ಬೆಂಗಳೂರು ಬೆಳೆದದ್ದು ಸಾಕು

7

ಬೆಂಗಳೂರು ಬೆಳೆದದ್ದು ಸಾಕು

Published:
Updated:
ಬೆಂಗಳೂರು ಬೆಳೆದದ್ದು ಸಾಕು

ಬೆಂಗಳೂರು: `ಬೆಂಗಳೂರು ಈವರೆಗೆ ಸಾಕಷ್ಟು ಬೆಳೆದಿದೆ. ಇನ್ನು ಮುಂದೆ ಈ ನಗರಿಯ ವ್ಯಾಪ್ತಿಯನ್ನು ವಿಸ್ತರಿಸುವುದು ಬೇಡ~ ಎಂದು ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾಗಿರುವ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರು ಅಭಿಪ್ರಾಯಪಟ್ಟರು.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಪಾಲಿಕೆ ವತಿಯಿಂದ `ಪೌರ ಸನ್ಮಾನ~ ಸ್ವೀಕರಿಸಿ ಅವರು ಮಾತನಾಡಿದರು.`ಸಾಂಸ್ಕೃತಿಕವಾಗಿ ನಾಡಿನ ಉಸಿರನ್ನು ಹಿಡಿದಿಟ್ಟುಕೊಂಡಿರುವ ಈ ನಗರದಲ್ಲಿ ನೆಲೆಸುವುದು ಹೆಮ್ಮೆಯ ಸಂಗತಿ.ಆದರೆ ಬೆಂಗಳೂರಿನ ಸ್ವರೂಪ ಬದಲಾಗುತ್ತಿದೆ. 30 ವರ್ಷಗಳ ಹಿಂದೆ ನಗರಕ್ಕೆ ಬಂದಾಗ ಸಾಕಷ್ಟು ಕೆರೆಗಳಿದ್ದವು. ಕ್ರಮೇಣ ಹಲವು ಕೆರೆಗಳು ನಾಶವಾಗಿವೆ. ಕೆರೆಗಳನ್ನು ನಾಶ ಮಾಡಿ ನಗರ ಬೆಳೆಸುವುದು ಶೋಭೆ ತರುವುದಿಲ್ಲ. ಭವಿಷ್ಯದಲ್ಲಿ ಮಾರಕವಾಗುವ ಯಾವುದೇ ಬೆಳವಣಿಗೆ ಬೆಂಗಳೂರಿಗೆ ಬೇಡ. ಇದು ನನ್ನ ವಿಮರ್ಶೆಯಲ್ಲ, ಬದಲಿಗೆ ವಿನಮ್ರ ಸೂಚನೆ~ ಎಂದರು.`ಬಿಬಿಎಂಪಿ ವತಿಯಿಂದ ನನಗೆ ಅಭೂತಪೂರ್ವ ಸನ್ಮಾನ ನೀಡಿರುವುದಕ್ಕೆ ಧನ್ಯನಾಗಿದ್ದೇನೆ. ಈ ಪ್ರೀತಿ, ವಿಶ್ವಾಸವನ್ನು ಎಂದಿಗೂ ಮರೆಯುವುದಿಲ್ಲ. ಹಾಗೆಯೇ ಹೊರ ರಾಜ್ಯದ ವ್ಯಕ್ತಿಯೊಬ್ಬರು ನನ್ನ ವಿರುದ್ಧ ಆರ್ಭಟಿಸಿದಾಗ ನನ್ನ ಹೇಳಿಕೆಯನ್ನು ಸಮರ್ಥಿಸಿದ್ದಕ್ಕೆ ನಾನು ಮತ್ತು ನನ್ನ ಕುಟುಂಬದವರು ಋಣಿಯಾಗಿದ್ದೇವೆ~ ಎಂದರು.ಅಭಿನಂದನಾ ನುಡಿಗಳನ್ನಾಡಿದ ವಿಮರ್ಶಕ ಡಾ.ಸಿ.ಎನ್. ರಾಮಚಂದ್ರನ್, `ಪಾಲಿಕೆ ಶ್ರೇಷ್ಠ ಸಾಹಿತಿಯನ್ನು ಸನ್ಮಾನಿಸುತ್ತಿರುವುದು ಚರಿತ್ರಾರ್ಹ ಸಂಗತಿ. 27 ವರ್ಷಗಳ ಹಿಂದೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರನ್ನು ಸನ್ಮಾನಿಸಿದ ಪಾಲಿಕೆ  ಇದೀಗ ಕಂಬಾರರನ್ನು ಸನ್ಮಾನಿಸುತ್ತಿರುವುದು ಅರ್ಥಪೂರ್ಣ~ ಎಂದರು.ಸಚಿವ ಆರ್. ಅಶೋಕ ಮಾತನಾಡಿ, `ಕಂಬಾರರು ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾಗುವ ಮೂಲಕ ಕನ್ನಡ ಸಾಹಿತ್ಯ ಲೋಕ ಶ್ರೀಮಂತಗೊಂಡಿದೆ. ಇಂತಹ ಕಳಂಕ ರಹಿತ ಚಾರಿತ್ರ್ಯವುಳ್ಳ ಶ್ರೇಷ್ಠ ಸಾಹಿತಿಗಳನ್ನು ನೀಡಿದ ಸಾಹಿತ್ಯ ಲೋಕಕ್ಕೆ ಅಭಿನಂದನೆ ಸಲ್ಲಿಸುತ್ತೇನೆ~ ಎಂದರು.ಎರಡು ಲಕ್ಷ ರೂಪಾಯಿ ನಗದು ಪುರಸ್ಕಾರ, ಸ್ಮರಣ ಫಲಕ ನೀಡಿ ಚಂದ್ರಶೇಖರ ಕಂಬಾರ ಹಾಗೂ ಸತ್ಯಭಾಮ ಕಂಬಾರ ಅವರನ್ನು ಸನ್ಮಾನಿಸಲಾಯಿತು.ಸಚಿವ ಎಸ್. ಸುರೇಶ್‌ಕುಮಾರ್, ಮೇಯರ್ ಪಿ.ಶಾರದಮ್ಮ, ಉಪ ಮೇಯರ್ ಎಸ್. ಹರೀಶ್, ಆಡಳಿತ ಪಕ್ಷದ ನಾಯಕ ಬಿ.ಆರ್. ನಂಜುಂಡಪ್ಪ, ವಿರೋಧ ಪಕ್ಷದ ನಾಯಕ ಎಂ. ಉದಯಶಂಕರ್, ಜೆಡಿಎಸ್ ನಾಯಕ ಪದ್ಮನಾಭರೆಡ್ಡಿ, ಶಾಸಕರಾದ ಬಿ.ಎನ್. ವಿಜಯಕುಮಾರ್, ಎಂ.ಸತೀಶ್‌ರೆಡ್ಡಿ ಇತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry