ಬೆಟ್ಟದ ನೀರು ಹುಲುಸು ಪೈರು

5

ಬೆಟ್ಟದ ನೀರು ಹುಲುಸು ಪೈರು

Published:
Updated:

ಬರಗಾಲ ಎನ್ನುತ್ತಿದ್ದ ಈ ಗ್ರಾಮದ್ಲ್ಲಲೀಗ ಸಂಚಲನ. ಹವಾಮಾನ ವೈಪರೀತ್ಯದಿಂದಲೂ ನಲುಗಿದ್ದ ಕೊರಟಗೆರೆ ತಾಲ್ಲೂಕು ಡಿ.ನಾಗೇನಹಳ್ಳಿ ರೈತರಲ್ಲಿ ಕೃಷಿ ಬಗ್ಗೆ ಭರವಸೆ ಮೂಡಿದೆ. ಮಳೆ ಕೊರತೆ ನಡುವೆಯೂ ಮೂರಡಿ ಎತ್ತರ ರಾಗಿ ಬೆಳೆಯು ಈಗ ರೈತರ ಮೊಗದಲ್ಲಿ ನಗೆ ಮೂಡಿಸಿದೆ.



ಮಳೆಯ ಕೊರತೆ, ಪರಿಣಾಮ ಬಂಜರಾದ ಜಮೀನು. ಆಗಸದತ್ತ ಮುಖಮಾಡಿ ಸೋತಾಯಿತು. ಮಳೆರಾಯ ಧರೆಗಿಳಿಯುವ ಮುನ್ಸೂಚನೆ ಇಲ್ಲ. ಇಂತಹ ಸಂದರ್ಭದಲ್ಲಿ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳದೇ ಹಲವು ವಿಧದಲ್ಲಿ ಮಾರ್ಗೋಪಾಯ ಕಂಡುಕೊಂಡ ಕೆಲ ರೈತರ ಪರಿಚಯವೇ `ಬರಡು ನೆಲದಲ್ಲಿ ಹಸಿರು ಚಿಗುರಿದಾಗ...'



`ಈ ನೀರನ್ನು ನೋಡಿ ಸ್ವಾಮೀ, ಇಷ್ಟ್ ವರುಸಾ ನಮ್ ಕೈಗೆ ಸಿಗದೆ ಆಟ ಆಡಿಸ್ತಿತ್ತು...'-ಹೀಗೆ ಹೇಳುತ್ತಾ ಎರಡು ಕೈಗಳನ್ನೂ ಅಗಲಿಸಿ ತಮ್ಮ ಬತ್ತದ ಗದ್ದೆಯತ್ತ ದೃಷ್ಟಿನೆಟ್ಟ ವೆಂಕಟಪ್ಪ ಅವರ ಮೊಗದಲ್ಲಿ ಸಂತಸ ಎದ್ದು ಕಾಣುತ್ತಿತ್ತು. ಬೆಟ್ಟದಿಂದ ಹರಿದು ಅಪವ್ಯಯವಾಗುತ್ತಿದ್ದ ನೀರು, ಈಗ ಇವರು ತೋಡಿದ ಕೃಷಿ ಹೊಂಡಗಳಲ್ಲಿ ಸಂಗ್ರಹವಾಗುತ್ತಿದೆ. ಎರಡು ವರ್ಷದ ಹಿಂದೆ ಚಿಗೊರೊಡೆದ ಕನಸು ಈಗ ಸಾಕಾರವಾಗಿದೆ.



ವೆಂಕಟಪ್ಪ ಅವರ ಕೃಷಿ ಜಮೀನಿನ ಬೆಟ್ಟದ ಮೇಲಿನ ಸಸಿಗಳು ಗಿಡಗಳಾಗಿವೆ, ತುಂಬಿದ ಹೊಂಡಗಳಲ್ಲಿ ಮೀನುಗಳಿವೆ,  ಸುತ್ತಲೂ ತಾವರೆ ಹೂವು, ಹಚ್ಚ ಹಸಿರು ವಾತಾವರಣ ಕಣ್ಸೆಳೆಯುತ್ತಿವೆ. ಇದು ಒಬ್ಬ ವೆಂಕಟಪ್ಪನ ಜೀವನದಲ್ಲಿ ಆದ ಬದಲಾವಣೆ ಅಲ್ಲ;  ಕೊರಟಗೆರೆ ತಾಲ್ಲೂಕು ಡಿ.ನಾಗೇನಹಳ್ಳಿ ಗ್ರಾಮದ 50ಕ್ಕೂ ಹೆಚ್ಚು ರೈತರ ಹಾಗೂ 290 ಕುಟುಂಬಗಳ ಜೀವನದಲ್ಲಾದ `ಸಂಚಲನ'.

ಬರಗಾಲದ ಜತೆಜತೆಗೆ ಹವಾಮಾನ ವೈಪರೀತ್ಯದಿಂದ ತತ್ತರಿಸಿದ್ದ ಗ್ರಾಮದ ಉದ್ಧಾರಕ್ಕೆ ಟೊಂಕಕಟ್ಟಿ ನಿಂತ ರೈತರಿಗೆ ಸಾಥ್ ನೀಡಿದ್ದು `ಸೈರಣೆ' ಕೃಷಿ ಯೋಜನೆ ಹಾಗೂ ತುಮಕೂರಿನ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ.



ಡಿ.ನಾಗೇನಹಳ್ಳಿ ಗ್ರಾಮದಲ್ಲಿ ಕೃಷಿ ಯೋಗ್ಯ ಜಮೀನು ಇರುವುದು ಕೇವಲ 190 ಹೆಕ್ಟೇರ್. ಅದರಲ್ಲಿ 15.6 ಹೆಕ್ಟೇರ್ ನೀರಾವರಿ ಜಮೀನು ಬಿಟ್ಟರೆ 174 ಹೆಕ್ಟೇರ್ ಮಳೆ ಆಶ್ರಯಿಸಿತ್ತು. ಈಗ ಮಳೆಯನ್ನೇ ನೆಚ್ಚಿ ಕೃಷಿಗೆ ತೊಡಗಬೇಕಾದ ಅನಿವಾರ್ಯ ಇಲ್ಲಿನ ರೈತರಿಗಿಲ್ಲ.



ಬೆಳೆ ಹಾನಿಯಾಗದಂತೆ ತಡೆಯಲು ರೈತರು ಮೊದಲ ಹಂತವಾಗಿ ಮಳೆ ನೀರನ್ನು ಕೃಷಿ ಹೊಂಡಗಳಲ್ಲಿ ಶೇಖರಿಸಿದರು. ಇದರ ಜತೆಯಲ್ಲಿಯೇ ಕಂದಕ, ಒಡ್ಡು, ಬದು ನಿರ್ಮಿಸಿದರು. ಜಮೀನಿನ ಸಾರವರ್ಧನೆಗೆ ಮಲ್ಚಿಂಗ್, ದ್ವಿದಳ ಧಾನ್ಯದ ಬೆಳೆಗಳಿಗೆ ಒತ್ತುಕೊಟ್ಟರು. ಹಸಿರು ಗೊಬ್ಬರವನ್ನು ಹೆಚ್ಚಾಗಿ ಭೂಮಿಗೆ ಸೇರಿಸಲು ಬದುವಿನ ಮೇಲೆ ಕೆಲವು ಸಸಿಗಳನ್ನು ಕೂಡ ನೆಟ್ಟಿದ್ದಾರೆ. ಆ ಗಿಡಗಳಿಂದ ಉದುರುವ ಎಲೆಗಳೇ ಗೊಬ್ಬರವಾಗುತ್ತಿದೆ.



ಮಿತ ನೀರು ಬಳಕೆಗೆ ಹನಿ ನೀರಾವರಿ, ತುಂತುರು ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ. ರಾಗಿ, ಮುಸುಕಿನ ಜೋಳ, ಹುರುಳಿ, ಅವರೆ, ತೊಗರಿ, ನೆಲಗಡಲೆ, ಹರಳು ಮೊದಲಾದ ಬೆಳೆ ಜತೆಯಲ್ಲಿಯೇ ಹುಣಸೆ, ತೇಗ, ಗೋಡಂಬಿ ಸಸಿಗಳನ್ನು ನೆಡಲಾಗಿದೆ. ಇದು ಈಗ ಈ ಗ್ರಾಮದ ರೈತರಿಗೆ ಪರ್ಯಾಯ ಆದಾಯಕ್ಕೆ ಮೂಲವಾಗಿದೆ.



ಹವಾಮಾನ ವೈಪರೀತ್ಯ ತಡೆದುಕೊಳ್ಳುವ, ರೋಗ ನಿರೋಧಕ ಶಕ್ತಿ ಮತ್ತು ಹೆಚ್ಚು ಇಳುವರಿಯ ಎಂಎಲ್ 365 ಎಂಬ ತಳಿ ರಾಗಿಯು ಮಳೆ ಕೊರತೆ ನಡುವೆಯೂ ಮೂರಡಿ ಬೆಳೆದು ನಿಂತಿದೆ. ರೈತ ಮುದ್ದುಹನುಮಯ್ಯ ಎಂಬುವರು ತಮ್ಮ ಅರ್ಧ ಎಕರೆ ಜಮೀನಿನಲ್ಲಿ 14 ಕ್ವಿಂಟಲ್ ರಾಗಿ ಬೆಳೆ ನಿರೀಕ್ಷೆಯಲ್ಲಿದ್ದಾರೆ. ಈ ರೀತಿ  ಸುಮಾರು 20 ಹೆಕ್ಟೇರ್ ಭೂಮಿಯಲ್ಲಿ ರಾಗಿ ಬೆಳೆಸಲಾಗಿದೆ.



ಕಾಯಿ ಕೊರಕ ಕೀಟ ನಿರೋಧಕ ಶಕ್ತಿ ಹೊಂದಿರುವ ಬಿಆರ್‌ಜಿ-2 ತೊಗರಿ ಮತ್ತು ಹೆಚ್ಚು ಇಳುವರಿಯ ಜಿಪಿಬಿಡಿ-4 ಎಂಬ ನೆಲಗಡಲೆ ತಳಿ ಬೆಳೆದಿದ್ದಾರೆ. ಇದರ ಜೊತೆಯಲ್ಲೇ ಅರ್ಕ ಅನನ್ಯ ಮತ್ತು ಅರ್ಕ ಮೇಘಾಲಿ ಎಂಬ ಟೊಮೆಟೊ ತಳಿ, ಅರ್ಕ ಲೋಹಿತ್ ಎಂಬ ಮೆಣಸಿನಕಾಯಿ ತಳಿಗಳು ರೈತರಲ್ಲಿ ಭರವಸೆ ಮೂಡಿಸಿವೆ.



ವೃಕ್ಷಾಧಾರಿತ ಕೃಷಿ ಪದ್ಧತಿಯಡಿ ಹೆಬ್ಬೇವು, ಬೆಟ್ಟನೆಲ್ಲಿ, ಮಾವು, ಸೀತಾಫಲ, ಹುಣಸೆ, ಗೋಡಂಬಿ, ಹೊಂಗೆ, ಬಂಗಾಲಿ ಜಾಲಿ, ನೇರಳೆ, ಬಸವನ ಪಾದ, ಹಲಸು, ನೆಲ್ವ ಜಕ್, ಬೇವಿನ ಸಸಿ, ಮುತ್ತುಗ, ತೇಗ ಮೊದಲಾದ 25 ಸಾವಿರ ಸಸಿಗಳು ನಾಲ್ಕಡಿ ಬೆಳೆದು ನಿಂತಿವೆ.



`2012ರ ಪಂಚವಾರ್ಷಿಕ ಯೋಜನೆಯಡಿ ಬಿಡುಗಡೆಯಾದ ಅನುದಾನ, ಎಲ್ಲಕ್ಕಿಂತ ಮಿಗಿಲಾಗಿ ರೈತರ ಶ್ರಮದಿಂದ ಇಂತಹ ಬದಲಾವಣೆಯಾಗಿದೆ' ಎಂದು ಅಭಿಪ್ರಾಯ ಪಡುತ್ತಾರೆ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಸಂಯೋಜಕ ಡಾ.ಎಲ್.ಬಿ.ನಾಯಕ್.

ಉಪಕಸುಬುಗಳಾದ ಹೈನುಗಾರಿಕೆ, ಮೀನು ಸಾಕಣೆಯಂತಹ ಪೂರಕ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.  ಕೃಷಿ ಕೂಲಿ ಕಾರ್ಮಿಕರ ಅಭಾವದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಕೃಷಿ ಯಂತ್ರೋಪಕರಣಗಳ ಬಾಡಿಗೆ ಕೇಂದ್ರ ತೆರೆಯಲಾಗಿದೆ. ಇದು ರೈತರು ತಮಗೆ ಬೇಕಾದ ಯಂತ್ರಗಳನ್ನು ಬಾಡಿಗೆಗೆ ಪಡೆಯಲು ಅವಕಾಶ ಕಲ್ಪಿಸುತ್ತದೆ. ಇದು ಸಕಾಲದಲ್ಲಿ ಕೃಷಿ ಚಟುವಟಿಕೆ ನಡೆಯಲು ಸಹಾಯಕವಾಗಿದೆ.



ಯಂತ್ರೋಪಕರಣ ಬಾಡಿಗೆಗೆ 

ಕೂಲಿಕಾರ್ಮಿಕರು ಇರುವಾಗ ಸುಳಿಯದೆ, ಅವರು ಗುಳೆ ಹೋದಾಗ `ಧೋ' ಎಂದು ಸುರಿವ ಮಳೆಯಲ್ಲಿ ಡಿ.ನಾಗೇನಹಳ್ಳಿ ರೈತರು ಕೃಷಿ ಚಟುವಟಿಕೆ ನಡೆಸಲು ಹರಸಾಹಸ ಪಡಬೇಕಾಗಿತ್ತು. ಈಗ ಇಂತಹ ಪರಿಸ್ಥಿತಿ ಇಲ್ಲಿಲ್ಲ. ಕಾರಣ ರಾಜ್ಯದಲ್ಲಿಯೇ ಮೊದಲ ಬಾರಿ ಗ್ರಾಮದಲ್ಲಿ ಬಾಡಿಗೆ ಕೃಷಿ ಯಂತ್ರೋಪಕರಣ ಕೇಂದ್ರ ತೆರೆಯಲಾಗಿದೆ. 6.5 ಲಕ್ಷ ರೂಪಾಯಿ ವೆಚ್ಚದಲ್ಲಿ ತೆರೆದ ಕೇಂದ್ರದಲ್ಲಿ ಸುಮಾರು 20 ಕೃಷಿ ಯಂತ್ರಗಳು ಸಿಗುತ್ತವೆ. ಪ್ರತಿ ಯಂತ್ರಕ್ಕೆ ಗಂಟೆಗೆ ಐದರಿಂದ 10 ರೂಪಾಯಿ ಬಾಡಿಗೆ ನಿಗದಿಪಡಿಸಿದೆ.



ಕಳೆ ತೆಗೆಯುವ ಯಂತ್ರ, ಹುಲ್ಲು ಕೊಯ್ಯುವ ಯಂತ್ರ, ಬೀಜ ಹಾಕುವ ಯಂತ್ರ, ಬೀಜ ತೆಗೆಯುವ ಯಂತ್ರ, ಕಬ್ಬಿಣದ ನೇಗಿಲು, ಕುಂಟೆ, ಔಷಧಿ ಸಿಂಪರಣೆ ಯಂತ್ರ, ಪಿಎಚ್ ಮೀಟರ್, ಟ್ಯಾಂಕರ್ ಸಿಗುತ್ತವೆ.  ಈ ಕೇಂದ್ರದ ಉಸ್ತುವಾರಿಗೆ ಐವರು ಸದಸ್ಯರ ಸಮಿತಿ ರಚಿಸಲಾಗಿದೆ.



ಸೈರಣೆ ತಂದ ಸಂತಸ

ಇಲ್ಲಿಯವರೆಗೆ ಗ್ರಾಮದಲ್ಲಿ ಕೈಗೊಂಡಿರುವ ಕೃಷಿ ಕಾರ್ಯಚಟುವಟಿಕೆಗೆ ಖರ್ಚಾಗಿರುವುದು 44 ಲಕ್ಷ ರೂಪಾಯಿ. ಹಣಕಾಸು ನೆರವು ಹರಿದು ಬಂದಿರುವುದು ಸೈರಣೆ ಯೋಜನೆಯಿಂದ. ಕೇಂದ್ರ ಸರ್ಕಾರವು 2012ರ ಪಂಚವಾರ್ಷಿಕ ಯೋಜನೆಯಡಿ ಸೈರಣೆ ಕೃಷಿ ಯೋಜನೆಗೆ ಆಯ್ಕೆ ಮಾಡಿದ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ತುಮಕೂರು ಕೂಡಾ ಒಂದು. ಹವಾಮಾನ ವೈಪರೀತ್ಯ, ಬರಗಾಲದಿಂದ ನರಳುತ್ತಿದ್ದ ಡಿ.ನಾಗೇನಹಳ್ಳಿ ಗ್ರಾಮದಲ್ಲಿ ಯೋಜನೆಯಿಂದ ಅಗಾಧ ಬದಲಾವಣೆಯಾಗಿದೆ.



ರೈತರ ಅವಿರತ ಶ್ರಮ, ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ನೆರವು ಈಗ ಫಲ ನೀಡಿದೆ.ಗ್ರಾಮವು ಈಗ ಬರಗಾಲದಲ್ಲೂ ಸಾಕಷ್ಟು ಫಸಲು ಪಡೆಯುವ ನಿರೀಕ್ಷೆಯಲ್ಲಿದೆ. ಕಾರ್ಯಕ್ರಮ ಸಂಯೋಜಕರಾದ ಡಾ.ಎಲ್.ಬಿ.ನಾಯಕ್ ಮೊ.9449816584), ರಮೇಶ್ (ಮೊ.9972045370) ಸಂಪರ್ಕಿಸಬಹುದು.                                                 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry