ಗುರುವಾರ , ಮೇ 19, 2022
21 °C

ಬೆಣ್ಣೆಕೃಷ್ಣನೊಂದಿಗೆ ಬಂದ ಬೆಂಕಿ ಚೆಂಡು ಉಮಾಭಾರತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಒಂದು ಕಾಲದಲ್ಲಿ ಬಿಜೆಪಿಯ ‘ಫೈರ್ ಬ್ರಾಂಡ್’ (ಬೆಂಕಿ ಚೆಂಡು) ಎಂದೇ ಖ್ಯಾತರಾಗಿದ್ದ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಸೋಮವಾರ ಬೆಳಿಗ್ಗೆ ಇಬ್ಬರು ಅಂಗರಕ್ಷಕರೊಂದಿಗೆ ಉಡುಪಿ ಕೃಷ್ಣಮಠಕ್ಕೆ ರಥಬೀದಿಯಲ್ಲಿ ನಡೆದುಕೊಂಡು ಬಂದಾಗ ಅಷ್ಟಾಗಿ ಜನರನ್ನೇನೂ ಆಕರ್ಷಿಸಲಿಲ್ಲ.ಹಿಂದೊಮ್ಮೆ ಉಮಾಭಾರತಿ ಅವರನ್ನು ನೋಡಲು, ಬೆಂಕಿಯುಂಡೆಯಂತಹ ಮಾತುಗಳನ್ನು ಆಲಿಸಲು ರಾಜ್ಯದ ಜನರೂ ತವಕಪಡುತ್ತಿದ್ದರು. ಆದರೆ ಬಿಜೆಪಿಯಿಂದ ದೂರವಾದ ಮೇಲೆ ಅವರು ‘ಮುಖ್ಯವಾಹಿನಿ’ಯಲ್ಲಿ ಇಲ್ಲ. ಹೀಗಾಗಿ ಉಮಾಭಾರತಿ ದೇವರ ದರ್ಶನಕ್ಕೆ ಬಂದಾಗಲೂ ಅಲ್ಲಿದ್ದ ಜನರೇನೂ ಅವರ ‘ದರ್ಶನಕ್ಕೆ’ ಅಷ್ಟು ಉತ್ಸಾಹ ತೋರಿಸಲಿಲ್ಲ.

ಹಳದಿ ಬಣ್ಣದ ನಿಲುವಂಗಿ ಧರಿಸಿದ್ದ ಅವರು ನೇರವಾಗಿ ಪೇಜಾವರ ಮಠಕ್ಕೆ ಧಾವಿಸಿ, ಅಲ್ಲಿಂದ ರಥಬೀದಿಯಲ್ಲಿ ಹಾದು ಅನಂತೇಶ್ವರ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದರು. ಬಳಿಕ ಉಡುಪಿ ಶ್ರೀಕೃಷ್ಣನ ದರ್ಶನಕ್ಕಾಗಿ ಮಠಕ್ಕೆ ಆಗಮಿಸಿದರು.ಮೊದಲು ಮಧ್ವಸರೋವರಕ್ಕೆ ಹೋಗಿ ಕಾಲ ತೊಳೆದುಕೊಂಡು, ತಾವು ತಂದಿದ್ದ ‘ಬೆಣ್ಣೆಕೃಷ್ಣನ ಮೂರ್ತಿ’ಯನ್ನು ಸರೋವರದಲ್ಲಿ ಮುಳುಗಿಸಿ, ಸಂಪ್ರೋಕ್ಷಣೆ ಮಾಡಿದರು. ನಂತರ ನವಗ್ರಹ ಕಿಂಡಿಗೆ ಬಂದು ಕೃಷ್ಣ ದರ್ಶನ, ಬಳಿಕ ಅನ್ನಬ್ರಹ್ಮನ ದರ್ಶನ ಮಾಡಿದರು. ಅವರು ನಂತರ ಅಲ್ಲಿಂದ ನೇರ ತೆರಳಿದ್ದು ಶೀರೂರು ಮಠಕ್ಕೆ. ಪರ್ಯಾಯ ಶೀರೂರು ಲಕ್ಷ್ಮಿವರ ತೀರ್ಥ ಸ್ವಾಮೀಜಿ ಅವರನ್ನು ಬರಮಾಡಿಕೊಂಡು ಮಂತ್ರಾಕ್ಷತೆ ನೀಡಿದರು. ಸ್ವಾಮೀಜಿ(ಕನ್ನಡ) ಮತ್ತು ಉಮಾಭಾರತಿ(ಹಿಂದಿ) ಸಂಭಾಷಣೆಗೆ ಮಠದ ದಿವಾಣ ಲಾತವ್ಯ ಆಚಾರ್ಯ ದ್ವಿಭಾಷಿಯಾದರು.ತಾವು ತಂದಿದ್ದ ಕೈಯಲ್ಲಿ ಬೆಣ್ಣೆ ಹಿಡಿದ ‘ಬಾಲ ಮುಕುಂದ’ನ ಪುಟ್ಟಮೂರ್ತಿಯನ್ನು ಸ್ವಾಮೀಜಿಗೆ ನೀಡಿದ ಉಮಾ, ಮೂರ್ತಿಯನ್ನು ಹಲವು ವರ್ಷಗಳಿಂದ ತಮ್ಮೊಂದಿಗೇ ಇಟ್ಟುಕೊಂಡಿದ್ದಾಗಿ ತಿಳಿಸಿದರು.ಮೂರ್ತಿಯನ್ನು ಕೈಯಲ್ಲಿ ಹಿಡಿದ ಸ್ವಾಮೀಜಿ, ಹಾರ ಹಾಕಿ ಉಮಾ ಅವರಿಗೇ ಮರಳಿಸಿದರು. ಜತೆಗೆ ಮಠದ ವತಿಯಿಂದ ಕೃಷ್ಣನ ಇನ್ನೊಂದು ವಿಗ್ರಹವನ್ನೂ ನೀಡಿದರು. ಶೀರೂರು ಲಕ್ಷ್ಮಿವರ ತೀರ್ಥರು ಪರ್ಯಾಯ ವೇಳೆ ತಾವು ಶ್ರೀಕೃಷ್ಣ ಮೂರ್ತಿಗೆ ಮಾಡಿದ್ದ 300 ಬಗೆಯ ಅಲಂಕಾರಗಳ ಆಕರ್ಷಕ ಛಾಯಾಚಿತ್ರಗಳನ್ನು ಒಳಗೊಂಡ ಪುಸ್ತಕವನ್ನು ತೋರಿಸಿ ವಿವರಿಸಿದರು. ಆಸಕ್ತಿಯಿಂದ ಚಿತ್ರ ವೀಕ್ಷಿಸಿದ ಉಮಾಭಾರತಿ, ಸಂಭ್ರಮಿಸಿದರು.‘ಕಲ್ಕಿ’ ಅವತಾರ ಅಲಂಕಾರ ಕಂಡು ಕುತೂಹಲಗೊಂಡರು. ‘ಇದು ಭೂಮಿಯ ಅಂತ್ಯ ಯುಗ ಎಂದು ಕೆಲವರು ಹೇಳುತ್ತಿದ್ದಾರಲ್ಲ? ನಿಜವೇ ಸ್ವಾಮೀಜಿ?’ ಎಂದು ಪ್ರಶ್ನಿಸಿದರು. ಸ್ವಾಮೀಜಿ ‘ಹಾಗೇನೂ ಇಲ್ಲ’ ಎಂದು ಉತ್ತರಿಸಿದರು. 15 ನಿಮಿಷಗಳ ಕಾಲ ಮಠದಲ್ಲಿದ್ದರು. ಸಂಜೆ ಪಣಜಿಗೆ ತೆರಳಿದ ಅವರು ಮಂಗಳವಾರ ಉಡುಪಿಗೆ ವಾಪಸಾಗಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.