ಬೆಂಬಿಡದ ನಕ್ಸಲ್‌ ಆರೋಪದ ಭೂತ

7
ಹೊರಲೆ ಸರೋಜಾ–ಸುರೇಶ್‌ ದಂಪತಿ ಯಾತನೆ: ಬಿಡುಗಡೆಯಾದರೂ ಸಿಗದ ಖುಷಿ

ಬೆಂಬಿಡದ ನಕ್ಸಲ್‌ ಆರೋಪದ ಭೂತ

Published:
Updated:
ಬೆಂಬಿಡದ ನಕ್ಸಲ್‌ ಆರೋಪದ ಭೂತ

ಶಿವಮೊಗ್ಗ: ಜೈಲಿನಿಂದ ಬಿಡುಗಡೆ ಗೊಂಡ ಖುಷಿ ಆ ಮನೆಯಲ್ಲಿ ಇಲ್ಲ; ನೆಮ್ಮದಿಯ ನಿದ್ದೆ ಹಾರಿ ಹೋಗಿದೆ. ಸಂತೋಷದ ಹೊನಲು ಹರಿಯಬೇಕಾ ಗಿದ್ದ ಮನೆಯಲ್ಲಿ ಆತಂಕ, ಭಯ. ರಾತ್ರಿ ಬಿಡುಗಡೆಯಾಗಿ, ಮನೆಗೆ ಬಂದು ಮಲಗಿ ಬೆಳಿಗ್ಗೆ ಏಳುವುದರ ಒಳಗೇ ಮನೆ ಬಾಗಿಲಲ್ಲೇ ಪೊಲೀಸರು ಪ್ರತ್ಯಕ್ಷ ರಾಗಿದ್ದಾರೆ. ಮತ್ತದೇ ಶಂಕೆ, ಅಪ ಮಾನದ ಪ್ರಶ್ನೆಗಳು ಎದುರಾಗುತ್ತಿವೆ.ಶಂಕಿತ ನಕ್ಸಲ್‌ ಪ್ರಕರಣದಲ್ಲಿ ದೋಷ ಮುಕ್ತರಾಗಿ ಇದೇ ಸೆಪ್ಟೆಂಬರ್‌ 25 ರಂದು ಜೈಲಿನಿಂದ ಬಿಡುಗಡೆಗೊಂಡ ಹೊರಲೆ ಸರೋಜಾ ಅವರಿಗೆ ಈಗ ‘ಬಿಡುಗಡೆ’ಯ ಖುಷಿ ಇಲ್ಲದಾಗಿದೆ. ಬಿಡುಗಡೆಯಾದ ದಿನದಿಂದ ಒಬ್ಬರಾದ ನಂತರ ಒಬ್ಬರು ಪೊಲೀಸರು ಸ್ವಾಂತನ ಹೇಳುವ ನೆಪದಲ್ಲಿ ಮನೆಗೆ ಬಂದು ಎಚ್ಚರಿಕೆ ಕೊಡುವ ನಡವಳಿಕೆ ಬೇಸರ ತರಿಸಿದೆ.ಸರೋಜಾ ಅವರ ಹುಟ್ಟೂರು ಚಿಕ್ಕ ಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಹೊರಲೆ. ಈಚೆಗೆ ಉಡುಪಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಅವ ರನ್ನು ದೋಷಮುಕ್ತಗೊಳಿಸಿದ ನಂತರ ಅವರು ಸೀದಾ ಬಂದಿದ್ದು ಗಂಡನ ಮನೆ ಭದ್ರಾವತಿ ತಾಲ್ಲೂಕು ಭಗವತಿಕೆರೆಗೆ. ಇವರ ಮನೆ ಅನತಿ ದೂರದಲ್ಲೇ ರೈತ ಮುಖಂಡ ಕಡಿದಾಳು ಶಾಮಣ್ಣ ಅವರ ಮನೆ ಇದೆ. ಶನಿವಾರ ಭಗವತಿಕೆರೆಗೆ ಭೇಟಿ ನೀಡಿದ ‘ಪ್ರಜಾವಾಣಿ’ ಎದುರು ಸರೋಜಾ ಮತ್ತು ಅವರ ಪತಿ ಸುರೇಶ್‌ ನಾಯ್ಕ ತಾವು ಅನುಭವಿಸುತ್ತಿರುವ ಕಷ್ಟಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.‘ನಮ್ಮದಲ್ಲದ ತಪ್ಪಿಗೆ ಇಷ್ಟು ವರ್ಷ ಜೈಲಿನಲ್ಲಿ ಹಿಂಸೆ ಕೊಟ್ಟಿದ್ದು ಸಾಕು. ಈಗ ನನಗೆ ಗಂಡ, ಮಗ, ಕುಟುಂಬದವರು ಸಿಕ್ಕಿದ್ದಾರೆ. ಹೊಸ ಬದುಕು ಕಟ್ಟಿಕೊಳ್ಳು ತ್ತೇವೆ. ಇನ್ನಾದರೂ ನಮ್ಮನ್ನು ನಮ್ಮ ಪಾಡಿಗೆ ಬಿಡಿ’ ಎನ್ನುವುದು ಪೊಲೀಸರಲ್ಲಿ ಸರೋಜಾ ಅವರು ಕೈ ಮುಗಿದು ಮಾಡಿಕೊಳ್ಳುವ ಮನವಿ.‘ನಮಗಂತೂ ಹಣೆಪಟ್ಟಿ ಕಟ್ಟಿ ಶಿಕ್ಷೆ ನೀಡಿದೀರಿ. ಆದರೆ, ತಿಂದುಂಡು, ಆಟ ಆಡುವ ವಯಸ್ಸಿನಲ್ಲಿ ನನ್ನ ಮಗ ಎರಡು ವರ್ಷ ಹತ್ತು ತಿಂಗಳು ಜೈಲು ವಾಸ ಅನುಭವಿಸಬೇಕಾಗಿದ್ದು ಯಾವ ಕರ್ಮಕ್ಕೆ? ನಮಗೆ ಅನ್ಯಾಯವಾಗಿದೆ; ಯಾರಿಂದ? ಏಕೆ? ಈ ಪ್ರಶ್ನೆ ಬೇಡ. ಆದರೆ, ನಮಗಾದ ನೋವುಗಳನ್ನು ಹೇಳಿಕೊಳ್ಳುವ ಸ್ವಾತಂತ್ರ್ಯಕ್ಕೂ ಅಡ್ಡಿ ಏಕೆ?’ ಎಂದು ಪ್ರಶ್ನಿಸುತ್ತಾರೆ ಸುರೇಶ್‌ ನಾಯ್ಕ.‘ತುಮಕೂರಿನ ಭೀಮಸಂದ್ರದಲ್ಲಿ ಮನೆಯಲ್ಲೇ ಬಟ್ಟೆ ಅಂಗಡಿ ಇಟ್ಟು ಕೊಂಡು ವ್ಯಾಪಾರ ಮಾಡುತ್ತಿದ್ದೇವೆ. ಒಂದು ಬೆಳಗಿನ ಜಾವ ಹತ್ತಾರು ವಾಹನಗಳ ಮೂಲಕ 50ಕ್ಕೂ ಹೆಚ್ಚು ಜನ ಪೊಲೀಸರು ಬಂದು, ನೀವು ಸ್ಟೇಷನ್‌ಗೆ ಬಂದು ಸಹಿ ಹಾಕಿ; ಮೂರ್ನಾಲ್ಕು ದಿನದಲ್ಲಿ ಎಲ್ಲಾ ಪ್ರಕ್ರಿಯೆ ಮುಗಿಯುತ್ತದೆ. ನಿಮ್ಮನ್ನು ಬಿಟ್ಟು ಬಿಡು ತ್ತೇವೆ ಎಂದು ಹೇಳಿ ನಮ್ಮನ್ನು ಶಿವ ಮೊಗ್ಗಕ್ಕೆ ಕರೆದುಕೊಂಡು ಬಂದು ಸೀದಾ ಜೈಲಿಗೆ ತಳ್ಳಿದರು’.

‘ಒಂದಲ್ಲ; ಎರಡಲ್ಲ ಬರೋಬ್ಬರಿ 22 ಪ್ರಕರಣಗಳನ್ನು ನನ್ನ ಮೇಲೆ ಹಾಕಿದರು. ಸುರೇಶ್‌ ಮೇಲೆ 5 ಪ್ರಕರಣ ಗಳನ್ನು ಹಾಕಿದರು.ಕುಂದಾಪುರದಲ್ಲಿ 10, ಶೃಂಗೇರಿ 9, ತೀರ್ಥಹಳ್ಳಿ, ಉಡುಪಿ, ಶಿವಮೊಗ್ಗದಲ್ಲಿ ತಲಾ 1 ಪ್ರಕರಣ ಗಳನ್ನು ನನ್ನ ಮೇಲೆ ಹಾಕಲಾಯಿತು. ಮೈಸೂರಿನಲ್ಲಿ 1 ವರ್ಷ, ಶಿವಮೊಗ್ಗ ದಲ್ಲಿ 2 ಹಾಗೂ ಉಡುಪಿಯಲ್ಲಿ ಒಂದೂವರೆ ವರ್ಷ ಜೈಲು ಶಿಕ್ಷೆ ಅನುಭ ವಿಸಿದೆ. ಒಟ್ಟಾರೆ ನಾಲ್ಕೂವರೆ ವರ್ಷದ ಜೈಲು ವಾಸ ನನ್ನದು. ಸುರೇಶ್, ಶಿವ ಮೊಗ್ಗದ ಜೈಲಿನಲ್ಲಿ 2 ವರ್ಷ 6 ತಿಂಗಳು ಶಿಕ್ಷೆ ಅನುಭವಿಸಿ ಹೊರಗೆ ಬಂದಿದ್ದಾರೆ’ ಎಂದು ವಿವರಿಸಿದರು ಸರೋಜಾ.‘ಕೆಲವು ಪರಿಚಯದ ಪೊಲೀಸರು ಹೇಳುವ ಪ್ರಕಾರ, ಕೆಲ ಪೊಲೀಸ್‌ ಅಧಿ ಕಾರಿಗಳು ಯಾವುದೋ ಊರಿಗೆ ಹೋಗಿ ಇಷ್ಟು ಎತ್ತರದ, ಬಿಳಿಮುಖದ ಹುಡುಗಿ ನಿಮ್ಮೂರಿಗೆ ಬಂದಿದ್ದಳಾ ಎಂದು ಜನರನ್ನು ಕೇಳುತ್ತಿದ್ದರು. ಅವರು ಹೌದು ಎಂದರೆ, ಅದನ್ನೇ ಪ್ರಕರಣವಾಗಿ ಪರಿರ್ವತನೆ ಮಾಡಿಬಿಡುತ್ತಿದ್ದರಂತೆ. ಹಾಗಾಗಿ, ನನ್ನ ಮೇಲೆ ಪ್ರಕರಣಗಳ ಮೇಲೆ ಪ್ರಕರಣಗಳನ್ನು ಹಾಕಲಾ ಯಿತು. ಇದಕ್ಕೆ ನ್ಯಾಯಾಧೀಶರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದರು’ ಎಂದು ಸ್ಮರಿಸುತ್ತಾರೆ ಸರೋಜಾ.‘ನಾವು ಗಂಡ–ಹೆಂಡತಿ ಜೈಲು ಸೇರಿ ದ್ದರಿಂದ ಮಗು ಮಾನಸಿಕ ತುಮುಲಕ್ಕೆ ಒಳಗಾಗಬೇಕಾಯಿತು. ಎರಡೂ ಕಡೆ ತಂದೆ–ತಾಯಿಗಳ ಆರೋಗ್ಯ ಹದ ಗೆಟ್ಟಿತು. ಜೈಲಿನಿಂದ ಬಿಡುಗಡೆಗೆ ಹಣ ಹೊಂದಿಸಲು ಕೇರಳಕ್ಕೆ ಕೂಲಿ ಅರಸಿ ಹೋದ ನನ್ನ ಮೈದುನ ಮಂಜುನಾಥ ಕೆಲಸ ಮಾಡುವ ಸ್ಥಳದಲ್ಲೇ ಮೃತಪಟ್ಟ. ನಾನು ಈಗ ಬಿಡುಗಡೆಯಾಗಿ ಮನೆಗೆ ಬಂದಿದ್ದೇನೆ; ಆದರೆ, ಈಗ ಅವನೇ ಮನೆ ಯಲ್ಲಿ ಇಲ್ಲ’ ಎಂದು ಕಣ್ಣೀರು ಹಾಕು ತ್ತಾರೆ ಸರೋಜಾ.‘ಕುದುರೆಮುಖ ರಾಷ್ಟ್ರೀಯ ಉದ್ಯಾ ನದ ನೆಪದಲ್ಲಿ ತಲತಲಾಂತರ ದಿಂದ ಅಲ್ಲಿ ಬದುಕಿದ್ದ ನಮ್ಮನ್ನು ಸ್ಥಳಾಂತರ ಮಾಡಲು ಬಂದಾಗ ಕಾನೂನು ಚೌಕ ಟ್ಟಿನಲ್ಲೇ ಹೋರಾಟ ಗಳನ್ನು ಸಂಘಟಿ ಸಿದ್ದು; ಊರೂರು ತಿರುಗಿ ಪ್ರತಿಭಟನೆ ಕೈಗೊಂಡಿದ್ದು ಹೌದು. ಆದರೆ, ಎಲ್ಲಿಯೂ ಶಸ್ತ್ರಗಳನ್ನು ಕೈಗೆ ತೆಗೆದು ಕೊಳ್ಳಲಿಲ್ಲ; ಅದರಲ್ಲಿ ನನಗೆ ನಂಬಿಕೆಯೂ ಇಲ್ಲ. ಸಂಘಟನೆ ಜತೆ ಜತೆಗೆ ಪರಸ್ಪರ ಅರ್ಥಮಾಡಿ ಕೊಂಡಿದ್ದ ಸುರೇಶ್‌ ನಾಯ್ಕ ಅವರನ್ನು ಮೆಚ್ಚಿ ಮದುವೆಯಾದೆ. ದುಡಿಮೆಗೆ ನಮ್ಮದೇ ಹಾದಿ ನಾವು ಕಂಡುಕೊಂಡಿ ದ್ದೆವು. ನನ್ನನ್ನು ಹುಡುಕಿಕೊಟ್ಟವರಿಗೆ ₨1 ಲಕ್ಷ ಬಹುಮಾನ ಘೋಷಿಸಿದ್ದು, ಪೊಲೀಸರು ನಮ್ಮನ್ನು ಹುಡುಕುತ್ತಿರು ವುದು ಯಾವುದೂ ಗೊತ್ತಿರಲಿಲ್ಲ’ ಎಂದು ಗತ ಘಟನೆಗಳನ್ನು ಅವಲೋಕಿಸುತ್ತಾರೆ ಸರೋಜಾ.ಉಡುಪಿ ನ್ಯಾಯಾಲಯ ದೋಷಮುಕ್ತಗೊಳಿಸಿದರೂ ಜೈಲಿನಿಂದ ಹೊರಬರುವಾಗ ಪೊಲೀಸರು, ‘ಇವರ ಮೇಲಿನ ಎಲ್ಲಾ ಪ್ರಕರಣಗಳು ಇಷ್ಟು ಬೇಗ ಮುಗಿತಾ? ಜೈಲಿನಲ್ಲಿ ಗಲಾಟೆ, ದೊಂಬಿ ಮಾಡಿಲ್ಲವೇ’ ಎಂದು ಜೈಲರ್‌ನ್ನು ಕೇಳಿದಾಗ ನನಗೆ ತುಂಬಾ ಬೇಸರವಾಯಿತು. 

ನಾನು ಓದಿದ್ದು ಎಸ್ಸೆಸ್ಸೆಲ್ಸಿಯವರೆಗೆ ಕಥೆ, ಕವನ ಬರೆಯುವುದು ಮೊದಲಿ ನಿಂದಲೂ ಹವ್ಯಾಸ. ಜೈಲಿನಲ್ಲಿರುವಾಗ ಹಲವು ಕಥೆ–ಕವನಗಳನ್ನು ಬರೆದಿದ್ದೇನೆ. ಟೈಲರಿಂಗ್‌ ಕಲಿತ್ತಿದ್ದೇನೆ’ ಎಂದು ಸರೋಜಾ ಹೇಳುತ್ತಾರೆ.   ಸುರೇಶ್‌ ನಾಯ್ಕ ಅವರು, ಜೈಲಿನಲ್ಲಿ ರುವಾಗಲೇ ಒಂದು ಕಾದಂಬರಿ, ಸಾಕಷ್ಟು ಕಥೆ–ಕವನಗಳನ್ನು ಬರೆದಿ ದ್ದಾರೆ. ತಮ್ಮ ಹೋರಾಟದ ಬದುಕಿನ ಕುರಿತಂತೆ ಬರೆದ ಕಾದಂಬರಿಗೆ ‘ಮಲೆ ನಾಡಿನ ಮೊಗ್ಗುಗಳು’ ಎಂದು ಹೆಸರಿ ಟ್ಟಿದ್ದಾರೆ. ಇವೆಲ್ಲವನ್ನೂ ಪ್ರಕಟಿಸ ಬೇಕೆಂಬ ಆಸೆ ಅವರಿಗಿದೆ.‘ಭವಿಷ್ಯ ತ್ರಿಶಂಕುವಾಗಿದೆ. ಅಲ್ಪ ಜಮೀನಿದೆ; ಅರ್ಧ ವರ್ಷದ ಜೀವನಕ್ಕೆ ಸಾಕಾಗುತ್ತದೆ. ಮುಂದೇನು ಎಂಬುದು ಸ್ಪಷ್ಟವಾಗಿಲ್ಲ. ಗಂಡ, ಹೆಂಡತಿ, ಮಗು ಒಟ್ಟಾಗಿದ್ದೇವೆ; ಹೇಗೋ ಬದುಕು ಕಂಡು ಕೊಳ್ಳುತ್ತೇವೆ. ಆದರೆ, ಪೊಲೀಸರು ಮತ್ತೆ ನಮ್ಮ ಬೆನ್ನು ಬೀಳದಿದ್ದರೆ ಅಷ್ಟೇ ಸಾಕು’ ಎನ್ನುತ್ತಾರೆ ಸುರೇಶ್‌ ನಾಯ್ಕ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry