ಬುಧವಾರ, ನವೆಂಬರ್ 20, 2019
20 °C

ಬೆಂಬಲಿಗರೊಂದಿಗೆ ಚರ್ಚಿಸಿ ತೀರ್ಮಾನ: ಜವರೇಗೌಡ

Published:
Updated:

ಹಾಸನ: ತಮ್ಮ ಪಕ್ಷದೊಳಗಿನ ಬಂಡಾಯಕ್ಕೆ ತೇಪೆ ಹಚ್ಚಿರುವ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಈಗ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ. ಜವರೇಗೌಡ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ಪ್ರಯತ್ನ ಆರಂಭಿಸಿದ್ದಾರೆ. ಆದರೆ `ನನ್ನ ಬೆಂಬಲಿಗರು, ಕಾರ್ಯಕರ್ತರ ಜತೆಗೆ ಚರ್ಚಿಸದೆ ಯಾವ ತೀರ್ಮಾನವನ್ನೂ ಕೈಗೊಳ್ಳುವುದಿಲ್ಲ' ಎಂದು ಜವರೇಗೌಡ ಸ್ಪಷ್ಟಪಡಿಸಿದ್ದಾರೆ.ಜಿಲ್ಲೆಯ ಅತೃಪ್ತರನ್ನು ಶಾಂತಗೊಳಿಸುವ ಉದ್ದೇಶದಿಂದ ಕಾಂಗ್ರೆಸ್ ಹೈಕಮಾಂಡ್‌ನವರು ಜಿಲ್ಲೆಗೆ ವೀಕ್ಷಕರಾಗಿ ಕಳುಹಿಸಿದ್ದ ಸಂಸದ ರಾಘವನ್ ಹಾಗೂ ಜಿಲ್ಲೆಯ ಇತರ ಮುಖಂಡರು ಶುಕ್ರವಾರ ಜವರೇಗೌಡ ಅವರ ಮನೆಗೆ ಭೇಟಿ ನೀಡಿ ಸುದೀರ್ಘ ಮಾತುಕತೆ ನಡೆಸಿದ್ದಾರೆ.ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಎಚ್.ಕೆ.ಜವರೇಗೌಡ ಅವರೇ ಬೇಲೂರು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಎಂದು ಎಚ್.ಡಿ.ದೇವೇಗೌಡ ಸೇರಿದಂತೆ ಪಕ್ಷದ ಮುಖಂಡರು ಎರಡು ವರ್ಷ ಹಿಂದೆಯೇ ಘೋಷಿಸಿದ್ದರು.ಆದರೆ ಕೆಲವು ತಿಂಗಳ ಹಿಂದೆ ಭವಾನಿ ರೇವಣ್ಣ ಈ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸುತ್ತಿದ್ದಂತೆ ಕ್ಷೇತ್ರದಲ್ಲಿ ಗೊಂದಲ ಆರಂಭವಾಯಿತು. ನಂತರ ಜವರೇಗೌಡ ಅವರಿಗೆ ವಿರುದ್ಧವಾಗಿ ಹಲವು ಬೆಳವಣಿಗೆಗಳಾದವು.ದೇವೇಗೌಡ ಅವರ ಅನುಮತಿ ಲಭಿಸದ ಕಾರಣ ಭವಾನಿ ಕಣದಿಂದ ಹಿಂದೆ ಸರಿದರೂ, ಸ್ಥಳೀಯವಾಗಿ ಕೆಲವು ನಾಯಕರು ತಮಗೇ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದರು.ನಾಮಪತ್ರ ಸಲ್ಲಿಕೆಯ ಕೊನೆಯ ದಿನದವರೆಗೂ ಈ ಹಗ್ಗಜಗ್ಗಾಟ ಮುಂದುವರೆದು ಕೊನೆಗೆ ಜವರೇಗೌಡರ ಬದಲಿಗೆ ಲಿಂಗೇಶ್ ಅವರಿಗೆ ಪಕ್ಷ ಟಿಕೆಟ್ ನೀಡಿತ್ತು. ಘಟನೆಯಿಂದ ಬೇಸರಗೊಂಡ ಜವರೇಗೌಡ ಗುರುವಾರ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದರು.ಜವರೇಗೌಡರು ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಬೇಲೂರು ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಎಚ್.ಎಂ. ವಿಶ್ವನಾಥ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ವೈ.ಎನ್. ರುದ್ರೇಶಗೌಡ ಅವರು ಜವರೇಗೌಡ ಅವರ ಮನೆಗೆ ಧಾವಿಸಿ ಚುನಾವಣೆಯಲ್ಲಿ ತಮಗೆ ಸಹಕಾರ ನೀಡುವಂತೆ ಮನವಿ ಮಾಡಿದ್ದರು. ಶುಕ್ರವಾರ ಕಾಂಗ್ರೆಸ್ ಮುಖಂಡರು ರಾಘವನ್ ನೇತೃತ್ವದಲ್ಲಿ ಜವರೇಗೌಡ ಅವರನ್ನು ಭೇಟಿ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)