ಬುಧವಾರ, ಜೂನ್ 16, 2021
21 °C

ಬೆಂಗಳೂರು ವಿವಿ ಕುಲಪತಿ ವಿರುದ್ಧ ಸಿಂಡಿಕೇಟ್ ಸದಸ್ಯರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋಲಾರ ಸ್ನಾತಕೋತ್ತರ ಕೇಂದ್ರದ ಕಟ್ಟಡ ನಿರ್ಮಾಣ ವಿವಾದಕ್ಕೆ ಸಂಬಂಧಿಸಿದಂತೆ ಬೆಂಗಳೂರು ವಿಶ್ವವಿದ್ಯಾಲಯದ ಮುಖ್ಯ ಎಂಜಿನಿಯರ್‌ರಿಂದ ಯಾವುದೇ ವಿವರಣೆ ಪಡೆಯದೆ ಅವರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಕುಲಪತಿ ಡಾ.ಎನ್. ಪ್ರಭುದೇವ್ ವಿರುದ್ಧ ಸಿಂಡಿಕೇಟ್ ಸದಸ್ಯರು ಹಾಗೂ ವಿಶ್ವವಿದ್ಯಾಲಯದ ಶಿಕ್ಷಕೇತರ ನೌಕರರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.ವಿಶ್ವವಿದ್ಯಾಲಯದ ಮುಖ್ಯ ಎಂಜಿನಿಯರ್ ಅವರಿಂದ ಯಾವುದೇ ವಿವರಣೆ ಪಡೆಯದೆ ಕ್ರಮಕ್ಕೆ ಮುಂದಾಗಿರುವ ವಿ.ವಿ. ಕುಲಪತಿಗಳ ಕ್ರಮ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದುದು ಎಂದು ಬೆಂಗಳೂರು ವಿ.ವಿ. ಸಿಂಡಿಕೇಟ್ ಸದಸ್ಯ ಡಾ.ಕೆ.ವಿ. ಆಚಾರ್ಯ ಪತ್ರಿಕಾ ಹೇಳಿಕೆಯಲ್ಲಿ ಟೀಕಿಸಿದ್ದಾರೆ.`ಕೋಲಾರ ಸ್ನಾತಕೋತ್ತರ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ಆದೇಶ ಪತ್ರ ನೀಡುವುದು ಮುಖ್ಯ ಎಂಜಿನಿಯರ್ ಹೊಣೆ. ಯಾರೂ ಅವರ ಮೇಲೆ ಜವಾಬ್ದಾರಿ ಹೇರುವ ಅಗತ್ಯವಿಲ್ಲ. ಹೀಗಾಗಿ, ಸಿಂಡಿಕೇಟ್‌ಗೆ ಅವರ ಕಾರ್ಯ ವ್ಯಾಪ್ತಿಯನ್ನು ಬದಲಿಸುವ ಅಧಿಕಾರ ಇಲ್ಲ~ ಎಂದು ಅವರು ಹೇಳಿದ್ದಾರೆ.`ಕೇವಲ ಗುತ್ತಿಗೆದಾರರಿಗೆ ಆದೇಶ ಪತ್ರ ನೀಡಿದ ವಿಚಾರದ ಬಗ್ಗೆಯಷ್ಟೇ ಚರ್ಚಿಸಲಾಗುತ್ತಿದೆ. ಆದರೆ, ಕಟ್ಟಡದ ವಿನ್ಯಾಸದ ಬಗ್ಗೆ ಯಾರೂ ಪ್ರಸ್ತಾಪಿಸುತ್ತಿಲ್ಲ. ಮೊದಲೇ ವಿನ್ಯಾಸವನ್ನು ಗುತ್ತಿಗೆದಾರರಿಗೆ ನೀಡಲಾಗಿತ್ತು.ಆದರೆ, ಗುತ್ತಿಗೆದಾರರು ಅದನ್ನು ವಿಶ್ವವಿದ್ಯಾಲಯದ ಎಂಜಿನಿಯರ್‌ಗೆ ಹಿಂತಿರುಗಿಸುವ ಮೂಲಕ ಅವಮಾನ ಮಾಡಿದ್ದಾರೆ. ಡ್ರಾಯಿಂಗ್ ನೀಡುವುದು ಏಕ ವ್ಯಕ್ತಿ ಆಯೋಗದ ಕೆಲಸ. ಅದನ್ನು ಪಡೆಯುವುದು ವಿಶ್ವವಿದ್ಯಾಲಯದ ಕುಲಪತಿಗಳ ಕೆಲಸ. ಈ ವೈಫಲ್ಯಕ್ಕೆ ಮುಖ್ಯ ಎಂಜಿನಿಯರ್ ಅವರನ್ನು ಹೊಣೆ ಮಾಡಲು ಸಾಧ್ಯವಿಲ್ಲ~ ಎಂದಿದ್ದಾರೆ.ಗುತ್ತಿಗೆದಾರರಿಗೆ ಹಣ ಪಾವತಿ ಮಾಡುವುದು ಕೂಡ ವಿಶ್ವವಿದ್ಯಾಲಯದ ಕೆಲಸವೇ ಹೊರತು ಎಂಜಿನಿಯರ್‌ದಲ್ಲ. ಹಣ ಪಾವತಿ ಮಾಡದಕ್ಕಾಗಿ ವಿಶ್ವವಿದ್ಯಾಲಯದ ಎಂಜಿನಿಯರ್ ವಿರುದ್ಧ ಕ್ರಮ ಜರುಗಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.ಕುಲಪತಿಗಳ ಕಾರ್ಯವೈಖರಿಯನ್ನು ಗಮನಿಸಿದರೆ ವಿಶ್ವವಿದ್ಯಾಲಯದ ನೌಕರರಿಗೆ ಪ್ರೋತ್ಸಾಹ ನೀಡುವುದಕ್ಕಿಂತ ಗುತ್ತಿಗೆದಾರರ ಪರ ವಕಾಲತ್ತು ವಹಿಸಿದಂತೆ ಕಂಡು ಬರುತ್ತದೆ. ಇದು ವಿಶ್ವವಿದ್ಯಾಲಯದ ಹಿತದೃಷ್ಟಿಯಿಂದ ಸರಿಯಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ.ಖಂಡನೆ: ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಕೇತರ ನೌಕರರ ಸಂಘ ಹಾಗೂ ಬೆಂಗಳೂರು ವಿಶ್ವವಿದ್ಯಾಲಯ ಪರಿಶಿಷ್ಟ ಜಾತಿ ಮತ್ತು ವರ್ಗದ ಶಿಕ್ಷಕೇತರ ನೌಕರರ ಸಂಘಗಳು ಕೂಡ ಕುಲಪತಿಗಳ ಕ್ರಮವನ್ನು ತೀವ್ರವಾಗಿ ಖಂಡಿಸಿವೆ.ಕುಲಪತಿಗಳು ಪೂರ್ವಾಗ್ರಹಪೀಡಿತರಾಗಿ ಒಬ್ಬ ದಲಿತ ಎಂಜಿನಿಯರ್‌ಗೆ ಹಲವಾರು ತಿಂಗಳಿಂದ ಮಾನಸಿಕ ಹಿಂಸೆ ನೀಡುತ್ತಿರುವುದನ್ನು ಈ ಹಿಂದೆ ಖಂಡಿಸಿದ್ದರೂ ತಮ್ಮ ಧೋರಣೆಯಲ್ಲಿ ಬದಲಾವಣೆ ಮಾಡಿಕೊಳ್ಳದಿರುವುದು ವಿಷಾದನೀಯ ಎಂದು ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಕೇತರ ನೌಕರರ ಸಂಘದ ಅಧ್ಯಕ್ಷ ಮಹಾಲಿಂಗಯ್ಯ, ಕಾರ್ಯದರ್ಶಿ ಆರ್. ರಂಗಧಾಮ ಹಾಗೂ ಬೆಂಗಳೂರು ವಿಶ್ವವಿದ್ಯಾಲಯ ಪರಿಶಿಷ್ಟ ಜಾತಿ ಮತ್ತು ವರ್ಗದ ಶಿಕ್ಷಕೇತರ ನೌಕರರ ಸಂಘದ ಅಧ್ಯಕ್ಷ ಪಿ. ಶಿವಪ್ಪ ಹಾಗೂ ಕಾರ್ಯದರ್ಶಿ ಶಿವಣ್ಣ ಟೀಕಿಸಿದ್ದಾರೆ.ಕುಲಪತಿಗಳು ಸಿಂಡಿಕೇಟ್ ಸದಸ್ಯರಿಗೆ ನೀಡಿರುವ ಪತ್ರವನ್ನು ಕೂಡಲೇ ವಾಪಸು ಪಡೆಯಬೇಕು. ಅಲ್ಲದೆ, ಮಾರ್ಚ್ 5ರೊಳಗೆ ಸಂಘಗಳ ಕಾರ್ಯಕಾರಿ ಸಮಿತಿ ಸದಸ್ಯರ ಸಭೆ ಕರೆದು  ಸಮಸ್ಯೆ ಪರಿಹರಿಸಬೇಕು. ಇಲ್ಲದಿದ್ದಲ್ಲಿ ಮಾ. 6ರಂದು ಮತ್ತೆ ಸಂಘಗಳ ಕಾರ್ಯಕಾರಿ ಸಮಿತಿ ಸಭೆ ಸೇರಿ ಅಧಿಕಾರಿಶಾಹಿ ಆಡಳಿತದ ವಿರುದ್ಧ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.ಫೆ. 22ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಕುಲಸಚಿವರು ಹಾಗೂ ಕುಲಪತಿಗಳ ಒಪ್ಪಿಗೆ ಪಡೆದೇ ವಿವಿ ಮುಖ್ಯ ಎಂಜಿನಿಯರ್ ಅಂದು ಸಂಜೆ 5.55ರ ಸಮಯದಲ್ಲಿ ಗುತ್ತಿಗೆದಾರ ಹಾಗೂ ಕೋಲಾರ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಿಗೆ ಆದೇಶ ನೀಡಿರುತ್ತಾರೆ. ಅಲ್ಲದೆ, 24ರಂದು ಕೋಲಾರ ಸ್ನಾತಕೋತ್ತರ ಕೇಂದ್ರಕ್ಕೆ ಖುದ್ದು ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದ್ದಾರೆ.ಈ ಮಧ್ಯೆ, ಕಾಮಗಾರಿಯ ಎಸ್.ಆರ್. ನಿಯಮದಂತೆ ಎಲ್ಲ ಕೆಲಸಗಳ ವಿವರವನ್ನು ಎಇಇ ಫೆ. 28ರಂದು ವಿಶ್ವವಿದ್ಯಾಲಯದ ಎಂಜಿನಿಯರ್‌ಗೆ ಸಲ್ಲಿಸಿದ್ದಾರೆ. ಅದನ್ನು ಬಾಕಿ ಟೆಂಡರ್‌ನಲ್ಲಿರುವಂತೆ ಪರಿಶೀಲಿಸಿ 29ರಂದೇ ಕಡತವನ್ನು ಸಿಂಡಿಕೇಟ್ ಸಭೆಯ ನಿರ್ಣಯದಂತೆ ಎಂಜಿನಿಯರ್ ಅನುಮೋದನೆಗಾಗಿ ಕುಲಸಚಿವರಿಗೆ ಸಲ್ಲಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.