ಬುಧವಾರ, ಮಾರ್ಚ್ 3, 2021
20 °C
ಖೂರ್ಸೆಯಲ್ಲಿ ನಡೆದ ಸಮಾರಂಭದಲ್ಲಿ ಸಚಿವ ರಮಾನಾಥ ರೈ ಭರವಸೆ

ಬೆಟ್ಟಭೂಮಿ ಪ್ರಸ್ತಾವ ಪರಿಶೀಲಿಸಿ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಟ್ಟಭೂಮಿ ಪ್ರಸ್ತಾವ ಪರಿಶೀಲಿಸಿ ಕ್ರಮ

ಶಿರಸಿ: ರೈತರ ಬೆಟ್ಟಭೂಮಿ ಸವಲತ್ತು ಹೆಚ್ಚಿಸುವ ಕುರಿತಂತೆ ಸರ್ಕಾರ ಮಟ್ಟದಲ್ಲಿರುವ ಪ್ರಸ್ತಾವವನ್ನು ಪರಿಶೀಲಿಸಿ ಕ್ರಮ ಕೈಕೊಳ್ಳಲಾಗುವುದು ಎಂದು ಅರಣ್ಯ ಸಚಿವ ರಮಾನಾಥ ರೈ ಹೇಳಿದರು.ತಾಲ್ಲೂಕಿನ ಖೂರ್ಸೆ ಗ್ರಾಮ ಅರಣ್ಯ ಸಮಿತಿ (ವಿಎಫ್‌ಸಿ) ನಡೆಸಿದ ಕಾರ್ಯ ಚಟುವಟಿಕೆಯನ್ನು ವೀಕ್ಷಿಸಿ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೈತರಿಗೆ ಬೆಟ್ಟ ಭೂಮಿಯ ಸವಲತ್ತು ಹೆಚ್ಚಿಸಿ ಇದರ ಉತ್ಪನ್ನದಲ್ಲಿ ಶೇ 80ರಷ್ಟು ಲಾಭಾಂಶ ನೀಡಲು ಕ್ರಮ ವಹಿಸುವಂತೆ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಡಿದ ಮನವಿಗೆ ಸಚಿವರು ಪ್ರತಿಕ್ರಿಯಿಸಿದರು.ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಹೊಸ ಅರ್ಜಿಗಳನ್ನು ಸ್ವೀಕರಿಸಲು ಹಾಗೂ ತಿರಸ್ಕೃತಗೊಂಡಿರುವ ಅರ್ಜಿಗಳನ್ನು ಪುನರ್‌ ಪರಿಶೀಲಿಸಲು ಸರ್ಕಾರ ಚಿಂತನೆ ನಡೆಸಿದೆ. ಜನಹಿತ ಗಮನದಲ್ಲಿಟ್ಟು ಈ ಕುರಿತು ತೀರ್ಮಾನ ಕೈಕೊಳ್ಳಲಾಗು ವುದು. ಅರಣ್ಯ, ಕಂದಾಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಮನ್ವಯತೆಯಿಂದ ಕಾಯ್ದೆಯನ್ನು ಅನುಷ್ಠಾನಗೊಳಿಸಬೇಕು ಎಂದರು.ಅರಣ್ಯ ಲಕ್ಷ್ಮಣ ಇಲ್ಲದಿರುವ ಅರಣ್ಯ ಇಲಾಖೆ ಜಾಗವನ್ನು ಹೊರಬಿಟ್ಟು ಅರಣ್ಯ ಹೊಂದಿರುವ  (ಡೀಮ್ಡ್‌ ಫಾರೆಸ್ಟ್‌) ಇಲಾಖೆಯಿಂದ ಹೊರತಾಗಿರುವ ಪ್ರದೇಶಗಳನ್ನು ಅರಣ್ಯ ಪ್ರದೇಶದ ಒಳಗೆ ಸೇರಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಈ ಕುರಿತು ಕಂದಾಯ ಮತ್ತು ಅರಣ್ಯ ಇಲಾಖೆ ಚರ್ಚಿಸಿ ನಿರ್ಣಯ ಕೈಕೊಳ್ಳಲಿದೆ ಎಂದರು.ಜಲ್ಲಿ, ಕೆಂಪುಕಲ್ಲು, ಮರಳು ಸಮಸ್ಯೆಗೆ ಸಂಬಂಧಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಮತಿ ನೀಡಬೇಕಾಗಿದೆ. ಸಮಸ್ಯೆ ಪರಿಹಾರದ ಸಾಧ್ಯತೆ ಕುರಿತು ಚರ್ಚಿಸಬೇಕಾಗಿದೆ. ಸಮಸ್ಯೆಗೆ ಪರಿಹಾರ ಒದಗಿಸುವಂತೆ ವಿನಂತಿಸಿ ಕೇಂದ್ರ ಪರಿಸರ ಖಾತೆಗೆ ರಾಜ್ಯ ಸರ್ಕಾರದ ಮೂಲಕ ಪತ್ರ ಕಳುಹಿಸಲಾಗು ವುದು ಎಂದು ತಿಳಿಸಿದರು.ಕಾಡುಪ್ರಾಣಿ ಹಾವಳಿಯ ಪರಿಹಾರ ಮೊತ್ತವನ್ನು ಹೆಚ್ಚಿಸಲಾಗಿದೆ. ಕಾಡುಪ್ರಾಣಿ ಹಾವಳಿಯಿಂದ ಜೀವಹಾನಿಯಾದಲ್ಲಿ ₹ 5 ಲಕ್ಷ, ದನ–ಎಮ್ಮೆ ಸತ್ತಿದ್ದರೆ ಪರಿಹಾರ ಮೊತ್ತವನ್ನು ₹ 5ಸಾವಿರದಿಂದ ₹ 10ಸಾವಿರಕ್ಕೆ ಹೆಚ್ಚಿಸಲಾಗಿದೆ. ಖಾಸಗಿ ಜಾಗದಲ್ಲಿ ಸೋಲಾರ್‌ ಬೇಲಿ ಅಳವಡಿಕೆಗೆ ಶೇ 50ರಷ್ಟು ಸಹಾಯಧನ ನೀಡಲಾಗುವುದು ಎಂದರು. ಕಾಡಿನಲ್ಲಿ ಪ್ರಾಣಿಗಳ ಸಂಖ್ಯೆ ಜಾಸ್ತಿಯಾಗಿದ್ದು, ಅರಣ್ಯ ಮೇಲೆ ಒತ್ತಡ ಹೆಚ್ಚಾಗಿದೆ. ಮಂಗಗಳ ಹಾವಳಿ ವಿಪರೀತವಾಗಿರುವ ಸಂಗತಿ ಸಹ ಗಮನಕ್ಕಿದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಹಿಮಾಚಲ ಪ್ರದೇಶದ ಮಾದರಿಯನ್ನು ಅಳವಡಿಸಲು ಯೋಚಿಸಲಾಗುವುದು ಎಂದರು.ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಜಿಲ್ಲೆಯಲ್ಲಿ ಶೇ 80ರಷ್ಟು ಅರಣ್ಯ ಭೂಮಿ ಇದೆ. ಜಿಲ್ಲೆಯ ಅರಣ್ಯದಿಂದ ವಾರ್ಷಿಕವಾಗಿ ಸರ್ಕಾರಕ್ಕೆ ₹ 1 ಕೋಟಿಗೂ ಅಧಿಕ ಆದಾಯ ದೊರೆಯುತ್ತದೆ. ಇಲ್ಲಿ 40ಸಾವಿರಕ್ಕೂ ಅಧಿಕ ಜನರು ಅರಣ್ಯ ಭೂಮಿಯಲ್ಲಿ ವಾಸಿಸುತ್ತಿದ್ದು. ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅವರಿಗೆ ಹಕ್ಕುಪತ್ರ ನೀಡುವ ಪ್ರಕ್ರಿಯೆ ತ್ವರಿತಗೊಳಿಸಬೇಕು ಎಂದರು.ಸಚಿವರು ವಿಎಫ್‌ಸಿ ₹ 3 ಲಕ್ಷ ವೆಚ್ಚದಲ್ಲಿ ಊರಿನ ಶಾಲೆಗೆ ನೀಡಿರುವ ಕಂಪ್ಯೂಟರ್‌, ಕಂಪೌಂಡ್‌ ಗೋಡೆ, ಕುಡಿಯುವ ನೀರು, ಊರಿನ ಜನರಿಗೆ ಅನುಕೂಲವಾಗುವಂತೆ ನಿರ್ಮಿಸಿರುವ ಉಪ್ಪಾಗೆ, ಅಡಿಕೆ ಒಣಗಿಸುವ ಡ್ರೈಯರ್‌ಗಳನ್ನು ವೀಕ್ಷಿಸಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಆರ್‌.ಡಿ. ಹೆಗಡೆ, ತಾಲ್ಲೂಕು ಪಂಚಾಯ್ತಿ ಸದಸ್ಯ ಸಂತೋಷ ಗೌಡರ್ ಇದ್ದರು. ಎಸ್‌.ಜಿ. ಹೆಗಡೆ ಸ್ವಾಗತಿಸಿದರು.ಲಾಭಾಂಶ ಹಂಚಿಕೆ

ಶಿರಸಿ ವಿಭಾಗದಲ್ಲಿ ಇರುವ 149 ವಿಎಫ್‌ಸಿಗಳಲ್ಲಿ 102 ವಿಎಫ್‌ಸಿಗಳು ಪಾಲಿಸಿದರೆ ಪಾಲು ಯೋಜನೆಯಲ್ಲಿ ಒಟ್ಟು ₹ 16.17 ಕೋಟಿ ಲಾಭಾಂಶ ಪಡೆದಿವೆ. ಲಾಭಾಂಶದಲ್ಲಿ ಸುಮಾರು 30 ವಿವಿಧ ರೀತಿಯ ಚಟುವಟಕೆ ಕೈಕೊಂಡಿವೆ. ಖೂರ್ಸೆ ಗ್ರಾಮ ಅರಣ್ಯ ಸಮಿತಿ ₹ 1.55 ಕೋಟಿ ಲಾಭಾಂಶ ಪಡೆದಿದ್ದು, ಇದು ಶಿರಸಿ ವಿಭಾಗದಲ್ಲಿ ಅತಿ ಹೆಚ್ಚು ಲಾಭಾಂಶ ಪಡೆದ ಸಮಿತಿಯಾಗಿದೆ ಎಂದು ಡಿಎಫ್‌ಓ ಕೆ.ಬಿ. ಮಂಜುನಾಥ ಹೇಳಿದರು.ಮುಖ್ಯಾಂಶಗಳು

* ಕಾಡುಪ್ರಾಣಿ ಹಾವಳಿಯ ಪರಿಹಾರ ಮೊತ್ತ ಹೆಚ್ಚಳ

* ಜಲ್ಲಿ, ಕೆಂಪುಕಲ್ಲು, ಮರಳು ಸಮಸ್ಯೆ ಪರಿಹಾರಕ್ಕೆ ಯತ್ನ

* ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ ಪ್ರಗತಿಯಲ್ಲಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.