ಬೆಟ್ಟಿಂಗ್ ಆರು ಮಂದಿ ಬಲೆಗೆ

6

ಬೆಟ್ಟಿಂಗ್ ಆರು ಮಂದಿ ಬಲೆಗೆ

Published:
Updated:

ಗುಲ್ಬರ್ಗ: ಇಂಡಿಯನ್ ಪ್ರೀಮಿಯರ್ ಲೀಗ್  (ಐಪಿಎಲ್) ಕ್ರಿಕೆಟ್‌ನ ಐದನೇ ಅವತರಣಿಕೆಯಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ, ಭಾರಿ ಬೆಟ್ಟಿಂಗ್ ಜಾಲವೊಂದನ್ನು ಗುಲ್ಬರ್ಗ ಪೊಲೀಸರು ಬಯಲಿಗೆ ಎಳೆದಿದ್ದಾರೆ.

ನಗರದ ಬಸ್‌ಸ್ಟ್ಯಾಂಡ್ ಬಳಿಯ ಕರ್ನಾಟಕ ವಸತಿಗೃಹ, ಬಂಜಾರ ಕ್ರಾಸ್ ಬಳಿಯ ಲಕ್ಷ್ಮೀ ಗೋಪಾಲ         ಅಪಾರ್ಟ್‌ಮೆಂಟ್ ಮತ್ತು ಸಿಐಬಿ ಕಾಲೋನಿಯಲ್ಲಿ ದಾಳಿ ನಡೆಸಿದ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ ರೂ 7.5 ಲಕ್ಷ ನಗದು, 100 ಗ್ರಾಂ ಬಂಗಾರ, 2 ಟಿವಿ, 1 ಲ್ಯಾಪ್‌ಟಾಪ್, ದ್ವಿಚಕ್ರ ವಾಹನ, ಕಾರು, 25 ಮೊಬೈಲ್ ಮತ್ತಿತರ ಸೊತ್ತುಗಳು ಸೇರಿದಂತೆ ರೂ 21 ಲಕ್ಷ  ಮೌಲ್ಯದ ಸಾಮಗ್ರಿ ಜಪ್ತಿ ಮಾಡಿದ್ದಾರೆ.

ಜಿಲ್ಲೆಯ ಶಹಾಬಾದದ ಸಲೀಂ, ಮಹಾದೇವ, ಬಸವೇಶ್ವರ ಕಾಲೋನಿಯ ಅಶೋಕ, ಬಡೇಪುರ ಕಾಲೋನಿ ಅನಿಲ ಕುಮಾರ, ಸುನೀಲ ಕುಮಾರ ಮತ್ತು ವಿಜಾಪುರ ಜಿಲ್ಲೆಯ ಸಿಂಧಗಿ ನವೀನ ಬಂಧಿತರು. ಆರೋಪಿಗಳು ಪದವೀಧರರಾಗಿದ್ದು, ನಿರುದ್ಯೋಗಿಗಳಾಗಿದ್ದರು. ಪ್ರಮುಖ ಆರೋಪಿ ಬಸವರಾಜು ಯಾನೆ ಸ್ಟೀಲ್ ಬಸು ಎಂಬವನು ತಲೆಮರೆಸಿಕೊಂಡಿದ್ದಾನೆ. ಎಎಸ್ಪಿ ಭೂಷಣ ಬೊಸರೆ, ಸಿಪಿಐ ಚಂದ್ರಶೇಖರ್, ಎಸ್‌ಐ ಪಂಡಿತ ಸಗರ ಮತ್ತು ಸಂಜೀವ ಕುಮಾರ್ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ, ಬೆಟ್ಟಿಂಗ್ ಬಯಲಿಗೆಳೆದಿದೆ.

ಹೀಗಿತ್ತು ಬೆಟ್ಟಿಂಗ್: ಬೆಟ್ಟಿಂಗ್ ಏಜೆಂಟ್‌ರು ಜೂಜು ಗ್ರಾಹಕರನ್ನು ಸಂಪರ್ಕಿಸಿ ಹಣ ಸಂಗ್ರಹಿಸುತ್ತಿದ್ದರು. ಅದನ್ನು ಸ್ಥಳೀಯವಾಗಿ ಕಾರ್ಯ ನಿರ್ವಹಿಸುವ ಏಜೆನ್ಸಿಗೆ ನೀಡುತ್ತಿದ್ದರು. ಏಜೆನ್ಸಿ ಮಂದಿ ಯಾವುದಾದರೊಂದು ಹೋಟೆಲ್, ಬಾಡಿಗೆ ಮನೆ ಮತ್ತಿತರೆಡೆ ಕುಳಿತುಕೊಂಡು ಸಂಕೇತ ಮತ್ತು ಧ್ವನಿ ಮೂಲಕ ಮೊಬೈಲ್ ಮತ್ತು ಲ್ಯಾಪ್‌ಟ್ಯಾಪ್ ಬಳಸಿ ಬೆಟ್ಟಿಂಗ್ ನಿರ್ವಹಿಸುತ್ತಿದ್ದರು. ಪ್ರತಿ ಎಸೆತಕ್ಕೂ (ಬಾಲ್) ಬೆಟ್ ಕಟ್ಟಿ, ಸೋಲು-ಗೆಲುವು ಆಧಾರದಲ್ಲಿ ನಗದು ಮೂಲಕ ಹಣ ಹಿಂತಿರುಗಿಸುತ್ತಿದ್ದರು. ಒಂದಕ್ಕೆ ಹತ್ತು ಪಟ್ಟು ಬಾಜಿ ನಡೆಯುತ್ತಿತ್ತು~ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಮಧುಕರ ಪವಾರ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ  ಹೇಳಿದರು. 

`ಐಪಿಎಲ್ ಆರಂಭದ ದಿನದಿಂದ ಪ್ರತಿ ಪಂದ್ಯದ ಮೇಲೆ ರೂ 10 ಲಕ್ಷಗಳಿಗೂ ಅಧಿಕ ಬೆಟ್ಟಿಂಗ್ ನಡೆಯುತ್ತಿತ್ತು. ಪ್ರತಿ ಎಸೆತಕ್ಕೂ ಬೆಟ್ಟಿಂಗ್ ನಡೆದಿದೆ. ಇದರ ಹಿಂದೆ ಬೃಹತ್ ಜಾಲದ ಶಂಕೆ ಇದೆ. ಹಲವಾರು ಮಂದಿ ಜೂಜಾಡಿರುವ ಸಾಧ್ಯತೆ ಇದೆ. ಆದರೆ, ಎಲ್ಲವನ್ನೂ ಸಂಕೇತಗಳಲ್ಲಿ ದಾಖಲಿಸಲಾಗಿದೆ. ಇನ್ನೊಂದೆಡೆ ಬೆಟ್ಟಿಂಗ್ ನಡೆಸುವವರು ಪ್ರತಿನಿತ್ಯ ಸ್ಥಳ ಬದಲಾಯಿಸುತ್ತಿದ್ದ ಕಾರಣ ಪತ್ತೆ ಹಚ್ಚಲು ಕಷ್ಟವಾಗಿತ್ತು~ ಎಂದರು.

ಜೂಜಾಡುತ್ತಿದ್ದವರ ದಾಖಲೆಗಳು ಸಂಕೇತ ಮತ್ತು ಮೊಬೈಲ್ ಧ್ವನಿಯಲ್ಲಿ ಲಭ್ಯವಾಗಿದ್ದು, ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ. ಇವೆಲ್ಲವನ್ನೂ ನಡೆಸುವ ಮೂಲ ಕೇಂದ್ರವು ಮಹಾರಾಷ್ಟ್ರದ ಸೋಲಾಪುರ ಎಂಬ ಮಾಹಿತಿಯಿದೆ. ಇದಕ್ಕೂ ಸ್ಪಾಟ್ ಫಿಕ್ಸಿಂಗ್‌ಗೂ ಸಂಬಂಧವಿದೆಯೇ ಎಂಬುದು ತನಿಖೆ ಬಳಿಕ ಹೊರಬರಬೇಕಿದೆ~ ಎಂದು ವಿವರಿಸಿದರು.

ಕೆಲವು ದಿನಗಳ ಹಿಂದೆ ದೊರೆತ ಮಾಹಿತಿಯ ಹಿನ್ನೆಲೆಯಲ್ಲಿ ಮೂರು ತಂಡಗಳನ್ನು ರಚಿಸಿ ಬೆಟ್ಟಿಂಗ್ ಜಾಲ ಭೇದಿಸಲು ಪ್ರಯತ್ನಿಸಲಾಗಿತ್ತು. ಕಾರ್ಯಾಚರಣೆಯ ತಂಡಕ್ಕೆ ರೂ 10 ಸಾವಿರ  ನಗದು ಬಹುಮಾನ ಘೋಷಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry