ಬೆಂಬಲ ವಾಪಸ್: ಮುಲಾಯಂ ಬೆದರಿಕೆ

7
ಎಸ್‌ಸಿ, ಎಸ್ಟಿ ಸರ್ಕಾರಿ ನೌಕರರ ಬಡ್ತಿ ಮೀಸಲಾತಿಗೆ ವಿರೋಧ

ಬೆಂಬಲ ವಾಪಸ್: ಮುಲಾಯಂ ಬೆದರಿಕೆ

Published:
Updated:

ಮೈನಾಪುರಿ (ಉತ್ತರ ಪ್ರದೇಶ) (ಪಿಟಿಐ): ಪರಿಶಿಷ್ಟ ಜಾತಿ, ಪಂಗಡದ ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ತೀವ್ರವಾಗಿ ವಿರೋಧಿಸುತ್ತಿರುವ ಸಮಾಜವಾದಿ ಪಕ್ಷ (ಎಸ್‌ಪಿ), ಈ ಮಸೂದೆ ಅಂಗೀಕೃತವಾದರೆ ಕೇಂದ್ರ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆಯುವ ಕುರಿತು ಆಲೋಚಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದೆ.`ಈ ಮಸೂದೆಯು ರಾಜ್ಯಸಭೆಯಲ್ಲಿ ಮತದಾನಕ್ಕೆ ಬಂದಿದ್ದೇ ಆದರೆ, ನಮ್ಮ ಪಕ್ಷವು ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆಯುವ ಬಗ್ಗೆ ಚಿಂತಿಸಬೇಕಾಗುತ್ತದೆ' ಎಂದು ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಸುದ್ದಿಗಾರರಿಗೆ ಇಲ್ಲಿ ತಿಳಿಸಿದ್ದಾರೆ. `ಇದು ರಾಷ್ಟ್ರ ವಿರೋಧಿ ಮಸೂದೆ. ಇದು ಸಮಾಜವನ್ನು ಒಡೆಯುತ್ತದೆ. ಈ ಮಸೂದೆಯನ್ನು ನಾವು ಸಂಸತ್ ಒಳಗೆ ಮತ್ತು ಹೊರಗೆ ವಿರೋಧಿಸುತ್ತೇವೆ ಮತ್ತು ಅದನ್ನು ಮುಂದುವರಿಸುತ್ತೇವೆ' ಎಂದು ಅವರು ಹೇಳಿದ್ದಾರೆ.ತೀವ್ರಗೊಂಡ ಪ್ರತಿಭಟನೆ:  ಇದೇ ವೇಳೆ, ಬಡ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ಮೀಸಲಾತಿ ಕಲ್ಪಿಸುವ ಮಸೂದೆಯ ವಿರುದ್ಧ ಉತ್ತರ ಪ್ರದೇಶದ ಲಕ್ಷಾಂತರ ಸರ್ಕಾರಿ ನೌಕರರು ಶನಿವಾರ ರಾಜ್ಯದ ವಿವಿಧ ಕಡೆಗಳಲ್ಲಿ ಬೃಹತ್ ಪ್ರತಿಭಟನಾ ರ‌್ಯಾಲಿ ಹಾಗೂ ಧರಣಿಗಳನ್ನು ನಡೆಸಿದರು.18 ಲಕ್ಷಕ್ಕೂ ಅಧಿಕ ನೌಕರರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸಲು ಮುಂದಾಗಿರುವುದು ಸಂವಿಧಾನ ಬಾಹಿರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ವಜನ ಹಿತ ಸಂರಕ್ಷಣಾ ಸಮಿತಿಯು ಈ ಪ್ರತಿಭಟನೆ ನೇತೃತ್ವ ವಹಿಸಿತ್ತು.  ಪ್ರತಿಭಟನೆಯ ಸಂದರ್ಭದಲ್ಲಿ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry