಟ ಎನಿಸಿತ್ತಂತೆ. ಕಚೇರಿ, ಬಸ್ ಪ್ರಯಾಣದ ಸಂದರ್ಭದಲ್ಲೇ ಹಾಡು ಕೇಳಿ ಅಭ್ಯಾಸ ಮಾಡುತ್ತಿದ್ದರಂತೆ. ಜನಪ್ರಿಯ ಗಾಯಕಿ ಆಗಬೇಕೆಂಬುದು ಅವರ ಬದುಕಿನ ಬಹುದೊಡ್ಡ ಗುರಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry