ಬೆಂಗ್ಳೂರಿ-ಜಪಾನಿ ಭಾಯಿ ಭಾಯಿ!

7

ಬೆಂಗ್ಳೂರಿ-ಜಪಾನಿ ಭಾಯಿ ಭಾಯಿ!

Published:
Updated:

ಅಂದು ಜ್ಞಾನ ಜ್ಯೋತಿ ಸಭಾಂಗಣ ಮಿನಿ ಜಪಾನ್ ಎನ್ನುವಷ್ಟು ಪರಿವರ್ತಿತವಾಗಿತ್ತು. ಎತ್ತ ನೋಡಿದರೂ ಜಪಾನಿನ ಸಾಂಪ್ರದಾಯಿಕ ಕಿಮೊನೊ ಉಡುಗೆಗಳಲ್ಲಿ ಮಿಂಚುತ್ತಿದ್ದ ಮಹಿಳೆಯರು. ಕೆಲವು ಪುಟಾಣಿಗಳು ಮಾಸ್ಕ್ ಧರಿಸಿಕೊಂಡು ಸಂಭ್ರಮಿಸುತ್ತಿರುವಾಗಲೇ ಜಪಾನಿ ಮಹಿಳೆಯೊಬ್ಬರು ಕನ್ನಡದ ಹಾಡು ಹಾಡಿದಾಗ ಅಲ್ಲಿದ್ದವರಿಗೆಲ್ಲ ಅಚ್ಚರಿ. ಖಾಂಜಿ ಮೆಹಂದಿ (ಸಾಂಪ್ರದಾಯಿಕ ಮೆಹಂದಿ) ಹಾಕಿಸಿಕೊಳ್ಳುವಲ್ಲಿ ತ್ಲ್ಲಲೀನರಾಗಿದ್ದ ಚಿಣ್ಣರು ಒಂದು ಕಡೆ. ಜಪಾನಿನ ಸಾಂಪ್ರದಾಯಿಕ ಖಾದ್ಯದ ರುಚಿ ನೋಡುವಲ್ಲಿ ಬ್ಯುಸಿಯಾಗಿದ್ದ ಪುರುಷರು ಇನ್ನೊಂದು ಕಡೆ. `ಜಪಾನಿ ಟೀಚರ್ಸ್‌ ಅಸೋಸಿಯೇಷನ್~ ಆಯೋಜಿಸಿದ್ದ `ಜಪಾನಿ ಹಬ್ಬ~ ವರ್ಣರಂಜಿತವಾಗಲು ಇನ್ನೇನು ಬೇಕು?ರಸಪ್ರಶ್ನೆ ಕಾರ್ಯಕ್ರಮದ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ಇದಾದ ನಂತರ ಕರೋಕೆ ಸ್ಪರ್ಧೆ. ಭಾರತೀಯ ಮೂಲದವರು ಜಪಾನಿ ಹಾಡುಗಳನ್ನು ಹಾಡಲು ಪ್ರಯತ್ನಪಟ್ಟರೆ, ಕೆಲವು ಜಪಾನಿಯರು ತಾವೇನೂ ಕಡಿಮೆ ಇಲ್ಲ ಎಂಬಂತೆ ಕನ್ನಡ ಹಾಡುಗಳನ್ನು ಹಾಡಿ ನೋಡುಗರನ್ನು ರಂಜಿಸಿದರು.ಸ್ಪರ್ಧೆಯಲ್ಲಿ ಭಾಗವಹಿಸಲು ಬಂದಿದ್ದ ಜಪಾನಿ ಮೂಲದ ಕಜೂಮಾಸ್ ಕಬೂಕಿ ಅವರ ಪ್ರಕಾರ `ಯಾವುದೇ ಸ್ಥಳೀಯ ವ್ಯಕ್ತಿಯೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಬೇಕಾದರೆ ಆದಷ್ಟೂ ಅವರ ಮಾತೃಭಾಷೆಯ ಮೂಲಕ ಸಂವಹನ ನಡೆಸುವ ಅಗತ್ಯವಿದೆ. ಜಪಾನಿ ಭಾಷೆಗೂ ಕನ್ನಡ ಭಾಷೆಗೂ ಸ್ವಲ್ಪ ಹೋಲಿಕೆ ಇರುವುದರಿಂದ ಕನ್ನಡ ಕಲಿಯಲು ಅಷ್ಟು ಕಷ್ಟ ಅನಿಸಲಿಲ್ಲ~ ಎನ್ನುವುದು ಅವರ ಅಭಿಪ್ರಾಯ.ಈ ಹಬ್ಬದ ಹೈಲೈಟ್ ಆಗಿದ್ದು ಒರಿಗಮಿ ( ಸಾಂಪ್ರದಾಯಿಕ ಪೇಪರ್ ಸುತ್ತುವ ಕಲೆ). ಸಭಾಂಗಣವನ್ನು ಒರಿಗಮಿ ಕಲೆಯಿಂದಲೇ ಅಲಂಕರಿಸಲಾಗಿತ್ತು. ಅನೇಕ ಭಾರತೀಯ ಮೂಲದವರು ಈ ಕಲೆಯನ್ನು ಕಲಿತು ಅಲ್ಲಿ ಸಜ್ಜುಗೊಳಿಸಿದ್ದು ಆಕರ್ಷಕವಾಗಿತ್ತು.ಈ ಸಂಭ್ರಮದಲ್ಲಿ ಎಲ್ಲರೊಳಗೊಂದಾಗಿದ್ದ ಸುಜಾತಾ, `ಈ ಹಬ್ಬದಲ್ಲಿ ಹೆಚ್ಚು ಸಂವಹನಕ್ಕೆ ಅವಕಾಶವಿತ್ತು. ನೋಡಿ, ಕೇಳಿ ತಿಳಿಯಲು, ಕಲಿಯಲು ಸಾಕಷ್ಟು ಅವಕಾಶಗಳು ಇಲ್ಲಿದ್ದವು. ನನಗಂತೂ ಇಲ್ಲಿ ಭಾಗವಹಿಸಿದ್ದು ತುಂಬಾ ಸಂತೋಷ ತಂದಿದೆ~ ಎಂದರು.ಜಪಾನೀಯರು ಬಾಲಿವುಡ್ ನೃತ್ಯಕ್ಕೆ ಹೆಜ್ಜೆ ಹಾಕಿದ್ದು ಹಬ್ಬದ ಹೈಲೈಟ್. `ಎರಡು ದೇಶಗಳ ನಡುವೆ ಉತ್ತಮ ಬಾಂಧವ್ಯ ಬೆಳೆಸುವುದರಲ್ಲಿ ಈ ಹಬ್ಬ ಒಂದು ಉತ್ತಮ ವೇದಿಕೆಯಾಗಿದೆ. ಇದೇ ರೀತಿ ಪ್ರತಿ ವರ್ಷ ನಡೆಯಬೇಕು~ ಎಂದು ತಾನ್ಯಾ ಆಡಿದ ಮಾತನ್ನು ಅನೇಕರು ಅನುಮೋದಿಸಿದರು.ಭಾರತ-ಜಪಾನ್ ಸೌಹಾರ್ದ ಸಂಬಂಧ ಬೆಸೆಯಲಾರಂಭಿಸಿ 60 ವರ್ಷಗಳು ಸಂದಿರುವ ಸಂದರ್ಭವೂ ಇದಾಗಿರುವುದರಿಂದ ಹಬ್ಬಕ್ಕೆ ಹೊಸ ಅರ್ಥ ದಕ್ಕಿದಂತಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry