ಬೆಂಗಳೂರು ನಗರದ ಕುಂದು -ಕೊರತೆ

7

ಬೆಂಗಳೂರು ನಗರದ ಕುಂದು -ಕೊರತೆ

Published:
Updated:

ಮೆಟ್ರೋ ಸುಲಿಗೆ

ಇತ್ತೀಚೆಗೆ ‘ನಮ್ಮ ಮೆಟ್ರೋ’ ಪ್ರಯಾಣ ದರದ ಪಟ್ಟಿಯನ್ನು ಸರ್ಕಾರದವರು ಪ್ರಕಟಿಸಿದ್ದಾರೆ. ಇದರಲ್ಲಿ ಎಂ.ಜಿ. ರಸ್ತೆಯಿಂದ ಬೈಯಪ್ಪನಹಳ್ಳಿಯ 6.7 ಕಿ.ಮೀ. ದೂರಕ್ಕೆ ರೂ. 15 ಎಂದು ನಿಗದಿಪಡಿಸಿದ್ದಾರೆ. ಅಂದರೆ ಎಂದರೆ, ಇದು ಒಂದು ಕಿಲೋಮೀಟರ್‌ಗೆ ಎರಡು ರೂಗಳಿಗಿಂತಲೂ ಹೆಚ್ಚಾಯಿತು. ಇದು ಬಿಎಂಟಿಸಿಯ ವೋಲ್ವೋ ದರಕ್ಕೆ ಸಮನಾಗಬಹುದೇನೋ?  ಅಲ್ಲದೆ ಕೇವಲ ಎರಡು ಕಿ.ಮೀ. ದೂರದ ಟ್ರಿನಿಟಿ ವೃತ್ತಕ್ಕೆ ಹತ್ತು ರೂಪಾಯಿನ ದರ. ಇಂತಹ ಪರಿಸ್ಥಿತಿಯಲ್ಲಿ ಇದು ನಿಜವಾಗಿಯೂ ಬಿಎಂಟಿಸಿ ವ್ಯವಸ್ಥೆಗೆ ಪರ್ಯಾಯವಾಗಿ ಪ್ರಯಾಣಿಕರನ್ನು ಆಕರ್ಷಿಸಬಲ್ಲದೇ?ಇದಕ್ಕಿಂತ ರೈಲ್ವೆ ಇಲಾಖೆಯ ವರ್ತುಲ ರೈಲ್ವೆ ಯೋಜನೆಯೇ ಪರ್ಯಾಯ ವ್ಯವಸ್ಥೆಯಾಗಬಹುದಿತ್ತಲ್ಲವೇ? ಬೆಂಗಳೂರಿನಲ್ಲಿರುವರೆಲ್ಲರೂ ಐಟಿ ಅಥವಾ ಬಿಟಿ ಉದ್ಯಮಿಗಳಲ್ಲ. ಶೇಕಡಾ ಐವತ್ತಕ್ಕೂ ಹೆಚ್ಚು ಜನರು ಸಾಮಾನ್ಯ ಉದ್ಯೋಗದವರು. ಅವರೆಲ್ಲರಿಗೂ ಸೇರಿದ ತೆರಿಗೆ ಹಣ ಮೆಟ್ರೊ ಹೆಸರಿನಲ್ಲಿ ಸೂಕ್ತವಾಗಿ ಬಳಕೆಯಾಯಿತೇ? ಇದಕ್ಕೆ ಸಂಬಂಧಪಟ್ಟವರು ಉತ್ತರಿಸಬೇಕು.

-ಆರ್. ಶ್ರೀಧರ್ಸೈಲೆನ್ಸರ್ ಬದಲಾಯಿಸಿ

ಬಿಎಂಟಿಸಿಯವರು ಖರೀದಿಸಿರುವ ಟಾಟಾ ಮಾರ್ಕೊಪೋಲೊ ಎಸಿ ಬಸ್‌ಗಳು, ಪ್ರತಿ ನಿಲ್ದಾಣದಲ್ಲಿ ನಿಂತು ಮುಂದೆ ಚಲಿಸುವಾಗ ಜನರಿಗೆ ದಾರಿಯೇ ಕಾಣದಷ್ಟು ಧೂಳನ್ನು ಎಬ್ಬಿಸುತ್ತವೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ.

ಇದಕ್ಕೆ ಕಾರಣ, ಇತರೆ ಬಿಎಂಟಿಸಿ ಬಸ್‌ಗಳಿಗೆ ಹೊಗೆ ಉಗುಳುವ ಕೊಳವೆ ಬಸ್ಸಿನ ಬಲಭಾಗದಲ್ಲಿದ್ದರೆ, ಮಾರ್ಕೊಪೋಲೊ ಬಸ್‌ನ ಹಿಂಭಾಗದಲ್ಲಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಸೈಲನ್ಸರ್ ಬಲಬದಿಗೆ ಬದಲಾಯಿಸಿ ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ.

-ಜಿ.ಎಸ್.ಎಸ್. ಬಾಬುಶಬ್ದಮಾಲಿನ್ಯ ತಡೆಗಟ್ಟಿ

ಬೆಂಗಳೂರು ನಗರವನ್ನು ಸಿಂಗಪುರ ಮಾದರಿಯಲ್ಲಿ ಬದಲಾಯಿಸಲು ಉತ್ಸಾಹದಿಂದ ಹೊರಟಿರುವುದು ಸಂತೋಷದ ವಿಷಯ. ಆದರೆ ನಮ್ಮ ಮೆಟ್ರೊ ಪೂರ್ಣವಾಗುವುದರಲ್ಲಿ ಶಬ್ದಮಾಲಿನ್ಯವನ್ನು ತಡೆಯುವುದು ಜನಸಾಮಾನ್ಯರಿಗೆ ಅಸಾಧ್ಯವಾಗಿದೆ.ವಾಣಿ ವಿಲಾಸ ರಸ್ತೆ, ವಿ. ವಿ. ಪುರಂ ಬಡಾವಣೆಯ ಮೆಟ್ರೊ ಕಾರ್ಯದಿಂದ ನಿವಾಸಿಗಳಿಗೆ ವಿಪರೀತ ತೊಂದರೆ ಆಗುತ್ತಿದೆ.ಈ ರಸ್ತೆಯಲ್ಲಿ ಬಹುಮಹಡಿ ಕಟ್ಟಡಗಳ ವಸತಿ ಗೃಹಗಳಲ್ಲಿ ಹಾಗೂ ಅಕ್ಕ-ಪಕ್ಕದ ಮನೆಗಳಲ್ಲಿ ವಯೋವೃದ್ಧರು, ಹಿರಿಯ ನಾಗರಿಕರು, ರೋಗಿಗಳು, ಗರ್ಭಿಣಿಯರು, ಚಿಕ್ಕಮಕ್ಕಳು ಮತ್ತಿತರರು ವಾಸಿಸುತ್ತಿದ್ದಾರೆ.ಬೆಳಿಗ್ಗೆಯಿಂದ ಸಂಜೆಯವರೆಗೆ ದುಡಿದು ಬಂದಿರುವ ಜನಸಾಮಾನ್ಯರಿಗೆ ರಾತ್ರಿಯಾದರೂ ನೆಮ್ಮದಿಯಿಂದ ನಿದ್ದೆ ಮಾಡುವ ಅವಕಾಶ ಬೇಡವೇ? ವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿದ್ದು ಓದುವ ವಿದ್ಯಾರ್ಥಿಗಳಿಗೆ ಶಾಂತ ವಾತಾವರಣ ಬೇಡವೇ?ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಏಕಪ್ರಕಾರವಾಗಿ ಮೆಟ್ರೊ ಕಾರ್ಯದ ವಾಹನಗಳ ಶಬ್ದ, ಕಾರ್ಯ ನಿರ್ವಹಿಸುತ್ತಿರುವವರ ಕೂಗಾಟ ವಿಪರೀತವಾಗಿದೆ. ಈ ಶಬ್ದಮಾಲಿನ್ಯವನ್ನು ತಡೆಯುವ ಪ್ರಯತ್ನ ಮಾತ್ರ ನಡೆದಿಲ್ಲ. ನಾಗರಿಕರೂ ಸಹ ಮೂಕ ಪ್ರೇಕ್ಷಕರಂತೆ ಅನುಭವಿಸುತ್ತಿದ್ದಾರೆ.ಈ ಬಡಾವಣೆಯಿಂದ ಜನಪ್ರತಿನಿಧಿಗಳಾಗಿ ಆಯ್ಕೆಯಾಗಿರುವ ಕೌನ್ಸಿಲರ್, ಎಂ.ಎಲ್.ಎ. ಗಳು ಸಹ ಇದರ ಬಗ್ಗೆ ಯೋಚಿಸಿದಂತೆ ಕಂಡು ಬರುತ್ತಿಲ್ಲ. ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳುಹಿಸುವುದು ಪ್ರಜೆಗಳ ಸೌಲಭ್ಯಗಳನ್ನು, ಕಷ್ಟನಷ್ಟಗಳನ್ನು ತಿಳಿದು ಪರಿಹರಿಸಲು, ಆದರೆ ಇಂದು ಪ್ರಜೆಗಳ ನೋವನ್ನು ಕೇಳುವವರೇ ಇಲ್ಲವಾಗಿದೆ. ಯಾರ ಬಳಿ ಹೇಳಿಕೊಳ್ಳಬೇಕು ಎಂಬುದೇ ಸಮಸ್ಯೆಯಾಗಿದೆ.ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಯನ್ನು ಗಮನಿಸಿ ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ನಡೆಯುತ್ತಿರುವ ಈ ಮೆಟ್ರೊ ಕಾರ್ಯವನ್ನು ನಿಲ್ಲಿಸಿ ಬೆಳಿಗ್ಗೆ 6 ರಿಂದ ರಾತ್ರಿ 7 ಗಂಟೆ ಅಥವಾ 8 ಗಂಟೆಯವರೆಗೆ ಕಾರ್ಯನಿರ್ವಹಿಸಲು ಸೂಚಿಸಬೇಕು. ಮೆಟ್ರೊ ಕಾರ್ಯದ ಶಬ್ದಮಾಲಿನ್ಯದಿಂದ ಸಾರ್ವಜನಿಕರಿಗೆ ಆಗುತ್ತಿರುವ ಹಿಂಸೆಯನ್ನು ತಪ್ಪಿಸಬೇಕಾಗಿ ವಿನಂತಿ.

-ಜಿ. ಎಸ್. ಶರ್ಮಾಖಾಸಗಿ ಬಸ್‌ಗಳ ಹಾವಳಿ

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಹೆಬ್ಬಾಳ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳ ಹಾವಳಿ ವಿಪರೀತವಾಗಿದೆ. ಇವು ಏಕಕಾಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಅಡ್ಡಾದಿಡ್ಡಿಯಾಗಿ ನಿಲ್ಲುತ್ತವೆ. ಹೀಗಾಗಿ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳು ನಿಲ್ಲಲು ಜಾಗವೇ ಇಲ್ಲದಂತಾಗಿದೆ. ಇಡೀ ಬಸ್ ನಿಲ್ದಾಣವನ್ನು ಈ ಖಾಸಗಿ ಬಸ್‌ಗಳು ಆಕ್ರಮಿಸಿ ಕೊಂಡಿರುತ್ತವೆ.ಇದರಿಂದ ನಗರ ಸಾರಿಗೆ ಬಸ್‌ಗಳಿಗೆ ಹಾಗೂ ದೂರದ ಊರುಗಳಿಗೆ ಬಸ್‌ಗಳಿಗಾಗಿ ಕಾಯುವ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿರುತ್ತದೆ. ಆದುದರಿಂದ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಿ ಸಾರ್ವಜನಿಕರಿಗೆ ಖಾಸಗಿ ಬಸ್‌ಗಳಿಂದ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ಮನವಿ.

-ಮಂಜುನಾಥ್ಜಲಮಂಡಳಿ ನಿರ್ಲಕ್ಷ್ಯ

ಜೆಪಿ ನಗರ 5ನೇ ಹಂತ, 17ನೇ ಕ್ರಾಸ್‌ಗೆ ಜಲಮಂಡಳಿಯವರು ದಿನ ಬಿಟ್ಟು ದಿನ ನೀರು ಬಿಡುತ್ತಿದ್ದರು. ಆದರೆ ವಾಲ್‌ಮನ್‌ಗಳು ಸರಿಯಾಗಿ ನಿಗದಿತ ವೇಳೆ ಅಥವಾ ದಿನಾಂಕಕ್ಕೆ ನೀರು ಸರಬರಾಜು ಮಾಡುತ್ತಿಲ್ಲ. ಹಣಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ.  ಜಲಮಂಡಳಿಯವರಿಗೆ ಫೋನ್ ಮಾಡಿ ಕೇಳಿದರೆ ಬಂದು ನೋಡುತ್ತೇವೆ ಎಂದು ಹೇಳುತ್ತಾರೆ. ಆದರೆ ಬಂದು ನೋಡುವುದಿಲ್ಲ.  ಆಫೀಸ್ 3ನೇ ಹಂತಕ್ಕೆ ಹೋಗಿ ವಿಚಾರಿಸಿದರೆ ಅವರುಗಳು ಕೊತ್ತನೂರು ದಿಣ್ಣೆ ಆಫೀಸಿನಲ್ಲಿರುತ್ತಾರೆಂದು ಉತ್ತರಿಸುತ್ತಾರೆ.

ಇನ್ನಾದರೂ ಈ ರೀತಿ ಉಡಾಫೆಯಿಂದ ಉತ್ತರಿಸದೇ ಕನಿಷ್ಠ ಪಕ್ಷ ದಿನ ಬಿಟ್ಟು ದಿನ ನೀರು ಸರಬರಾಜು ಮಾಡಬೇಕೆಂದು ಮನವಿ.

-ವಿಶ್ವನಾಥರಾವ್ಜನವಿರೋಧಿ ಕಾಮಗಾರಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಶೇ 22.75ರ ಅನುದಾನದಡಿಯಲ್ಲಿ ಪರಿಶಿಷ್ಟರಿಗೆ ಮನೆಗಳನ್ನು ಮಂಜೂರು ಮಾಡಲಾಗಿದೆ. ಆದರೆ ಕೆಲವು ವಾರ್ಡ್‌ಗಳಲ್ಲಿ ಅದನ್ನು ಈಗಾಗಲೇ ಟೆಂಡರ್ ಮುಖಾಂತರವೇ ಕಟ್ಟಿಕೊಳ್ಳಬೇಕು ಎಂದು ಜನಪ್ರತಿನಿಧಿಗಳು ಜನರಿಗೆ ಒತ್ತಾಯ ಮಾಡುತ್ತಿದ್ದಾರೆ.ಈ ರೀತಿ ಕಟ್ಟುವುದರಿಂದ ಗುಣಮಟ್ಟ ಇಲ್ಲದಂತೆ ಆಗುತ್ತದೆ ಹಾಗೂ ಮದ್ಯವರ್ತಿಗಳಿಗೆ ಹೆಚ್ಚು ಉಪಯೋಗವಾಗುತ್ತದೆ. ಆದ್ದರಿಂದ ಆಯುಕ್ತರು ಒಂಟಿ ಮನೆಗಳಿಗೆ ಟೆಂಡರ್ ಕರೆದಿರುವುದನ್ನು ರದ್ದುಗೊಳಿಸಿ ಅದನ್ನು ಸ್ವಂತ ಫಲಾನುಭವಿಯೇ ಕಟ್ಟುವಂತೆ ಮಾಡುವರೆ? ಆಯುಕ್ತರು ಇದಕ್ಕೆ ಉತ್ತರ ನೀಡಲಿ.                                      

-ಕೆ. ಸಂಗಮೇಶ್ವರ್ಮರೆಯಬೇಡಿ ಬಸ್ಸು ಮಾರ್ಗ

ಬೆಂಗಳೂರು ನಗರದಲ್ಲಿ ನಗರ ಸಾರಿಗೆ ಸಂಸ್ಥೆಯು ಉತ್ತಮ ಸೇವೆ ಸಲ್ಲಿಸುತ್ತಿರುವುದರಿಂದ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.ಬಸ್ಸಿನ ಮಾರ್ಗದ ನಂ. 210ಬಿ, 215ಎಫ್, 215ಆರ್, 215ಜೆ, ಹಾಗೂ 215ಎಎ ಈ ಬಸ್ಸುಗಳು ಯಲಚೇನಹಳ್ಳಿಯಲ್ಲಿ ಎಡ ತಿರುಗಿ ಗಣಪತಿಪುರ ಮಾರ್ಗವಾಗಿ ಚುಂಚಘಟ್ಟ, ಕೊತ್ತನೂರು ತಲುಪುತ್ತಿದ್ದವು. ಇದರಿಂದ ಶಾರದಾನಗರ, ಗಣಪತಿಪುರ, ಶಿವಶಕ್ತಿನಗರ, ಬೀರೇಶ್ವರನಗರ, ರೇಣುಕಾಂಬನಗರ ಹಾಗೂ ಪ. ನಾರಾಯಣಸ್ವಾಮಿ ಬಡಾವಣೆಯ ಜನರಿಗೆ ತುಂಬಾ ಅನುಕೂಲವಾಗಿತ್ತು.ರಸ್ತೆ ರಿಪೇರಿ ಕಾರಣದಿಂದ ಸುಮಾರು ಮೂರು ವರ್ಷಗಳಿಂದ ಈ ಬಸ್ಸುಗಳು ಬೇರೆ ಮಾರ್ಗದಲ್ಲಿ ಚಲಿಸುತ್ತಿವೆ. ಈ ರಸ್ತೆ ರಿಪೇರಿಯಾಗಿ ಸುಮಾರು ಆರು ತಿಂಗಳುಗಳಾಗಿದೆ, ಬಸ್ಸಿನ ಸಂಚಾರಕ್ಕೆ ಯೋಗ್ಯವಾಗಿದೆ. ಅಧಿಕಾರಿಗಳು ಈ ಮಾರ್ಗವನ್ನು ಮರೆತಿರುವಂತೆ ಕಾಣುತ್ತದೆ.ದಯಮಾಡಿ ಈ ಮಾರ್ಗವನ್ನು ನೆನಪಿಸಿಕೊಂಡು ಮರುಚಾಲನೆ ಮಾಡಿದಲ್ಲಿ ಎಲ್ಲಾ ವರ್ಗದ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಹಾಗೂ ಇಂಧನ ಉಳಿತಾಯವಾಗುತ್ತದೆ (ಸುಮಾರು ದಿನಕ್ಕೆ 30 ಲೀ.ನಿಂದ 40 ಲೀಟರ್) ಹಳೆಮಾರ್ಗ ಮರೆಯಬೇಡಿ. ಈ ಮಾರ್ಗದಲ್ಲಿ ಬಸ್ಸುಗಳು ಬರುವಂತೆ ಪುನರ್ ವ್ಯವಸ್ಥೆ ಮಾಡಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುತ್ತೀರೆಂದು ನಂಬೋಣವೆ?

-ಎಂ. ಸಿದ್ದೇಗೌಡಬಡ್ಡಿ ವ್ಯವಹಾರ

ವಿದ್ಯಾರಣ್ಯಪುರ ನರಸೀಪುರ ಬಡಾವಣೆಯಲ್ಲಿ ಅನೈತಿಕ ಹಣಕಾಸಿನ ವ್ಯವಹಾರ ಜೋರಾಗಿ ನಡೆದಿದೆ. ಅದೂ ಶೇ 20 ಬಡ್ಡಿ ದರದಲ್ಲಿ.  ಕೆಲ ವ್ಯಕ್ತಿಗಳು ಇದನ್ನೆ ಒಂದು ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ. ಬಡವರನ್ನು ಸುಲಿಯುತ್ತಿದ್ದಾರೆ. ದಯವಿಟ್ಟು ಸಂಬಂಧಪಟ್ಟವರು ಇತ್ತ ಗಮನಹರಿಸಿಬೇಕೆಂದು ವಿನಂತಿ.

-ಬಡಾವಣೆ ವಾಸಿಗಳುದುರ್ವಾಸನೆ ತಪ್ಪಿಸಿ

ಯಲಹಂಕ ಪುಟ್ಟೇನಹಳ್ಳಿಯ 4ನೇ ಹಂತದ ಬಳಿ ಇರುವ ಕೈಗಾರಿಕಾ ಪ್ರದೇಶದಿಂದ ಕಳೆದ ಕೆಲ ತಿಂಗಳಿನಿಂದ ದುರ್ವಾಸನೆ ಬರುತ್ತಿದೆ. ಇದರಿಂದ ಇಲ್ಲಿ ವಾಸಿಸುವುದೇ ತುಂಬಾ ಬೇಸರವನ್ನು ಉಂಟು ಮಾಡುತ್ತಿದೆ. ಅಲ್ಲದೆ ಇದರಿಂದ ಇದರಿಂದ ಕೆಮ್ಮು, ನೆಗಡಿ ಶುರುವಾಗಿ ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಕೂಡಲೇ ಕ್ರಮ ಜರುಗಿಸಿ, ಇಲ್ಲಿಯ ನಿವಾಸಿಗಳಿಗೆ ಅನುಕೂಲ ಮಾಡಬೇಕಾಗಿ ವಿನಂತಿ.

-ಎಂ. ಮಲ್ಲೇಶಯ್ಯಏನು ಕ್ರಮ ಕೈಗೊಳ್ಳುವಿರಿ?

ದಿನಾಂಕ 22ರ ‘ಕುಂದುಕೊರತೆ’ ವಿಭಾಗದಲ್ಲಿ ಬಸ್ ಮಾರ್ಗ 315ರ ಪ್ರಯಾಣದ ಬವಣೆ ಹಾಗೂ ಆಟೊ ಚಾಲಕರು ಅಲ್ಲಿ, ಇಲ್ಲಿ....? (ಶಾರದಾ ಗುರುಮೂರ್ತಿ) ಇವರ ಪತ್ರಗಳನ್ನು ಗಮನಿಸಿದೆ. ಇದನ್ನು ನೋಡಿದಾಗ ಆಟೊ ಚಾಲಕರ ಹಾಗೂ ಬಸ್‌ನ ಸಿಬ್ಬಂದಿಯ (ಚಾಲಕ/ನಿರ್ವಾಹಕ) ವರ್ತನೆ ಹೇಗೆ ಎಂದು ತಿಳಿಯುತ್ತದೆ.

ಇಂತಹವರ ಬಗ್ಗೆ ಸಂಬಂಧಿಸಿದ ಇಲಾಖೆ ಏನು ಕ್ರಮ ತೆಗೆದುಕೊಳ್ಳಬಹುದು?

-ಬಾಲುಸುತದುರಸ್ತಿಯಾಗದ ರಸ್ತೆ

ಕನಕಪುರ ರಸ್ತೆಯಿಂದ ಗುಬ್ಬಲಾಳ ಮುಖಾಂತರ ಜಯನಗರ ಹೌಸಿಂಗ್ ಬಡಾವಣೆ, ಉತ್ತರಹಳ್ಳಿ ಚನ್ನಸಂದ್ರ ಮುಂತಾದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯೆ ಫಾಮ್ ಸ್ಪ್ರಿಂಗ್ಸ್ ಬಡಾವಣೆಯ ಹತ್ತಿರ ಜಲಮಂಡಳಿ ವತಿಯಿಂದ ಕಾವೇರಿ 4ನೇ ಹಂತದ ಪೈಪ್ ಲೈನ್ ಅಳವಡಿಕೆ ಕೆಲಸವನ್ನು ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಿರುತ್ತಾರೆ. ಆದರೆ ಇದರಿಂದಾಗಿ ಉಬ್ಬು ತಗ್ಗುಗಳು ಹಾಗೇ ಇದ್ದು ರಸ್ತೆಯಲ್ಲಿ ನಿರಂತರವಾಗಿ ಏಳುತ್ತಿರುವ ಧೂಳಿನಿಂದಾಗಿ ಸ್ಥಳೀಯ ನಿವಾಸಿಗಳ ಉಸಿರಾಟಕ್ಕೆ ತೊಂದರೆಯಾಗುತ್ತದೆ. ರಸ್ತೆ ಮಧ್ಯಭಾಗದಲ್ಲಿ ಪೈಪ್ ಲೈನ್ ಅಳವಡಿಸಿದ್ದು, ಡಾಂಬರು ಕಾಮಗಾರಿ ನಡೆಯದಿರುವುದರಿಂದ ರಸ್ತೆಯಲ್ಲಿ ಧೂಳು ವ್ಯಾಪಕವಾಗಿದೆ. ಜಲಮಂಡಳಿ ಅಧಿಕಾರಿಗಳು ಇತ್ತ ಗಮನಹರಿಸಿ, ಶೀಘ್ರವಾಗಿ ಡಾಂಬರೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಿ, ಬಡಾವಣೆ ನಿವಾಸಿಗಳ ತೊಂದರೆ ನಿವಾರಿಸಿಕೊಡಬೇಕೆಂದು ಈ ಮೂಲಕ ಮನವಿ.

- ಎನ್. ಉಗ್ರಪ್ಪಅಧಿಕಾರಿಯ ನಿರ್ಲಕ್ಷ್ಯ

2008-09 ರಲ್ಲಿ ಸಣ್ಣ ವ್ಯಾಪಾರ ಮಾಡಲು ಮೈಕ್ರೊ ಕ್ರೆಡಿಟ್ ಯೋಜನೆಯಡಿ ಬಿಬಿಎಂಪಿಯ ಜಯನಗರ ವಲಯದಲ್ಲಿ ಅರ್ಜಿ ಸಲ್ಲಿಸಿದ್ದೆ. ಸುಮಾರು 3 ವರ್ಷ ಕಳೆದರೂ ಫಲಾನುಭವಿಗೆ ಇಲ್ಲಿಯವರೆಗೂ ಸಹಾಯಧನ ಮಂಜೂರು ಮಾಡದೆ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಈಗಲಾದರೂ ಸಹಾಯಧನವನ್ನು ಕೊಡಿಸಬೇಕೆಂದು ಕೇಳಿಕೊಳ್ಳುತ್ತೇವೆ.

-ಸುಮ ಡಿ. ಧನ್ಯವಾದ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದಾಸರಹಳ್ಳಿ ವಲಯದ ಲಗ್ಗೆರೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ನ ಶಾಖೆಯನ್ನು ತೆರೆಯುವ ಬಗ್ಗೆ ಮೆಟ್ರೊದಲ್ಲಿ ಕಳೆದ ಜೂನ್‌ನಲ್ಲಿ ಮನವಿ ಮಾಡಲಾಗಿತ್ತು. ಇದಕ್ಕೆ ಭಾರತೀಯ ಸ್ಟೇಟ್ ಬ್ಯಾಂಕ್ ಆಡಳಿತ ವರ್ಗದವರು ಸ್ಪಂದಿಸಿ ಲಗ್ಗೆರೆಯ ಮುಖ್ಯ ರಸ್ತೆಯಲ್ಲಿ ತಮ್ಮ ಬ್ಯಾಂಕ್‌ನ ಶಾಖೆಯನ್ನು ಆರಂಭಿಸಿದ್ದಾರೆ. ಅದಕ್ಕಾಗಿ ಸ್ಟೇಟ್ ಬ್ಯಾಂಕ್‌ನ ಸಂಬಂಧಪಟ್ಟ ಅಧಿಕಾರಿಗಳಿಗೆ ವೈಯಕ್ತಿಕವಾಗಿ ಮತ್ತು ಲಗ್ಗೆರೆ ನಾಗರಿಕರ ಪರವಾಗಿ ಧನ್ಯವಾದಗಳು.

-ಜಿ. ಸಿದ್ದಗಂಗಯ್ಯ

ಬಿಎಂಟಿಸಿ ಸ್ಪಷ್ಟೀಕರಣ

‘ಬಸ್ ವ್ಯವಸ್ಥೆ ಸರಿ ಮಾಡಿ’ ಎಂಬ ಸಲಹೆ.

ಮಾರ್ಗ ಸಂಖ್ಯೆ: 265 ಬಿ ಮತ್ತು 252 ಜಿ ಮಾರ್ಗಗಳ ವ್ಯವಸ್ಥಿತ ಆಚರಣೆಗೆ ಕ್ರಮ ಕೈಗೊಳ್ಳಲಾಗಿದೆ.

ಕೆಂಪೇಗೌಡ ಬಸ್ ನಿಲ್ದಾಣದಿಂದ ಪೀಣ್ಯ 2ನೇ ಹಂತಕ್ಕೆ ಆಚರಣೆಯಾಗುವ ಮಾರ್ಗ ಸಂಖ್ಯೆ: 252 ಎಫ್‌ನ್ನು ವಿದ್ಯಮಾನ ನಗರಕ್ಕೆ ವಿಸ್ತರಿಸುವುದು ಕಷ್ಟ ಸಾಧ್ಯ. ಈಗಾಗಲೇ ಮಾರ್ಗ ಸಂಖ್ಯೆ: 252 ಎಫ್ ಎ ನಲ್ಲಿ 3 ಅನುಸೂಚಿಗಳು ವಿದ್ಯಮಾನ್ಯ ನಗರ ಮಾರ್ಗವಾಗಿ ತಿಗಳರ ಪಾಳ್ಯಕ್ಕೆ ಸಂಚರಿಸುತ್ತಿವೆ.

ಮಾರ್ಗ ಸಂಖ್ಯೆ: 248ನ್ನು ಹೆಗ್ಗನಹಳ್ಳಿ ಬದಲು ಆಂದ್ರಹಳ್ಳಿ ವೃತ್ತ ಹೇರೋಹಳ್ಳಿ ಕ್ರಾಸ್ ಮಾರ್ಗವಾಗಿ ಆಚರಣೆಗೊಳಿಸಿದರೆ ನೇರ ಪ್ರಯಾಣಿಕರಿಗೆ ಸುಮಾರು 3-4 ಹಂತಗಳ ದರ ಹೆಚ್ಚಾಗುವುದರಿಂದ, ಈ ಮಾರ್ಗವಾಗಿ ಆಚರಣೆಗೊಳಿಸುವುದು ಕಷ್ಟ ಸಾಧ್ಯ.‘ಸೌಲಭ್ಯ ವಂಚಿತ ಬಡಾವಣೆ’ ಎಂಬ ದೂರು.

ಸಂಸ್ಥೆಯಲ್ಲಿ ಪ್ರಸ್ತುತ ಹೊಸ ವಾಹನಗಳು ಕೊರತೆಯಿರುವುದರಿಂದ ಸದ್ಯಕ್ಕೆ ವಿದ್ಯಾಮಾನ್ಯ ನಗರಕ್ಕೆ ಹೆಚ್ಚಿನ ಸಾರಿಗೆ ಸೌಲಭ್ಯ ಒದಗಿಸುವುದು ಕಷ್ಟ ಸಾಧ್ಯ. ಮುಂದಿನ ವಿಸ್ತರಣಾ ಸಮಯದಲ್ಲಿ ಮರು ಪರಿಶೀಲಿಸಲಾಗುವುದು.‘ಹೊಸ ಮಾರ್ಗದಲ್ಲಿ ಬಸ್ ಬೇಕು’ ಎಂಬ ಕೋರಿಕೆ

ಬೆಂಗಳೂರಿನಂತಹ ಮಹಾನಗರದಲ್ಲಿ ಎಲ್ಲಾ ಪ್ರದೇಶಗಳಿಗೂ ನೇರ ಸಾರಿಗೆ ಸೌಲಭ್ಯ ಒದಗಿಸುವುದು ಕಷ್ಟ ಸಾಧ್ಯ. ಕೆಂಪೇಗೌಡ ಬಸ್ ನಿಲ್ದಾಣದಿಂದ ಯಲಹಂಕ ಸಿಂಗನಾಯಕನಹಳ್ಳಿ ಮಾರ್ಗವಾಗಿ ನೆಲಮಂಗಲಕ್ಕೆ 2 ಅನುಸೂಚಿಗಳು ಹಾಗೂ ಯಲಹಂಕ ಎಂಎಸ್ ಪಾಳ್ಯ, ಶಿವಕೋಟೆ, ಹೆಸರುಘಟ್ಟ ಮಾರ್ಗವಾಗಿ ನೆಲಮಂಗಲಕ್ಕೆ ಮಾರ್ಗ ಸಂಖ್ಯೆ: 407 ರಲ್ಲಿ 4 ಅನುಸೂಚಿಗಳಿದ್ದು ಮಾದಪ್ಪನಹಳ್ಳಿ, ಲಿಂಗನಹಳ್ಳಿ ಹಾಗೂ ಸುತ್ತಮುತ್ತ ಸಾರ್ವಜನಿಕ ಪ್ರಯಾಣಿಕರು ಹತ್ತಿರದ ನಿಲ್ದಾಣಗಳಿಂದ ಈ ಎರಡು ಸಾರಿಗೆ ಸೌಲಭ್ಯವನ್ನು ಪಡೆಯಬಹುದಾಗಿರುತ್ತದೆ.‘ಟಿಕೆಟ್ ಕೊಡಲು ಕಂಡಕ್ಟರ್ ಕಿರುಕುಳ’ ಎಂಬ ದೂರು.

ಅಂದು ಕರ್ತವ್ಯ ನಿರ್ವಹಿಸಿದ ನಿರ್ವಾಹಕಿಯನ್ನು ಕಚೇರಿಗೆ ಕರೆಸಿ, ಸಾರ್ವಜನಿಕ ಪ್ರಯಾಣಿಕರೊಡನೆ ಸೌಹಾರ್ದತೆಯಿಂದ ನಡೆದುಕೊಂಡು ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ. ಅಲ್ಲದೆ ಗಂಭೀರ ಎಚ್ಚರಿಕೆ ನೀಡಿ, ಸೂಕ್ರ ಕ್ರಮ ಕೈಗೊಳ್ಳಲಾಗಿದೆ.

-ಮುಖ್ಯ ಸಂಚಾರ ವ್ಯವಸ್ಥಾಪಕರು (ಆ)

ಬೆಂ.ಮ.ಸಾ.ಸಂಸ್ಥೆಇದೆಂಥ ಬೇಜವಾಬ್ದಾರಿ!

ಈ ಮುರಿದ ವಿದ್ಯುತ್ ಕಂಬ ಇರುವುದು ದೇವನಹಳ್ಳಿ ರಸ್ತೆಯಿಂದ ಸಾದಹಳ್ಳಿ ಮೂಲಕ ಉಗನವಾಡಿ ತಲುಪುವ ಕೆಂಪಲಿಂಗಪುರದಲ್ಲಿ. ಯಾವುದೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಕಂಬ ಬುಡದಲ್ಲೆ  ಮುರಿದಿದೆ. ಕಂಬದ ತುದಿಯಲ್ಲಿ ಹೈ ಹೋಲ್ಟೇಜ್ ವಿದ್ಯುತ್ ಸದಾ ಹರಿಯುತ್ತಿರುತ್ತದೆ. ಈ ರಸ್ತೆಯಲ್ಲಿ ರೈತರು, ಶಾಲಾ ವಿದ್ಯಾರ್ಥಿಗಳು ಸದಾ ಓಡಾಡುತ್ತಿರುತ್ತಾರೆ. ಹಸು, ಎಮ್ಮೆ ಇತ್ಯಾದಿ ಜಾನುವಾರುಗಳು ಕಂಬಕ್ಕೆ ಮೈ ಉಜ್ಜುತ್ತವೆ. ಏನಾದರೂ ಹೆಚ್ಚೂಕಡಿಮೆ ಆದರೆ ಸಂಚರಿಸುವ ಜನ, ದನಗಳಿಗೆ ಪ್ರಾಣಾಪಾಯ ತಪ್ಪಿದ್ದಲ್ಲ. ಆದರೆ, ಬೆಸ್ಕಾಂ ಸಿಬ್ಬಂದಿ ಮಾತ್ರ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇನ್ನೇನು ಮಳೆಗಾಲ ಆರಂಭವಾಗಲಿದೆ. ಯಾವುದೇ ಅನಾಹುತ ಸಂಭವಿಸುವ ಮೊದಲು ಬೆಸ್ಕಾಂ ಸಿಬ್ಬಂದಿ ಎಚ್ಚೆತ್ತುಕೊಳ್ಳುವರೆ? 

  - ಜಕ್ಕೂರು ಎಸ್.ನಾಗರಾಜ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry