ಬೆಂಗಳೂರು ಪದವೀಧರರ ಕ್ಷೇತ್ರ4ರಾಮಚಂದ್ರ ಗೌಡರಿಗೆ ಅಗ್ನಿ ಪರೀಕ್ಷೆ4ಒಕ್ಕಲಿಗ ಅಭ್ಯರ್ಥಿಳಿಗೆ ಪಕ್ಷಗಳ ಮಣೆ

7

ಬೆಂಗಳೂರು ಪದವೀಧರರ ಕ್ಷೇತ್ರ4ರಾಮಚಂದ್ರ ಗೌಡರಿಗೆ ಅಗ್ನಿ ಪರೀಕ್ಷೆ4ಒಕ್ಕಲಿಗ ಅಭ್ಯರ್ಥಿಳಿಗೆ ಪಕ್ಷಗಳ ಮಣೆ

Published:
Updated:
ಬೆಂಗಳೂರು ಪದವೀಧರರ ಕ್ಷೇತ್ರ4ರಾಮಚಂದ್ರ ಗೌಡರಿಗೆ ಅಗ್ನಿ ಪರೀಕ್ಷೆ4ಒಕ್ಕಲಿಗ ಅಭ್ಯರ್ಥಿಳಿಗೆ ಪಕ್ಷಗಳ ಮಣೆ

ಬೆಂಗಳೂರು: ವಿಧಾನ ಪರಿಷತ್ತಿನ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆಗೆ ಇನ್ನು ಎರಡು ದಿನಗಳಷ್ಟೇ ಬಾಕಿ ಉಳಿದಿದೆ. ಪ್ರತಿಷ್ಠಿತ ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣದಲ್ಲಿದ್ದು, ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಸತತ ನಾಲ್ಕು ಅವಧಿಯಿಂದ ತನ್ನ ವಶದಲ್ಲಿರುವ ಕ್ಷೇತ್ರವನ್ನು ಉಳಿಸಿಕೊಳ್ಳಲು ಬಿಜೆಪಿ ಹೆಣಗಾಡುತ್ತಿದ್ದರೆ, ಉಳಿದವರು ಅದರಿಂದ ಕಸಿದುಕೊಳ್ಳುವ ಯತ್ನದಲ್ಲಿದ್ದಾರೆ.24 ವರ್ಷಗಳಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಮಾಜಿ ಸಚಿವ ರಾಮಚಂದ್ರ ಗೌಡ ಈ ಬಾರಿಯೂ ಇಲ್ಲಿ ಬಿಜೆಪಿ ಅಭ್ಯರ್ಥಿ. ಹಿಂದೆ ಎರಡು ಬಾರಿ ಸೋಲು ಕಂಡಿದ್ದ ಎ.ದೇವೇಗೌಡ ಮೂರನೇ ಬಾರಿಗೆ ಜೆಡಿಎಸ್‌ನಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಬೆಂಗಳೂರಿನಲ್ಲಿ ಪದವೀಧರರು ಮತ್ತು ಶಿಕ್ಷಕರ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ರಾಮೋಜಂ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಸಿಪಿಎಂ ಅಭ್ಯರ್ಥಿ ಕೆ.ಎಸ್.ಲಕ್ಷ್ಮಿ ಕೂಡ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರು.ನಗರಾಡಳಿತ ತಜ್ಞ, ಐಐಎಂ-ಬೆಂಗಳೂರು, ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಹಲವು ಅತ್ಯುನ್ನತ ಸಂಸ್ಥೆಗಳಲ್ಲಿ ಬೋಧಕರಾಗಿರುವ ಡಾ.ಅಶ್ವಿನ್ ಮಹೇಶ್ ಲೋಕಸತ್ತಾ ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಮೌಲ್ಯಾಧಾರಿತ ರಾಜಕಾರಣದ ಹೆಸರಿನಲ್ಲಿ ಅವರು ಸ್ಪರ್ಧೆಗೆ ಇಳಿದಿದ್ದಾರೆ.ಹಿಂದೆ ಬಿಜೆಪಿ ಮತ್ತು ಬಹುಜನ ಸಮಾಜ ಪಕ್ಷಗಳ ಕಾರ್ಯಕರ್ತರಾಗಿದ್ದ ನಟಶೇಖರ ಶರ್ಮಾ, ರಾಮಚಂದ್ರ ಗೌಡರ ಜೊತೆಗಿದ್ದವರು. ಈಗ ಗೌಡರ ವಿರುದ್ಧವೇ ಕದನಕ್ಕೆ ಇಳಿದಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಒಕ್ಕಲಿಗರನ್ನೇ ಅಖಾಡಕ್ಕೆ ಇಳಿಸಿರುವುದು ವಿಶೇಷ. ಪಕ್ಷೇತರರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗರಿದ್ದಾರೆ.ನಗರ ಪ್ರದೇಶವೇ ಹೆಚ್ಚು: ಬೆಂಗಳೂರು ಪದವೀಧರರ ಕ್ಷೇತ್ರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ವಿಸ್ತರಿಸಿಕೊಂಡಿದೆ. ಈ ಕ್ಷೇತ್ರದ ಬಹುಭಾಗ ನಗರ ಪ್ರದೇಶವೇ ಆಗಿದೆ. 1,10,565 ಮತದಾರರಿದ್ದು, ಬಹುತೇಕರು ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳು.

 

ಹೀಗಾಗಿ ಇಲ್ಲಿನ ಬ್ಯಾಂಕುಗಳು, ಶಿಕ್ಷಣ ಸಂಸ್ಥೆಗಳು, ವಿಮಾ ಕಂಪೆನಿ ಕಚೇರಿಗಳು, ಖಾಸಗಿ ಕಂಪೆನಿಗಳ ಕಚೇರಿಗಳಲ್ಲಿ ಸದ್ದಿಲ್ಲದೇ ಪ್ರಚಾರ ಸಾಗಿದೆ. ಇದೇ 10ಕ್ಕೆ ಮತದಾನ ನಡೆಯಲಿದೆ. ಅಷ್ಟರೊಳಗೆ ಎಲ್ಲ ಮತದಾರರನ್ನೂ ತಲುಪಲು ಅಭ್ಯರ್ಥಿಗಳು ತೀವ್ರ ಕಸರತ್ತುನಡೆಸಿದ್ದಾರೆ.ಈಗ ವಿವಾಹ ಕಾಲ ಆಗಿರುವುದೂ ಅಭ್ಯರ್ಥಿಗಳ ಪಾಲಿಗೆ ವರದಾನವಾಗಿದೆ. ನಿತ್ಯವೂ ಆರರಿಂದ ಎಂಟು ವಿವಾಹ ಸಮಾರಂಭಗಳಿಗೆ ಭೇಟಿನೀಡಿ ಅಲ್ಲಿರುವ ಪದವೀಧರ ಮತದಾರರ ಮನವೊಲಿಸುವ ಕೆಲಸವನ್ನು ರಾಮಚಂದ್ರ ಗೌಡ ಆರಂಭಿಸಿದ್ದರು. ರಾಮೋಜಂ ಮತ್ತು ಎ.ದೇವೇಗೌಡ ಕೂಡ ಈಗ ಇದೇ ಹಾದಿಯನ್ನು ತುಳಿದಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುವ ಬಹುತೇಕ ವಿವಾಹ ಸಮಾರಂಭಗಳು ವಿಧಾನ ಪರಿಷತ್ ಚುನಾವಣಾ ಪ್ರಚಾರಕ್ಕೆ ವೇದಿಕೆಗಳಾಗುತ್ತಿವೆ.ಸಿಪಿಎಂ ಮತ್ತು ಲೋಕಸತ್ತಾ ಪಕ್ಷಗಳು ಬಹಿರಂಗ ಸಭೆಗಳು, ವಿಚಾರ ಗೋಷ್ಠಿಗಳ ಮೂಲಕ ಪ್ರಚಾರಕ್ಕೆ ಹೊಸ ಕಳೆ ತುಂಬಿವೆ. ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ಬೆಂಗಳೂರಿಗೆ ಬಂದು ಲಕ್ಷ್ಮಿ ಪರ ಮತಯಾಚಿಸಿ ಹೋಗಿದ್ದಾರೆ.ಕ್ಷೇತ್ರ ಉಳಿಸಿಕೊಳ್ಳುವ ವಿಶ್ವಾಸ: ಅಧಿಕಾರರೂಢ ಬಿಜೆಪಿ ಈ ಕ್ಷೇತ್ರವನ್ನು ಉಳಿಸಿಕೊಳ್ಳಲೇಬೇಕೆಂಬ ಹಟಕ್ಕೆ ಬಿದ್ದಿದೆ. ಅಭ್ಯರ್ಥಿ ರಾಮಚಂದ್ರ ಗೌಡ ಅವರು ಕಿಂಚಿತ್ತೂ ಸಮಯ ವ್ಯರ್ಥ ಮಾಡದೇ ಪ್ರಚಾರದಲ್ಲಿ ತೊಡಗಿದ್ದಾರೆ. ಅವರೇ ಹೇಳುವಂತೆ ದಿನಕ್ಕೆ ಏನಿಲ್ಲವೆಂದರೂ ಏಳರಿಂದ ಎಂಟು ಮದುವೆ ಸಮಾರಂಭಗಳಿಗೆ ಹಾಜರಾಗುತ್ತಿದ್ದಾರೆ. ನಾಲ್ಕು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿರುವುದು, ನಾಲ್ಕು ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವುದು ತಮಗೆ ಅನುಕೂಲವಾಗಲಿದೆ ಎನ್ನುತ್ತಾರೆ ಅವರು.ಪ್ರಚಾರ ಕುರಿತು `ಪ್ರಜಾವಾಣಿ~ ಜೊತೆ ಮಾತನಾಡಿದ ಅವರು, `ಈ ಕ್ಷೇತ್ರದ ಬಹುತೇಕ ಮತದಾರರು ನನ್ನ ಪರಿಚಿತರು. ಇಲ್ಲಿ ನನಗೆ ಹೆಚ್ಚಿನ ಒಡನಾಟವಿದೆ. ನನಗೆ ರಾಜಕೀಯದಲ್ಲಿ ಯಾರೂ ಶತ್ರುಗಳಿಲ್ಲ. ಈಗಾಗಲೇ ಮೂರು ಬಾರಿ ಇಡೀ ಕ್ಷೇತ್ರವನ್ನು ಸುತ್ತಿದ್ದೇನೆ. ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ನನ್ನ ಪರ ಪ್ರಚಾರ ಮಾಡುತ್ತಿದ್ದಾರೆ.ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ದೂರವಾಣಿ ಮೂಲಕ ಮತ ಯಾಚಿಸುತಿದ್ದಾರೆ. ಹಿಂದಿಗಿಂತಲೂ ಹೆಚ್ಚು ಅಂತರದಿಂದ ನಾನು ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ~ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಬಲವಾದ ಅಸ್ತ್ರ: ಸುಮಾರು ಎರಡೂವರೆ ದಶಕಗಳಿಂದ ಈ ಕ್ಷೇತ್ರವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿರುವ ರಾಮಚಂದ್ರ ಗೌಡರನ್ನು ಮಣಿಸಲು ಹೊರಟಿರುವ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಬಲವಾದ ಅಸ್ತ್ರಗಳೇ ದೊರೆತಿವೆ. ಯಡಿಯೂರಪ್ಪ ಸಂಪುಟದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ರಾಮಚಂದ್ರ ಗೌಡರು ಹಾಸನ ಮತ್ತು ಮಂಡ್ಯ ವೈದ್ಯಕೀಯ ಕಾಲೇಜುಗಳ ನೇಮಕಾತಿ ಹಗರಣದಲ್ಲಿ ಸಿಲುಕಿ ರಾಜೀನಾಮೆ ನೀಡಿದ ಪ್ರಕರಣವನ್ನು ಈ ಪಕ್ಷಗಳು ಪ್ರಬಲವಾಗಿ ಬಳಸಿಕೊಳ್ಳುತ್ತಿವೆ. ಇನ್ನು, ನಾಲ್ಕು ಅವಧಿಗೆ ಚುನಾಯಿತರಾದರೂ ಪದವೀಧರರ ಒಳಿತಿಗಾಗಿ ಯಾವುದೇ ಕೆಲಸವನ್ನೂ ಮಾಡಿಲ್ಲ ಎಂಬ ಆರೋಪವನ್ನೂ ಪ್ರಚಾರದ ವೇಳೆ ಮಾಡುತ್ತಿವೆ.`ನಾಲ್ಕು ಅವಧಿಗೆ ಚುನಾಯಿತರಾಗಿದ್ದ ರಾಮಚಂದ್ರ ಗೌಡರು ಪದವೀಧರರ ಹಿತ ಕಾಯುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಪದವೀಧರ ನೌಕರರ ವೇತನ ತಾರತಮ್ಯ ಹಾಗೂ ಇತರೆ ಸಮಸ್ಯೆಗಳ ಕುರಿತು ಚಕಾರ ಎತ್ತಿಲ್ಲ.

 

ಈಗ ಸಹಜವಾಗಿಯೇ ಜನತೆ ಬದಲಾವಣೆ ಬಯಸಿದ್ದಾರೆ. ಎಂಟು ತಿಂಗಳ ಹಿಂದೆಯೇ ನಾನು ಚುನಾವಣಾ ತಯಾರಿಗೆ ಇಳಿದಿದ್ದೆ. ಆಡಳಿತ ಪಕ್ಷ ಗಂಭೀರ ಸ್ವರೂಪದ ಆರೋಪಗಳನ್ನು ಎದುರಿಸುತ್ತಿರುವದು ಕೂಡ ನಮಗೆ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗಲು ಕಾರಣ. ಪದವೀಧರರ ಮತ್ತು ಶಿಕ್ಷಕರ ಹಲವು ಸಂಘಟನೆಗಳು ನನ್ನ ಬೆಂಬಲಕ್ಕೆ ನಿಂತಿವೆ. ಇದರಿಂದಾಗಿ ನನಗೆ ಗೆಲುವಿನ ವಿಶ್ವಾಸ ಹೆಚ್ಚಿದೆ~ ಎನ್ನುತ್ತಾರೆ ರಾಮೋಜಂ.ಚುನಾವಣೆ ಕುರಿತು ದೇವೇಗೌಡ ಅವರನ್ನು ಮಾತಿಗೆಳೆದಾಗ, `ಎರಡು ಬಾರಿ ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೆ. ಒಮ್ಮೆ ತಾಂತ್ರಿಕ ಕಾರಣದಿಂದಾಗಿ ಸೋಲಾಯಿತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪದವೀಧರರಿಗೆ ಪೂರಕವಾದ ಯಾವುದೇ ಕೆಲಸ ಮಾಡಿಲ್ಲ. ಈ ಬಾರಿ ಖಂಡಿತವಾಗಿಯೂ ಪದವೀಧರರು ಪರ್ಯಾಯ ನಾಯಕನನ್ನು ಬಯಸಿದ್ದಾರೆ. ನಾನು ದೀರ್ಘ ಕಾಲದಿಂದ ಅವರ ಜೊತೆ ಇದ್ದೇನೆ. ಈ ಕಾರಣದಿಂದ ನನ್ನನ್ನು ಬೆಂಬಲಿಸುತ್ತಾರೆ ಎಂಬ ಭರವಸೆ ಮೂಡಿದೆ~ ಎಂದರು.`ಉಳಿದ ಅಭ್ಯರ್ಥಿಗಳು ಮತದಾರರನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ. ಆದರೆ, ಮತದಾರರೇ ನಮ್ಮನ್ನು ಹುಡುಕಿಕೊಂಡು ಬರುತ್ತಿದ್ದಾರೆ. ಭ್ರಷ್ಟಾಚಾರ, ದುರಾಡಳಿತ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಜನತೆ ಪರ್ಯಾಯ ರಾಜಕೀಯ ಶಕ್ತಿಗಾಗಿ ಹುಡುಕುತ್ತಿದ್ದಾರೆ. ನಾನು ಕೇವಲ ಸಿಪಿಎಂ ಅಭ್ಯರ್ಥಿಯಲ್ಲ. ಸಿಪಿಐ ಕೂಡ ಬೆಂಬಲಿಸಿದೆ~  ಎನ್ನುತ್ತಾರೆ ಲಕ್ಷ್ಮಿ.`ಬ್ಯಾಂಕಿಂಗ್, ವಿಮೆ ಮತ್ತಿತರ ಕ್ಷೇತ್ರಗಳ ಹಲವು ಕಾರ್ಮಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ವಕೀಲರ ಸಮುದಾಯದ ಹೆಚ್ಚಿನ ಜನರು ಬೆಂಬಲದ ಭರವಸೆ ನೀಡಿದ್ದಾರೆ. ಕಳೆದ ಬಾರಿ ನಾನು ಮೂರನೇ ಸ್ಥಾನ ಪಡೆದಿದ್ದೆ. ಈ ಚುನಾವಣೆಯಲ್ಲಿ ಸಿಪಿಎಂ ಪ್ರಬಲ ಸ್ಪರ್ಧಾಳು. ಯಾರೂ ನಮ್ಮನ್ನು ಲಘುವಾಗಿ ಪರಿಗಣಿಸುವ ಸ್ಥಿತಿ ಇಲ್ಲ~ ಎನ್ನುವುದು ಅವರ ವಿಶ್ವಾಸ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry