ಬೆಂಗಳೂರು ವಿ.ವಿ ಜಮೀನು ಉಳಿಸಿ ಅಭಿಯಾನಕ್ಕೆ ಚಾಲನೆ:ಒತ್ತುವರಿ ತೆರವು: ಭೂಮಿ ವಶ

7

ಬೆಂಗಳೂರು ವಿ.ವಿ ಜಮೀನು ಉಳಿಸಿ ಅಭಿಯಾನಕ್ಕೆ ಚಾಲನೆ:ಒತ್ತುವರಿ ತೆರವು: ಭೂಮಿ ವಶ

Published:
Updated:

ಬೆಂಗಳೂರು: ಒತ್ತುವರಿಯಾಗಿರುವ ಬೆಂಗಳೂರು ವಿಶ್ವವಿದ್ಯಾಲಯದ ಜಮೀನನ್ನು ವಿವಿಯ ಸ್ವಾಧೀನಕ್ಕೆ ತೆಗೆದುಕೊಳ್ಳುವ `ವಿಶ್ವವಿದ್ಯಾಲಯದ ಜಮೀನು ಉಳಿಸಿ~ ಅಭಿಯಾನಕ್ಕೆ ವಿವಿ ಶನಿವಾರ ಚಾಲನೆ ನೀಡಿದೆ.

ಅಭಿಯಾದ ಮೊದಲ ಹಂತವಾಗಿ ಮಲ್ಲತ್ತಹಳ್ಳಿಯ ಸರ್ವೇ ನಂಬರ್ 32ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸೇರಿದೆ ಎನ್ನಲಾದ ಜಮೀನಿನಲ್ಲಿ ನಿರ್ಮಿಸಲಾಗಿದ್ದ ಕಾಂಪೌಂಡ್ ಅನ್ನು ಕೆಡವಲಾಯಿತು.ಬೆಂಗಳೂರು ವಲಯದ ಪ್ರಾದೇಶಿಕ ಆಯುಕ್ತ ಕೆ.ಶಿವರಾಂ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಲಸಚಿವ ಪ್ರೊ.ಬಿ.ಸಿ.ಮೈಲಾರಪ್ಪ, `ಮಲ್ಲತ್ತಹಳ್ಳಿಯ ಕನ್ಯಾಕುಮಾರಿ ವಿದ್ಯಾಸಂಸ್ಥೆಯು ಒತ್ತುವರಿ ಮಾಡಿಕೊಂಡಿದ್ದ ಸರ್ವೇ ನಂಬರ್ 32ರ 1.16 ಎಕರೆ ಜಮೀನನ್ನು ಶನಿವಾರ ವಶಕ್ಕೆ ತೆಗೆದುಕೊಳ್ಳಲಾಯಿತು. ಜಮೀನಿನಲ್ಲಿ ಅಕ್ರಮವಾಗಿ ಕಟ್ಟಲಾಗಿದ್ದ ಕಾಂಪೌಂಡ್ ಅನ್ನು ಒಡೆದು ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿದೆ~ ಎಂದರು.`ಮಲ್ಲತ್ತಹಳ್ಳಿಯ ಸರ್ವೇ ನಂಬರ್ 32ರಲ್ಲಿ ಒಟ್ಟು 15 ಎಕರೆ ಜಮೀನಿದೆ. ಈ ಜಮೀನಿನಲ್ಲಿ ರಾಜ್ಯ ಸರ್ಕಾರವು 1974ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ 13 ಎಕರೆ ಜಮೀನು ಮಂಜೂರು ಮಾಡಿದೆ. ಉಳಿದ ಎರಡು ಎಕರೆ ಜಮೀನು ರಸ್ತೆ ನಿರ್ಮಾಣಕ್ಕೆಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಲಾಗಿದೆ. ಹೀಗಾಗಿ ಸರ್ವೇ ನಂಬರ್ 32ರಲ್ಲಿ ಯಾವುದೇ ಉಳಿಕೆ ಜಮೀನು ಇಲ್ಲ~ ಎಂದು ಅವರು ತಿಳಿಸಿದರು.`ಆದರೆ, ಕನ್ಯಾಕುಮಾರಿ ವಿದ್ಯಾಸಂಸ್ಥೆಯವರು ಸರ್ವೇ ನಂಬರ್ 32ರಲ್ಲಿ 1.16 ಎಕರೆ ಉಳಿಕೆ ಜಮೀನಿದೆ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ 1996ರ ಜನವರಿ ತಿಂಗಳಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಶಿಫಾರಸಿನ ಮೇಲೆ ಭೂಮಿ ಮಂಜೂರು ಮಾಡಿಸಿಕೊಂಡಿದ್ದಾರೆ~ ಎಂದರು.`ವಿವಿಯು ಈ ಜಮೀನು ಮಂಜೂರಾತಿಯನ್ನು ಪ್ರಶ್ನಿಸಿ 1996ರ ಜುಲೈ ತಿಂಗಳಲ್ಲಿ ಕಂದಾಯ ಇಲಾಖೆ ಮತ್ತು ಭೂ ಮಾಪನ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿತ್ತು. ಆಗ ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಜಮೀನು ಮಂಜೂರಾತಿ ಅನೂರ್ಜಿತ ಎಂದು ವರದಿ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಕನ್ಯಾಕುಮಾರಿ ವಿದ್ಯಾಸಂಸ್ಥೆಯು 2004ರಲ್ಲಿ ರಾಜ್ಯ ಹೈಕೋರ್ಟ್‌ಗೆ ಸಲ್ಲಿಸಿದ ಮೇಲ್ಮನವಿ ಕೂಡಾ ತಿರಸ್ಕೃತಗೊಂಡಿದೆ~ ಎಂದು ಮಾಹಿತಿ ನೀಡಿದರು.ಕೂಗಾಡಿದ ಮೈಲಾರಪ್ಪ

ಜಮೀನು ಸ್ವಾಧೀನಪಡಿಸಿಕೊಳ್ಳುತ್ತಿದ್ದ ವೇಳೆ ಪೊಲೀಸರು ಸ್ಥಳಕ್ಕೆ ತಡವಾಗಿ ಬಂದರೆಂಬ ಕಾರಣಕ್ಕೆ ಕುಲಸಚಿವ ಮೈಲಾರಪ್ಪ ಕೂಗಾಡಿದ ಘಟನೆ ನಡೆಯಿತು. `ಜಮೀನು ಸ್ವಾಧೀನ ಪಡಿಸಿಕೊಳ್ಳುವ ವೇಳೆ ನನ್ನ ಮೇಲೆ ಹಲ್ಲೆ ನಡೆಯುವ ಸಾಧ್ಯತೆ ಇದೆ, ಹೀಗಾಗಿ ರಕ್ಷಣೆ ನೀಡಬೇಕು ಎಂದು ಜ್ಞಾನಭಾರತಿ ಠಾಣೆಗೆ ಮುಂಚಿತವಾಗಿ ತಿಳಿಸಿದ್ದೆ.

ಆದರೆ, ಪೊಲೀಸರು ಇಷ್ಟು ತಡವಾಗಿ ಬರಲು ಕಾರಣವೇನು. ನಿಮ್ಮ ಇನ್‌ಸ್ಪೆಕ್ಟರ್ ಯಾರು. ಅವರಿಗೆ ಎಷ್ಟು ದುರಹಂಕಾರ. ಅವರಿಗೆ ಕರ್ತವ್ಯ ಪ್ರಜ್ಞೆ ಇದೆಯೋ ಹೇಗೆ~ ಮುಂತಾಗಿ ಮೈಲಾರಪ್ಪ ಅವರು ಜ್ಞಾನಭಾರತಿ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಸಿದ್ದಲಿಂಗಯ್ಯ ಅವರ ಮೇಲೆ ಕೂಗಾಡಿದರು. `ವಿ.ವಿ. ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುವ ವೇಳೆ ಇನ್ನು ಮುಂದೆ ಸ್ಥಳಕ್ಕೆ ಬಂದರೆ ವಿದ್ಯಾರ್ಥಿಗಳಿಂದ ಹೊಡೆಸುತ್ತೇನೆ~ ಎಂದು ಕೂಗಾಡಿದರು.`ಜಮೀನು ಮತ್ತಿತರೆ ವಿವಾದಗಳ ಸಂದರ್ಭಗಳಲ್ಲಿ ಪೊಲೀಸರು ಮಧ್ಯ ಪ್ರವೇಶಿಸಬಾರದು ಎಂದು ಸುಪ್ರೀಂಕೋರ್ಟ್‌ನ ನಿರ್ದೇಶನವಿದೆ. ಹೀಗಾಗಿ ಪೊಲೀಸರು ಸ್ಥಳಕ್ಕೆ ಹೋಗಿರಲಿಲ್ಲ. ಆದರೆ, ಗಲಭೆ ನಡೆಯುವ ಬಗ್ಗೆ ಮಾಹಿತಿ ಬಂದಿದ್ದರಿಂದ ಪೊಲೀಸರು ಸ್ಥಳಕ್ಕೆ ಹೋಗಿದ್ದಾರೆ~ ಎಂದು  ಪೊಲೀಸ್ ಅಧಿಕಾರಿಗಳು ತಿಳಿಸಿದರು. ಘಟನೆ ಸಂಬಂಧ ಸಬ್ ಇನ್‌ಸ್ಪೆಕ್ಟರ್ ಸಿದ್ದಲಿಂಗಯ್ಯ ಅವರು ಜ್ಞಾನಭಾರತಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.`ಅನ್ಯಾಯವಾಗಿದೆ~

`ಬೆಂಗಳೂರು ವಿಶ್ವವಿದ್ಯಾಲಯದ ಅಧಿಕಾರಿಗಳು ದಬ್ಬಾಳಿಕೆ ನಡೆಸಿ ನಮ್ಮ ಜಮೀನಿನಲ್ಲಿ ಕಟ್ಟಿದ್ದ ಕಾಂಪೌಂಡ್ ಒಡೆದಿದ್ದಾರೆ. ಇದರಿಂದ ನಮಗೆ ಅನ್ಯಾಯವಾಗಿದೆ~ ಎಂದು ಕನ್ಯಾಕುಮಾರಿ ವಿದ್ಯಾಸಂಸ್ಥೆಯ ಪದಾಧಿಕಾರಿಗಳು ಆರೋಪಿಸಿದ್ದಾರೆ.`ಜಮೀನು ಮಂಜೂರಾತಿ ನ್ಯಾಯಯುತವಾಗಿಯೇ ನಡೆದಿದ್ದು, 16.50 ಲಕ್ಷ ರೂಪಾಯಿಯನ್ನು ಸರ್ಕಾರಕ್ಕೆ ಪಾವತಿಸಿಯೇ 1.16 ಎಕರೆ ಜಮೀನು ಖರೀದಿ ಮಾಡಿದ್ದೇವೆ. ಈಗ ವಿವಿ ಅಧಿಕಾರಿಗಳು ಯಾವುದೇ ಮುನ್ಸೂಚನೆ ಇಲ್ಲದೆ ಜಮೀನು ಪ್ರವೇಶಿಸಿ ಕಾಂಪೌಂಡ್ ಕೆಡವಿರುವುದು ಕಾನೂನಿನ ಉಲ್ಲಂಘನೆಯಾಗಿದೆ~ ಎಂದು ಸಂಸ್ಥೆಯ ಸಂಸ್ಥಾಪಕ ಹೊಂಬಣ್ಣ ಹೇಳಿದರು.`ವಿಶ್ವವಿದ್ಯಾಲಯದ ಈ ದಬ್ಬಾಳಿಕೆಯನ್ನು ಪ್ರಶ್ನಿಸಿ ಕಾನೂನು ಹೋರಾಟ ನಡೆಸಲಾಗುವುದು. ವಿಶ್ವವಿದ್ಯಾಲಯದ ಅಧಿಕಾರಿಗಳು ಜಮೀನು ವಿಚಾರದಲ್ಲಿ ರಾಜಕೀಯ ನಡೆಸುತ್ತಿದ್ದಾರೆ~ ಎಂದು ಅವರು ಆರೋಪಿಸಿದರು.ಒಂದಿಚು ಜಾಗವನ್ನೂ ಬಿಡುವುದಿಲ್ಲ

`ವಿಶ್ವವಿದ್ಯಾಲಯಕ್ಕೆ ಸೇರಿದ 1,319 ಎಕರೆ ಜಮೀನಿನಲ್ಲಿ 280 ಎಕರೆ ಜಮೀನು ವಿವಿಧ ಸಂದರ್ಭಗಳಲ್ಲಿ ಖಾಸಗಿ ವ್ಯಕ್ತಿಗಳಿಂದ ಒತ್ತುವರಿಯಾಗಿದೆ. ಮಲ್ಲತ್ತಹಳ್ಳಿಯ ಹೊರ ವರ್ತುಲ ರಸ್ತೆಯ ಬಳಿ ವಿಶ್ವವಿದ್ಯಾಲಯದ ಜಾಗವನ್ನು ಒತ್ತುವರಿ ಮಾಡಿಕೊಂಡು ಮಳವಳ್ಳಿಯ ಶಾಸಕ ನರೇಂದ್ರಸ್ವಾಮಿ ಅವರು ಪೆಟ್ರೋಲ್ ಬಂಕ್ ಸ್ಥಾಪಿಸಿದ್ದಾರೆ.  ಶೀಘ್ರವೇ ಅದನ್ನು ತೆರವುಗೊಳಿಸಲಾಗುವುದು. ಹಂತ ಹಂತವಾಗಿ ಒತ್ತುವರಿಯಾಗಿರುವ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲಾಗುವುದು. ವಿಶ್ವವಿದ್ಯಾಲಯದ ಒಂದಿಂಚು ಜಾಗವನ್ನೂ ಖಾಸಗಿಯವರಿಗೆ ಬಿಟ್ಟುಕೊಡುವುದಿಲ್ಲ~.

-ಪ್ರೊ.ಬಿ.ಸಿ.ಮೈಲಾರಪ್ಪ,

ಕುಲಸಚಿವ, ಬೆಂಗಳೂರು ವಿಶ್ವವಿದ್ಯಾಲಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry