ಬೆಂಬಲ ಬೆಲೆ ಏರಿಕೆಗೆ ಶಿಫಾರಸು

7
ರಾಗಿ, ಜೋಳಕ್ಕೆ ರೂ 1800: ಸಂಪುಟ ಉಪಸಮಿತಿ ಸಲಹೆ

ಬೆಂಬಲ ಬೆಲೆ ಏರಿಕೆಗೆ ಶಿಫಾರಸು

Published:
Updated:

ಬೆಂಗಳೂರು: ರಾಗಿ ಮತ್ತು ಜೋಳದ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಲ್‌ಗೆ ್ಙ 1,500 ರಿಂದ 1,800 ರೂಪಾಯಿಗೆ ಹೆಚ್ಚಳ ಮಾಡುವಂತೆ ಸಚಿವ ಸಂಪುಟ ಉಪ ಸಮಿತಿ ಶಿಫಾರಸು ಮಾಡಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಅನ್ನಭಾಗ್ಯ ಯೋಜನೆಯಲ್ಲಿ ರಾಗಿ ಮತ್ತು ಜೋಳ ವಿತರಿಸಲು ಸರ್ಕಾರ ನಿರ್ಧರಿಸಿದೆ. ಬೇಡಿಕೆಗೆ ತಕ್ಕಂತೆ ರಾಗಿ ಮತ್ತು ಜೋಳದ ಉತ್ಪಾದನೆ ಹೆಚ್ಚಿಸಲು ಪೂರಕವಾಗಿ ರೈತರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಲ್‌ಗೆ 300 ರೂಪಾಯಿಯಷ್ಟು ಹೆಚ್ಚಿಸುವಂತೆ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅಧ್ಯಕ್ಷತೆಯ ಸಂಪುಟ ಉಪ ಸಮಿತಿ ಶಿಫಾರಸು ಮಾಡಿದೆ. ಶೀಘ್ರದಲ್ಲಿ ಸರ್ಕಾರ ಈ ಸಂಬಂಧ ತೀರ್ಮಾನ ಕೈಗೊಳ್ಳಲಿದೆ' ಎಂದರು.ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಪ್ರತಿ ಕೆ.ಜಿ.ಗೆ ಒಂದು ರೂಪಾಯಿ ದರದಲ್ಲಿ ರಾಗಿ ಮತ್ತು ಜೋಳ ವಿತರಿಸಲಾಗುತ್ತದೆ. ಇದಕ್ಕೆ ಅಗತ್ಯವಿರುವ ರಾಗಿ ಮತ್ತು ಜೋಳವನ್ನು ಬೆಂಬಲ ಬೆಲೆಯ ದರದಲ್ಲಿ ರಾಜ್ಯ ಸರ್ಕಾರ ರೈತರಿಂದ ಖರೀದಿಸಲಿದೆ. ಬೆಂಬಲ ಬೆಲೆ ಹೆಚ್ಚಳದಿಂದ ರೈತರಿಗೆ ಅನುಕೂಲವಾಗುವ ಜೊತೆಯಲ್ಲೇ ಸ್ಥಳೀಯ ಆರ್ಥಿಕತೆ ಚೇತರಿಕೆ ಕಾಣಲು ಸಹಕಾರಿಯಾಗಲಿದೆ ಎಂದರು.ಅಕ್ಟೋಬರ್ ತಿಂಗಳಿನಿಂದ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ರಾಗಿ ಮತ್ತು ಜೋಳವನ್ನು ವಿತರಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಆದರೆ, ರಾಗಿ ಮತ್ತು ಜೋಳ ಹೆಚ್ಚು ಪ್ರಮಾಣದಲ್ಲಿ ಖರೀದಿಗೆ ಲಭ್ಯವಾಗುವುದು ನವೆಂಬರ್ ತಿಂಗಳಿನ ನಂತರ. ಆಹಾರ ಧಾನ್ಯಗಳ ಲಭ್ಯತೆಯನ್ನು ಆಧರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.ರಾಗಿ ಮತ್ತು ಜೋಳ ಖರೀದಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ. ಅಗತ್ಯ ಪ್ರಮಾಣದ ಧಾನ್ಯಗಳು ಲಭ್ಯವಾದಲ್ಲಿ ತಕ್ಷಣವೇ ಯೋಜನೆಗೆ ಚಾಲನೆ ನೀಡಲಾಗುವುದು. ಹೆಚ್ಚು ಪ್ರಮಾಣದಲ್ಲಿ ರಾಗಿ ಮತ್ತು ಜೋಳ ಲಭ್ಯವಾದರೆ ಫಲಾನುಭವಿಗಳಿಗೆ ಹಂಚಿಕೆ ಮಾಡಲು ನಿಗದಿ ಮಾಡಿರುವ ಪ್ರಮಾಣದಲ್ಲೂ ಹೆಚ್ಚಳ ಮಾಡಲಾಗುವುದು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry