ಶುಕ್ರವಾರ, ಮೇ 7, 2021
27 °C

ಬೆಂಗಳೂರು ನಗರಕ್ಕೆ 475 ವರ್ಷ: ಐತಿಹಾಸಿಕ ವರ್ಷ ಮರೆತ ಬಿಬಿಎಂಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಂಪೇಗೌಡರ ಜಯಂತಿಯ ಸಂದರ್ಭದಲ್ಲಿ ಬೆಂಗಳೂರು ನಗರ ನಿರ್ಮಾಣದ ಐತಿಹಾಸಿಕ ವರ್ಷವನ್ನೇ ಬಿಬಿಎಂಪಿ ಮರೆತಂತಿದೆ. 1537 ರಲ್ಲಿ ನಗರ ನಿರ್ಮಾತೃ ಕೆಂಪೇಗೌಡರಿಂದ ಬೆಂಗಳೂರು ನಿರ್ಮಾಣಗೊಂಡು ಇಲ್ಲಿಗೆ 475 ವರ್ಷಗಳು ತುಂಬಿವೆ. ಹತ್ತು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಇದೇ ಐದು ಮತ್ತು ಆರರಂದು ಕೆಂಪೇಗೌಡ ಜಯಂತಿ ಆಚರಿಸಲು ಹೊರಟಿರುವ ಬಿಬಿಎಂಪಿಯ ಗಮನಕ್ಕೆ ಇದು ಬಾರದೇ ಇರುವುದು ದುರದೃಷ್ಟಕರ ಸಂಗತಿ.

1537ರಲ್ಲಿ ಕೆಂಪೇಗೌಡ ವಿಜಯನಗರ ಅರಸರಾದ ಕೃಷ್ಣರಾಯ ಹಾಗೂ ಅಚ್ಯುತರಾಯರಿಂದ ಬೆಂಗಳೂರನ್ನು ಪಡೆದು ತನ್ನ ಹೊಸ ರಾಜಧಾನಿಯನ್ನಾಗಿ ಮಾಡಿಕೊಂಡು, ಈಗಿನ ಕೆ.ಆರ್.ಮಾರುಕಟ್ಟೆ ಭಾಗದಲ್ಲಿ ಕೋಟೆಯನ್ನು ನಿರ್ಮಿಸಿದ್ದು ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ.

ಉತ್ತಮ ರಾಜ್ಯಭಾರಕ್ಕಾಗಿ ವಿಜಯನಗರದ ಅರಸು ಅಚ್ಯುತರಾಯನು ಕೆಂಪೇಗೌಡನಿಗೆ ಯಲಹಂಕ, ಬೇವೂರು, ಚಿಕ್ಕಪೇಟೆ, ಬಳೇಪೇಟೆ, ಹೆಸರಘಟ್ಟ, ಬಾಣಾವಾರ, ಕನ್ನಳ್ಳಿ, ವರ್ತೂರು, ಹಲಸೂರು, ಕೆಂಗೇರಿ, ತಲಘಟ್ಟಪುರ, ಜಿಗಣಿ ಹಾಗೂ ಕುಂಬಳಗೋಡು ಪ್ರದೇಶಗಳನ್ನು ಉಂಬಳಿಯಾಗಿ ಬಿಟ್ಟುಕೊಟ್ಟ ವಿಷಯವು 1876ರಲ್ಲಿ ಪ್ರಕಟಗೊಂಡಿರುವ ಬೆಂಝಮಿನ್ ಲೂಯಿಸ್ ರೈಸ್ ಅವರ ಪುಸ್ತಕದಲ್ಲಿ ದಾಖಲಾಗಿದೆ.

2011 ರ ಫೆಬ್ರುವರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬೆಂಗಳೂರಿನ 475 ನೇ ವರ್ಷಾಚರಣೆಗಾಗಿ ಪ್ರತ್ಯೇಕ ಹಣ ಮೀಸಲಿಡುವಂತೆ ಒತ್ತಾಯಿಸಲಾಗಿತ್ತು. ಆದರೆ ಈ ಬಾರಿಯ ಬಜೆಟ್‌ನಲ್ಲಿ ಇದಕ್ಕಾಗಿ ಯಾವುದೇ ವಿಶೇಷ ಅನುದಾನವನ್ನು ಮೀಸಲಿಟ್ಟಿಲ್ಲ.

`ಹೈದರಾಬಾದ್ ನಿರ್ಮಾಣದ ವಾರ್ಷಿಕೋತ್ಸವವನ್ನು ವಿಜೃಭಂಣೆಯಿಂದ ಆಚರಿಸಿದಂತೆ ಬೆಂಗಳೂರಿನ ನಿರ್ಮಾಣ ವರ್ಷವನ್ನೂ ಆಚರಿಸಬೇಕಿತ್ತು~ ಎಂದು ಭಾರತೀಯ ಇತಿಹಾಸ ಸಂಶೋಧನಾ ಸಮಿತಿಯ ಉಪ ನಿರ್ದೇಶಕ ಎಸ್.ಕೆ.ಅರುಣಿ ವಿಷಾದಿಸಿದ್ದಾರೆ.

`ಕೆಂಪೇಗೌಡರ 500 ನೇ ಜಯಂತಿಯ ಆಚರಣೆಯನ್ನು ವಿಜೃಂಭಣೆಯಿಂದ ಆಚರಿಸಬಕೆಂಬ ಕಾರಣಕ್ಕೆ ಬೆಂಗಳೂರು ನಗರ ನಿರ್ಮಾಣದ ಆಚರಣೆಯನ್ನು ಇದರೊಂದಿಗೆ ಸೇರಿಸಲಾಗಿಲ್ಲ~ ಎಂದು ಬಿಬಿಎಂಪಿ ಆಯುಕ್ತ ಎಂ.ಕೆ.ಶಂಕರಲಿಂಗೇಗೌಡ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.