ಸೋಮವಾರ, ಮಾರ್ಚ್ 1, 2021
29 °C
ಕಬಡ್ಡಿ ಲೀಗ್: ಚಾಂಪಿಯನ್ನರ ಆಟಕ್ಕೆ ಮಣಿದ ಟೈಟಾನ್ಸ್‌, ದಬಾಂಗ್‌ಗೆ ನಿರಾಸೆ

ಬೆಂಗಳೂರು ಬುಲ್ಸ್ ವಿಜಯದ ಆರಂಭ

ಪ್ರಮೋದ್ ಜಿ.ಕೆ. Updated:

ಅಕ್ಷರ ಗಾತ್ರ : | |

ಬೆಂಗಳೂರು ಬುಲ್ಸ್ ವಿಜಯದ ಆರಂಭ

ವಿಶಾಖ ಪಟ್ಟಣ: ಪಂದ್ಯ ಆರಂಭವಾದ ನಾಲ್ಕು ನಿಮಿಷಗಳಲ್ಲಿಯೇ ಎದುರಾಳಿ ತಂಡವನ್ನು ಆಲೌಟ್‌ ಮಾಡಿದ ಬೆಂಗಳೂರು ಬುಲ್ಸ್ ತಂಡದ ಸಾಮರ್ಥ್ಯ ಎನೆಂಬುದು ಮೊದಲ ಪಂದ್ಯದಲ್ಲಿಯೇ ಸಾಬೀತಾಗಿದೆ.ಬುಲ್ಸ್ ಶಕ್ತಿಯೆನಿಸಿದ್ದ ಮಂಜಿತ್ ಚಿಲಾರ್ ಮತ್ತು ಅಜಯ್‌ ಠಾಕೂರ್‌  ತಂಡವನ್ನು ತೊರೆದು ಹೋದ ಬಳಿಕ ಬೆಂಗಳೂರು ತಂಡ ದುರ್ಬಲವಾಯಿತು ಎಂದು ಅಂದುಕೊಂಡವರೇ ಹೆಚ್ಚು.  ಆದರೆ ಶನಿವಾರ ಬುಲ್ಸ್ ತಂಡದವರ ಆಟ ಅನುಭವಿಗಳನ್ನೂ ಮೀರಿಸುವಂತಿತ್ತು.ರಾಜೀವ್‌ ಗಾಂಧಿ ಪೋರ್ಟ್‌ ಒಳಾಂಗಣ ಕ್ರೀಡಾಂಗಣದಲ್ಲಿ ದಬಾಂಗ್ ಡೆಲ್ಲಿ ಎದುರು ಆಡಿದ ಸೊಗಸಾದ ಆಟವೇ ಇದಕ್ಕೆ ಸಾಕ್ಷಿ. ಹೀಗಾಗಿ ಕಬಡ್ಡಿ ಲೀಗ್ ಮೂರನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಬುಲ್ಸ್‌ 35–29 ಪಾಯಿಂಟ್ಸ್‌ನಿಂದ ದಬಾಂಗ್ ಡೆಲ್ಲಿ ಎದುರು ಗೆಲುವು ಪಡೆಯಿತು.ಸುರ್ಜಿತ್‌ ನರ್ವಾಲ್‌ ನಾಯಕತ್ವದ ಬುಲ್ಸ್ ತಂಡ ಆರಂಭದಿಂದಲೇ ಚುರುಕಾಗಿ ರೈಡಿಂಗ್ ಮಾಡಿತು. ಜೊತೆಗೆ ರಕ್ಷಣಾ ವಿಭಾಗದಲ್ಲಿ  ಎಚ್ಚರಿಕೆ ವಹಿಸಿತು. ಈ ತಂಡ ಒಂಬತ್ತು ಪಾಯಿಂಟ್ಸ್ ಹೊಂದಿದ್ದ ವೇಳೆ ಡೆಲ್ಲಿ ತಂಡ ಖಾತೆಯನ್ನೇ ತೆರೆದಿರಲಿಲ್ಲ. ಬುಲ್ಸ್‌ ಮೊದಲರ್ಧದ ಆಟ ಮುಗಿಯವ ವೇಳೆಗೆ ಎರಡು ಬಾರಿ ಲೋನಾ ಪಾಯಿಂಟ್ಸ್‌ ಪಡೆದು 24–8ರಲ್ಲಿ ಮುನ್ನಡೆ ಹೊಂದಿತ್ತು.ಎರಡನೇ ಅವಧಿಯಲ್ಲಿ ಡೆಲ್ಲಿ ತಂಡ ಮರು ಹೋರಾಟ ತೋರಿತು. ಪಾಯಿಂಟ್ಸ್ ಅಂತರವನ್ನು 19–28ರಲ್ಲಿ ಕಡಿಮೆ ಮಾಡಿಕೊಂಡಿತು.  ಆದರೆ ಆರಂಭದಲ್ಲಿ ಮಾಡಿಕೊಂಡಿದ್ದ ಎಡವಟ್ಟು ಸೋಲಿಗೆ ಕಾರಣವಾಯಿತು. ಬುಲ್ಸ್ ತಂಡದ ಪ್ರಮುಖ ಆಟಗಾರರಾದ ಅಮಿತ್‌ ರಾಟಿ ಏಳು, ದೀಪಕ್‌ ಕುಮಾರ್‌, ಶ್ರೀಕಾಂತ್ ತೇವಾಟಿಯಾ ಮತ್ತು ಸುರ್ಜಿತ್‌ ತಲಾ ಐದು ಪಾಯಿಂಟ್ಸ್ ಗಳಿಸಿದರು. ದಬಾಂಗ್ ತಂಡದ ಸುರ್ಜಿತ್ ಸಿಂಗ್ ಹತ್ತು ಪಾಯಿಂಟ್ಸ್‌ ಗಳಿಸಿ ಗಮನ ಸೆಳೆದರು. ವಿಶೇಷವೆಂದರೆ ಪಂದ್ಯದುದ್ದಕ್ಕೂ ಇಲ್ಲಿನ ಅಭಿಮಾನಿಗಳು ಬೆಂಗಳೂರು ತಂಡಕ್ಕೆ ಬೆಂಬಲ ನೀಡಿದರು.ಚಾಂಪಿಯನ್ನರ ಶುಭಾರಂಭ: ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಯು ಮುಂಬಾ 27–25 ಪಾಯಿಂಟ್ಸ್‌ನಿಂದ  ತೆಲುಗು ಟೈಟಾನ್ಸ್ ಎದುರು ಗೆಲುವು ಪಡೆಯಿತು. ಇದರೊಂದಿಗೆ ತವರಿನಲ್ಲಿ ಟೈಟಾನ್ಸ್ ತಂಡದ ಜಯದ ಓಟಕ್ಕೂ ತಡೆ ಬಿದ್ದಿತು. ಟೈಟಾನ್ಸ್‌ ಹಿಂದಿನ ಎರಡೂ ವರ್ಷ ಸೇರಿ ಇಲ್ಲಿ ಒಟ್ಟು ಎಂಟು ಪಂದ್ಯಗಳನ್ನು ಆಡಿದ್ದು ಎಲ್ಲಾ ಪಂದ್ಯಗಳಲ್ಲಿ ಗೆಲುವು ಪಡೆದ ದಾಖಲೆ ಹೊಂದಿತ್ತು.ಎರಡೂ ತಂಡಗಳಲ್ಲಿ ಬಲಿಷ್ಠ ಆಟಗಾರರಿದ್ದಾರೆ. ಆದ್ದರಿಂದ ಪಾಯಿಂಟ್ಸ್‌ ಗಳಿಸಲು ಮೊದಲ ಹತ್ತು ನಿಮಿಷದ ಅವಧಿಯಲ್ಲಿ ಭಾರಿ ಪೈಪೋಟಿ ಕಂಡು ಬಂದಿತು. ಮುಂಬಾ ಮತ್ತು ಟೈಟಾನ್ಸ್ ತಂಡದವರು ರಕ್ಷಣಾತ್ಮಕ ಆಟಕ್ಕೆ ಒತ್ತು ಕೊಟ್ಟರು. ಹತ್ತು ನಿಮಿಷ ಮುಗಿದಾಗ ಉಭಯ ತಂಡಗಳು ತಲಾ ನಾಲ್ಕು ಪಾಯಿಂಟ್ಸ್‌ ಮಾತ್ರ ಹೊಂದಿದ್ದವು. ಆದ್ದರಿಂದ ಕಬಡ್ಡಿ ಪ್ರೇಮಿಗಳಲ್ಲಿಯೂ ಭಾರಿ ಕುತೂಹಲ ಮೂಡಿತ್ತು.ಮೊದಲರ್ಧದ ಕೊನೆಯ ಹತ್ತು ನಿಮಿಷಗಳಲ್ಲಿ ಚಾಂಪಿಯನ್ ತಂಡದ ಪ್ರಮುಖ ರೈಡರ್‌ಗಳು ಪಂದ್ಯದ ಚಿತ್ರಣವನ್ನೇ ಬದಲಿಸಿದರು. ನಾಯಕ ಅನೂಪ್‌ ಕುಮಾರ್‌, ರಿಷಾಂಕ್‌ ದೇವಾಡಿಗ, ಮೋಹಿತ್‌ ಚಿಲಾರ್‌ ಮತ್ತು ಕರ್ನಾಟಕದ ಜೀವಾ ಕುಮಾರ್‌ ಎದುರಾಳಿ ತಂಡದ ರಕ್ಷಣಾ ಕೋಟೆಯನ್ನು ಸುಲಭವಾಗಿ ಭೇದಿಸಿದರು.ಐದು ನಿಮಿಷಗಳ ಅಂತರದಲ್ಲಿ ಮುಂಬಾ ತಂಡ 18–8ರಲ್ಲಿ ಮುನ್ನಡೆ ಗಳಿಸಿದ್ದು ಇದಕ್ಕೆ ಸಾಕ್ಷಿ. ಮೊದಲರ್ಧದ ಕೊನೆಯ ರೈಡಿಂಗ್‌ನಲ್ಲಿ ಬಂದ ಐದು ಪಾಯಿಂಟ್ಸ್‌ಗಳು ಮುಂಬಾ ತಂಡವನ್ನು ಗೆಲುವಿನ ಸನಿಹ ಕೊಂಡೊಯ್ಯಿತು.ರಿಶಾಂಕ್‌ ದೇವಾಡಿಗ ಒಂದೇ ರೈಡ್‌ನಲ್ಲಿ ಐದು ಪಾಯಿಂಟ್ಸ್‌ ತಂದುಕೊಟ್ಟರು. ಟೈಟಾನ್ಸ್‌ ಆಲೌಟ್‌ ಆಗಿದ್ದರಿಂದ ಮುಂಬಾಕ್ಕೆ ಲೋನಾ ಪಾಯಿಂಟ್ಸ್‌ ಕೂಡ ಲಭಿಸಿದವು.ಆದ್ದರಿಂದ ಈ ತಂಡ ಮೊದಲ ಇಪ್ಪತ್ತು ನಿಮಿಷಗಳ ಆಟ ಮುಗಿದಾಗ 18–8ರಲ್ಲಿ ಮುನ್ನಡೆ ಗಳಿಸಿತ್ತು.ಮೊದಲರ್ಧದಲ್ಲಿ ಎದುರಾದ ಹಿನ್ನಡೆಯನ್ನು ಕಡಿಮೆ ಮಾಡಲು ಟೈಟಾನ್ಸ್‌ ಎರಡನೇ ಅವಧಿಯಲ್ಲಿ ಇನ್ನಿಲ್ಲದ ಪ್ರಯತ್ನ ಮಾಡಿತು. ರೈಡಿಂಗ್‌ ಮೂಲಕವೇ ಹೆಚ್ಚು ಪಾಯಿಂಟ್ಸ್‌ ಗಳಿಸಿತು.ಟೈಟಾನ್ಸ್ ತಂಡದಲ್ಲಿರುವ ಕನ್ನಡಿಗ ಸುಕೇಶ್‌ ಹೆಗ್ಡೆ ಒಟ್ಟು ಒಂಬತ್ತು ಪಾಯಿಂಟ್ಸ್‌ ಕಲೆ ಹಾಕಿದರು. ನಾಯಕ ರಾಹುಲ್ ಚೌಧರಿ ಆರು ಮತ್ತು ಧರ್ಮರಾಜ್‌ ಚೇರಲಾತನ್‌ ನಾಲ್ಕು ಪಾಯಿಂಟ್ಸ್ ತಂದುಕೊಟ್ಟರು. ಈ ತಂಡದ ಇನ್ನೊಬ್ಬ ಪ್ರಮುಖ ಆಟಗಾರ ಮೆರಾಜ್‌ ಶೇಖ್‌ ಮೂರು ಬಾರಿ ರೈಡ್‌ ಮಾಡಿ ಒಂದು ಟ್ಯಾಕಲ್‌ ಪಾಯಿಂಟ್‌ ಗಳಿಸಿದರು. ಆದರೂ ಇವರ ಹೋರಾಟಕ್ಕೆ ಫಲ ಲಭಿಸಲಿಲ್ಲ.ಕಳೆ ಹೆಚ್ಚಿಸಿದ ತಾರೆಯರು

ನಟರಾದ ಅಮಿರ್ ಖಾನ್‌, ರಾಣಾ ದಗ್ಗುಬಾಟಿ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು  ಅವರು ಮೊದಲ ದಿನ ಪಂದ್ಯ ವೀಕ್ಷಿಸಿದರು. ಪಂದ್ಯ ಆರಂಭವಾಗಲು ಅರ್ಧ ಗಂಟೆ ಮೊದಲೇ ಕ್ರೀಡಾಂಗಣ ದೊಳಕ್ಕೆ ಬಂದ ರಾಣಾ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದರು. ‘ಲೇ ಪಂಗಾ... ಲೇ ಪಂಗಾ..’ ಎಂದು ಹೇಳಿ ತೊಡೆತಟ್ಟಿ ಹುರಿದುಂಬಿಸಿದರು. ಈ ವೇಳೆಯಂತೂ ಕಬಡ್ಡಿ ಪ್ರೇಮಿಗಳು ಕೇಕೆ ಹಾಕಿ ಸಂಭ್ರಮಿಸಿದರು.ಮೊದಲ ವೇಳಾಪಟ್ಟಿಯಂತೆ ಪಂದ್ಯ ಗಳು ಹೈದರಾಬಾದ್‌ನಲ್ಲಿ ನಡೆಯ ಬೇಕಿತ್ತು. ಅಲ್ಲಿ ಪಾಲಿಕೆಯ ಚುನಾವಣೆ ಇರುವ ಕಾರಣ ಪಂದ್ಯಗಳನ್ನು ವಿಶಾಖಪಟ್ಟಣಕ್ಕೆ ಸ್ಥಳಾಂತರಿಸಲಾಗಿತ್ತು. ಸುಮಾರು ನಾಲ್ಕು ಸಾವಿರ ಅಭಿಮಾನಿಗಳು ಕಬಡ್ಡಿ ಲೀಗ್‌ ಮೂರನೇ ಆವೃತ್ತಿಯ ಮೊದಲ ದಿನದ ಪಂದ್ಯಗಳಿಗೆ ಸಾಕ್ಷಿಯಾದರು.ಇಂದಿನ ಪಂದ್ಯಗಳು

ಜೈಪುರ ಪಿಂಕ್ ಪ್ಯಾಂಥರ್ಸ್‌–ಯು ಮುಂಬಾ

ಆರಂಭ: ರಾತ್ರಿ 8ಕ್ಕೆತೆಲುಗು ಟೈಟಾನ್ಸ್‌–ಪುಣೇರಿ ಪಲ್ಟನ್‌

ಆರಂಭ: ರಾತ್ರಿ 9ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.