ಬೆಂಗಳೂರು-ಮೈಸೂರು ಹೆದ್ದಾರಿ ಸಂಪೂರ್ಣ ಸ್ತಬ್ಧ

7

ಬೆಂಗಳೂರು-ಮೈಸೂರು ಹೆದ್ದಾರಿ ಸಂಪೂರ್ಣ ಸ್ತಬ್ಧ

Published:
Updated:
ಬೆಂಗಳೂರು-ಮೈಸೂರು ಹೆದ್ದಾರಿ ಸಂಪೂರ್ಣ ಸ್ತಬ್ಧ

ಮಂಡ್ಯ: ಕಾವೇರಿ ಹೋರಾಟದಿಂದಾಗಿ ಸೋಮವಾರ ಮಂಡ್ಯ ಜಿಲ್ಲೆ ಸಂಪೂರ್ಣ ಸ್ತಬ್ಧಗೊಂಡಿತು. ಹೋರಾಟದ ಕಾವು ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಿಕೊಂಡಿದ್ದು, ಜಿಲ್ಲೆಯಾದ್ಯಂತ ರೈಲು ಮತ್ತು ರಸ್ತೆತಡೆ, ಧರಣಿ ಮುಂದುವರೆದಿವೆ. ಹೆದ್ದಾರಿ ಮತ್ತು ರಸ್ತೆಯಲ್ಲಿಯೇ ರೈತರು ಠಿಕಾಣಿ ಹೂಡಿರುವ ದೃಶ್ಯಗಳು ಎಲ್ಲೆಡೆ ಕಾಣಸಿಗುತ್ತಿವೆ.ಬೆಂಗಳೂರು-ಮೈಸೂರು ಹೆದ್ದಾರಿಯುದ್ದಕ್ಕೂ, ಅಲ್ಲಲ್ಲಿ ರಸ್ತೆ ತಡೆ ನಡೆಸಲಾಗುತ್ತಿದೆ. ಪರಿಣಾಮ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳು ಎರಡನೇ ದಿನವೂ ರಸ್ತೆಗೆ ಇಳಿಯಲಿಲ್ಲ. ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಲ್ಲಿ ರೈತರು ಬೆಳಿಗ್ಗೆ 7 ರಿಂದ ಸಂಜೆ 5.30ರ ವರೆಗೆ ರೈಲ್ವೆ ಸಂಚಾರ ತಡೆದಿದ್ದರು. ಹೀಗಾಗಿ ನೈರುತ್ಯ ರೈಲ್ವೆ ವಲಯ ಟಿಪ್ಪು ಎಕ್ಸ್‌ಪ್ರೆಸ್ ಸೇರಿದಂತೆ ಬೆಂಗಳೂರು- ಮೈಸೂರು ನಡುವೆ ಸಂಚರಿಸುವ ನಾಲ್ಕು ರೈಲುಗಳ ಸಂಚಾರವನ್ನು ಸೋಮವಾರದ ಮಟ್ಟಿಗೆ ರದ್ದು ಪಡಿಸಿತು. ರೈಲ್ವೆಯ  ವೇಳಾಪಟ್ಟಿ ಸಂಪೂರ್ಣವಾಗಿ ಏರುಪೇರಾಗಿದ್ದರಿಂದ ಪ್ರಯಾಣಿಕರೂ ಪರದಾಡುವಂತಾಯಿತು.ಗೆಜ್ಜಲಗೆರೆಯಲ್ಲಿ ನೂರಾರು ರೈತರು ಬೆಳಿಗ್ಗೆಯೇ ಜಾನುವಾರು ಹಾಗೂ ಅಡುಗೆ ಸಾಮಗ್ರಿಗಳೊಂದಿಗೆ ಆಗಮಿಸಿ, ಶಿರಡಿ ಎಕ್ಸ್‌ಪ್ರೆಸ್ ರೈಲು ತಡೆದು ಹಳಿಗಳ ಮೇಲೆ ಕುಳಿತು ಧರಣಿ ಆರಂಭಿಸಿದರು. ಬೆಳಿಗ್ಗೆ 9ರ ಸುಮಾರಿಗೆ ಸ್ಥಳಕ್ಕೆ ಧಾವಿಸಿದ ಕೇಂದ್ರ ವಲಯ ಐಜಿಪಿ ಅಮರಕುಮಾರ್ ಪಾಂಡೆ, ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ, ಜಿಲ್ಲಾ ಪೊಲೀಸ್ ವರಿಷ್ಠ ಕೌಶಲೇಂದ್ರಕುಮಾರ್ ಪ್ರತಿಭಟನಾಕಾರರ ಮನವೊಲಿಸುವ ಯತ್ನ ಮಾಡಿದರು. ಆದರೆ ಫಲಕಾರಿಯಾಗಲಿಲ್ಲ.ಲಘು ಲಾಠಿ ಪ್ರಹಾರ: ರೈತ ಸಂಘದ ಉಪಾಧ್ಯಕ್ಷ ವಿ.ಅಶೋಕ್ ಮತ್ತಿತರರನ್ನು ಪೊಲೀಸರು ಬಂಧಿಸಿದರು. ರೈತ ನಾಯಕಿ ಸುನಂದಾ ಜಯರಾಂ ಅವರ ನೇತೃತ್ವದಲ್ಲಿ ಪ್ರತಿಭಟನೆ ಮುಂದುವರೆಯಿತು. ಸುನಂದಾ ಜಯರಾಂ ಅವರನ್ನೂ ಬಂಧಿಸುತ್ತಿದ್ದಂತೆಯೇ ರೈತರು ಆಕ್ರೋಶಗೊಂಡರು. ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದರು.ಲಘು ಲಾಠಿ  ಪ್ರಹಾರ ಮಾಡುವ ಮೂಲಕ ರೈತರನ್ನು ಚದುರಿಸಿ, ಶಿರಡಿ ಎಕ್ಸ್‌ಪ್ರೆಸ್ ರೈಲು ಬಿಡಿಸಲಾಯಿತು.

ನಾಯಕರ ಬಂಧನದ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಮತ್ತಷ್ಟು ರೈತರು ರೈಲು ತಡೆ ಮುಂದುವರೆಸಿದ್ದರಿಂದ ರೈಲುಗಳು ಸಂಚರಿಸಲಿಲ್ಲ.ರೈತರ ನಾಯಕರ ಬಂಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ ಅವರ ನೇತೃತ್ವದಲ್ಲಿ ರೈತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿ ಕೂಡಲೇ ಬಂಧಿತರನ್ನು ಬಿಡುಗಡೆ ಮಾಡಬೇಕು ಎಂದು ಪಟ್ಟು ಹಿಡಿದರು. ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಪೊಲೀಸರು ಎಲ್ಲರನ್ನೂ ಬಿಡುಗಡೆ ಮಾಡಿದರು.ಮಂಡ್ಯ, ಮದ್ದೂರು, ಪಾಂಡವಪುರ, ಶ್ರೀರಂಗಪಟ್ಟಣ ಮುಂತಾದ ಕಡೆ ರಸ್ತೆಯಲ್ಲಿ ಅಡುಗೆ ಮಾಡುವುದು, ಬೈಕ್ ರ‌್ಯಾಲಿ, ರಸ್ತೆ ತಡೆ, ಪ್ರತಿಭಟನಾ ರ‌್ಯಾಲಿ ನಡೆದಿವೆ.ಆತ್ಮಹತ್ಯೆಗೆ ಯತ್ನ: ಕಾವೇರಿಗೆ ನೀರು ಬಿಡುವುದನ್ನು ನಿಲ್ಲಿಸಬೇಕು ಹಾಗೂ ಬಂಧಿಸಿದ ನಾಯಕರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ರೈತ ರಾಘವೇಂದ್ರ ಟವೆಲ್‌ನಿಂದ ಮರಕ್ಕೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ  ಮುಂದಾದರು. ಕೂಡಲೇ ಉಳಿದವರು ತಡೆದರು.ಬೆಂಗಳೂರಿನಲ್ಲಿ ಸಭೆ: ಆದಿ ಚುಂಚನಗಿರಿ ಪೀಠಾಧ್ಯಕ್ಷ ಬಾಲಗಂಗಾಧರನಾಥ ಸ್ವಾಮೀಜಿ ನೇತೃತ್ವದಲ್ಲಿ ಅ.2 ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಆದಿಚುಂಚನಗಿರಿ ಮಠದಲ್ಲಿ ಮಂಡ್ಯ, ಮೈಸೂರು, ಹಾಸನ, ತುಮಕೂರು, ಚಾಮರಾಜನಗರ ಹಾಗೂ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಶಾಸಕರ ಸಭೆ ಕರೆಯಲಾಗಿದೆ.ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಅಲ್ಲಿ ತೆಗೆದುಕೊಳ್ಳುವ  ನಿರ್ಣಯಕ್ಕೆ ನಾವೆಲ್ಲರೂ ಬದ್ಧರಾಗಿರಲಿದ್ದೇವೆ ಎಂದು ಶಾಸಕ ಕೆ. ಸುರೇಶ್‌ಗೌಡ  ಸುದ್ದಿಗಾರರಿಗೆ ತಿಳಿಸಿದರು.ಮಂಡ್ಯದಲ್ಲಿ ನಡೆದಿರುವ ಧರಣಿಯಲ್ಲಿ ಭಾಗವಹಿಸಿದ್ದ ಚಲನಚಿತ್ರ ನಟ ಅಂಬರೀಷ್ ಮಾತನಾಡಿ, ಕೇಂದ್ರ ಸರ್ಕಾರವು ಕೂಡಲೇ ಸಂಕಷ್ಟ ಸೂತ್ರವೊಂದನ್ನು ರೂಪಿಸುವ ಮೂಲಕ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.ಚಲನಚಿತ್ರ ನಟ ಯಶ್, ಶಾಸಕಿ ಅನಿತಾ ಕುಮಾರಸ್ವಾಮಿ ಹಾಗೂ ಜಿಲ್ಲೆಯ ಎಲ್ಲ ಶಾಸಕರೂ, ಮಾಜಿ ಶಾಸಕರು, ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರೂ ಭಾಗವಹಿಸಿದ್ದರು.

`ಅಶಾಂತಿಗೆ ಪ್ರಧಾನಿ ಕಾರಣ~

ಮಂಗಳೂರು: ಕರ್ನಾಟಕದಲ್ಲಿ ಬೆಳೆದು ನಿಂತ ಬೆಳೆ, ಕುಡಿಯುವ ನೀರಿನ ಸಮಸ್ಯೆಗಳ ವಾಸ್ತವ ಅರಿಯದೆ ಪ್ರಧಾನಿ ಅವರು ಕಾವೇರಿ ನದಿ ಪ್ರಾಧಿಕಾರದ ಸಭೆಯಲ್ಲಿ ತಮಿಳುನಾಡಿಗೆ ಕಾವೇರಿ ನೀರು ಬಿಡುವ ತಪ್ಪು ಆದೇಶ ನೀಡಿದ್ದಾರೆ. ಅವರು ತಕ್ಷಣ ಪರಿಣತರ ತಂಡವೊಂದನ್ನು ರಾಜ್ಯಕ್ಕೆ ಕಳುಹಿಸಿಕೊಡಬೇಕು ಮತ್ತು ತಮ್ಮ ತಪ್ಪು ಆದೇಶವನ್ನು ರದ್ದುಪಡಿಸಬೇಕು ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry