ಬುಧವಾರ, ನವೆಂಬರ್ 20, 2019
25 °C
ದಿಗಿಲು ಹುಟ್ಟಿಸುವ ಪ್ಲಾಸ್ಟಿಕ್ ತ್ಯಾಜ್ಯ, `ಸುಪ್ರೀಂ' ಕಳವಳ

ಬೆಂಗಳೂರು ಸೇರಿ 6 ಪಾಲಿಕೆಗಳಿಗೆ ನೋಟಿಸ್

Published:
Updated:

ನವದೆಹಲಿ (ಪಿಟಿಐ): ದೇಶದಲ್ಲಿ ಹೆಚ್ಚುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯದ ಕುರಿತು ತೀವ್ರ ಕಳವಳವ್ಯಕ್ತಪಡಿಸಿರುವ ಸುಪ್ರೀಂಕೊರ್ಟ್, ತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣೆ ವೈಫಲ್ಯದ ಹಿನ್ನೆಲೆಯಲ್ಲಿ ಬೆಂಗಳೂರು, ದೆಹಲಿ, ಚೆನ್ನೈ, ಆಗ್ರಾ, ಜೈಪುರ ಹಾಗೂ ಫರೀದಾಬಾದ್ ಪೌರಸಂಸ್ಥೆ, ಪಾಲಿಕೆಗಳ ಆಯುಕ್ತರಿಗೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ನೋಟಿಸ್ ಜಾರಿಮಾಡಲು ಕೇಂದ್ರಕ್ಕೆ ಸೂಚಿಸಿದೆ.ಬೃಹದಾಕಾರವಾಗಿ ಬೆಳೆದ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ `ದಿಗಿಲು ಹುಟ್ಟಿಸುವಂತದ್ದು' ಎಂದಿರುವ ನ್ಯಾಯಮೂರ್ತಿ ಜಿ.ಎಸ್. ಸಿಂಘ್ವಿ ನೇತೃತ್ವದ ಪೀಠ, ಕೇಂದ್ರ ಹಾಗೂ ಎಲ್ಲ ರಾಜ್ಯಗಳ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೂ ನೋಟಿಸ್ ನೀಡಲು ಸೂಚಿಸಿದೆ.  ಪ್ರತಿದಿನ 15,342 ಟನ್ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗುತ್ತಿದೆ ಎನ್ನುವ ಕೇಂದ್ರದ ವರದಿಯ ಹಿನ್ನೆಲೆಯಲ್ಲಿ ಇದರ ನಿರ್ವಹಣೆ ಹಾಗೂ ವಿಲೇವಾರಿಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಕುರಿತು ನಾಲ್ಕು ವಾರದೊಳಗೆ ಉತ್ತರ ನೀಡಲು ಕೋರ್ಟ್ ತಿಳಿಸಿದೆ.ಪ್ರತಿದಿನ ಸಂಗ್ರಹವಾಗುವ ಪ್ಲಾಸ್ಟಿಕ್ ತ್ಯಾಜ್ಯದಲ್ಲಿ ಶೇ 40ರಷ್ಟು ವಿಲೇವಾರಿ ಆಗುವುದೇ ಇಲ್ಲ ಹಾಗಾಗಿ ಇಂತಹ ಕಸ ಅಲ್ಲಲ್ಲಿ ಗುಡ್ಡೆಯಾಗಿ ಬಿದ್ದಿರುತ್ತದೆ ಎಂದು ಕೇಂದ್ರ ಪೀಠಕ್ಕೆ ತಿಳಿಸಿದೆ.`ಕೇಂದ್ರದ ಈ ಮಾಹಿತಿ ಗಮನಿಸಿದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ ಭೀತಿಹುಟ್ಟಿಸುವಂತಾಗಿದ್ದು ಇದರ ಪರಿಣಾಮ ಈ ಪೀಳಿಗೆಯವರಿಗಷ್ಟೆ ಅಲ್ಲ ಮುಂದಿನ ಪೀಳಿಗೆಗೂ ತಟ್ಟದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ' ಎಂದಿದೆ.`ತ್ಯಾಜ್ಯ ವಿಲೇವಾರಿಗೆ ಯಾವ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ವರದಿಯನ್ನು ನೀಡುವಂತೆ ಕೇಂದ್ರ ಹಾಗೂ ರಾಜ್ಯಗಳ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಲಾಗಿದೆ' ಎಂದು ಪೀಠ ತಿಳಿಸಿದೆ.ಬೆಂಗಳೂರು, ದೆಹಲಿ, ಚೆನ್ನೈ, ಆಗ್ರಾ, ಜೈಪುರ ಹಾಗೂ ಫರೀದಾಬಾದ್ ನಗರಗಳಲ್ಲಿಯ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ಮೊದಲು ಪರಿಶೀಲಿಸಿ ನಂತರ ಸಂಬಂಧಿಸಿದ ಪಾಲಿಕೆ ಆಯುಕ್ತರಿಗೆ ನೋಟಿಸ್ ಜಾರಿಮಾಡಲು ಪೀಠ ಸೂಚಿಸಿದೆ.

`ದೇಶದ 60 ಪ್ರಮುಖ ನಗರಗಳಲ್ಲಿ ಕೈಗೊಂಡ ಸಮೀಕ್ಷೆಯ ಪ್ರಕಾರ ಪ್ರತಿ ದಿನ ಸುಮಾರು 15,342.46 ಟನ್ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಇದರಲ್ಲಿ 9205 ಟನ್ ತ್ಯಾಜ್ಯ ಪುನರ್ಬಳಕೆಯಾಗುತ್ತಿದೆ.ಉಳಿದ 6137 ಟನ್ ತ್ಯಾಜ್ಯ ಅಲ್ಲೇ ಉಳಿದು ಮಾಲಿನ್ಯಕ್ಕೆ ಕಾರಣವಾಗುತ್ತಿದೆ' ಎಂದು ಕೇಂದ್ರವು ಪೀಠಕ್ಕೆ ಮಾಹಿತಿ ನೀಡಿದೆ.

ಪ್ರತಿಕ್ರಿಯಿಸಿ (+)