ಬೆಂಬಲಿಸದ ಶಾಸಕರ ವಿರುದ್ಧ ವಾಗ್ದಾಳಿ

7
ಒಳ ಮೀಸಲಾತಿಗಾಗಿ ಆಗ್ರಹಿಸಿ ಮಾದಿಗ- ಛಲವಾದಿ ಸಮಾವೇಶ

ಬೆಂಬಲಿಸದ ಶಾಸಕರ ವಿರುದ್ಧ ವಾಗ್ದಾಳಿ

Published:
Updated:

ತುಮಕೂರು: ರಾಜ್ಯದ 36 ಮೀಸಲು ಕ್ಷೇತ್ರಗಳಿಂದ ಶಾಸಕರಾಗಿ ಆಯ್ಕೆಯಾಗಿ ಹೋರಾಟಕ್ಕೆ ಬೆಂಬಲ ನೀಡದ ಶಾಸಕರು ಮತ್ತು ರಾಜಕಾರಣಿಗಳಿಗೆ ಪಾಠ ಕಲಿಸಬೇಕೆಂದು ಸಾಹಿತಿ ಕೆ.ಬಿ.ಸಿದ್ದಯ್ಯ ಸಲಹೆ ನೀಡಿದರು.ಒಳಮೀಸಲಾತಿಗಾಗಿ ಆಗ್ರಹಿಸಿ ನಗರದಲ್ಲಿ ಮಾದಿಗ- ಛಲವಾದಿ ಸಂಘಟನೆಗಳ ಒಕ್ಕೂಟದಿಂದ ಭಾನುವಾರ ಏರ್ಪಡಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಪೊಲೀಸರು ಹೊಲೆಮಾದಿಗರನ್ನು ಅಟ್ಟಾಡಿಸಿ ಬಡಿಯುತ್ತಿದ್ದರೆ, ಮೀಸಲು ಕ್ಷೇತ್ರದಿಂದ ಆಯ್ಕೆಯಾದ ಶಾಸಕರು ಮೌನಸಮ್ಮತಿ ಸೂಚಿಸಿ, ಒಳಗೆ ಕುಳಿತಿದ್ದರು ಎಂದು ವಾಗ್ದಾಳಿ ನಡೆಸಿದರು.ಇಂತಹ ರಾಜಕಾರಣಿಗಳನ್ನು ಉದ್ದೇಶಪೂರ್ವಕವಾಗಿಯೇ ಸಮಾವೇಶಕ್ಕೆ ಕರೆಯಲಿಲ್ಲ. ಮುಂದಿನ ಚುನಾವಣೆಯಲ್ಲಿ ಆಯಾಯ ಕ್ಷೇತ್ರದಲ್ಲಿ ಇಂತಹವರಿಗೆ ಪಾಠ ಕಲಿಸಿ. ಹೊಲೆಮಾದಿಗರನ್ನು ವಿಘಟಿಸುವ ಶಕ್ತಿಗಳು ಮತ್ತು ರಾಜಕೀಯ ಪಕ್ಷಗಳನ್ನು ದೂರವಿಡಿ. ಒಳ ಮೀಸಲಾತಿ ಜಾರಿಯಿಂದ ಪರಿಶಿಷ್ಟರ ಒಗ್ಗಟ್ಟು ಮುರಿಯುವುದಿಲ್ಲ, ಗಟ್ಟಿಯಾಗುತ್ತದೆ. ಜಾತಿ ಸಂಘಟನೆಗಳು ಜಾತಿ ಪದ್ಧತಿ ಮುಂದುವರಿಸಲು ಕಾರಣವಾಗಬಾರದು ಎಂದು ಹೇಳಿದರು.

ಸಾಹಿತಿ ಶ್ರೀಧರ ಕಲಿವೀರ ಮಾತನಾಡಿ, ಒಳ ಮೀಸಲಾತಿ ಹೋರಾಟ ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿಯೇ ಇದೆ. ಖಾಸಗಿ ಕ್ಷೇತ್ರದಲ್ಲಿ ಸಹ ಮೀಸಲಾತಿ ಪಡೆಯಲು ಹೋರಾಟ ಅಗತ್ಯ. ಹಿಂದೆ ಸಹ ಜಾತಿ ಆಧಾರದ ಮೀಸಲಾತಿಗೆ ವಿರೋಧ ಇತ್ತು. ಮೀಸಲಾತಿ ಜಾರಿಯಾದ ಮೇಲೆ ಒಳ ಮೀಸಲಾತಿ ಪಡೆಯುವುದು ತಪ್ಪಿಲ್ಲ ಎಂದರು.ಬೆಳಗಾವಿಯಲ್ಲಿ ದಲಿತರ ಮೇಲೆ ಲಾಠಿ ಎತ್ತಿದ್ದಕ್ಕಾಗಿ ಗೃಹಸಚಿವ ಮತ್ತು ಮುಖ್ಯಮಂತ್ರಿ ಕ್ಷಮೆ ಕೋರಬೇಕು. ಹೋರಾಟಗಾರರ ಮೇಲೆ ಹಾಕಿರುವ ಕೇಸು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.ಚಿಂತಕ ದೊರೈರಾಜ್ ಮಾತನಾಡಿ, ಒಳ ಮೀಸಲಾತಿ ಜಾರಿಗೆ ಸಂವಿಧಾನ ತೊಡಕುಗಳಿವೆ ಎಂಬುದು ಸರಿ. ಆದರೆ ಸಂವಿಧಾನಕ್ಕೆ ತಿದ್ದುಪಡಿ ತರುವ ಇಚ್ಛಾಶಕ್ತಿಯನ್ನು ರಾಜಕಾರಣಿಗಳು ಪ್ರದರ್ಶಿಸಬೇಕು. ಹೋರಾಟಗಾರರ ಮೇಲೆ ಲಾಠಿ ಪ್ರಹಾರ ಮಾಡಿ ಚಳವಳಿ ಹತ್ತಿಕ್ಕಲು ಸಾಧ್ಯವಿಲ್ಲ. ಹೋರಾಟ ಮತ್ತಷ್ಟು ಶಕ್ತಿಯುತವಾಗುತ್ತದೆ ಎಂದು ಹೇಳಿದರು.ಪ್ರೊ.ಕೆ.ಸದಾಶಿವ ಮಾತನಾಡಿ, ನಿರಂತರವಾಗಿ ಶೋಷಣೆ ನಡೆಯುತ್ತ ಬಂದಿರುವುದು ಇತಿಹಾಸ. ಐತಿಹಾಸಿ, ಸಾಮಾಜಿಕ ಅಸಮಾನತೆ ಮತ್ತು ಶ್ರೇಣಿಕೃತ ವ್ಯವಸ್ಥೆಯ ಹಿನ್ನೆಲೆಯಲ್ಲಿಯೇ ಮೀಸಲಾತಿ ಜಾರಿಗೆ ತರಲಾಯಿತು. ಅಸಮಾನತೆ ಹಂಚಿಕೆಯನ್ನು ಸರಿಪಡಿಸಲು ಮೀಸಲಾತಿ ದಾರಿಯಾಯಿತು. ಈಗ ಒಳ ಮೀಸಲಾತಿ ಹೋರಾಟ ಸಹ ಸಮಾನತೆಗಾಗಿ ನಡೆಯುತ್ತಿದೆ. ಇದು ಸಂವಿಧಾನ ವಿರೋಧಿ ಅಲ್ಲ ಎಂದು ಅಭಿಪ್ರಾಯಪಟ್ಟರು.ಕಲಾವಿದ ಕೆ.ಟಿ.ಶಿವಪ್ರಸಾದ್ ಮಾತನಾಡಿ, ಸಂವಿಧಾನದಲ್ಲಿ ಇಲ್ಲ ಎಂಬ ಕಾರಣಕ್ಕೆ ಒಳಮೀಸಲಾತಿ ಹೋರಾಟ ಮಾಡಬಾರದು ಎನ್ನುವುದು ಸರಿಯಲ್ಲ. ಅವಶ್ಯಕತೆಗೆ ಅನುಗುಣವಾಗಿ ಸಂವಿಧಾನಕ್ಕೆ ಸರ್ಕಾರ ಹಲವು ತಿದ್ದುಪಡಿ ಮಾಡುತ್ತಾ ಬಂದಿದೆ. ಇದನ್ನು ಸಹ ತಿದ್ದುಪಡಿ ಮೂಲಕ ಸೇರಿಸಬಹುದು ಎಂದು ತಿಳಿಸಿದರು.ಚಿತ್ರದುರ್ಗ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮತ್ತು ಬಸವನಾಗಿದೇವ ಸ್ವಾಮೀಜಿ ಸಮಾವೇಶ ಉದ್ಘಾಟಿಸಿದರು. ಕೋಡಿಹಳ್ಳಿ ಮಾರ್ಕಂಡಮುನಿ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ವರಜ್ಯೋತಿ ಭಂತೇಜಿ, ಷಡಕ್ಷರಿ ಮುನಿಸ್ವಾಮೀಜಿ, ಬಸವ ಹರಳಯ್ಯ ಸ್ವಾಮೀಜಿ, ಸಾಹಿತಿ ಡಾ.ಎಲ್.ಹನುಮಂತಯ್ಯ, ಮುಖಂಡರಾದ ಚೇಳೂರು ವೆಂಕಟೇಶ್, ಪಾವಗಡ ಶ್ರೀರಾಂ, ಬಂದಕುಂಟೆ ನಾಗರಾಜಯ್ಯ, ಎಂ.ಶಂಕರಪ್ಪ, ಕಾಕೋಳ ಲಕ್ಕಪ್ಪ, ನರಸೀಯಪ್ಪ, ವಾಲೆ ಚಂದ್ರಯ್ಯ, ಗೋವಿಂದರಾಜು, ಜ್ಯೋತಿಗಣೇಶ್ ಮುಂತಾದವರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry