ಬೆಟ್ಟ ಹತ್ತಿದ ಮೇಷ್ಟ್ರುಗಳು

7

ಬೆಟ್ಟ ಹತ್ತಿದ ಮೇಷ್ಟ್ರುಗಳು

Published:
Updated:
ಬೆಟ್ಟ ಹತ್ತಿದ ಮೇಷ್ಟ್ರುಗಳು

ಕೊಪ್ಪಳ: ಪಾಠ ಹೇಳುತ್ತಿದ್ದ ಮೇಷ್ಟ್ರು­ಗಳು, ಶಿಕ್ಷಣ ಇಲಾಖೆ ಅಧಿಕಾರಿಗಳೆಲ್ಲಾ ಒಟ್ಟಾಗಿ ಶುಕ್ರವಾರ ಕೊಪ್ಪಳದ ಬೆಟ್ಟ ಹತ್ತಿದರು.

ತರಗತಿ ಬಿಟ್ಟು ಆಚೆ ಬಾರದ, ಒಮ್ಮೊಮ್ಮೆ ಕೇವಲ ಗಂಟೆ ಬಾರಿಸುವು­ದನ್ನೇ ಕಾಯುವವರು ಎಂದು ಟೀಕೆ­ಗೊಳ­ಗಾಗುವ, ಮಕ್ಕಳಿಗೆ ಅಡುಗೆ ಮಾಡಿ ಬಡಿಸಿ ಹಾಲು ಕುಡಿಸಿ, ಮಾತ್ರೆ­ಕೊಟ್ಟು ಸುಸ್ತಾಗುವ ಶಿಕ್ಷಕ –ಶಿಕ್ಷಕಿ­ಯರೆಲ್ಲಾ ಇಂದು ಬೆಟ್ಟ ಹತ್ತಿ ಸುಸ್ತು ಕಳೆದುಕೊಂಡರು!– ಇದು ಕೊಪ್ಪಳದ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಎಚ್‌.ವೀರಣ್ಣ ನೇತೃತ್ವ­ದಲ್ಲಿ ಇತಿಹಾಸ– ಪ್ರಕೃತಿ ಅಧ್ಯ­ಯನ ಎಂಬ ಹೊಸ ಪರಿಕಲ್ಪನೆಯ ಅಧ್ಯ­ಯನ ಚಾರಣ. ಬೆಳಿಗ್ಗೆ ಜಿಲ್ಲಾ ಕ್ರೀಡಾಂ­ಗಣದಲ್ಲಿ ಔಪಚಾರಿಕ ಉದ್ಘಾಟನೆಯ ಬಳಿಕ ಉಪ್ಪಿಟ್ಟು –ಕೇಸರಿಬಾತ್‌ ತಿಂದ ಸುಮಾರು ನೂರರಷ್ಟಿದ್ದ ದೈಹಿಕ ಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಾಲಾಗಿ ಕ್ರೀಡಾಂ­ಗಣದ ಪಕ್ಕವೇ ಇರುವ ಕೊಪ್ಪಳದ ಬೆಟ್ಟ ಹತ್ತಿದರು.ಮಾರ್ಗಮಧ್ಯೆ ಅಯ್ಯಪ್ಪಾ ಸುಸ್ತಾಯ್ತು ಎಂದು ಹಲವರು ನಿಟ್ಟು­ಸಿರುಬಿಟ್ಟು ಕುಳಿತರು. ಕೆಲವರು ಅಲ್ಲಿಯೇ ಕೆಲಕಾಲ ಮಲಗಿದರು. ದಣಿವಾರಿಸಿಕೊಂಡು ಮತ್ತೆ ಮುಂದುವ­ರಿದರು. ಮಾರ್ಗಮಧ್ಯೆ ಹಾಡು ಕೇಕೆ, ‘ಆಪ್ತರಕ್ಷಕ’ನ ’ಹೌಲ ಹೌಲಾ... ಕೂಗು ಹೀಗೆ ಥೇಟ್‌ ಹೈಸ್ಕೂಲು ಹುಡುಗರ ಹಾಗೆ ಸಂಭ್ರಮಿಸಿದರು.ಹಾದಿಯುದ್ದಕ್ಕೂ ಒಬ್ಬರನ್ನೊಬ್ಬರು ಕಾಲೆಳೆದು ಕೀಟಲೆ ಮಾಡಿದರು. ಕೆಲವರು ದಾರಿತಪ್ಪಿ ಮತ್ತೆ ಗಮ್ಯದತ್ತ ಸಾಗಿದರು. ಮಾರ್ಗಮಧ್ಯೆ ಕೆಲವರು ಅಧಿಕಾರಿಗಳ ಕಣ್ಣು ತಪ್ಪಿಸಿ ವಾಪಸ್‌ ಜಾರಿಕೊಂಡರು. ಹೀಗೆ ಮೇಷ್ಟ್ರುಗಳದ್ದು ಸಂಪೂರ್ಣ ರಿಲಾಕ್ಸ್‌ ಮೂಡ್‌.ಪಾಲ್ಕಿಗುಂಡು ಶಾಸನ ವೀಕ್ಷಣೆ: ಕೊನೆಗೆ ಬೆಟ್ಟದ ತುದಿಯಲ್ಲಿರುವ ಮೌರ್ಯರ ಸಾಮ್ರಾಟ ಅಶೋಕನ ಕಾಲದ ಪಾಲ್ಕಿಗುಂಡು ಶಾಸನದ ಕಲ್ಲಿನ ಮೇಲೆ ಹೋಗಿ ಕುಳಿತರು. ಕೆಲವರು ಅಲ್ಲಿನ ಶಾಸನದ ಸ್ವರೂಪ, ಅದರ ಮೇಲಿನ ಗೆರೆಗಳನ್ನು ಅಚ್ಚರಿಯಿಂದ ಗಮನಿಸಿದರು. ಬೆಟ್ಟದ ಮೇಲಿನಿಂದ ಕೂಗು ಹಾಕಿದರು.ಅಲ್ಲಿನ ಕಲ್ಲುಗಳಲ್ಲಿ ಕೆಲಕಾಲ ವಿಶ್ರಾಂತಿ ಪಡೆದರು. ಸುಮಾರು ಒಂದು ಗಂಟೆಯ ಬಳಿಕ ಅಲ್ಲಿಂದ ಒಬ್ಬೊಬ್ಬ­ರಾಗಿ ಕೆಳಗಿಳಿದು ಮುಂದೆ ಅದೇ ಬೆಟ್ಟದಲ್ಲಿ ಸಾಗಿದರು. ಮಾರ್ಗ ಮಧ್ಯೆ ಒಂದು ಸಮತಟ್ಟಾದ ಜಾಗದಲ್ಲಿ ಕುಳಿತು ತಾವು ತಂದಿದ್ದ ಬುತ್ತಿಯ ಗಂಟನ್ನು ಬಿಚ್ಚಿ ಪರಸ್ಪರ ಹಂಚಿಕೊಂಡು ತಿಂದು ಖುಷಿಪಟ್ಟರು.ಹಾದಿಯುದ್ದಕ್ಕೂ ಶಿಕ್ಷಕರು ಡಿಡಿಪಿ­ಐಯ ಗುಣಗಾನ ಮಾಡಿದರು. ವೀರಣ್ಣ ಅವರಿಗೂ ಮೇಷ್ಟ್ರುಗಳನ್ನೆಲ್ಲಾ ಬೆಟ್ಟ ಹತ್ತಿಸಿ ಪ್ರಕೃತಿ ವೀಕ್ಷಣೆ ಮಾಡಿಸಿದ ಸಾರ್ಥಕತೆ.ಮುಂದೆ ಹೈಸ್ಕೂಲು ಶಿಕ್ಷಕರಿಗೂ ಇದೇ ರೀತಿ ಬೆಟ್ಟ ಹತ್ತಿಸ್ತೀನಿ ಎಂದು ವೀರಣ್ಣ ಹೇಳಿದರು.

ಮುಂದೆ ಬೆಟ್ಟದ ಮೇಲಿಂದಲೇ ಸಾಗಿದ ಶಿಕ್ಷಕರ ದಂಡು ಹುಲಿಕೆರೆ ಮಾರ್ಗವಾಗಿ ಕೊಪ್ಪಳ ಕೋಟೆ ಹತ್ತಿತು. ಅಲ್ಲೊಂದಿಷ್ಟು ಇಲ್ಲೊಂದಿಷ್ಟು  ಪ್ರಕೃತಿ, ಸಮಾಜ ವಿಜ್ಞಾನದ ಪಾಠವೂ ನಡೆಯಿತು.ಅಂತರಗಂಗೆ, ಕಲ್ಲು ಹೂಗಳು, ಬೆಟ್ಟದ ಮೇಲಿನ ಬಿಳಿ ಹೂಗಳು, ಜೊಂಡು ಹುಲ್ಲು, ಸೀತಾಫಲದ ಗಿಡ ಎಲ್ಲವನ್ನೂ ಒಂದೊಂದಾಗಿ ನೋಡಿ, ಇದು ಹೀಗೆ, ಅದು ಹಾಗೆ ಎಂದು ಪರಸ್ಪರ ಚರ್ಚಿಸಿದರು. ಸಂಜೆ ವೇಳೆ ಮೆಷ್ಟ್ರುಗಳೆಲ್ಲಾ ಸುಸ್ತಾದರೂ ಮುಖದ ಕಳೆ ಮಾಸಿರಲಿಲ್ಲ. ಕೇಕೆಯ ಧ್ವನಿ ತಗ್ಗಿರಲಿಲ್ಲ.ಉದ್ಘಾಟನೆ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಬಿ. ಉದಪುಡಿ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹಾದೇವಸ್ವಾಮಿ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ. ತುಕಾರಾಮ್‌, ಯುವಜನ ಸೇವಾ ಮತ್ತು ಕ್ರೀಡಾ­ಧಿಕಾರಿ ವೈ.ಸುದರ್ಶನರಾವ್‌ ಇದ್ದರು.ಪಾಲ್ಕಿಗುಂಡು ಶಾಸನ

ಕ್ರಿಸ್ತಪೂರ್ವ 260ನೇ ಇಸವಿಯಲ್ಲಿ ಬರೆಯಲಾದ ಪಾಲ್ಕಿಗುಂಡು ಶಾಸನವು ಅಲ್ಪಮಟ್ಟಿಗೆ ಕಾಲನ ಹೊಡೆತಕ್ಕೂ ಸಿಲುಕಿದೆ. ಛತ್ರಿ ಆಕಾರದ ರಚನೆ ಹೊಂದಿರುವ ಬಂಡೆಯ ಒಳಗೆ ಚೌಕಾಕಾರದಲ್ಲಿ ಬರಹ ಕೆತ್ತಲಾಗಿದೆ. ಪ್ರಾಕೃತ ಭಾಷೆಯಲ್ಲಿರುವ ಬರಹ ಎಂದು ಹೇಳಲಾದ ಶಾಸನದಲ್ಲಿ ಅಶೋಕನನ್ನು ದೇವನಾಂಪ್ರಿಯ ಎಂಬ ಹೆಸರಿನಿಂದ ಕರೆಯಲಾಗಿದೆ.ಅವನು ಹೇಳುವ ಪ್ರಕಾರ, ತಾನು ಈ ಹಿಂದೆ ದೇವರ ಹುಡುಕಾಟ, ಅಗೋಚರ ಶಕ್ತಿಯ ಬಗ್ಗೆ ಅಷ್ಟೊಂದು ಆಸಕ್ತನಾಗಿರಲಿಲ್ಲ. ಆದರೆ, ಸಂಘದ (ಬೌದ್ಧಧರ್ಮ) ಒಡನಾಟಕ್ಕೆ ಬಂದ ಬಳಿಕ ದೇವರನ್ನು, ಅವನ ಶಕ್ತಿಯನ್ನು ಕಾಣುವ ತವಕ ಹೆಚ್ಚಾಯಿತು. ಶ್ರದ್ಧೆಯಿಂದ ಅವನನ್ನು ಪ್ರಾರ್ಥಿಸಿದರೆ ಯಾರೂ ಕೂಡಾ ದೇವರಿಗೆ ಹತ್ತಿರ­ವಾಗಬಹುದು. ಜನರು ದೇವ­ರೊಂ­ದಿಗೆ, ದೇವರು ಜನರೊಂದಿಗೆ ಬೆರೆಯ­ಬೇಕು. ಆ ಪ್ರಯತ್ನ ನನ್ನದು..­.. ಹೀ­ಗೆ ಸಾಗು­ತ್ತದೆ ಅದರಲ್ಲಿನ ಬರಹ.ಆದರೆ, ಈ ಶಾಸನದ ಅಕ್ಕಪಕ್ಕದಲ್ಲಿ ಕಿಡಿಗೇಡಿಗಳು ತಮ್ಮ ‘ಶಾಸನ’ ಬರೆ­ದಿದ್ದಾರೆ. ಬಂಡೆಯ ಮೇಲೆ ಬಣ್ಣದಲ್ಲಿ ಅಸಭ್ಯ ಬರಹಗಳು ಇವೆ. ಹೋಗುವ ದುರ್ಗಮ ಹಾದಿಯಲ್ಲಿ ಮದ್ಯದ ಬಾಟಲಿ ಚೂರುಗಳು ಇವೆ.ಯಾಕೆ ಈ ಕಾರ್ಯಕ್ರಮ?

ನೋಡಿ ಇದಕ್ಕೇನೂ ಸರ್ಕಾರದ ಆದೇಶ ಇಲ್ಲ. ಸದಾ ನಾಲ್ಕುಗೋಡೆ ಮಧ್ಯೆ ಪಾಠ ಮಾಡುವ ಶಿಕ್ಷಕರು ಇಂದು ಪ್ರಕೃತಿ ಮಧ್ಯೆ ಹೊಸ ವಿಷಯಗಳನ್ನು ಅರಿತುಕೊಂಡು ಮಕ್ಕಳಿಗೆ ಹೇಳಲಿ. ಎಷ್ಟೋ ಶಿಕ್ಷಕರು ಇಲ್ಲಿನವರೇ ಆಗಿದ್ದರೂ ಅಶೋಕನ ಕಾಲದ ಶಿಲಾ ಶಾಸನ ನೋಡಿ­ಯೇ ಇರಲಿಲ್ಲ. ಶಿಲೆಗಳು, ಬೆಟ್ಟ, ಕೋಟೆ ಕೊತ್ತಲ­ಗಳನ್ನು ನೋಡಿ ಮಕ್ಕಳಿಗೆ ಹೇಳಬೇಕು. ನಮ್ಮ ಪುರಾತನ ಪರಂಪರೆಯ ಈ ಪಳೆಯು­ಳಿಕೆಗಳನ್ನು ರಕ್ಷಿಸಬೇಕು. ಮುಂದೆ ತಾಲ್ಲೂಕುಮಟ್ಟದಲ್ಲಿಯೂ ಇಂಥ ಕಾರ್ಯ­ಕ್ರಮ ಹಮ್ಮಿಕೊಂಡು ಆಯಾ ಶಾಲೆಗೆ ಸಮೀಪವಿರುವ ಬೆಟ್ಟ, ಗುಡ್ಡಕ್ಕೆ ಮಕ್ಕಳನ್ನು ಕರೆದೊಯ್ಯುವ ಕಾರ್ಯಕ್ರಮ ಮಾಡಿಸುತ್ತೇವೆ. ಮಕ್ಕಳಲ್ಲಿ ಸಾಹಸ ಪ್ರವೃತ್ತಿ ಬೆಳೆಯಬೇಕು. 

– ಜಿ.ಎಚ್‌. ವೀರಣ್ಣ, ಶಿಕ್ಷಣ ಇಲಾಖೆ ಉಪನಿರ್ದೇಶಕ

ಸೀರೆ ಉಟ್ಟು ಬೆಟ್ಟ ಹತ್ತಿದೆವು

ಇಲ್ಲಿನ ಶಿಲಾಶಾಸನ ನೋಡಿ ಖುಷಿ ಆಯು್ತು. ಸೀರೆ ಉಟ್ಟು ನೀವೇನು ಬೆಟ್ಟ ಹತ್ತುತ್ತೀರಿ? ಏನು ಇತಿಹಾಸ ಅಧ್ಯಯನ ಮಾಡ್ತೀರಿ ಎಂದು ಹಲವರು ಗೇಲಿ ಮಾಡಿದ್ದರು. ನೋಡಿ, ನಾವು ಯಶಸ್ವಿಯಾಗಿ ಬೆಟ್ಟ ಏರಿದ್ದೇವೆ. ಜಿಲ್ಲಾ ದರ್ಶನ ಕಾರ್ಯಕ್ರಮ ಹಮ್ಮಿಕೊಂಡರೆ ಶಾಲಾ ಮಕ್ಕಳ ಸಹಿತ ಇಲ್ಲಿಗೆ ಬರುತ್ತೇವೆ.

–ಬಸಮ್ಮ ದೈಹಿಕ ಶಿಕ್ಷಣ ಶಿಕ್ಷಕಿ, ಎಂಎಚ್‌ಪಿಎಸ್‌ ಯಲಬುರ್ಗಾ‘ಪ್ರಕೃತಿ ಸೌಂದರ್ಯ ಆಸ್ವಾದನೆ’

ನಾವು ಈ ಜಿಲ್ಲೆಯವರಾಗಿದ್ದೂ ಇಲ್ಲಿನ ಬೆಟ್ಟದ ಪ್ರಕೃತಿ ಸೌಂದರ್ಯ ಆಸ್ವಾದಿಸುವ ಅವಕಾಶ ಬಂದಿರಲಿಲ್ಲ. ಇಂದು ಒದಗಿದೆ. ಇಲಾಖೆಗೆ ಕೃತಜ್ಞತೆ.

–ನಾಗನಗೌಡ, ಸಿಆರ್‌ಪಿ, ಇಸ್ಲಾಂಪುರ

ಸವಾಲಿನ ಕೆಲಸ’

‘ಮಕ್ಕಳ ಮನಸ್ಸು ಗುಲಾಬಿ ಹೂವಿನ ಹಾಗೆ ಮುಟ್ಟಿದರೆ ಮುದುಡುವುದು  ಪ್ರೀತಿಸಿದರೆ ಅರಳುವುದು...’

ತಿಂಗಳಿಗೊಮ್ಮೆಯಾದರೂ ಇಂಥ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.  ಮಕ್ಕಳಿಗೆ ಇಂಥ ಕಾರ್ಯಕ್ರಮದ ಮೂಲಕ ಕಷ್ಟಪಡುವುದನ್ನು ಕಲಿಸಬೇಕು. ಇದು ಸವಾಲು ಎದುರಿಸುವುದನ್ನು ಕಲಿಸಿದೆ.

–ನಾಗರತ್ನಾ ಕಾರಟಗಿ, ಮುದ್ದಾಬಳ್ಳಿ ಹಿರಿಯ ಪ್ರಾಥಮಿಕ ಶಾಲೆ

‘ಒತ್ತಡ ದೂರ’

ಬೆಳಿಗ್ಗೆ ಒಂದಿಷ್ಟು ದೂರ ನಡೆಯದವರೂ ಇಲ್ಲಿಗೆ ಬಂದಿದ್ದಾರೆ. ನಮ್ಮ ಜಡತ್ವ. ಒತ್ತಡ ದೂರವಾಗಿದೆ.

–ದೊಡ್ಡನಗೌಡ ಪಾಟೀಲ್‌, ಸಿಆರ್‌ಪಿ ಯಲಬುರ್ಗಾ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry