ಬೆಂಡರವಾಡಿ: ಅಭಿವೃದ್ಧಿ ಮರೀಚಿಕೆ

ಭಾನುವಾರ, ಜೂಲೈ 21, 2019
21 °C

ಬೆಂಡರವಾಡಿ: ಅಭಿವೃದ್ಧಿ ಮರೀಚಿಕೆ

Published:
Updated:

ಮಳವಳ್ಳಿ: ಬೆಂಡರವಾಡಿ ತಾಲ್ಲೂಕಿನ ಗಡಿಭಾಗದ ಗ್ರಾಮ. ಇಲ್ಲಿ ರಸ್ತೆ, ಚರಂಡಿ, ನೀರು ಸೇರಿದಂತೆ ಮೂಲ ಸೌಕರ್ಯಗಳ ಕೊರತೆಯಿಂದಾಗಿ ನರಳುತ್ತಿದೆ. ಅಭಿವೃದ್ಧಿ ಎಂಬುವುದು ಮರೀಚಿಕೆ ಆಗಿದೆ.ಗಡಿ ಅಂಚಿನಲ್ಲಿರುವುದೇ ಈ ಊರಿನ ಸಮಸ್ಯೆ. ಗ್ರಾಮ ಪಂಚಾಯಿತಿಯ ಕೇಂದ್ರ ಸ್ಥಾನ ಎನ್ನುವ ಹಿರಿಮೆಯನ್ನು ಹೊರತುಪಡಿಸಿದರೆ, ಭೂತಗನ್ನಡಿ ಹಾಕಿ ನೋಡಿದರೂ ಅಭಿವೃದ್ಧಿ ಕೆಲಸಗಳು ಕಾಣಿಸುವುದಿಲ್ಲ.ಪಟ್ಟಣದಿಂದ ಮೈಸೂರಿಗೆ ಹೋಗುವ ಮಾರ್ಗದಲ್ಲಿ 17 ಕಿ.ಮೀ. ದೂರದಲ್ಲಿ ಈ ಊರಿದೆ. ಜನಸಂಖ್ಯೆ ಕಾರಣಕ್ಕೆ ದೊಡ್ಡ ಗ್ರಾಮ ಎನಿಸಿರುವ ಈ ಊರಲ್ಲಿ ಸಮಸ್ಯೆಗಳೂ ದೊಡ್ಡದಾಗಿಯೇ ಉವೆ.ಗ್ರಾಮದ ಒಂದು ಪ್ರಮುಖ ರಸ್ತೆ ಬಿಟ್ಟರೆ, ಯಾವುದೇ ರಸ್ತೆಯೂ ಜಲ್ಲಿಕಲ್ಲುಗಳನ್ನೂ ಸಹ ಕಂಡಿಲ್ಲ. ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಕೊಳಚೆ ನೀರು ಹರಿಯದೆ ಗಬ್ಬು ನಾರುತ್ತಿವೆ.2008ರಲ್ಲಿ ನರೇಂದ್ರಸ್ವಾಮಿ ಶಾಸಕರಾಗಿ ಆಯ್ಕೆಯಾದ ನಂತರ ಗ್ರಾಮದ ಪರಿಶಿಷ್ಟ ಜಾತಿ ಕಾಲೊನಿ ರಸ್ತೆಗಳು ಸಿಮೆಂಟ್ ರಸ್ತೆಗಳಾಗಿ ಮಾರ್ಪಟ್ಟಿವೆ. ಕುಡಿಯುವ ನೀರು ಪೂರೈಸಲು ಒಂದು ದೊಡ್ಡ ನೀರಿನ ಟ್ಯಾಂಕ್ ಅನ್ನು ನಿರ್ಮಿಸಲಾಗಿದೆ.ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದರೂ ಸ್ವಚ್ಛತೆ ಹುಡುಕಬೇಕಿದೆ. ಎಲ್ಲೆಂದರಲ್ಲಿ ಪಾರ್ಥೇನಿಯಂ ಗಿಡಗಳು, ಕಸದ ಗುಡ್ಡೆಗಳು ಕಾಣಿಸುತ್ತವೆ. ಇರುವ ಕೆಲವು ಚರಂಡಿಗಳು ಹೂಳಿನಿಂದ ತುಂಬಿವೆ.ಈ ಗ್ರಾಮದ ಗೇಟ್ ಸಮೀಪ ಬನ್ನೂರಿನ ಪ್ರಥಮ ದರ್ಜೆ ಕಾಲೇಜು ಇದೆ. ಇಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್‌ಗಳು ಕೋರಿಕೆ ನಿಲುಗಡೆ ನೀಡುತ್ತಿವೆ. ಆದರೆ ಬಸ್ ದರವನ್ನು ಈ ನಿಲುಗಡೆ ಸ್ಥಳಕ್ಕೆ ನೀಡದೇ ಮಳವಳ್ಳಿಗೆ ಅಥವಾ ಕಿರುಗಾವಲಿನಿಂದ ಬಂದರೆ ಬನ್ನೂರಿಗೆ ಟಿಕೆಟ್ ಪಡೆಯಬೇಕಾದ ಸ್ಥಿತಿ ಇದೆ.ಅದೇ ರೀತಿ ಮೈಸೂರು ಅಥವಾ ಬನ್ನೂರಿನಿಂದ ಬಂದರೆ, ಕಿರುಗಾವಲಿಗೆ ಟಿಕೆಟ್ ಪಡೆದು ಇಲ್ಲಿ ಇಳಿಯಬೇಕಿದ್ದು, ಹೆಚ್ಚಿನ ಹಣ ನೀಡಬೇಕಿದೆ. ಇದು ಸಾರ್ವಜನರಿಗೆ ಹೊರೆಯಾಗಿದ್ದು, ಈ ಬಗೆಗೆ ಸಾರಿಗೆ ಇಲಾಖೆ ಅಧಿಕಾರಿಗಳು, ಗಮನಹರಿಸಬೇಕು ಎನ್ನುತ್ತಾರೆ ಗ್ರಾಮದ ಗಿರೀಶ್.ವೆಬ್‌ಸೈಟ್‌ನಲ್ಲಿ ಮಾಹಿತಿ ಇಲ್ಲ: ಈ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ `ಪಂಚತಂತ್ರ' ವೆಬ್‌ಸೈಟ್‌ನಲ್ಲಿ `ಪಂಚಮಿತ್ರ' ಹೈಪರ್ ಲಿಂಕ್ ಕ್ಲಿಕ್ಕಿಸಿ ಮಾಹಿತಿ ಹುಡುಕಿದರೆ, ಏನೇನೂ ಸಿಗುವುದಿಲ್ಲ. ಎಲ್ಲ ಹೈಪರ್ ಲಿಂಕ್‌ಗಳೂ ಕೂಡ ಖಾಲಿ ಇವೆ. ಪಂಚಾಯಿತಿ ವಿವರಣೆ, ಸಿಬ್ಬಂದಿ, ಸಭೆ ಮಾಹಿತಿ, ಜನಸಂಖ್ಯೆ ಸೇರಿದಂತೆ ಯಾವುದರ ಬಗೆಗೂ ಮಾಹಿತಿಯಿಲ್ಲ. ಪಂಚಾಯಿತಿ ವೆಬ್‌ಸೈಟ್ ಕೂಡ ಬರಡಾಗಿದೆ.ಈಗಲೂ ಸಹ ಗ್ರಾಮದ ಕೆಲವು ಜನರು ಜಮೀನಿಗಳ ಆರ್‌ಟಿಸಿ ಗಳಿಗೆ ಬನ್ನೂರು ನಾಡಕಚೇರಿ ಅಥವಾ ಟಿ.ನರಸಿಪುರ ತಾಲ್ಲೂಕಿಗೆ ಕಚೇರಿಗೆ ಹೋಗಬೇಕಿದೆ. ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎನ್ನುವುದು ಗ್ರಾಮಸ್ಥರ ಆಗ್ರಹ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry