ಮಂಗಳವಾರ, ಆಗಸ್ಟ್ 3, 2021
26 °C

ಬೆಂಗಳೂರು ವಿಶ್ವವಿದ್ಯಾಲಯದ ವಿಭಜನೆ ಅನಿವಾರ್ಯ

-ಡಾ.ಎಂ.ಆರ್. ದೊರೆಸ್ವಾಮಿ,ಬೆಂಗಳೂರು Updated:

ಅಕ್ಷರ ಗಾತ್ರ : | |

ಬೆಂಗಳೂರು ವಿಶ್ವವಿದ್ಯಾಲಯವು ಸದಾ ತೊಡಕುಗಳು ಮತ್ತು ಗೊಂದಲಗಳಿಂದ ಕೂಡಿರುವುದಕ್ಕೆ ಮುಖ್ಯ ಕಾರಣ ಅದಕ್ಕೆ ಸಂಯೋಜಿತವಾಗಿರುವ ನಿರ್ವಹಿಸಲಾಗದಷ್ಟು  620 ಕ್ಕೂ ಹೆಚ್ಚು ಕಾಲೇಜುಗಳು ಹಾಗೂ 6 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಸಂಖ್ಯೆಯೇ ಆಗಿದೆ.  ಹಿಂದಿನ ಸರ್ಕಾರವು ತೆಗೆದುಕೊಂಡಿದ್ದ ನಿರ್ಧಾರವು ಆತುರದ್ದಾಗಿರದೆ ಹಲವಾರು ಶಿಕ್ಷಣ ತಜ್ಞರುಗಳನ್ನೊಳಗೊಂಡ ಸಮಿತಿಗಳ ಸಲಹೆ ಸೂಚನೆಗಳನ್ನು ಒಳಗೊಂಡಿದೆ.ಪ್ರಧಾನ ಮಂತ್ರಿಗಳ ಆದೇಶದ ಮೇಲೆ ಸ್ಯಾಂ ಪಿತ್ರೊಡ ಅವರ ನಿರ್ದೇಶನದಲ್ಲಿ ರಚಿತವಾದ knowledge commission ಕೂಡ ಇದನ್ನೇ ಪ್ರತಿಪಾದಿಸಿದೆ. ಉನ್ನತ ಶಿಕ್ಷಣದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಹೆಚ್ಚು ಹೆಚ್ಚು ವಿಶ್ವವಿದ್ಯಾಲಯಗಳ ಅವಶ್ಯಕತೆಯನ್ನು ಎತ್ತಿ ಹಿಡಿದಿದೆ.  ಇದರ ಪ್ರಕಾರ ಯಾವುದೇ ವಿಶ್ವವಿದ್ಯಾಲಯವು ಸುಮಾರು 150ಕ್ಕೂ ಹೆಚ್ಚು ಕಾಲೇಜುಗಳನ್ನು ನಿರ್ವಹಿಸಬಾರದು.ಇದೇ ರೀತಿಯಲ್ಲಿ ಡಾ. ರುದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ರಚಿತವಾದ ಸಮಿತಿ ಸಹ ವಿಶ್ವವಿದ್ಯಾಲಯಗಳ ಗಾತ್ರವನ್ನು ಕಡಿಮೆ ಮಾಡಬೇಕೆಂದು ಶಿಫಾರಸು ಮಾಡಿದೆ. ಅಲ್ಲದೆ ಈ ಸಮಿತಿಯು ಬೆಂಗಳೂರು ವಿಶ್ವವಿದ್ಯಾಲಯವನ್ನು ಮೂರು ಬೇರೆ ಬೇರೆ ವಿಶ್ವವಿದ್ಯಾಲಯಗಳನ್ನಾಗಿ ವಿಂಗಡಿಸಬೇಕೆಂದು ಸೂಚಿಸಿದೆ.ನಂತರ ಉನ್ನತ ಶಿಕ್ಷಣ ಪರಿಷತ್ತು ಇದನ್ನು ಪರಿಶೀಲಿಸಿ ಇದರ ಅನುಷ್ಠಾನಗೊಳಿಸಲು ಅನುಮೋದನೆ ನೀಡಿದೆ. ಪರಿಷತ್ತು ತನ್ನ ಶಿಫಾರಸಿನಲ್ಲಿ ಬೆಂಗಳೂರು  ವಿಶ್ವವಿದ್ಯಾಲಯವನ್ನು ಬೆಂಗಳೂರಿನಲ್ಲಿರುವ ಕಾಲೇಜುಗಳಿಗೆ ಮಾತ್ರ ಸೀಮಿತಗೊಳಿಸಿ ಉಳಿದ ಪ್ರದೇಶಗಳಾದ ಕೋಲಾರ, ಚಿಕ್ಕಬಳ್ಳಾಪುರ, ಹೊಸಕೋಟೆ ಹಾಗೂ ದೊಡ್ಡಬಳ್ಳಾಪುರ ಕಾಲೇಜುಗಳನ್ನು ಭೌಗೋಳಿಕ ಆಧಾರದ ಮೇಲೆ ಒಗ್ಗೂಡಿಸಿ ಡಿವಿಜಿ ವಿಶ್ವವಿದ್ಯಾಲಯವೆಂದು ಪರಿಗಣಿಸಿ, ಹಿಂದಿನಿಂದಲೂ ಇರುವ ಬೆಂಗಳೂರು ವಿಶ್ವವಿದ್ಯಾಲಯದ ಹೆಸರನ್ನು ಹಾಗೆಯೇ ಉಳಿಸಿಕೊಳ್ಳಬೇಕೆಂದು ಸೂಚಿಸಿತ್ತು. ಬೆಂಗಳೂರು ವಿಶ್ವವಿದ್ಯಾಲಯವು ವಿಭಜನೆಗೊಳ್ಳಬೇಕೆಂಬ ಸರ್ಕಾರದ ನಿರ್ಧಾರ ಇವುಗಳೆಲ್ಲದರ ಅಂತಿಮ ಫಲಿತಾಂಶವಾಗಿದೆ.ಹಿಂದಿನ ಸರ್ಕಾರದ ಈ ನಿರ್ಧಾರವು ಯಾವುದೇ ಪೂರ್ವಗ್ರಹದಿಂದ ಕೂಡಿಲ್ಲ. ಉನ್ನತ ಶಿಕ್ಷಣದ ಗುಣಮಟ್ಟದ ವಿಷಯದಲ್ಲಿ ಈಗಿನ ಸರ್ಕಾರವು ಮುಕ್ತ ಮನಸ್ಸಿನಿಂದ ಮುಂದುವರೆದು ರಾಜ್ಯಪಾಲರು ತೆಗೆದುಕೊಂಡಿರುವ ಆತುರದ ನಿರ್ಧಾರವನ್ನು ಪುನರ್‌ಪರಿಶೀಲಿಸಿ ಹಿಂದಿನ ಸರ್ಕಾರದ ಪ್ರಗತಿಪರ ನಿರ್ಧಾರವನ್ನು ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕು.  ಹಿಂದಿನ ಸರ್ಕಾರದ ನಿರ್ಧಾರವನ್ನು ಸಾರಾಸಗಟಾಗಿ ತೆಗೆದುಹಾಕುವ ಬದಲು ಬೆಂಗಳೂರು ವಿಶ್ವವಿದ್ಯಾಲಯವನ್ನು ಕನಿಷ್ಠ ಎರಡು ವಿಶ್ವವಿದ್ಯಾಲಯಗಳನ್ನಾಗಿ ವಿಭಜಿಸಬೇಕು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.