ಬೆಂಗಳೂರು ವಿವಿ ಶೈಕ್ಷಣಿಕ ಪರಿಷತ್ತಿನ ಸಭೆ:ಸೌಕರ್ಯಗಳಿಲ್ಲದ ಕಾಲೇಜುಗಳು: ಸದಸ್ಯರ ಕಳವಳ

7

ಬೆಂಗಳೂರು ವಿವಿ ಶೈಕ್ಷಣಿಕ ಪರಿಷತ್ತಿನ ಸಭೆ:ಸೌಕರ್ಯಗಳಿಲ್ಲದ ಕಾಲೇಜುಗಳು: ಸದಸ್ಯರ ಕಳವಳ

Published:
Updated:
ಬೆಂಗಳೂರು ವಿವಿ ಶೈಕ್ಷಣಿಕ ಪರಿಷತ್ತಿನ ಸಭೆ:ಸೌಕರ್ಯಗಳಿಲ್ಲದ ಕಾಲೇಜುಗಳು: ಸದಸ್ಯರ ಕಳವಳ

ಬೆಂಗಳೂರು: `ಆ ಕಟ್ಟಡವೇ ಜೋಪಡಿಯಂತಿದೆ. ಕಟ್ಟಡದ ಸಾರಣೆ ಇನ್ನೂ ಪೂರ್ಣಗೊಂಡಿಲ್ಲ. ಒಳಗೆ ಪ್ರವೇಶಿಸುವಾಗಲೇ ಅಲ್ಲಲ್ಲಿ ಮಣ್ಣಿನ ರಾಶಿ, ರೀಪಿಸಿನ ತುಂಡುಗಳು ಸ್ವಾಗತಿಸುತ್ತವೆ. ಮೊದಲನೇ ಮಹಡಿಗೆ ಹೋದರೆ ಮೂರು ಕುರ್ಚಿಗಳು ಕಾಣಸಿಗುತ್ತವೆ. ಅಲ್ಲಿ ತರಗತಿ ನಡೆದಿರುವ ಕುರುಹೇ ಇಲ್ಲ. ಶೌಚಾಲಯವನ್ನಂತು ನಿರೀಕ್ಷಿಸಬೇಡಿ~.ಇದು ಕುಗ್ರಾಮದ ಯಾವುದೋ ಶಾಲೆಯ ದಯನೀಯ ಸ್ಥಿತಿ ಅಲ್ಲ, ನಗರದ ಸ್ನಾತಕೋತ್ತರ ಕೇಂದ್ರವಿರುವ ಖಾಸಗಿ ಕಾಲೇಜೊಂದರ ಪರಿಸ್ಥಿತಿ ಇದು. ಬೆಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಸ್ಥಳೀಯ ವಿಚಾರಣಾ ಸಮಿತಿ (ಎಲ್‌ಐಸಿ) ಕಾಲೇಜಿಗೆ ಭೇಟಿ ನೀಡಿದಾಗ ಕಂಡುಬಂದ ಸ್ಥಿತಿ ಇದು. ನಗರದ ಸೆಂಟ್ರಲ್ ಕಾಲೇಜಿನ ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬುಧವಾರ ನಡೆದ ವಿವಿಯ ಶೈಕ್ಷಣಿಕ ಪರಿಷತ್ ಸಭೆಯಲ್ಲಿ ಎಲ್‌ಐಸಿ ಸದಸ್ಯ ಕರಣ್ ಕುಮಾರ್ ಈ ವಿಚಾರ ಬಹಿರಂಗಪಡಿಸಿದರು.`ವಿವಿಯ ಮಾನ್ಯತೆ ಮುಂದುವರಿಸುವ ಬಗ್ಗೆ ವರದಿ ನೀಡಲು ನಾಲ್ಕು ಸದಸ್ಯರನ್ನು ಒಳಗೊಂಡ ಸಮಿತಿ 10 ದಿನಗಳ ಹಿಂದೆ ಐದು ಸ್ನಾತಕೋತ್ತರ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲಿಸಿತು. ಶೇಷಾದ್ರಿಪುರ ಕಾಲೇಜು, ಎಂಇಎಸ್ ಕಾಲೇಜು, ಮಲ್ಲೇಶ್ವರ ಲೇಡಿಸ್ ಅಸೋಸಿಯೇಶನ್ ಕಾಲೇಜು ಹಾಗೂ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಸರ್ಕಾರಿ ಕಾಲೇಜಿನಲ್ಲಿ ಸ್ನಾತಕೋತ್ತರ ವಿಭಾಗದಲ್ಲಿ ಪೂರ್ಣಕಾಲಿಕ ಉಪನ್ಯಾಸಕರು ಇಲ್ಲ.ಮಲ್ಲೇಶ್ವರದ ಮಹಾಲಕ್ಷ್ಮಿ ಅಮ್ಮಣ್ಣಿ ಕಾಲೇಜಿನಲ್ಲಿ ಶೇ 50ರಷ್ಟು ಪೂರ್ಣಕಾಲಿಕ ಉಪನ್ಯಾಸಕರು ಇದ್ದಾರೆ. ಪ್ರತಿ ಸ್ನಾತಕೋತ್ತರ ವಿಭಾಗಕ್ಕೆ ಒಬ್ಬರು ಪ್ರಾಧ್ಯಾಪಕರು, ಇಬ್ಬರು ಸಹಾಯಕ ಪ್ರಾಧ್ಯಾಪಕರು, ಮೂರು ಉಪನ್ಯಾಸಕರು ಇರಬೇಕು ಎಂಬ ನಿಯಮ ಇದೆ. ಕಾಲೇಜಿನ 40 ಮಂದಿ ಅತಿಥಿ ಉಪನ್ಯಾಸಕರು ಇದ್ದಾರೆ ಎಂಬುದಾಗಿ ದಾಖಲೆಯಲ್ಲಿ ತೋರಿಸಲಾಗಿದೆ. ನಾಲ್ಕೂ ಕಾಲೇಜಿನಲ್ಲೂ ಉಪನ್ಯಾಸಕರಿಗೆ ಯುಜಿಸಿ ನಿಗದಿಪಡಿಸಿದ ಕನಿಷ್ಠ ವೇತನ ನೀಡುತ್ತಿಲ್ಲ~ ಎಂದು ಅವರು ಬಹಿರಂಗಪಡಿಸಿದರು.`ಶೇಷಾದ್ರಿಪುರದ ಕಾಲೇಜಿನ ಕಟ್ಟಡದ ಹೊರಭಾಗಕ್ಕೆ ಆಕರ್ಷಕ ಬಣ್ಣ ಬಳಿಯಲಾಗಿದೆ. ಒಳಗಡೆ ಪ್ರವೇಶಿಸಿದರೆ ನರಕದರ್ಶನವಾಗುತ್ತದೆ. ಶೌಚಾಲಯವೇ ಇಲ್ಲ. ಈ ಕಾಲೇಜಿನಲ್ಲಿ ಕಳೆದ 16 ವರ್ಷಗಳಿಂದ ಎಂ.ಎ. ಕನ್ನಡ, ಇಂಗ್ಲಿಷ್ ವಿಭಾಗಗಳು ಕಾರ್ಯಾಚರಿಸುತ್ತಿವೆ. ಈ ಬಾರಿ ವಾಣಿಜ್ಯ ವಿಭಾಗಕ್ಕೆ ಅನುಮತಿ ಕೇಳಲಾಗಿದೆ. ಈ ಹಿಂದೆ ಹೋದ ಸಮಿತಿಗಳು ಕಣ್ಣು ಮುಚ್ಚಿ ವರದಿ ನೀಡಿವೆ~ ಎಂದು ಅವರು ಕಿಡಿಕಾರಿದರು.`ಎಂಇಎಸ್ ಕಾಲೇಜಿನಲ್ಲಿ 26 ವರ್ಷದಿಂದ ಸ್ನಾತಕೋತ್ತರ ವಿಭಾಗ ಇದೆ. ಶ್ರೀನಿವಾಸಪುರದ ಸರ್ಕಾರಿ ಕಾಲೇಜಿನಲ್ಲಿ ತರಗತಿ ಕೋಣೆ, ವಾಚನಾಲಯ ಇಲ್ಲ. ನಾವು ನೀಡುವ ವರದಿಗೆ ಬೆಲೆ ಸಿಗುತ್ತಿಲ್ಲ. ಒತ್ತಡ ತಂದು ಮಾನ್ಯತೆ ಪಡೆದುಕೊಳ್ಳುತ್ತಾರೆ. ಈ ವಿಚಾರವನ್ನು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ ಅವರ ಗಮನಕ್ಕೆ ತರಲಾಗಿದೆ. ಮಾನ್ಯತೆ ನೀಡಲು ಎಲ್‌ಐಸಿ ನೀಡುವ ವರದಿಯೇ ಅಂತಿಮ ಎಂಬ ಭರವಸೆ ನೀಡಿದ್ದಾರೆ~ ಎಂದು ಅವರು ತಿಳಿಸಿದರು.`ಮಾನ್ಯತೆ ಸಿಕ್ಕಿದೆ ಎಂಬ ಕಾರಣಕ್ಕೆ ಯಾವುದೇ ಕಾಲೇಜು ಸ್ವೇಚ್ಛಾಚಾರದಿಂದ ನಡೆದುಕೊಳ್ಳುವ ಹಾಗಿಲ್ಲ. ಮುಂದಿನ ಶೈಕ್ಷಣಿಕ ಪರಿಷತ್ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗದಿದ್ದರೆ ಸಭೆಯಿಂದ ನಿರ್ಗಮಿಸುವುದಾಗಿ ಅವರು ಎಚ್ಚರಿಸಿದರು.`ಕಾಲೇಜುಗಳ ಕೆಟ್ಟ ಸ್ಥಿತಿಯ ಬಗ್ಗೆ 10 ವರ್ಷಗಳ ಹಿಂದೆಯೇ ಎಚ್ಚರಿಸಿದ್ದೆ. ಈಗಲೂ ಪರಿಸ್ಥಿತಿಯಲ್ಲಿ ಸುಧಾರಣೆ ಆಗಿಲ್ಲ~ ಎಂದು ಮಂಡಳಿ ಸದಸ್ಯ ರಾಮಚಂದ್ರ ಸ್ವಾಮಿ ಬೇಸರ ವ್ಯಕ್ತಪಡಿಸಿದರು. `ಮೂರು ತಿಂಗಳಿಂದ ಶೈಕ್ಷಣಿಕ ಪರಿಷತ್ ಸಭೆಯೇ ನಡೆದಿಲ್ಲ. ಕಳೆದ ಸಭೆಯನ್ನು ಮುಂದೂಡಲಾಗಿದೆ. ವಿದ್ಯಾರ್ಥಿನಿ ಆತ್ಮಹತ್ಯೆ ಸೇರಿದಂತೆ ಹಲವಾರು ಗಂಭೀರ ವಿಚಾರಗಳು ಚರ್ಚೆಗೆ ಬಾಕಿ ಇವೆ~ ಎಂದು ಸದಸ್ಯ ಕರುಣಾಮೂರ್ತಿ ಗಮನ ಸೆಳೆದರು.ಅಭಿಪ್ರಾಯಗಳುಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ಮಂಡಳಿ ಸಭೆ ಸಂಖ್ಯೆ ಬಹಳ ಕಡಿಮೆ ಆಗಿದೆ. ಚರ್ಚೆಗೆ ಸಾಕಷ್ಟು ಗಂಭೀರವಾದ ವಿಚಾರಗಳು ಇವೆ. ಕಳೆದ ಬಾರಿಯ ಸಭೆಯನ್ನು ಮುಂದೂಡಲಾಗಿತ್ತು. ಸಭೆ ನಿರಂತರವಾಗಿ ನಡೆಯಬೇಕು. ವರ್ಷಕ್ಕೆ 10 ಶೈಕ್ಷಣಿಕ ಪರಿಷತ್ ಸಭೆಗಳು ನಡೆಯಬೇಕು.

 ಕರಣ್ ಕುಮಾರ್,  ಶೈಕ್ಷಣಿಕ ಮಂಡಳಿ ಸದಸ್ಯವರ್ಷಕ್ಕೆ ನಾಲ್ಕು ಸಭೆಗಳನ್ನು ನಡೆಸಲು ಮಾತ್ರ ವಿವಿ ಕಾನೂನಿನಲ್ಲಿ ಅವಕಾಶ ಇದೆ. 10 ಸಭೆಗಳನ್ನು ನಡೆಸಲು ಸಾಧ್ಯವೇ ಇಲ್ಲ. ಕಳೆದ 2-3 ತಿಂಗಳಲ್ಲಿ ನಡೆದಿರುವ ವಿದ್ಯಮಾನ ಎಲ್ಲರಿಗೂ ಗೊತ್ತಿದೆ~.

 ಡಾ.ಎನ್.ಪ್ರಭುದೇವ್, ಕುಲಪತಿ20 ದಿನಗಳಲ್ಲಿ ವರದಿ

`ವಿವಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಲೆಕ್ಕಪರಿಶೋಧನೆ ಆರಂಭಗೊಂಡಿದ್ದು, 20 ದಿನಗಳಲ್ಲಿ ವರದಿ ಸಿದ್ಧವಾಗಲಿದೆ~ ಎಂದು ಕುಲಸಚಿವ ಡಾ.ಬಿ.ಸಿ. ಮೈಲಾರಪ್ಪ ತಿಳಿಸಿದರು.ಬುಧವಾರ ಇಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿ, `ರೂ 20 ಕೋಟಿ ಅವ್ಯವಹಾರ ನಡೆದಿರುವ ಶಂಕೆ ಇದೆ. ಪರೀಕ್ಷಾ ವಿಭಾಗದಲ್ಲೇ ಭಾರಿ ಪ್ರಮಾಣದ ಅವ್ಯವಹಾರ ನಡೆದಿದೆ~ ಎಂದು ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry