ಮಂಗಳವಾರ, ಏಪ್ರಿಲ್ 20, 2021
31 °C

ಬೆಟ್ಟಕ್ಕೊಂದು ತೋರಣ !

ಕೆ.ನರಸಿಂಹಮೂರ್ತಿ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಅಲ್ಲಿ ಮೌನ ನಿಂತ ಬೆಟ್ಟ ಸಾಲುಗಳ ಬಾಗಿಲಿನಲ್ಲಿ ಮಾವು-ಬೇವಿನ ತೋರಣ ಕಂಗೊಳಿಸುತ್ತಿದೆ. ಚಿಗುರಿದ ಮಾವಿನ ಎಲೆಗಳ ಮಾಮರ ಮತ್ತು ಹೂ ಬಿಟ್ಟ ಬೇವಿನ ಮರಗಳ ಪರಿಮಳ ಬಂಡೆಕಲ್ಲುಗಳ ನಡುವಿನ ರಸ್ತೆಯುದ್ದಕ್ಕೂ ಘಮ್ಮನೆ ಪಸರಿಸುತ್ತಿದೆ...!ಯುಗಾದಿ ಸಂಭ್ರಮಕ್ಕೆ ಒಂದೇ ದಿನ ಉಳಿದಿದೆ. ಎಲ್ಲರೂ ಮಾವು-ಬೇವಿನ ಎಲೆಗಳಿಗಾಗಿ ಹುಡುಕಾಟ ನಡೆಸಿದ್ದರೆ, ಇಲ್ಲಿ ಬೆಟ್ಟ ಸಾಲು ಆಗಲೇ ಮಾವು-ಬೇವಿನ ತೋರಣದಲ್ಲಿ ಅಲಂಕಾರಗೊಂಡಿದೆ. ಅವಕ್ಕೆ ಜೊತೆಯಾದಂತೆ, ಸಣ್ಣಪುಟ್ಟ ಗುಡ್ಡಗಳ ನಡುವೆಯೂ ಪುಟ್ಟ ಬೇವಿನ ಮರಗಳು ಅಲುಗಾಡುತ್ತಿವೆ.ಅಂದಹಾಗೆ, ಈ ದೃಶ್ಯವನ್ನು ನೋಡಲು ತೇರಳ್ಳಿಯ ಬೆಟ್ಟದ ದಾರಿಗೆ ಬರಬೇಕು. ನಗರದ ಹೊರವಲಯದ ಮಹಾಲಕ್ಷ್ಮಿ ಬಡಾವಣೆಯ ಪಕ್ಕದ ಡಾಂಬರು ರಸ್ತೆಯ ತಿರುವಿನಲ್ಲಿ ಕೊಂಚ ದೂರ ನಡೆದರೆ, ಬೆಟ್ಟದ ಆರಂಭದ ಘಟ್ಟದಲ್ಲೆ ಮಾವಿನ ಮರಗಳ ಸಾಲು ಎರಡೂ ಬದಿಯಲ್ಲಿ ಕಾಣುತ್ತದೆ. ಅದಕ್ಕೆ ಮುಂಚೆಯೇ ಸಿಗುವ ಗುಡ್ಡಗಳಲ್ಲಿ ಬೇವಿನ ಮರಗಳು ಅಲುಗಾಡುತ್ತಿರುವುದನ್ನೂ ಕಾಣಬಹುದು.ಅಷ್ಟೆ ಅಲ್ಲ, ಆ ಮೋಹಕ ದೃಶ್ಯವನ್ನು ಕಣ್ತುಂಬಿಕೊಂಡು ಬೆಟ್ಟದ ಡಾಂಬರು ರಸ್ತೆಯಲ್ಲಿ ನಡೆದರೆ ಉದ್ದಕ್ಕೂ ಬೇವಿನ ಮರಗಳ ಸಾಲನ್ನು ಕಾಣಬಹುದು. ಹೂ ಬಿಟ್ಟಿರುವ ಬೇವಿನ ಮರಗಳ ಬಳಿ ನಿಂತರೆ ನೆರಳಿನ ಜೊತೆಗೆ ವಿಶೇಷ ಪರಿಮಳವನ್ನೂ ಆಘ್ರಾಣಿಸಬಹುದು.ನಿತ್ಯವೂ ವಾಯುವಿಹಾರದ ಸಲುವಾಗಿ ಬೆಟ್ಟ ಹತ್ತುವ ಚಾರಣಿಗರಿಗೆ ಮತ್ತು ಬೆಟ್ಟದ ಮೇಲಿರುವ ಹಳ್ಳಿಗರಿಗೆ ಸಾಮಾನ್ಯವೆಂಬಂತೆ ಕಾಣುವ ಈ ಮಾವು-ಬೇವಿನ ಮರಗಳ ಸಾಲು ಹೊಸಬರಿಗೆ ಕುತೂಹಲ ಮೂಡಿಸುತ್ತದೆ. ಇಷ್ಟೊಂದು ಮಾವು-ಬೇವಿನ ಮರಗಳನ್ನು ಇಲ್ಲಿ ಸಾಲಾಗಿ ನೆಟ್ಟವರಾದರೂ ಯಾರು? ಎಂಬ ಪ್ರಶ್ನೆ ಖಂಡಿತ ಮೂಡುತ್ತದೆ.ಹೇಗಾಯಿತು ? ಬೆಟ್ಟದ ತಪ್ಪಲು ಮತ್ತು ಬೆಟ್ಟದ ದಾರಿಯುದ್ದಕ್ಕೂ ಇರುವ ಈ ಮಾವು-ಬೇವಿನ ಮರಗಳು ಕಣ್ಣು ಬಿಟ್ಟಿದ್ದು ಒಂದು ದಶಕಕ್ಕೂ ಹಿಂದೆ. ಜಪಾನ್ ಬ್ಯಾಂಕ್ ಆಫ್ ಇಂಟರ್‌ನ್ಯಾಷನಲ್ ಕೋ ಆಪರೇಷನ್‌ನ (ಜೆಬಿಐಸಿ) ಅರಣ್ಯ ನೀತಿಯ ಫಲವಾಗಿ ದೊರೆತ ಸಾಲಸೌಲಭ್ಯದ ಅಡಿಯಲ್ಲಿ ಅರಣ್ಯ ಇಲಾಖೆ ಈ ಗಿಡಗಳನ್ನು 1998ರಿಂದ 2000ದ ಅವಧಿಯಲ್ಲಿ ನೆಟ್ಟಿತ್ತು. ತಪ್ಪಲಲ್ಲಿ ಈಗಿರುವ ಮಾವಿನ ಮರಗಳ ಸಾಲಿನ ಪಕ್ಕದಲ್ಲೆ ಇರುವ ಕೆರೆಯೂ ಸೇರಿದಂತೆ ಸುತ್ತಲಿನ ಪ್ರದೇಶವನ್ನು ‘ನೇಚರ್ ಪಾರ್ಕ್’ ಮಾಡುವ ಯೋಜನೆಯ ಅಂಗವಾಗಿ ನೆಟ್ಟ ಗಿಡಗಳು ಅವು.‘ಮಹತ್ವಾಕಾಂಕ್ಷೆಯಿಂದ ಶುರುವಾದರೂ ಯೋಜನೆ ಪೂರ್ಣವಾಗಿ ಕಾರ್ಯರೂಪಕ್ಕೆ ಬರಲಿಲ್ಲ.  ಇಡೀ ಪರಿಸರವನ್ನು ಹಸಿರುಮಯಗೊಳಿಸುವ ಉದ್ದೇಶವಿತ್ತು.

 ಕೆರೆ ಮತ್ತು ಸುತ್ತಮುತ್ತಲಿನ ಸ್ಥಳಗಳ ಮಾಲೀಕತ್ವದ ವಿವಾದದ ಪರಿಣಾಮವಾಗಿ ಯೋಜನೆ ನೆನಗುದಿಗೆ ಬಿತ್ತು. ಆದರೆ ಆಗ ನೆಟ್ಟ ಗಿಡಗಳು ಮಾತ್ರ ಉಳಿದಿರುವುದು ಸಂತೋಷ ಮತ್ತು ಸೋಜಿಗದ ಸಂಗತಿ’ ಎಂಬುದು ಅರಣ್ಯ ಇಲಾಖೆಯ ಮೂಲಗಳ ನುಡಿ.ಮಾವು-ಬೇವಿನ ಮರಗಳನ್ನು ಇಲಾಖೆಯು ವಿಫಲ ಯೋಜನೆಯ ಸಾಕ್ಷಿರೂಪಗಳಂತೆ ನೋಡಿದರೆ, ಬೆಟ್ಟ ಸಾಲು ಮಾತ್ರ ಈ ಯುಗಾದಿಯ ವೇಳೆಯಲ್ಲಿ ಆ ಮರಗಳನ್ನು ತೋರಣದಂತೆ ಕಾಣುತ್ತಿದೆ ಎಂಬುದೇ ವಿಶೇಷ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.