ಭಾನುವಾರ, ಏಪ್ರಿಲ್ 11, 2021
28 °C

ಬೆಟ್ಟದ ಮಹದೇವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಲೆಮಹದೇಶ್ವರ ಬೆಟ್ಟ ಕರ್ನಾಟಕದ ಪ್ರಸಿದ್ಧ ಯಾತ್ರಾಸ್ಥಳ. ಬೆಟ್ಟ, ಸಮುದ್ರಮಟ್ಟದಿಂದ ಮೂರು ಸಾವಿರ ಅಡಿ ಎತ್ತರದಲ್ಲಿದೆ. ಮಹದೇಶ್ವರ ಸ್ವಾಮಿಯ ದರ್ಶನ ಪಡೆಯಲು ಪ್ರತಿ ವರ್ಷ ಲಕ್ಷಾಂತರ ಜನರು ಬೆಟ್ಟಕ್ಕೆ ಬರುತ್ತಾರೆ.ಮಹದೇಶ್ವರ ಚಾರಿತ್ರಿಕ ಪುರುಷ. ಗ್ರಾಮೀಣ ಜನರು ಮಹದೇಶ್ವರನನ್ನು ಮಾದಪ್ಪನೆಂದೂ ಕರೆಯುತ್ತಾರೆ. ದೇವರ ಗುಡ್ಡರು ಹಾಡುವ ಮೌಖಿಕ ಮಹಾ ಕಾವ್ಯವೇ ಮಾದಪ್ಪನ ನೆಲೆ ಅರಿಯಲು ಇರುವ ಮೂಲ ಆಕರ.ಮಹದೇಶ್ವರ ಸ್ವಾಮಿ ಶ್ರೀಶೈಲದಿಂದ ದಕ್ಷಿಣದ ಮೈಸೂರು ಸೀಮೆಯ ‘ಕತ್ತಲ ರಾಜ್ಯ’ಕ್ಕೆ ಬಂದು ಜನರ ಕಲ್ಯಾಣಕ್ಕಾಗಿ ನೆಲೆ ನಿಂತರು ಎನ್ನಲಾಗಿದೆ. ಕ್ರಿ.ಶ. 1838ರಲ್ಲಿದ್ದ ದೇವಚಂದ್ರ ಕವಿಯ ‘ರಾಜಾವಳಿ ಕಥಾಸಾರ’ ಕೃತಿ ಮಹದೇಶ್ವರ ಮಾದಿಗ ಸಮುದಾಯಕ್ಕೆ ಸೇರಿದವನು ಎಂದು ಹೇಳುತ್ತದೆ. ಈತ ವೀರಶೈವ ಸಮುದಾಯಕ್ಕೆ ಸೇರಿದವನು ಎಂಬ ವಾದವೂ ಇದೆ.15- 16ನೇ ಶತಮಾನದ ನಡುವೆ  ಕಾಲಘಟ್ಟದಲ್ಲಿ ಮಹದೇಶ್ವರಸ್ವಾಮಿಗೆ ಬುಡಕಟ್ಟುಗಳ ಜನರು, ದಲಿತರು ಹಾಗೂ ಹಿಂದುಳಿದ ಸಮುದಾಯಗಳ ಜನರು ಒಕ್ಕಲಾಗಿದ್ದರು. ಅವರಿಂದ ವಿಶಿಷ್ಟ ಪಂಥ ವೊಂದು ಸೃಷ್ಟಿಯಾಯಿತು ಎನ್ನುವುದು ಮಾದಪ್ಪನ ಹೆಗ್ಗಳಿಕೆ. ಸೋಲಿಗರು, ದಲಿತರು, ಬುಡಕಟ್ಟು, ಹಿಂದುಳಿದ ಸಮುದಾಯದ ಜನರು ಮಾದಪ್ಪನನ್ನು ದೈವವೆಂದು ಪೂಜಿಸುತ್ತಾರೆ. ಕಂಪಣ ಬೇಡರು ಮಲೆ ಮಹದೇಶ್ವರ ಗುಡಿಯಲ್ಲಿ ತಂಬಡಿಕೆ (ಪೂಜಾರಿಗಳು) ಮಾಡುತ್ತಾರೆ. ಮಹದೇಶ್ವರರು ಐಕ್ಯರಾದ ಗುಡಿ ಮಲೆ ಮಹದೇಶ್ವರ ಬೆಟ್ಟದಲ್ಲಿದೆ.ಜಾತ್ರಾ ವಿಶೇಷ: ಮಹಾಲಯ ಅಮಾವಾಸ್ಯೆ, ದಸರಾ, ದೀಪಾವಳಿ, ಕಾರ್ತೀಕ ಮಾಸ, ಮಹಾ ಶಿವರಾತ್ರಿ ಹಾಗೂ ಯುಗಾದಿ ಸಂದರ್ಭಗಳಲ್ಲಿ ಬೆಟ್ಟದಲ್ಲಿ ವಿಶೇಷ ಜಾತ್ರೆ, ಉತ್ಸವಗಳು ನಡೆಯುತ್ತವೆ. ಸಂಕ್ರಾಂತಿ, ಅಮಾವಾಸ್ಯೆ ಮತ್ತು ಪೂರ್ಣಿಮೆಗಳಂದು ವಿಶೇಷ ಪೂಜೆಗಳು ನಡೆಯುತ್ತವೆ. ಜಾತ್ರೆ ಸಂದರ್ಭದಲ್ಲಿ ತಮಿಳುನಾಡಿನಿಂದಲೂ ಅಸಂಖ್ಯಾತ ಭಕ್ತರು ಬರುತ್ತಾರೆ. ನಿತ್ಯ ಮುಂಜಾನೆ 5.30ಗಂಟೆಗೆ ದೇವಸ್ಥಾನದಲ್ಲಿ ಪೂಜೆ ಆರಂಭ. ಬೆಳಿಗ್ಗೆ 8ಗಂಟೆಯಿಂದ 10.30ಗಂಟೆ, ಮಧ್ಯಾಹ್ನ 12ರಿಂದ ಸಂಜೆ 6.30ಗಂಟೆವರೆಗೆ ಧರ್ಮದರ್ಶನ ಹಾಗೂ ಅರ್ಚನೆ ನಡೆಯುತ್ತದೆ.ಧರ್ಮ ದರ್ಶನ ಉಚಿತ. ಭಾನುವಾರ, ಸೋಮವಾರ, ಅಮಾವಾಸ್ಯೆ, ಚತುರ್ಥಿ ಹಾಗೂ ಜಾತ್ರಾ ಸಂದರ್ಭಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಅಂದು ಬೆಳಗಿನ 3ಗಂಟೆಗೆ ಪೂಜಾ ವಿಧಿ ವಿಧಾನಗಳು ಆರಂಭವಾಗುತ್ತವೆ. ಅಮಾವಾಸ್ಯೆ ದಿನದಂದು ಮಹದೇಶ್ವರನಿಗೆ ಎಣ್ಣೆಮಜ್ಜನ ಸೇವೆ ನಡೆಯುತ್ತದೆ.ಅನ್ನದಾಸೋಹ: ನಿತ್ಯ ನಾಲ್ಕು ಸಾವಿರ ಭಕ್ತರು, ಪ್ರವಾಸಿಗರು ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ದೇವಸ್ಥಾನದಲ್ಲಿ ಉಚಿತ ಭೋಜನ  ವ್ಯವಸ್ಥೆ ಇದೆ. ಭೋಜನ ಸಮಯ: 12.30ರಿಂದ ಮಧ್ಯಾಹ್ನ 2.30ಗಂಟೆ ಹಾಗೂ ಸಂಜೆ 7.30ರಿಂದ ರಾತ್ರಿ 9.30.ದೇವಸ್ಥಾನದಲ್ಲಿ 30ಕ್ಕೂ ಹೆಚ್ಚು ಪೂಜಾ ಸೇವೆಗಳಿವೆ. ದೇವಸ್ಥಾನ ಆಡಳಿತವನ್ನು ಮುಜರಾಯಿ ಇಲಾಖೆ ನೋಡಿಕೊಳ್ಳುತ್ತದೆ. ಹೆಚ್ಚಿನ ವಿವರಗಳಿಗೆ ಭಕ್ತರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 08225-272121/22/23. ವೆಬ್‌ಸೈಟ್: www.mmhills.com

ಸೇವಾ ವಿವರ 

* ಮಹಾ ರುದ್ರಾಭಿಷೇಕ (ಪ್ರತಿ ಗುರುವಾರ)   5,000ರೂ

* ಉಮಾ ಮಹೇಶ್ವರ ಕಲ್ಯಾಣ ಸೇವೆ  5,000ರೂ

*ಅನ್ನ ಬ್ರಹ್ಮೋತ್ಸವಕ್ಕೆ(25ಕೆಜಿ ಅಕ್ಕಿಯದು)  1,500 ರೂ

* ಅನ್ನ ಬ್ರಹ್ಮೋತ್ಸವ (10ಕೆಜಿ ಅಕ್ಕಿ)  1,000 ರೂ

* ನವರತ್ನ ಕಿರೀಟಧಾರಣೆ, ತೊಟ್ಟಿಲು ಧಾರಣೆಗೆ  250  ರೂ.

* ಶಿವಸಹಸ್ರ ಬಿಲ್ವಾರ್ಚನೆಗೆ  100 ರೂ.
ವಸತಿ ವ್ಯವಸ್ಥೆ

ಬೆಟ್ಟದಲ್ಲಿ 4 ಸಾವಿರ ಜನರು ಉಳಿದುಕೊಳ್ಳಲು ವ್ಯವಸ್ಥೆ ಇರುವ ವಸತಿ ಗೃಹಗಳಿವೆ. ಜಾತ್ರೆ ಹಾಗೂ ವಿಶೇಷ  ದಿನದಂದು ವಸತಿ ಸೌಲಭ್ಯ ಸಿಗುವುದು ಕಷ್ಟ. ಶಿವ ದರ್ಶಿನಿ, ಮಹದೇಶ್ವರ ಭವನ, ಗುರು ದರ್ಶಿನಿ, ಗಿರಿ ದರ್ಶಿನಿ (ಗಣ್ಯರಿಗೆ), ಕಾವೇರಿ ದರ್ಶಿನಿ, ಸೂರ್ಯ ದರ್ಶಿನಿ, ಶ್ರೀಶೈಲ ಭವನ ಇತ್ಯಾದಿ ಹೆಸರಿನ ವಸತಿಗೃಹಗಳಿವೆ. ಶಿವ ದರ್ಶಿನಿಯಲ್ಲಿ ದಿನದ ಕೊಠಡಿ ಬಾಡಿಗೆ 200 ರೂ. ಮೂರು ಬೆಡ್‌ಗಳ ಕೊಠಡಿಯಲ್ಲಿ ಆರು ಮಂದಿ ತಂಗಬಹುದು. ಮಹದೇಶ್ವರ ಭವನದಲ್ಲಿ 4 ಮಂದಿ ತಂಗಲು 100 ರೂ ಪಾವತಿಸಬೇಕು.ಕಾವೇರಿ, ಸೂರ್ಯ ದರ್ಶಿನಿ ಹಾಗೂ ಶ್ರೀಶೈಲ ಭವನದಲ್ಲಿ ಕೊಠಡಿಯೊಂದಕ್ಕೆ 200 ರೂ ಬಾಡಿಗೆ. ಒಟ್ಟು 6 ಮಂದಿ ತಂಗಲು ಅವಕಾಶವಿದೆ. ರಾಜ್ಯದ ಪ್ರವಾಸಿಗರು ಕೊಳ್ಳೇಗಾಲ ಮಾರ್ಗವಾಗಿಯೇ ಬೆಟ್ಟಕ್ಕೆ ಬರಬೇಕು.  ಚಾಮರಾಜನಗರ, ಕೊಳ್ಳೇಗಾಲ ಹಾಗೂ ಮೈಸೂರಿನಿಂದ ನೇರ ಬಸ್ ಸೌಲಭ್ಯವಿದೆ. ಜಾತ್ರೆ ಸಂದರ್ಭದಲ್ಲಿ ವಿಶೇಷ ಬಸ್ ಸೌಲಭ್ಯವಿದೆ.ಬೆಟ್ಟದ ಸುತ್ತಮುತ್ತ ಹಲವು ಪ್ರವಾಸಿ ತಾಣಗಳಿವೆ. ಇಲ್ಲಿಂದ ಹೊಗೇನಕಲ್ ಜಲಪಾತ 48 ಕಿ.ಮೀ.ದೂರದಲ್ಲಿದೆ.ಗೋಪಿನಾಥಂ ಮಾರ್ಗವಾಗಿ ತೆರಳಬೇಕು. ಹಾಗೇ ನಾಗಮಲೆಗೂ ಹೋಗಬಹುದು. ಹಿಂದಿರುಗುವಾಗ ಗಗನಚುಕ್ಕಿ ಹಾಗೂ ಭರಚುಕ್ಕಿ ಜಲಪಾತಗಳನ್ನು ವೀಕ್ಷಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.