ಬೆಂಬಲಿಗರ ಮುಟ್ಟೀರಿ ಜೋಕೆ: ಗುಡುಗಿದ ಯಡಿಯೂರಪ್ಪ

7

ಬೆಂಬಲಿಗರ ಮುಟ್ಟೀರಿ ಜೋಕೆ: ಗುಡುಗಿದ ಯಡಿಯೂರಪ್ಪ

Published:
Updated:

ಬೆಂಗಳೂರು: `ಜಗದೀಶ ಶೆಟ್ಟರ್ ನೇತೃತ್ವದ ಸರ್ಕಾರದಲ್ಲಿರುವ ನನ್ನ ಬೆಂಬಲಿಗರಿಗೆ ತೊಂದರೆಯಾದರೆ ಈ ಸರ್ಕಾರ ಉಳಿಯುವುದಿಲ್ಲ...~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಎಚ್ಚರಿಕೆ ನೀಡಿದರು.ಡಾಲರ್ಸ್‌ ಕಾಲೊನಿಯ ತಮ್ಮ ನಿವಾಸದಲ್ಲಿ ಶನಿವಾರ ಬೆಂಬಲಿಗರ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, `ಸರ್ಕಾರ ಉರುಳಿಸುವ ಪ್ರಯತ್ನಕ್ಕೆ ನಾನು ಕೈಹಾಕುವುದಿಲ್ಲ. ಆದರೆ, ನನ್ನ ಬೆಂಬಲಿಗರ ತಂಟೆಗೆ ಬಂದರೆ, ಈ ಸರ್ಕಾರ ಉಳಿಯುವುದಿಲ್ಲ~ ಎಂದು ಕಡ್ಡಿ ಮುರಿದಂತೆ ಹೇಳಿದರು. 

ಕೆಜೆಪಿಗೆ ಬಿಎಸ್‌ವೈ ನೇತೃತ್ವ?

 
 ಬಿ.ಎಸ್.ಯಡಿಯೂರಪ್ಪ ಅವರು ಈಗಾಗಲೇ ನೋಂದಣಿಯಾಗಿರುವ `ಕರ್ನಾಟಕ ಜನತಾ ಪಕ್ಷ~ದ (ಕೆಜೆಪಿ) ನೇತೃತ್ವ ವಹಿಸುವುದು ಬಹುತೇಕ ಖಚಿತವಾಗಿದೆ.ಪದ್ಮನಾಭ ಪ್ರಸನ್ನ ಎಂಬುವವರು ಕಳೆದ ವರ್ಷ    ಏಪ್ರಿಲ್‌ನಲ್ಲಿ ಈ ಹೆಸರಿನ ಪಕ್ಷವನ್ನು ಚುನಾವಣಾ ಅಯೋಗದಲ್ಲಿ ನೋಂದಣಿ ಮಾಡಿದ್ದಾರೆ. ಪಕ್ಷದ ಸಂಸ್ಥಾಪಕರ ಜತೆ ಯಡಿಯೂರಪ್ಪ ಮಾತುಕತೆ ನಡೆಸಿದ್ದು, ಈ ಪಕ್ಷದ ನೇತೃತ್ವ ವಹಿಸಲು ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

`ಡಿಸೆಂಬರ್ ವೇಳೆಗೆ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ, ಅದರೊಂದಿಗೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ. ರಾಜೀನಾಮೆ ನೀಡಿದ ಬಳಿಕ ರಾಜ್ಯ ಪ್ರವಾಸ ಮಾಡುತ್ತೇನೆ. ಹೊಸ ಪಕ್ಷವನ್ನು ಕಟ್ಟುತ್ತೇನೆ. ಸಚಿವರು ಮತ್ತು ಶಾಸಕರನ್ನು ನಾನಾಗಿಯೇ ಹೊಸ ಪಕ್ಷಕ್ಕೆ ಆಹ್ವಾನಿಸುವುದಿಲ್ಲ. ಯಾರ ಮೇಲೂ ಒತ್ತಡ ಹೇರುವುದಿಲ್ಲ. ಬೇಕಾದವರು ಅವರಾಗಿಯೇ ಬರಬಹುದು~ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.`ನಾನು ಬಿಜೆಪಿ ತೊರೆಯುವುದಿಲ್ಲ ಎಂದು ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಡಿಸೆಂಬರ್‌ವರೆಗೂ ಅವರು ತುಸು ಸಂಯಮ ವಹಿಸಲಿ. ಯಡಿಯೂರಪ್ಪ ಇನ್ನು ಶಾಂತವಾಗಿ ಇರುವುದಿಲ್ಲ~ ಎಂದು ಗುಡುಗಿದರು.`ಪಿತೃಪಕ್ಷ ಮುಗಿದ ಬಳಿಕ ಪುನಃ ಬೆಂಬಲಿಗರ ಸಭೆಗಳನ್ನು ನಡೆಸುತ್ತೇನೆ. ಒಂದೊಂದೇ ಜಿಲ್ಲೆಯ ಮುಖಂಡರನ್ನು ಸೇರಿಸಿ ಪಕ್ಷ ಸಂಘಟನೆಗೆ ವೇಗ ತುಂಬುತ್ತೇನೆ~ ಎಂದು ಬಿಎಸ್‌ವೈ ಹೇಳಿದರು.ಶುಕ್ರವಾರ ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಹಿತೈಷಿಗಳ ಸಭೆ ನಡೆಸಿದ ಅವರು, ಶನಿವಾರ ಇಲ್ಲಿ ನಡೆದ ಸಭೆಯಲ್ಲಿ ಹೈದರಾಬಾದ್-ಕರ್ನಾಟಕ ಭಾಗದ ಬೆಂಬಲಿಗರು ಭಾಗವಹಿಸಿದ್ದರು. ಬೀದರ್, ರಾಯಚೂರು, ಗುಲ್ಬರ್ಗ, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಯ ಬಿಜೆಪಿ ಮುಖಂಡರ ಜತೆ ಹೊಸ ಪಕ್ಷದ ರೂಪುರೇಷೆ ಕುರಿತು ಸುದೀರ್ಘ ಚರ್ಚೆ ನಡೆಸಿದರು.ಯಡಿಯೂರಪ್ಪ ತೆಗೆದುಕೊಳ್ಳುವ ತೀರ್ಮಾನಕ್ಕೆ ತಾವು ಬದ್ಧ ಎಂದು ಈ ಮುಖಂಡರು ವಚನ ನೀಡಿದರು ಎಂದು ಮೂಲಗಳು ತಿಳಿಸಿವೆ.ಸಚಿವರಾದ ಶೋಭಾ ಕರಂದ್ಲಾಜೆ, ಸುನೀಲ್ ವಲ್ಯಾಪುರೆ, ವಿಧಾನ ಪರಿಷತ್ ಸದಸ್ಯರಾದ ಲೆಹರ್ ಸಿಂಗ್, ಎಂ.ಡಿ.ಲಕ್ಷ್ಮೀನಾರಾಯಣ, ಕೇಂದ್ರದ ಮಾಜಿ ಸಚಿವ ವಿ.ಧನಂಜಯಕುಮಾರ್ ಒಳಗೊಂಡಂತೆ ಹಲವು  ಪ್ರಮುಖರೂ ಸಭೆಯಲ್ಲಿ ಭಾಗವಹಿಸಿದ್ದರು.ಆದರೆ, ಲಕ್ಷ್ಮೀನಾರಾಯಣ ಅವರು ಇದನ್ನು ಅಲ್ಲಗಳೆದರು. `ಸಚಿವರು ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ಅವರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು, ಅಷ್ಟೇ~ ಎಂದು ಅವರು ವಿವರಣೆ ನೀಡಿದರು. ಹೊಸ ಪಕ್ಷದ ರೂಪಕಲ್ಪನೆ ಕುರಿತು ವಿಚಾರ ವಿನಿಮಯ ನಡೆಸಿದ ಯಡಿಯೂರಪ್ಪ, ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ತಮ್ಮಂದಿಗೆ ಕೈಜೋಡಿಸುವ ಪ್ರಮುಖರ ಮಾಹಿತಿ ಪಡೆದರು. ಗೆಲುವಿನ ಸಾಧ್ಯತೆಗಳು ಮತ್ತು ಜಾತಿ ಸಮೀಕರಣಗಳ ಕುರಿತೂ ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry