ಬೆಂಗಳೂರು ವಿವಿ ವಿಭಜನೆಗೆ ಆಲೋಚನೆ

7

ಬೆಂಗಳೂರು ವಿವಿ ವಿಭಜನೆಗೆ ಆಲೋಚನೆ

Published:
Updated:

ಸುವರ್ಣ ವಿಧಾನಸೌಧ (ಬೆಳಗಾವಿ): ಬೆಂಗಳೂರು ವಿಶ್ವವಿದ್ಯಾಲಯವನ್ನು ತಜ್ಞರ ಶಿಫಾರಸಿನಂತೆ ವಿಭಜಿಸಿ, ಹೊಸ ವಿಶ್ವವಿದ್ಯಾಲಯ ಸ್ಥಾಪಿಸಲು ಪರಿಶೀಲನೆ ನಡೆಸಲು ಉದ್ದೇಶಿಸಲಾಗಿದೆ ಎಂದು ಉನ್ನತ ಶಿಣ ಸಚಿವ ಸಿ.ಟಿ.ರವಿ ಇಲ್ಲಿ ತಿಳಿಸಿದರು.ಸೋಮವಾರ ವಿಧಾನ ಪರಿಷತ್‌ನಲ್ಲಿ ವೈ.ಎ.ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ಸಲಹೆಯನ್ನು ಅನುಸರಿಸಿ ಕೆಲವು ಪ್ರದೇಶಗಳನ್ನು ಒಳಗೊಂಡಂತೆ ಒಂದು ಹೊಸ ವಿಶ್ವವಿದ್ಯಾಲಯ ಸ್ಥಾಪಿಸಲು ಪರಿಶೀಲಿಸಲಾಗುತ್ತಿದೆ, ಮುಖ್ಯಮಂತ್ರಿಗಳ ಅವಗಾಹನೆಗಾಗಿ ವರದಿ ಸಲ್ಲಿಸಲಾಗಿದೆ ಎಂದರು.ಇದರ ಬೆನ್ನಿಗೇ ನೂತನ ವಿಶ್ವವಿದ್ಯಾಲಯವನ್ನು ಕೋಲಾರದಲ್ಲಿ ಸ್ಥಾಪನೆ ಮಾಡಬೇಕು ಎನ್ನುವ ಒಕ್ಕೊರಲ ಆಗ್ರಹ ಇಲ್ಲಿ ಕೇಳಿ ಬಂತು.ಡಾ.ಎನ್.ರುದ್ರಯ್ಯ ಅವರ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮಿತಿಯು ಬೆಂಗಳೂರು ವಿಶ್ವವಿದ್ಯಾಲಯವನ್ನು ಮೂರು ವಿಶ್ವವಿದ್ಯಾಲಯಗಳಾಗಿ ವಿಭಜಿಸುವಂತೆ ಶಿಫಾರಸು ಮಾಡಿತ್ತು.

ಗುಣಾತ್ಮಕ ಶಿಕ್ಷಣಕ್ಕಾಗಿ ತಜ್ಞರು ನೀಡಿದ್ದ ಈ ವರದಿಯನ್ನು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್, ಜ್ಞಾನ ಆಯೋಗ ಪರಿಶೀಲನೆ ನಡೆಸಿತು. ಬೆಂಗಳೂರು ವಿಶ್ವವಿದ್ಯಾಲಯವು 653 ಸಂಯೋಜಿತ ಕಾಲೇಜುಗಳನ್ನು ಹಾಗೂ 56 ಸ್ನಾತಕೋತ್ತರ ಕೇಂದ್ರಗಳನ್ನು ಹೊಂದಿದ್ದು ಸುಮಾರು 3.5 ಲಕ್ಷ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಹೀಗಾಗಿ ಈ ವಿಶ್ವವಿದ್ಯಾಲಯವನ್ನು  ಎರಡು ವಿಶ್ವವಿದ್ಯಾಲಯಗಳಾಗಿ ವಿಭಜಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.ಬೆಂಗಳೂರು ಉತ್ತರ ಹಾಗೂ ಬೆಂಗಳೂರು ಪೂರ್ವ ಹೀಗೆ ಎರಡು ವಿಶ್ವವಿದ್ಯಾಲಯ ಸದ್ಯಕ್ಕೆ ಪರಿಶೀಲನೆಯಲ್ಲಿದೆ. ಈ ಬಗ್ಗೆ ವಿವರವಾದ ವರದಿಯನ್ನು ಸಿದ್ಧಪಡಿಸಿ ಮುಖ್ಯಮಂತ್ರಿಗಳ ಅವಗಾಹನೆಗೆ ಕಳುಹಿಸಲಾಗಿದೆ. ಹಣಕಾಸು ಇಲಾಖೆಯ ಅನುಮೋದನೆ ಪಡೆದುಕೊಂಡು ಮುಖ್ಯಮಂತ್ರಿಗಳು ಶೀಘ್ರವೇ ಈ ಬಗ್ಗೆ ತೀರ್ಮಾನ ಪ್ರಕಟಿಸಲಿದ್ದಾರೆ ಎಂದರು.ಸುಮಾರು 300 ಕಾಲೇಜುಗಳನ್ನು ಸೇರಿಸಿ ಬೆಂಗಳೂರು ಕೇಂದ್ರವಾಗಿಟ್ಟುಕೊಂಡು ಬೆಂಗಳೂರು ಪೂರ್ವ ವಿವಿ ಸ್ಥಾಪಿಸಲಾಗುತ್ತಿದೆ. ಮುಂದಿನ ಒತ್ತಡವನ್ನು ಆಧರಿಸಿ ಭವಿಷ್ಯದಲ್ಲಿ ಮೂರು ವಿಶ್ವವಿದ್ಯಾಲಯ ಸ್ಥಾಪನೆ ಬಗ್ಗೆ ಮುಕ್ತವಾಗಿ ಚರ್ಚಿಸಲಾಗುವುದು ಎಂದರು.`ಏಷ್ಯಾದಲ್ಲಿಯೇ ಅತಿದೊಡ್ಡ ವಿ.ವಿ. ಬೆಂಗಳೂರು ವಿ.ವಿ. ಅದನ್ನು ಒಂದು ವೇಳೆ ವಿಭಜಿಸುವುದೇ ಆದರೆ ಕೋಲಾರದಲ್ಲಿ ಒಂದು ವಿಶ್ವವಿದ್ಯಾಲಯ ಮಾಡಬೇಕು' ಎಂದು ಸದಸ್ಯ ನಾರಾಯಣಸ್ವಾಮಿ ಆಗ್ರಹಿಸಿದರು.

ಇದಕ್ಕೆ ದನಿಗೂಡಿಸಿದ ಡಿ.ಎಸ್.ವೀರಯ್ಯ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಜಿಲ್ಲೆಯಾದ ಕೋಲಾರದಲ್ಲಿಯೇ ಹೊಸ ವಿ.ವಿ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿದರು. ಸದಸ್ಯ ಶಿವಯೋಗಿ ಸ್ವಾಮಿ ಕೂಡ ಇದಕ್ಕೆ ದನಿಗೂಡಿಸಿದರು.  ಮಾಜಿ ಸಚಿವ ರಾಮಚಂದ್ರೇಗೌಡರು ಮಾತನಾಡಿ, ಹೊಸದಾಗಿ ಮತ್ತೆ ಬೆಂಗಳೂರು ವಿಶ್ವವಿದ್ಯಾಲಯ ಬೇಡ. ಮಾಡುವುದಾದರೆ ಕೋಲಾರ ವಿಶ್ವವಿದ್ಯಾಲಯ, ರಾಮನಗರ ವಿಶ್ವವಿದ್ಯಾಲಯ ಹಾಗೂ ಬೆಂಗಳೂರು ವಿವಿ ಎಂದು ಮಾಡಬೇಕು.

ಬೆಂಗಳೂರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವುದರಿಂದ ಭವಿಷ್ಯದಲ್ಲಿನ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ನಗರ ಕೇಂದ್ರಿತವಾಗಿಯೇ ನಾಲ್ಕನೆ ವಿವಿಯನ್ನು ಮಾಡಬೇಕು ಎಂದು ಸಲಹೆ ಮಾಡಿದರು.ಇದಕ್ಕೆ ಉತ್ತರಿಸಿದ ಉನ್ನತ ಶಿಕ್ಷಣ ಸಚಿವರು, ಸದ್ಯಕ್ಕೆ ಹೊಸಕೋಟೆ ಬಳಿ ಬೆಂಗಳೂರು ಉತ್ತರ ವಿ.ವಿ ಮಾಡಬೇಕು ಎನ್ನುವ ಪ್ರಸ್ತಾವವಿದೆ. ಕೋಲಾರ, ರಾಮನಗರದಲ್ಲಿ ಕಡಿಮೆ ಕಾಲೇಜುಗಳಿವೆ, ಬೆಂಗಳೂರಿನಲ್ಲಿ ಹೆಚ್ಚು ಕಾಲೇಜುಗಳು ಕೇಂದ್ರಿತವಾಗಿವೆ. ಇವೆಲ್ಲವನ್ನೂ ಪರಿಶೀಲಿಸಿ ವಿ.ವಿ  ಸ್ಥಾಪನೆ ಮಾಡಲಾಗುವುದು. ಕೋಲಾರದಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಉತ್ತರಿಸಿದರು.ವೈದ್ಯರಿಗೆ `ವಾಕ್ ಇನ್ ಇಂಟರ್‌ವ್ಯೆ'!

ಸುವರ್ಣ ವಿಧಾನಸೌಧ (ಬೆಳಗಾವಿ):
ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆಯಿದ್ದು ಅವರನ್ನು ನೇಮಕ ಮಾಡಿಕೊಳ್ಳಲು `ವಾಕ್ ಇನ್ ಇಂಟರ್‌ವ್ಯೆ' ನಡೆಸಲು ಸರ್ಕಾರ ಉದ್ದೇಶಿಸಿದೆ.ವಿಧಾನ ಪರಿಷತ್‌ನಲ್ಲಿ ಸೋಮವಾರ ಸಯಾದ್ ಮಧೀರ್ ಆಗಾ, ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅರವಿಂದ ಲಿಂಬಾವಳಿ, ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ಇದೆ. 165 ತಜ್ಞರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಉಳಿದಂತೆ ಬರುವ ಜನವರಿಯಲ್ಲಿ ವೈದ್ಯರು, ಜೂನ್‌ನಲ್ಲಿ ತಜ್ಞ ವೈದ್ಯರನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ' ಎಂದರು.  ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯೆ ಮೋಟಮ್ಮ, `ತಜ್ಞ ದ್ಯರ‌್ಯಾರೂ ಸರ್ಕಾರ ನಡೆಸುವ ವಾಕ್ ಇನ್ ಸಂದರ್ಶನಕ್ಕೆ ಬರುವುದಿಲ್ಲ. ಸರ್ಕಾರ ನೀಡುವ ಸಂಬಳಕ್ಕಿಂತ ಆಕರ್ಷಕ ಸಂಬಳವನ್ನು ಖಾಸಗಿ ಆಸ್ಪತ್ರೆಗಳು ನೀಡುತ್ತವೆ. ಹೀಗಾಗಿ ನಿಮ್ಮ ಈ ಯೋಚನೆ ಫಲಕಾರಿಯಾಗುವುದಿಲ್ಲ. ಯಾರು ನಿಮಗೆ ಈ ಸಲಹೆ ಕೊಟ್ಟರು?' ಎಂದು ಲೇವಡಿ ಮಾಡಿದರು. ಅದಕ್ಕೆ ಉತ್ತರಿಸಿದ ಲಿಂಬಾವಳಿ, `ಹೊಸದಾಗಿ ವೈದ್ಯಕೀಯ ಪದವಿ ಪಡೆದ ವೈದ್ಯರು ಗ್ರಾಮೀಣ ಭಾಗದಲ್ಲಿ ಒಂದು ವರ್ಷ ಸೇವೆ ಸಲ್ಲಿಸುವುದನ್ನು ಕಡ್ಡಾಯ ಮಾಡಿ ಆದೇಶ ಹೊರಡಿಸಲಾಗಿದೆ. ಇನ್ನುಳಿದಂತೆ ತಜ್ಞ ವೈದ್ಯರಿಗೆ ತಿಂಗಳಿಗೆ ರೂ 75 ಸಾವಿರ ಸಂಬಳ ನೀಡಲು ಉದ್ದೇಶಿಸಲಾಗಿದೆ. ಆದರೂ ದೊರಕುತ್ತಿಲ್ಲ' ಎಂದರು. ರಾಜ್ಯದಲ್ಲಿ ಖಾಲಿ ಇರುವ ಸುಮಾರು 2,223 ಲ್ಯಾಬ್ ತಂತ್ರಜ್ಞರ ಹುದ್ದೆಯನ್ನು ಶೀಘ್ರವೇ ಭರ್ತಿ ಮಾಡಲಾಗುವುದು ಎಂದು ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry