ಬುಧವಾರ, ನವೆಂಬರ್ 13, 2019
17 °C
ಬಿಜೆಪಿ-ಜೆಡಿಯು-ಕಾಂಗ್ರೆಸ್‌ನಿಂದ ಮೆರವಣಿಗೆ

ಬೆಂಬಲಿಗರೊಂದಿಗೆ ನಾಮಪತ್ರ

Published:
Updated:

ರಾಯಚೂರು: ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಹವಾಲ್ದಾರ, ರಾಯಚೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಯ್ಯದ್ ಯಾಸಿನ್, ರಾಯಚೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಯು ಪಕ್ಷದ ಅಭ್ಯರ್ಥಿ ನೂರ ಮಹಮ್ಮದ್ ಅವರು ನಾಮಪತ್ರ ಸಲ್ಲಿಸಿದರು.ರಾಯಚೂರು ನಗರ ಹಾಲಿ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಯ್ಯದ್ ಯಾಸಿನ್ ಅವರು ಪಕ್ಷದ ನಗರ ಘಟಕದ ಅಧ್ಯಕ್ಷ ಜಿ ಬಸವರಾಜರೆಡ್ಡಿ ಹಾಗೂ ಪಕ್ಷದ ಇತರ ಹಿರಿಯರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು.ಜೆಡಿಯು ಪಕ್ಷದ ಅಭ್ಯರ್ಥಿ ನೂರ ಮಹಮ್ಮದ್ ಅವರು ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ದ್ವಿಚಕ್ರ ವಾಹನ ರ‍್ಯಾಲಿಯೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಪರವಾನಗಿ ಪಡೆಯದೇ ಇರುವ ಕಾರಣಕ್ಕೆ ಹಲವಾರು ದ್ವಿಚಕ್ರವಾಹನಗಳನ್ನು ಪೊಲೀಸರು ಜಪ್ತಿ ಮಾಡಿದರು.ಬಿಜೆಪಿ ಅಭ್ಯರ್ಥಿ: ಮಧ್ಯಾಹ್ನ ಅಸಂಖ್ಯಾತ ಜನರೊಂದಿಗೆ ಮೆರವಣಿಗೆಯಲ್ಲಿ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಹವಾಲ್ದಾರ ಬಂದು ಮಂಗಳವಾರ ಇಲ್ಲಿನ ತಹಸೀಲದಾರ ಕಚೇರಿಯಲ್ಲಿನ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.ಮಧ್ಯಾಹ್ನ ಪ್ರಾದೇಶಿಕ ಸಾರಿಗೆ ಕಚೇರಿ ಹತ್ತಿರ ವೃತ್ತದಿಂದ ಪಕ್ಷದ ಕಾರ್ಯಕರ್ತರು, ಮುಖಂಡರು, ಗ್ರಾಮೀಣ ಕ್ಷೇತ್ರದ ಬೆಂಬಲಿಗರೊಂದಿಗೆ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಆಗಮಿಸಿದರು. ತಹಸೀಲದಾರ ಕಚೇರಿ ಹತ್ತಿರ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಪೊಲೀಸರು ಜನ ನಿಯಂತ್ರಿಸಲು ಪ್ರಯಾಸಪಟ್ಟರು.ಅಭ್ಯರ್ಥಿ ತಿಪ್ಪರಾಜು ಹವಾಲ್ದಾರ ಅವರೊಂದಿಗೆ ದೇವದುರ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಕೆ ಶಿವನಗೌಡ ನಾಯಕ, ಬಿಜೆಪಿ ರಾಯಚೂರು ನಗರ ಕ್ಷೇತ್ರದ ಅಭ್ಯರ್ಥಿ ತ್ರಿವಿಕ್ರಮ ಜೋಶಿ, ಕಡಗೋಲ ಆಂಜನೇಯ, ಜಿ.ಪಂ ಸದಸ್ಯ ಡಿ ಅಚ್ಯುತರೆಡ್ಡಿ ಸೇರಿದಂತೆ ಅನೇಕರಿದ್ದರು.ಕಾರ್ಯಕರ್ತರನ್ನುದ್ದೇಶಿಸಿ ಭಾಷಣ: ನಾಮಪತ್ರ ಸಲ್ಲಿಸಲು ಆಗಮಿಸುವ ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ಹತ್ತಿರದ ವೃತ್ತದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಕೆ ಶಿವನಗೌಡ ನಾಯಕ ಹಾಗೂ ತಿಪ್ಪರಾಜು ಅವರು ಮಾತನಾಡಿದರು.ದೇವದುರ್ಗ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ ರೀತಿಯಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರವನ್ನೂ ಅಭಿವೃದ್ಧಿ ಮಾಡಲು ಪ್ರಯತ್ನಿಸಲಾಗುವುದು. ನೀರಾವರಿ ಸೌಲಭ್ಯ ವಿಸ್ತರಣೆ, ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಮಾಡಲಾಗುವುದು. ಪಕ್ಷದ ಅಭ್ಯರ್ಥಿ ತಿಪ್ಪರಾಜು ಅವರನ್ನು ಮತದಾರರು ಗೆಲ್ಲಿಸಬೇಕು ಎಂದು ಶಿವನಗೌಡ ನಾಯಕ ಹೇಳಿದರು.ಅಭ್ಯರ್ಥಿ ತಿಪ್ಪರಾಜು ಮಾತನಾಡಿ, ಒಬ್ಬ ಸಾಮಾನ್ಯ ಶಿಕ್ಷಕನಾಗಿದ್ದು, ಜನಸೇವೆ ಆಶಯದಿಂದ ಈ ಚುನಾವಣೆಗೆ ಬಿಜೆಪಿ ಪಕ್ಷದಿಂದ ಸ್ಪರ್ಧಿಸುತ್ತಿದ್ದೇನೆ. ಮತದಾರರು ಅಭಿವೃದ್ಧಿಗೆ ತಮಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.

ಪ್ರತಿಕ್ರಿಯಿಸಿ (+)