ಬುಧವಾರ, ಮೇ 25, 2022
22 °C

ಬೆಂಬಲ ಬೆಲೆ ಕೊಬ್ಬರಿ ಖರೀದಿಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಬುಧವಾರ ಸರ್ಕಾರದ ಆದೇಶದಂತೆ 2012-13ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ರೈತರಿಂದ ನೇರವಾಗಿ ಗುಣಮಟ್ಟದ ಕೊಬ್ಬರಿ ಖರೀದಿಸುವ ಕೇಂದ್ರವನ್ನು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಗಿರಿಜಮ್ಮ ತಿಪ್ಪೀರಣ್ಣ ಉದ್ಘಾಟಿಸಿದರು.ತಹಶೀಲ್ದಾರ್ ಎನ್. ತಿಪ್ಪೇಸ್ವಾಮಿ ಮಾತನಾಡಿ, ನಾಫೆಡ್ ಸಂಸ್ಥೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಮೂಲಕ ಪ್ರತಿ ಕ್ವಿಂಟಲ್‌ಗೆ ್ಙ 5,350 ಮತ್ತು ಸರ್ಕಾರದ ಸಹಾಯಧನ ್ಙ 700 ಸೇರಿ ಗರಿಷ್ಟ 10 ಕ್ವಿಂಟಲ್‌ವರೆಗೆ ಪ್ರತಿ ರೈತರಿಂದ ಖರೀದಿಸುತ್ತಾರೆ. ಇದರ ಪ್ರಯೋಜವನ್ನು ಬೆಳೆಗಾರರು ಪಡೆಯಬೇಕು ಎಂದು ಹೇಳಿದರು.ನಾಫೆಡ್ ಶಾಖಾ ವ್ಯವಸ್ಥಾಪಕಿ ರೂಪಶ್ರೀ ಮಾತನಾಡಿ, ಕೊಬ್ಬರಿ ಮಾರಾಟ ಮಾಡುವ ರೈತರು 2012-13ನೇ ಸಾಲಿನ ಪಹಣಿ ಮತ್ತು ತೋಟಗಾರಿಕೆ ಇಲಾಖೆಯಿಂದ ಪಡೆದ ದಾಸ್ತಾನು ಇಳುವರಿ ದೃಢೀಕರಣ ಪತ್ರ ಹಾಜರುಪಡಿಸಬೇಕು. ದಾಸ್ತಾನು ತರುವ ದಿನಾಂಕಕ್ಕೆ ಟೋಕನ್ ಖರೀದಿಸಬೇಕು. ದಾಸ್ತಾನು ನೀಡಿದ ನಂತರ ಖರೀದಿ ಅಧಿಕಾರಿಗಳಿಂದ ಗ್ರೀನ್ ಓಚರ್ ಪಡೆಯಬೇಕು. ಖರೀದಿ ಕೇಂದ್ರಕ್ಕೆ ತಂದ ನಂತರ ಯಾವುದೇ ಖರ್ಚನ್ನು ರೈತರು ಭರಿಸುವಂತಿಲ್ಲ. ಕೊಬ್ಬರಿ ಖರೀದಿಸಿದ ನಂತರ ತೂಕ ಮಾಡಿಕೊಂಡು ಖಾಲಿ ಚೀಲಗಳನ್ನು ರೈತರಿಗೆ ಹಿಂತಿರುಗಿಸಲಾಗುವುದು. ಖರೀದಿಸಿದ ಕೊಬ್ಬರಿ ಬಾಬ್ತು ಹಣವನ್ನು ಅಕೌಂಟ್ ಪೇ ಚೆಕ್ ಮೂಲಕ ಪಾವತಿಸಲಾಗುವುದು ಎಂದು ಅವರು ವಿವರಿಸಿದರು.ವಾರ ಪೂರ್ತಿ ಖರೀದಿ ಇರುತ್ತದೆ. ಕೇಂದ್ರ ಸರ್ಕಾರ ತಿಳಿಸಿರುವಂತೆ ಕೊಬ್ಬರಿಯ ಅಳತೆ 7.5 ಮಿ.ಮೀ. ವ್ಯಾಸ ಇರಬೇಕು. ಸುಕ್ಕುಭರಿತ ಅಂಶ ಶೇ 10.0, ತೇವಾಂಶ ಗರಿಷ್ಠ ಶೇ 7, ಗರಿಷ್ಠ ಚೂರು 1.0 ಇರಬೇಕು. ಈ ರೀತಿಯ ಗುಣಮಟ್ಟದ ಕೊಬ್ಬರಿಯನ್ನು ಖರೀದಿ ಕೇಂದ್ರಕ್ಕೆ ರೈತರು ತರಬೇಕು ಎಂದು ಅವರು ಮನವಿ ಮಾಡಿದರು.ಮಾರುಕಟ್ಟೆ ಸಮಿತಿ ಅಧ್ಯಕ್ಷ ಹೇಮಂತಕುಮಾರ್ ಮಾತನಾಡಿ, ತಾಲ್ಲೂಕಿನಲ್ಲಿ 7.5 ಮಿ.ಮೀ. ವ್ಯಾಸವಿರುವ ಕೊಬ್ಬರಿ ಸಿಗುವುದು ಕಷ್ಟ. ಪ್ರಯುಕ್ತ ಖರೀದಿ ಮಾಡುವ ಅಧಿಕಾರಿಗಳು ನಿಯಮದಲ್ಲಿ ಸ್ವಲ್ಪಮಟ್ಟಿಗೆ ರಾಜಿ ಮಾಡಿಕೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕು. ಮಾರುಕಟ್ಟೆಗೆ ತಂದ ಕೊಬ್ಬರಿಯನ್ನು ಮರಳಿ ಊರಿಗೆ ಒಯ್ಯುವಂತೆ ಆಗಬಾರದು ಎಂದು ಸೂಚಿಸಿದರು.ಪುರಸಭಾಧ್ಯಕ್ಷೆ ಮಂಜುಳಾ ವೆಂಕಟೇಶ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಗಿರಿಜಮ್ಮ ತಿಪ್ಪೀರಣ್ಣ, ಸಹಕಾರ ಮಾರಾಟ ಮಹಾ ಮಂಡಳದ ನಿರ್ದೇಶಕ ಗಿರೀಶ್, ಗುಣಶೇಖರ್, ಚಂದ್ರಶೇಖರಪ್ಪ, ತಮ್ಮಣ್ಣ, ಎಚ್. ವೆಂಕಟೇಶ್, ಈಶ್ವರಪ್ಪ, ಶ್ರೀಹರಿ, ಚನ್ನೇಗೌಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.