ಬೆಟ್ಟದಲ್ಲಿ ಬೇಲಿ ಸೊಪ್ಪು ಸಾರಿನೂಟ

7

ಬೆಟ್ಟದಲ್ಲಿ ಬೇಲಿ ಸೊಪ್ಪು ಸಾರಿನೂಟ

Published:
Updated:
ಬೆಟ್ಟದಲ್ಲಿ ಬೇಲಿ ಸೊಪ್ಪು ಸಾರಿನೂಟ

ತಿಪಟೂರು: ಶ್ರಿಗಂಧ ಚಿಗುರಿನ ಪಲ್ಯ, ತುರಿಕೆ ಸೊಪ್ಪಿನ ದೋಸೆ, ಗಂಡು ಉತ್ರಾಣಿಯ ಸಾರು...

ಹೀಗೆ ಅಲ್ಲಿ ಹೊಲ- ಬೇಲಿಯ 50 ರೀತಿ ಸೊಪ್ಪುಗಳಿಂದ ಮಾಡಿದ ತಿನಿಸುಗಳ ಖದರು ಕಾಣುತ್ತಿತ್ತು. ಅಂಗೈಯಲ್ಲಿ ಸಾರು ಹೀರಿದವರ ಮುಖದಲ್ಲಿ ಅಚ್ಚರಿ ಇತ್ತು.ತಾಲ್ಲೂಕಿನ ಕಲ್ಲಹಳ್ಳಿ ಸಮೀಪದ ರಾಮೇಶ್ವರಬೆಟ್ಟದ ಗುರುವಾರ ಇಂಥದ್ದೊಂದು ತರಹೇವಾರಿ ಸಾರುಗಳ ಘಮಲಿಗೆ ಸಾಕ್ಷಿ ಯಾಯಿತು. ತನ್ನ ಒಡಲಲ್ಲಿ ಇಂಥದ್ದೇ ಹತ್ತಾರು ಸೊಪ್ಪು ಸಂಪತ್ತು, ನೂರಾರು ಗಿಡಮೂಲಿಕೆ ಹೊತ್ತು ಬೀಗುತ್ತಿರುವ  ಬೆಟ್ಟ ತನ್ನಲ್ಲಿಗೆ ಬಂದ ಪರಿಸರ ಪರ ಮನಸ್ಸುಗಳೊಂದಿಗೆ ಮೌನ ಅನುಸಂಧಾನ ನಡೆಸುತ್ತಿತ್ತು. ಇಂಥ ಸ್ಥಳದಲ್ಲಿ ಗುರುವಾರ ಆಯೋಜನೆಗೊಂಡಿದ್ದ `ಸೊಪ್ಪುಸೆದೆ  ಕಾರ್ಯಕ್ರಮ ವಿಶಿಷ್ಟತೆ ದಾಖಲಿಸಿತು.ಸಾಕ್ಷರತಾ ಆಂದೋಲನ, ವಿಜ್ಞಾನ ಪರಿಷತ್ ಕಾರ್ಯಕ್ರಮ, ಪರಿಸರ ಜಾಗೃತಿ ಕಾರ್ಯಕ್ರಮಗಳೆಂದು ಹತ್ತಾರು ವರ್ಷ ಸುತ್ತಾಡಿದ್ದ ಗುಂಗುರಮಳೆಯ ಮುರುಳೀಧರ್ ಕಡೆಗೆ ತಮ್ಮೂರಿನ, ಸುತ್ತಮುತ್ತಲಿನ ನೆಲೆಯಲ್ಲಿ ಏನಾದರೂ ಮಾಡಬಹುದೇ ಎಂದು ಹುಡುಕಾಟದಲ್ಲಿ ತೊಡಗಿಸಿಕೊಂಡು, ಕೆಲ ಶಾಲೆಗಳನ್ನು ಆಯ್ದು ಅಲ್ಲಿನ ಆವರಣಗಳಲ್ಲಿ ತರಕಾರಿ, ಗಿಡಮರ ಬೆಳೆಸುವುದು, ಸುತ್ತಮುತ್ತಲಿನ ಗಿಡಮೂಲಿಕೆಗಳನ್ನು ಗುರುತಿಸಿ ಬಳಸಲು ಮಕ್ಕಳನ್ನು ಪ್ರೇರೇಪಿಸುವಂತಹ ಕೆಲಸಕ್ಕೆ ಕೈ ಹಾಕಿದರು. ಅದರ ಭಾಗವಾಗಿ ಹೊಲ- ಬೇಲಿಯಲ್ಲಿ, ಬೆಟ್ಟಗುಡ್ಡಗಳಲ್ಲಿ ತಿನ್ನಲು ಯೋಗ್ಯವಾದ ಸೊಪ್ಪುಗಳನ್ನು ಬಳಸುವ ಬಗೆ ಮತ್ತು ಅವುಗಳ ಆರೋಗ್ಯ ಅನುಕೂಲಗಳನ್ನು ವಿವರಿಸುತ್ತಾ ಬಂದಿದ್ದರು.ಈ ಜ್ಞಾನವನ್ನು ವಿವಿಧ ಶಾಲೆಯ ಮಕ್ಕಳು ಪರಸ್ಪರ ಹಂಚಿಕೊಳ್ಳಬೇಕೆಂಬ ಉದ್ದೇಶದಿಂದ ಬೆಟ್ಟದ ರಾಮೇಶ್ವರ ಪ್ರೌಢಾಶಾಲೆಯ ಸಹಕಾರದೊಂದಿಗೆ ಸೊಪ್ಪುಸೆದೆ ಕಾರ್ಯಕ್ರಮ ಆಯೋಜನೆಗೊಂಡಿತ್ತು.

ಸುತ್ತಮುತ್ತಲಿನ ಹತ್ತು ಪ್ರೌಢಶಾಲೆಗಳ ತಲಾ ಐದು ಮಕ್ಕಳು ಒಂದೊಂದು ಬಗೆಯ ಸೊಪ್ಪಿನ ಪಲ್ಯ, ಸಾರು, ದೋಸೆ, ಬೋಂಡಾ ಮತ್ತಿತರರ ಖಾದ್ಯ ಮಾಡಿಕೊಂಡು ಬಂದಿದ್ದರು. ಹೇಗಿರುತ್ತದೆಂದು ತೋರಿಸಲು ಸೊಪ್ಪನ್ನೂ ತಂದಿದ್ದರು. ಸುಮಾರು 50 ರೀತಿಯ ಸೊಪ್ಪಿನ ರುಚಿಗಳು ಅಲ್ಲಿ ಮೇಳೈಸಿದ್ದವು.ಕಾಡುಸಬ್ಸಿಸಿಗೆ, ನಾಲ್ಕೆಲೆ ಹೊನ್ನೆ, ದಾಗಡಿ, ವಾಯಿ ನಾರಾಯಣಿ, ಮಂಗರಬಳ್ಳಿ, ನಾರಬಳ್ಳಿ, ಹಡಗುಚಿಟ್ಟ, ಬುಡದುಂಬೆ, ಅಕ್ಕಿಅವರೆ, ಜಾಲಮೂಲಂಗಿ, ಒಂದೆಲಗ ಮತ್ತಿತರರ ಜಾತಿಯ ಕೇಳರಿಯದ ಸೊಪ್ಪನ್ನು ಮಕ್ಕಳೇ ಗುರುತಿಸಿ ಕಿತ್ತು ಅಮ್ಮಂದಿರಿಂದ ಖಾದ್ಯ ಮಾಡಿಸಿ ತಂದಿದ್ದರು. ತುರಿಕೆ ಸೊಪ್ಪಿನ ದೋಸೆ, ಉಳಿಸೊಪ್ಪಿನ ಬೋಂಡಾ, ಶ್ರಿಗಂಧದ ಚಿರುಗಿನ ಪಲ್ಯವನ್ನಂತೂ ಹಲವರು ಕಿತ್ತಾಡಿ ತಿಂದರು.ಅಲ್ಲದೆ ರಾಮೇಶ್ವರ ಬೆಟ್ಟದಲ್ಲಿರುವ ನೂರಾರು ಗಿಡಮೂಲಿಕೆಗಳನ್ನು ಶಾಲಾ ಮಕ್ಕಳು ಪರಿಚಯ ಮಾಡಿಕೊಂಡರು. ಒಂದೊಂದು ಗಿಡದ ಬಳಿಯೂ ಒಬ್ಬೊಬ್ಬರು ನಿಂತು ಆ ಗಿಡದ ಔಷಧ ಗುಣಗಳನ್ನು ವಿವರಿಸುತ್ತಿದ್ದು, ವಿಶೇಷವಾಗಿತ್ತು.  ಪರಿಸರ ತಜ್ಞ ಜನಾರ್ದನ್, ಡಾ.ಮೈಥಿಲಿ  ಮತ್ತು ಕೆಲ ನಾಟಿ ವೈದ್ಯರೂ ಪಾಲ್ಗೊಂಡಿದ್ದರು.ಶಾಸಕ ಬಿ.ಸಿ. ನಾಗೇಶ್, ಉಪ ವಿಭಾಗಾಧಿಕಾರಿ ವೈ.ಎಸ್.ಪಾಟೀಲ, ಎಎಸ್‌ಪಿ ಡಾ. ಬೋರ ಲಿಂಗಯ್ಯ, ತಹಶೀಲ್ದಾರ್ ವಿಜಯಕುಮಾರ್, ಬಿಇಒ ಮನಮೋಹನ್, ಸಿಡಿಪಿಒ ಎಸ್. ನಟರಾಜ್ ಮತ್ತಿತರರು ಪಾಲ್ಗೊಂಡು ಬೆರಕೆ ಸೊಪ್ಪಿ ಸಾರಿನ ಊಟ ಸವಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry