ಗುರುವಾರ , ಮೇ 13, 2021
36 °C

ಬೆಟ್ಟದ ಮೇಲೊಂದು `ಅರಳಿತೀರ್ಥ'

ಬಸವರಾಜ್ ಸಂಪಳ್ಳಿ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾದಾಮಿ(ಬಾಗಲಕೋಟೆ): ಬಾದಾಮಿ ಬೆಟ್ಟದ ತುತ್ತ ತುದಿಯಲ್ಲಿರುವ ನಿಸರ್ಗ ನಿರ್ಮಿತ `ಅರಳಿತೀರ್ಥ' ಗುಹಾಂತರ ದೇವಾಲಯ ಹೊರ ಜಗತ್ತಿಗೆ ಅಷ್ಟೊಂದು ಪರಿಚಿತವಲ್ಲದ ಪುರಾಣ ಪ್ರಸಿದ್ಧ ತಾಣವಾಗಿದೆ. ಪ್ರವಾಸಿಗರಿಂದ ದೂರವೇ ಉಳಿದಿರುವ ಈ ಪುರಾಣ ಪ್ರಸಿದ್ಧ ಗುಹಾಂತರ ದೇವಾಲಯದ ವೀಕ್ಷಣೆ ಸಂಬಂಧ ಜಿಲ್ಲಾ ವಾರ್ತಾ ಇಲಾಖೆ ವತಿಯಿಂದ ಶುಕ್ರವಾರ ಮಾಧ್ಯಮ ಪ್ರವಾಸ ಆಯೋಜಿಸಲಾಗಿತ್ತು.ಬಾದಾಮಿಯ ಪ್ರಸಿದ್ಧ `ಅಗಸ್ತ್ಯತೀರ್ಥ'ದ ಹಿಂಭಾಗ ಅತ್ಯಂತ ಕಡಿದಾದ ಬೆಟ್ಟ ಶ್ರೇಣಿಯಲ್ಲಿ ಇರುವ ಪುಟ್ಟದಾದ ಮತ್ತು ಸುಂದರವಾದ `ಅರಳಿತೀರ್ಥ' ಗುಹಾಂತರ ದೇವಾಲಯ ವೀಕ್ಷಿಸಬೇಕಾದರೆ ಪ್ರವಾಸಿಗರು ಸಾಕಷ್ಟು ಬೆವರು ಹರಿಸಬೇಕಾದುದು ಅನಿವಾರ್ಯ.

ಕಡಿದಾದ ಬೆಟ್ಟವನ್ನು ಜಾಗರೂಕತೆಯಿಂದ ಏರಿಹೋದರೆ ಅರಳಿತೀರ್ಥ ಗುಹಾಂತರ ದೇವಾಲಯದ ದರ್ಶನ ಮಾಡಬಹುದಾಗಿದೆ. ಈ ಗುಹಾಂತರ ದೇವಾಲಯದಲ್ಲಿ ನಿಸರ್ಗ ನಿರ್ಮಿತ ನೀರಿನ ಕೊಳ, ಹಿಂದೂ ದೇವಾನುದೇವತೆಗಳ ವಿಗ್ರಹ ಮತ್ತು ಶಾಸನವೊಂದು ಇರುವುದು ವಿಶೇಷವಾಗಿದೆ.ಪುರಾಣ ಕಾಲದಲ್ಲಿ ಋಷಿಮುನಿಗಳು ಬಾದಾಮಿಯಿಂದ ಮಹಾಕೂಟಕ್ಕೆ ಅರಳಿತೀರ್ಥ ಮಾರ್ಗವಾಗಿ ತೆರಳುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಋಷಿಮುನಿಗಳು ಪೂಜಿಸಲು, ಧ್ಯಾನಿಸಲು ಮತ್ತು ದಾಹ ತೀರಿಸಿಕೊಳ್ಳಲು ಅರಳಿತೀರ್ಥ ಪ್ರಕೃತಿ ನಿರ್ಮಿತ ಪ್ರಶಸ್ತ ತಾಣವಾಗಿತ್ತು ಎಂದೂ ಹೇಳಲಾಗುತ್ತದೆ.ಅರಳಿತೀರ್ಥದ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಸುಳೊಳ್ಳಿ, `ಬಾದಾಮಿ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾದ ಅರಳಿತೀರ್ಥ ಗುಹೆಯಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ, ಗಣಪತಿ, ಕಾಳಿ, ಉಗ್ರ ನರಸಿಂಹ ಸೇರಿದಂತೆ 27 ವಿವಿಧ ದೇವಾನುದೇವತೆಗಳ ವಿಗ್ರಹಗಳನ್ನು ಕೆತ್ತಲಾಗಿದೆ' ಎಂದರು.ಗುಹೆ ಕುರಿತು `ಪ್ರಜಾವಾಣಿ'ಗೆ ಮಾಹಿತಿ ನೀಡಿದ ಬಾದಾಮಿಯ ಪ್ರವಾಸಿ ಮಾರ್ಗದರ್ಶಿ ಇಷ್ಟಲಿಂಗ ಶಿರ್ಸಿ, `ಅರಳಿತೀರ್ಥ ಕೊಳದಲ್ಲಿ ವರ್ಷ ಪೂರ್ತಿ ನೀರಿರುವುದು ವಿಶೇಷ. ಆದರೆ ಇತ್ತೀಚಿನ ವರ್ಷಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ವರ್ಷಪೂರ್ತಿ ನೀರು ಕಂಡುಬರುತ್ತಿಲ್ಲ. ಸುತ್ತಲಿನ ಬೆಟ್ಟದಿಂದ ಹರಿದು ಬಂದು ಕೊಳದಲ್ಲಿ ಸಂಗ್ರಹವಾಗುವ ಈ ನೀರಿಗೆ ಔಷಧೀಯ ಗುಣ ಇದೆ' ಎಂದರು.

`ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಸ್ಥಳೀಯರು ಉತ್ತಮ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಸಾಮೂಹಿಕ ಪ್ರಸಾದ ಹಂಚಲಾಗುತ್ತದೆ' ಎಂದರು.

`ಮಂತ್ರವಾದಿಗಳು ಮತ್ತು ಶೋಧಕರು ಇಲ್ಲಿದ್ದ ಗುಡಿಗಳನ್ನು ಧ್ವಂಸ ಮಾಡಿದ್ದಾರೆ. ಅಲ್ಲದೇ ಸ್ಥಳೀಯರು ಇಲ್ಲಿ ಮದ್ಯಮಾಂಸ ಸೇವನೆ ಮಾಡಿ ಸ್ಥಳದ ಪಾವಿತ್ರ್ಯಕ್ಕೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಇದನ್ನು ತಡೆಯಬೇಕಿದೆ. ಪ್ರವಾಸಿಗರು ಭೇಟಿ ನೀಡಲು ಅನುಕೂಲವಾಗುವಂತೆ ಸೌಲಭ್ಯ ಕಲ್ಪಿಸುವ ಅಗತ್ಯವಿದೆ' ಎಂದರು.  ಪ್ರವಾಸಿ ಮಾರ್ಗದರ್ಶಿ ಚಂದ್ರು ಕಟಗೇರಿ, `ಅರಳಿತೀರ್ಥ ಗುಹಾಂತರ ದೇವಾಲಯ ಬಾದಾಮಿ ಚಾಲುಕ್ಯರ ಕಾಲದ್ದೋ ಅಥವಾ ಕಲ್ಯಾಣಿ ಚಾಲುಕ್ಯರ ಕಾಲದ್ದೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.ದೇವನಾಗರಿ ಲಿಪಿಯಲ್ಲಿ ಶಾಸನ ವೊಂದು ಇದ್ದು, ಅದರಲ್ಲಿ ಕೊಲ್ಲಾಪುರದ ಮಹಾ ಲಕ್ಷ್ಮಿ ದೇವರ ಬಗ್ಗೆ ಪ್ರಸ್ತಾವವಿದೆ' ಎಂದರು.

ಪ್ರವಾಸಿಗರಿಗೆ ಅಷ್ಟೊಂದು ಪರಿಚಯವಿಲ್ಲದ ಈ ಗುಹಾಂತರ ದೇವಾಲಯದ ರಕ್ಷಣೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.