ಬೆಂಗಳೂರು ವಿವಿ: ಮುಂದುವರಿದ ಬೋಧಕೇತರ ನೌಕರರ ಮುಷ್ಕರ

7

ಬೆಂಗಳೂರು ವಿವಿ: ಮುಂದುವರಿದ ಬೋಧಕೇತರ ನೌಕರರ ಮುಷ್ಕರ

Published:
Updated:

ಬೆಂಗಳೂರು: `ಬೆಂಗಳೂರು ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಸೈಯದ್ ಜಮಾಲ್ ಹಾಗೂ ಹೆಚ್ಚುವರಿ ಕಾನೂನು ಸಲಹೆಗಾರ ಗಂಗಾಧರ ಜಿ.ಹಿರೇಮಠ ಸೇರಿದಂತೆ ಹಲವು ನೌಕರರನ್ನು ಸೇವೆಯಿಂದ ಅಮಾನತು ಮಾಡಬೇಕು~ ಎಂದು ಒತ್ತಾಯಿಸಿ ಬೆಂಗಳೂರು ವಿಶ್ವವಿದ್ಯಾಲಯ ಸಮಸ್ತ ಬೋಧಕೇತರ ನೌಕರರ ಸಂಘದ ಸದಸ್ಯರು ಜ್ಞಾನಭಾರತಿ ಆವರಣದಲ್ಲಿ ನಡೆಸುತ್ತಿರುವ ಮುಷ್ಕರವನ್ನು ಮೂರನೇ ದಿನವೂ ಮುಂದುವರಿಸಿದರು.ಸಂಘದ ಅಧ್ಯಕ್ಷ ಮಹಾಲಿಂಗಯ್ಯ ಮಾತನಾಡಿ, `ಸೈಯದ್ ಜಮಾಲ್ ಸೇರಿದಂತೆ ನಲವತ್ತು ನೌಕರರು ವಿಶ್ವವಿದ್ಯಾಲಯಕ್ಕೆ ಕಳ್ಳರಂತೆ ನುಗ್ಗಿದ್ದಾರೆ. ಲೆಕ್ಕ ಪರಿಶೋದನೆಯ ಕಡತಗಳನ್ನು ಕುಲಪತಿಯವರ ಗಮನಕ್ಕೆ ತರದೇ ಎರಡು ವರ್ಷಗಳಲ್ಲಿ 30 ಕೋಟಿ ರೂ ವಂಚಿಸಿರುವ ಗುಮಾನಿ ಜಮಾಲ್ ಅವರ ಮೇಲಿದೆ.ಇವರನ್ನು ಹೊರ ಹಾಕಲು ಸಿಂಡಿಕೇಟ್ ಸದಸ್ಯರು ಒಂದುಗೂಡಿದ್ದರೂ, ಕುಲಪತಿ ಎನ್. ಪ್ರಭುದೇವ್ ಅವರು ಇದಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಕುಲಪತಿ ಅವರ ಈ ವರ್ತನೆ ಹಲವು ಸಂಶಯಗಳಿಗೆ ಕಾರಣವಾಗಿದೆ. ತಕ್ಷಣವೇ ಸಾಮಾನ್ಯ ಸಿಂಡಿಕೇಟ್ ಸಭೆ ಕರೆದು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು~ ಎಂದು ಅವರು ಒತ್ತಾಯಿಸಿದರು.`ಗಂಗಾಧರ  ಜಿ.ಹಿರೇಮಠ  ಅವರು ಕಚೇರಿಗೆ ಬಾರದೇ ತಿಂಗಳಿಗೆ ಒಂದು ಲಕ್ಷ  ರೂಪಾಯಿ  ವೇತನ ಪಡೆಯುತ್ತಿದ್ದಾರೆ. ವಿಶ್ವವಿದ್ಯಾಲಯದ ಕಾನೂನು ಸಲಹೆಗಾರರಾಗಿರುವ ಅವರು ತಮ್ಮ ಹುದ್ದೆಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಕೂಡಲೇ ಅವರನ್ನು ವಿವಿಯಿಂದ ಹೊರ ಹಾಕಿ ಕಾಯಂ ನಿವೃತ್ತ ನ್ಯಾಯಾಧೀಶರನ್ನು ಆ ಸ್ಥಾನಕ್ಕೆ ನೇಮಕ ಮಾಡಬೇಕು~ ಎಂದು ಅವರು ಆಗ್ರಹಿಸಿದರು.ಸಂಘದ ಕಾರ್ಯದರ್ಶಿ ಶಿವಣ್ಣ ಮಾತನಾಡಿ, `ಕುಲಪತಿ ಅವರ ಸಲಹೆಗಾರರಾಗಿರುವ ಬಸವಣ್ಣ ಅವರು, ಲೆಕ್ಕದ ಕಡತಗಳನ್ನು ತಿದ್ದಿ ಇಡೀ ವಾತಾವರಣವನ್ನೆ ಕಲುಷಿತಗೊಳಿಸುತ್ತಿದ್ದಾರೆ. ರವಿ ಯಾಪಲಪ್ಪ ಎಂಬ ಸಾರ್ವಜನಿಕ ಸಂಪರ್ಕಾಧಿಕಾರಿ (ಪಿಆರ್‌ಒ) ಒಂದು ದಿನವೂ ವಿಶ್ವವಿದ್ಯಾಲಯಕ್ಕೆ ಬಂದಿಲ್ಲ. ಇಂತಹ ಹಲವು ಭ್ರಷ್ಟ ನೌಕರರು ವಿಶ್ವವಿದ್ಯಾಲಯದ ಆಡಳಿತ ವರ್ಗವನ್ನು ಸೇರಿಕೊಂಡಿದ್ದಾರೆ. ಕೂಡಲೇ ಅವರನ್ನು ಸೇವೆಯಿಂದ ವಜಾ ಮಾಡಬೇಕು~ ಎಂದು ಸರ್ಕಾರವನ್ನು ಒತ್ತಾಯಿಸಿದರು.`ತಕ್ಷಣವೇ ಸಿಂಡಿಕೇಟ್ ಸಭೆ ಕರೆದು ಆರು ತಿಂಗಳಿಂದ ನಾವು ಸಲ್ಲಿಸಿರುವ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಮೇ. 10 ರಂದು ಸಂಘದ ಎಲ್ಲಾ ಸದಸ್ಯರು ರಾಜಭವನದ ಮುಂದೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ~ ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.`ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಹೀಗೆ ಕನಿಷ್ಠ ಸೌಲಭ್ಯಗಳು ವಿಶ್ವವಿದ್ಯಾಲಯದಲ್ಲಿ ಇಲ್ಲ. ಆಡಳಿತ ಕಚೇರಿ ಬೀಳುವ ಸ್ಥಿತಿಯಲ್ಲಿದೆ. ನೌಕರರಿಗೆ ಬಡ್ತಿ, ಆರೋಗ್ಯ ವಿಮೆ, ನೇಮಕಾತಿ ಸೇರಿದಂತೆ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಹತ್ತಾರು ಬಾರಿ ಕುಲಪತಿ ಅವರಲ್ಲಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ. ಪ್ರಭುದೇವ್ ಅವರು ತಮ್ಮ ಮೂರೂವರೆ ವರ್ಷದ ಅವಧಿಯಲ್ಲಿ ಮೂರು ತಿಂಗಳು ವಿವಿ ಗೆ ಭೇಟಿ ನೀಡಿರಬಹುದು. ಆಡಳಿತ ಚಟುವಟಿಕೆಗಳಲ್ಲಿ ಅವರು ಸಕ್ರೀಯವಾಗಿ ಪಾಲ್ಗೊಳ್ಳದಿರುವುದೇ ಇಂದಿನ ಎಲ್ಲಾ ಸಮಸ್ಯೆಗಳಿಗೆ ಕಾರಣ~ ಎಂದು ಪ್ರತಿಭಟನಾಕಾರರು ಆರೋಪಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry