ಬೆಟ್ಟಿಂಗ್ ಜಾಲ ಬಯಲಿಗೆಳೆಯಿರಿ

7

ಬೆಟ್ಟಿಂಗ್ ಜಾಲ ಬಯಲಿಗೆಳೆಯಿರಿ

Published:
Updated:

ಕರಾಚಿ (ಪಿಟಿಐ): ‘ಸ್ಪಾಟ್ ಫಿಕ್ಸಿಂಗ್’ ಆರೋಪ ಸಾಬೀತಾಗಿ ವಿವಿಧ ಅವಧಿಗೆ ನಿಷೇಧಕ್ಕೊಳಗಾಗಿರುವ ಪಾಕಿಸ್ತಾನದ ಮೂವರು ಕ್ರಿಕೆಟಿಗರಿಗೆ ‘ಬೆಟ್ಟಿಂಗ್ ಜಾಲವನ್ನು ಬಯಲಿಗೆ ಎಳೆಯಿರಿ’ ಎಂದು ಮಾಜಿ ನಾಯಕ ಜಾವೇದ್ ಮಿಯಾಂದಾದ್ ಮನವಿ ಮಾಡಿದ್ದಾರೆ.ಆಗಿದ್ದು ಆಗಿ ಹೋಯಿತು; ಈಗಲೂ ಈ ಮೂವರು ಆಟಗಾರರು ಕ್ರಿಕೆಟ್‌ಗೆ ಒಳಿತು ಮಾಡಲು ಸಾಧ್ಯ. ಬೆಟ್ಟಿಂಗ್ ಜಾಲವನ್ನು ಬಹಿರಂಗಗೊಳಿಸುವ ಮೂಲಕ ಈ ಕೆಲಸ ಮಾಡಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಸಲ್ಮಾನ್ ಬಟ್, ಮೊಹಮ್ಮದ್ ಆಸಿಫ್ ಹಾಗೂ ಮೊಹಮ್ಮದ್ ಅಮೇರ್ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯಿಂದ ಕ್ರಮವಾಗಿ ಹತ್ತು, ಏಳು ಹಾಗೂ ಐದು ವರ್ಷದ ಅವಧಿಗೆ ನಿಷೇಧಕ್ಕೊಳಗಾಗಿದ್ದಾರೆ. ತಪ್ಪಿತಸ್ಥ ಆಟಗಾರರು ಕ್ರಿಕೆಟ್ ಹಿತಕ್ಕಾಗಿ ತಮ್ಮ ಸಂಪರ್ಕಕ್ಕೆ ಬಂದಿದ್ದ ಎಲ್ಲ ಬುಕ್ಕಿಗಳ ಹೆಸರುಗಳನ್ನು ಬಹಿರಂಗಗೊಳಿಸಬೇಕೆಂದು ಮಿಯಾಂದಾದ್ ಕೇಳಿಕೊಂಡಿದ್ದಾರೆ.ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮಹಾ ನಿರ್ದೇಶಕರಾಗಿರುವ ಜಾವೇದ್ ‘ಪಾಕ್ ಕ್ರಿಕೆಟ್‌ಗೆ ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದ ದೊಡ್ಡ ಪೆಟ್ಟು ಬಿದ್ದಿದೆ. ಈ ಗಾಯವು ಮಾಯುವಂತೆ ಮಾಡುವುದು ಖಂಡಿತ ಸಾಧ್ಯ. ಹಾಗೆ ಮಾಡುವುದು ತಪ್ಪಿತಸ್ಥ ಆಟಗಾರರಿಂದಲೇ ಸಾಧ್ಯ’ ಎಂದು ಅವರು ಬುಧವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.‘ಸಲ್ಮಾನ್, ಆಸಿಫ್ ಹಾಗೂ ಅಮೇರ್‌ಗೆ ಶಿಕ್ಷೆಯಾಗಿದ್ದರಿಂದ ನನಗೆ ನೋವಾಗಿದೆ. ನನ್ನ ಅಭಿಪ್ರಾಯದಲ್ಲಿ ಅವರು ಮಾತ್ರ ತಪ್ಪಿತಸ್ಥರಲ್ಲ. ಬುಕ್ಕಿ ಮಜರ್ ಮಜೀದ್ ಹಿಂದೆ ಇರುವ ದೊಡ್ಡ ಜಾಲದ ಕಡೆಗೂ ಗಮನ ನೀಡಬೇಕು. ಮೂವರು ಆಟಗಾರರಿಂದ ಸ್ಪಾಟ್ ಫಿಕ್ಸಿಂಗ್ ಸಾಧ್ಯವಿಲ್ಲ. ಒಂದು ವ್ಯವಸ್ಥಿತ ಜಾಲವು ಮಾತ್ರ ಇಂಥದೊಂದು ಸಂಚು ರೂಪಿಸಲು ಸಾಧ್ಯ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry