ಶನಿವಾರ, ಜುಲೈ 31, 2021
25 °C

ಬೆಂಗಳೂರು ಸ್ಕೂಲ್ ಆಫ್ ಎಕನಾಮಿಕ್ಸ್ ಸ್ಥಾಪನೆಗೆ ಅಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬೆಂಗಳೂರು ಸ್ಕೂಲ್ ಆಫ್ ಎಕನಾಮಿಕ್ಸ್’ (ಬಿಎಸ್‌ಇ) ಸಂಸ್ಥೆಯನ್ನು ಅಸ್ತಿತ್ವಕ್ಕೆ ತರಲು ಬೆಂಗಳೂರು ವಿಶ್ವವಿದ್ಯಾಲಯ ಮುಂದಾಗಿದ್ದು, ಮುಂದಿನ  ಶೈಕ್ಷಣಿಕ ವರ್ಷದಿಂದಲೇ ಆರಂಭಿಸುವ ನಿಟ್ಟಿನಲ್ಲಿ ಕಟ್ಟಡ ನಿರ್ಮಿಸಲು ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ವು 100 ಎಕರೆ ಜಮೀನು ಮಂಜೂರು ಮಾಡಬೇಕು’ ಎಂದು ಮನವಿ ಮಾಡುವುದು ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಮಂಗಳವಾರ ನಡೆದ ಅಕಾಡೆಮಿಕ್ ಕೌನ್ಸಿಲ್ ಸಭೆ ನಿರ್ಧಾರಗಳನ್ನು ಕೈಗೊಂಡಿತು.ಬಿಎಸ್‌ಇ ಸ್ಥಾಪನೆಗೆ 100 ಎಕರೆ ಜಮೀನು ಅಗತ್ಯವಿದ್ದು, ಬಿಡಿಎ ಆಯುಕ್ತ ಭರತ್‌ಲಾಲ್ ಮೀನಾ ಅವರಿಗೆ ಪತ್ರ ಬರೆದ ಬಗ್ಗೆಯೂ ಡಾ. ಎನ್. ಪ್ರಭುದೇವ್ ಸಭೆಯ ಗಮನಕ್ಕೆ ತಂದರು.ಒಂದು ಅಂದಾಜಿನಂತೆ ಯೋಜನೆಗೆ 25 ಕೋಟಿ ರೂಪಾಯಿ ಅಗತ್ಯವಿದ್ದು, ಈ ಬಗ್ಗೆ ಜಿಂದಾಲ್ ಕಂಪೆನಿ ಮುಖ್ಯಸ್ಥ ಸೀತಾರಾಮ್ ಅವರಿಗೆ ಪತ್ರ ಮುಖೇನ ಮನವಿ ಮಾಡಿದಾಗ, ಅವರು 10 ಕೋಟಿ ರೂಪಾಯಿ ನೀಡಲು ಒಪ್ಪಿದ್ದಾರೆ. ಆದರೆ ‘ಸೀತಾರಾಮ್ ಜಿಂದಾಲ್ ಸ್ಕೂಲ್ ಆಫ್ ಎಕನಾಮಿಕ್ಸ್’ ಎಂದು ನಾಮಕರಣ ಮಾಡುವ ಷರತ್ತು ಹಾಕಿದ್ದಾರೆ. ಆದರೆ ಬೆಂಗಳೂರು ಸ್ಕೂಲ್ ಆಫ್ ಎಕನಾಮಿಕ್ಸ್ ಎಂದೇ ನಾಮಕರಣ ಮಾಡುವುದು. ಆದರೆ ಜಿಂದಾಲ್ ಹೆಸರನ್ನು ಒಂದು ಬ್ಲಾಕ್‌ಗೆ ನಾಮಕರಣ ಕುರಿತು ಅವರಿಗೆ ಮನವರಿಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.ಕಾಲೇಜುಗಳ ಸಂಯೋಜನೆ ರದ್ದು: ಸ್ಥಳೀಯ ವಿಚಾರಣಾ ಸಮಿತಿ (ಎಲ್‌ಐಸಿ)ಗಳ ಶಿಫಾರಸಿನ ಮೇರೆಗೆ ಮೂಲಸೌಕರ್ಯವಿರದ ಹಲವು ಕಾಲೇಜುಗಳ ಸಂಯೋಜನೆ ರದ್ದು, ನೂತನ ಕೋರ್ಸುಗಳ ಸಂಯೋಜನೆ, ವಿದ್ಯಾರ್ಥಿಗಳ ಪ್ರಮಾಣದ ಹೆಚ್ಚಳ, ಶಾಶ್ವತ ಸಂಯೋಜನೆ, ಶಾಶ್ವತ ಸಂಯೋಜನೆಯ ನವೀಕರಣಗಳ ಕುರಿತು ಎಲ್‌ಐಸಿಗಳು ನೀಡಿದ ಶಿಫಾರಸುಗಳಲ್ಲಿ ಕೆಲವನ್ನು ತಡೆ ಹಿಡಿದು, ಉಳಿದವಕ್ಕೆ ಅನುಮೋದನೆ ನೀಡಲಾಯಿತು.ಯಾವುದು ಮಾನದಂಡ? ಬೆಂಗಳೂರು ವಿವಿ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಪಿ.ಎಸ್. ಜಯರಾಮು ಅಧ್ಯಕ್ಷರಾಗಿರುವ ಸ್ಥಳೀಯ ವಿಚಾರಣಾ ಸಮಿತಿಯು ಹೊಮ್ಮದೇವನಹಳ್ಳಿಯ ಶ್ರೀನಿಧಿ ಮಹಿಳಾ ಶಿಕ್ಷಣ ಕಾಲೇಜು ಮೂಲಸೌಕರ್ಯ ಹೊಂದಿರದೇ ಇದ್ದರೂ, ಮರು ನವೀಕರಣ ಮಾಡಲು ಶಿಫಾರಸು ಮಾಡಿದ್ದನ್ನು ಸದಸ್ಯ ಕರುಣಾಮೂರ್ತಿ ಆಕ್ಷೇಪಿಸಿದರು.ಈ ವರ್ಷ ಇದೊಂದು ಅವಕಾಶ ನೀಡಬಹುದು ಎಂದು ಸಮಿತಿ ಅಧ್ಯಕ್ಷರು ಸಮಜಾಯಿಷಿ ನೀಡುತ್ತಿದ್ದಂತೆ, ಡಾ.ಪ್ರಭುದೇವ್ ಮಧ್ಯಪ್ರವೇಶಿಸಿ ಪ್ರತಿವರ್ಷ ‘ಇದೇ ಮಾತು ಹೇಳಿಯೇ ಹಲವು ವರ್ಷಗಳಿಂದ ನವೀಕರಣ ನೀಡಲಾಗುತ್ತಿದೆ’ ಎಂದು ಆಕ್ಷೇಪಿಸಿದರಲ್ಲದೇ, ‘ಒಬ್ಬನೇ ಒಬ್ಬ ವಿದ್ಯಾರ್ಥಿಯೂ ಪ್ರವೇಶ ಪಡೆಯದ 127 ಕಾಲೇಜುಗಳು ವಿವಿಯೊಂದಿಗೆ ಸಂಯೋಜನೆ ಹೊಂದಿವೆ ಇದು ಹೇಗೆ ಸಾಧ್ಯ’ ಎಂದು ಆಕ್ಷೇಪಿಸಿದರು. 5 ವರ್ಷಗಳಷ್ಟು ಹಳೆಯ ಕಾಲೇಜುಗಳು ನ್ಯಾಕ್ ಮಾನ್ಯತೆ ಪಡೆದಿದ್ದರೆ ನವೀಕರಣ ಮಾಡಬೇಕು ಎಂಬ ಸಲಹೆ ನೀಡಿದರೂ ಆ ವಿಷಯ ಗೊಂದಲದಲ್ಲೇ ಅಂತ್ಯವಾಯಿತು.ಸಾಧಕರಿಗೆ ಚಿನ್ನದ ಪದಕ: ಸಾಧಕರ ಜೀವಮಾನದ ಸಾಧನೆಗಳನ್ನು ಗುರುತಿಸಿ ‘ಬೆಂಗಳೂರು ವಿವಿ ಚಿನ್ನದ ಪದಕ’ ನೀಡಲು ಸಭೆ ನಿರ್ಧರಿಸಿತು. ಸಾಧಕರನ್ನು ಗುರುತಿಸಲು ಕುಲಪತಿ ಅಧ್ಯಕ್ಷರಾಗಿರುವ ಮತ್ತು ಹಿರಿಯ ನಾಟಕಕಾರ ಡಾ.ಚಂದ್ರಶೇಖರ ಕಂಬಾರ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ ಹಾಗೂ ಕವಿ ಜರಗನಹಳ್ಳಿ ಶಿವಶಂಕರ್ ಅವರು ಸದಸ್ಯರಾಗಿರುವ ಸಮಿತಿಯನ್ನು ರಚಿಸಲು ಸಭೆ ಸಮ್ಮತಿಸಿತು.ಈಚೆಗೆ ನಡೆದ 46ನೇ ಘಟಿಕೋತ್ಸವದಲ್ಲಿ 20 ಚಿನ್ನದ ಪದಕಗಳು ಉಳಿದಿದ್ದು, ಅವುಗಳನ್ನು ಗಣ್ಯರಿಗೆ ಪ್ರದಾನ ಮಾಡಲು ಒಪ್ಪಿಗೆ ಸೂಚಿಸಿತು. ಆದರೆ ಪ್ರತಿ ತಿಂಗಳು ಒಬ್ಬರಿಗೆ ಪದಕ ನೀಡುವುದು ವಿವಿಗೆ ಹೊರೆ ಎಂಬ ಆಕ್ಷೇಪವೂ ವ್ಯಕ್ತವಾಯಿತು. ಸದಸ್ಯ ಕರಣ್‌ಕುಮಾರ್ ಮಧ್ಯ ಪ್ರವೇಶಿಸಿ ಮೂರು ವರ್ಷಗಳವರೆಗೆ 36 ಪದಕಗಳನ್ನು ಪ್ರಾಯೋಜಿಸುವುದಾಗಿ ಘೋಷಿಸಿದರು. ಸಭೆ ಇದನ್ನು ಒಮ್ಮತದಿಂದ ಅಂಗೀಕರಿಸಿತು.ಕಾಲೇಜು ಅವ್ಯವಹಾರಗಳ ತನಿಖೆ

ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿದ್ದು, ಪ್ರಾಂಶುಪಾಲರೂ ಸೇರಿದಂತೆ ಹಲವಾರು ಬೋಧಕ ಸಿಬ್ಬಂದಿ ಬಿಡುಗಡೆಯಾದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಕಾಲೇಜಿನ ವಿವಿಧ ವಿಭಾಗದ ವಿದ್ಯಾರ್ಥಿಗಳು ಕುಲಪತಿಗೆ ಬರೆದ ಪತ್ರವನ್ನು ಆಧರಿಸಿ ಹಾಗೂ ಎಸ್‌ಎಂಎಸ್‌ಜಿ ಜೈನ್ ಕಾಲೇಜಿನ ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಎನ್.ಕೆ.ರಂಗನಾಥ್ ವಿರುದ್ಧ ವಿದ್ಯಾರ್ಥಿಯೊಬ್ಬ ಬರೆದ ಪತ್ರವನ್ನು ಆಧರಿಸಿ ತನಿಖೆ ಕೈಗೆತ್ತಿಕೊಳ್ಳಲು ಸಭೆ ನಿರ್ಧರಿಸಿತು.ಸದಸ್ಯರು ಇಲ್ಲದೇ ವರದಿ ಸಲ್ಲಿಕೆ!


ಸ್ಥಳೀಯ ವಿಚಾರಣಾ ಸಮಿತಿಯೊಂದರ ಅಧ್ಯಕ್ಷ ಡಾ.ಎ.ಎಸ್.ರಾಯಮಾನೆ ಅವರು ಕಾಲೇಜುಗಳನ್ನು ಸರಿಯಾಗಿ ಪರಿಶೀಲಿಸದೇ ನಗರದ ಆದಿತ್ಯ ಸಂಜೆ ಕಾಲೇಜು, ಜ್ಞಾನಜ್ಯೋತಿ ಸಂಜೆ ಕಾಲೇಜು, ಫಾಲ್ಕನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಡಯಾನಾ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಕಾಲೇಜುಗಳ ಸಂಯೋಜನೆಗೆ ಶಿಫಾರಸು ಮಾಡಿದ್ದಾರೆ.ಆದರೆ ಈ ಶಿಫಾರಸಿಗೆ ಸಹಿ ಮಾಡಿಲ್ಲ. ಸ್ವತಂತ್ರ ಸಮಿತಿಯನ್ನು ನೇಮಕ ಮಾಡಿ ಈ ಕಾಲೇಜುಗಳಿಗೆ ಕಳುಹಿಸಬೇಕು. ಅಲ್ಲಿಯವರೆಗೆ ಈ ಶಿಫಾರಸನ್ನು ತಡೆಹಿಡಿಯಬೇಕು ಎಂದು ಸದಸ್ಯ ಬಾಬುರಾವ್ ಪಟ್ಟು ಹಿಡಿದರು. ಸಾಕಷ್ಟು ಚರ್ಚೆಯ ಬಳಿಕ ಸಭೆ ಈ ಸಲಹೆಗೆ ಒಪ್ಪಿಗೆ ಸೂಚಿಸಿತು. ಕಾಲೇಜೊಂದನ್ನು ಪರಿಶೀಲಿಸಲು ಕೇವಲ 15 ನಿಮಿಷ ಸಮಯವನ್ನು ಮಾತ್ರ ಸಮಿತಿ ತೆಗದುಕೊಳ್ಳುತ್ತಿತ್ತು. ಇಷ್ಟು ಕಡಿಮೆ ಸಮಯದಲ್ಲಿ ಪರಿಶೀಲನೆ ಹೇಗೆ ಸಾಧ್ಯ ಎಂದು ಪ್ರಶ್ನಿಸುವ ಮೂಲಕ ವಿಚಾರಣಾ ಸಮಿತಿಗಳ ಕಾರ್ಯವೈಖರಿಯನ್ನೂ ಪರೋಕ್ಷವಾಗಿ ಬಹಿರಂಗಪಡಿಸಿದರು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.